ಮೂಡುಬಿದಿರೆ ಎಂ. ಸಿ. ಎಸ್. ನಲ್ಲಿ ಸಹಕಾರಿ ಸಪ್ತಾಹ ಪ್ರಾರಂಭ

Picture of RB NEWS

RB NEWS

Bureau Report

ಮೂಡುಬಿದಿರೆ ಸಹಕಾರಿ ಸೇವಾ ಸಂಘದಲ್ಲಿ ಸಹಕಾರಿ ಸಪ್ತಾಹ 2025 ನ್ನು ದ. ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷ, ರಾಜ್ಯ ಸಹಕಾರಿ ಮಾರುಕಟ್ಟೆ ಮಂಡಳಿ ಅಧ್ಯಕ್ಷರೂ ಆಗಿರುವ ಸಹಕಾರ ರತ್ನ ಡಾ।ಎಂ. ಎನ್. ರಾಜೇಂದ್ರ ಕುಮಾರ್ ಅವರು ಸೊಸೈಟಿ ಕಟ್ಟಡದ ಸಭಾಂಗಣದಲ್ಲಿ ವಿಧ್ಯುಕ್ತವಾಗಿ ಉದ್ಘಾಟಿಸಿದರು.

ಉದ್ಘಾಟನಾ ಭಾಷಣ ಮಾಡಿದ ಡಾ।ಎಂ. ಎನ್. ರಾಜೇಂದ್ರ ಕುಮಾರ್ ತನ್ನ ಮಾತಿನ ಪ್ರಾರಂಭದಲ್ಲಿಯೆ ಸೊಸೈಟಿಯ ವಿಶೇಷ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ ಎಂ. ಅವರನ್ನು ಪ್ರಸ್ತಾಪಿಸಿ, ಅವರಲ್ಲಿರುವ ಜನರೊಂದಿಗಿನ ಸ್ಪಂದನಾಭಾವ , ಮೂಡುಬಿದಿರೆಯ ಜನರು ಕೂಡಾ ಅವರನ್ನು ಸ್ವೀಕರಿಸಿದ ಪ್ರೀತಿ ಅಭಿಮಾನವು ಈ ಸೊಸೈಟಿಯ ಅಭಿವೃದ್ದಿಗೆ ಬಹಳಷ್ಟು ಕಾರಣವಾಗಿದೆ ಎನ್ನುತ್ತ ಚಂದ್ರಶೇಖರ್ ಅವರನ್ನು ಹೃತ್ಪೂರ್ವಕವಾಗಿ ಶ್ಲಾಘಿಸಿದರು. ಉಡುಪಿ,ಕಾರ್ಕಳದಲ್ಲಿ ಬೇರೆ ಬೇರೆ ಸಂಸ್ಥೆಯಲ್ಲಿ ಕೆಲಸ ಮಾಡಿದ್ದ ಚಂದ್ರಶೇಖರ್ ಅವರನ್ನು ಅಮರನಾಥ ಶೆಟ್ಟಿಯವರ ಅಪೇಕ್ಷೆಯಂತೆ ಇಲ್ಲಿಗೆ ನೇಮಕಮಾಡಲಾಯಿತು ಎಂಬುದನ್ನು ನೆನಪಿಸಿಕೊಟ್ಟರು.

ಸಹಕಾರೀ ಧುರೀಣರಿಗೆ ಕೊಡುವ #ಕಲ್ಪವೃಕ್ಷ ಪ್ರಶಸ್ತಿ ಬಗ್ಗೆ ಉಲ್ಲೇಖಿಸಿದ ಅವರು, ಆ ಸಮ್ಮಾನವನ್ನು ಪ್ರಥಮವಾಗಿ ನನಗೇ ಈ ಸೊಸೈಟಿ ನೀಡಿತ್ತು. ಅದರ ನಂತರ ನಾನು ತಿರುಗಿ ನೋಡಿದ್ದೇ ಇಲ್ಲ,ಸಹಕಾರಿ ಬ್ಯಾಂಕಿನ ಅನೇಕ ಸಂಸ್ಥೆಗಳಲ್ಲಿ ಅಧ್ಯಕ್ಷ,ನಿರ್ದೇಶಕನಾಗಿತ್ತಲೇ ಮುಂದುವರಿದೆನು ಎಂದರು.
ಒಂದು ಕಾಲದಲ್ಲಿ ಈ ಸೊಸೈಟಿಯನ್ನು ಚಿನ್ನದ ಸೊಸೈಟಿ ಎಂದೇ ಕರೆಯಲಾಗುತ್ತಿತ್ತು.ಕಾರಣ, ಮೂಡುಬಿದಿರೆಯ ಆಸುಪಾಸಿನ ಸುಮಾರು ಇಪ್ಪತ್ತೇಳು ಗ್ರಾಮದವರಿಗೆ ಅಗತ್ಯಕ್ಕೆ ಚಿನ್ನದ ಸಾಲ ಕೊಡುವುದರಲ್ಲಿ ಉತ್ತಮ ಸೇವೆ ಕೊಡಲಾಗುತ್ತಿತ್ತು. ಈ ಸೊಸೈಟಿಯು ಜನರ ಅಗತ್ಯಗಳಿಗೆ ಈತನಕವೂ ಸ್ಪಂದಿಸುತ್ತಲೇ ಬಂದಿದೆ. ಯಾವನೇ ಬಡವನಿಗೆ ಅಥವಾ ಬಡಕುಟುಂಬಕ್ಕೆ ತುರ್ತು ನೆರವನ್ನು ಕೊಡುವುದಿದ್ದರೆ ಅದು ಸಹಕಾರಿ ಸಂಘದಿಂದ ಮಾತ್ರ. ರಾಷ್ಟ್ರೀಕೃತ ಬ್ಯಾಂಕುಗಳನ್ನು ವಿಲೀನ ಮಾಡುವ ಪ್ರಕ್ರಿಯೆಯೆಂದಾಗಿ ಮುಂದಿನ ದಿನಗಳಲ್ಲಿ ಕೇವಲ ಮೂರೇ ಮೂರು ಬ್ಯಾಂಕುಗಳಷ್ಟೆ ಕಾಣಲಿದೆ ಎಂದು ಹೇಳಿದರು.

ಈ ಸಹಕಾರಿ ಸಂಘದಲ್ಲಿ ಸಾಲಗಾರನಾಗಿದ್ದು ಅಕಾಲ ನಿಧನಕ್ಕೆ ತುತ್ತಾದ ಸಂದರ್ಭದಲ್ಲಿ ಅವರ ಸಾಲದ ಮೊತ್ತದಲ್ಲಿ ಒಂದು ಲಕ್ಷವೆರೆಗಿನ ಹಣವನ್ನು ಸೊಸೈಟಿಯು ಅದರದ್ದೇ ಸಂಪನ್ಮೂಲ ಬಳಸಿ ಮನ್ನಾ ಮಾಡುವ ಹೊಸ ಯೋಜನೆಯನ್ನು ಈ ವರ್ಷದಿಂದ ಪ್ರಾರಂಭಿಸಲಾಗಿದ್ದು ಅದರ ಬಿಡುಗಡೆ ಪತ್ರವನ್ನು ಡಾ। ಎಂ ಎನ್ ರಾಜೇಂದ್ರ ಕುಮಾರ್ ಈ ಸಮಾರಂಭದಲ್ಲಿ ಬಿಡುಗಡೆಗೊಳಿಸಿದರು.

ಅತಿ ವಂದನೀಯ ಡಾ। ಫ್ರಾನ್ಸಿಸ್ ಸೆರಾವೊ(ಧರ್ಮಾಧ್ಯಕ್ಷರು,ಮೈಸೂರು ಕೆಥೊಲಿಕ್ ಧರ್ಮ ಪ್ರಾಂತ್ಯ) , ಸಹಕಾರ ರತ್ನ ಎಂ. ಬಾಹುಬಲಿ ಪ್ರಸಾದ್(ಅಧ್ಯಕ್ಷ, ಎಂ. ಸಿ. ಎಸ್. )ಕೆ. ಅಭಯಚಂದ್ರ ಜೈನ್ (ಮಾಜಿ ಸಚಿವ ಕರ್ನಾಟಕ ಸರಕಾರ) ,ಅತಿ ವಂದನೀಯ ಓನಿಲ್ ಡಿಸೋಜಾ (ಧರ್ಮಗುರುಗಳು,ಕಾರ್ಪಸ್ ಕ್ರಿಸ್ತೀ ಟೌನ್ ಚರ್ಚ್ ,ಮೂಡುಬಿದಿರೆ,),
ಡಾ।ಎಚ್. ಎನ್. ರಮೇಶ( ಸಹಕಾರಿ ಉಪನಿಬಂಧಕರು,ದ. ಕ. ಜಿಲ್ಲೆ) ಎಂ. ಜಾರ್ಜ್ ಮೊನೀಸ್, ಕಲ್ಪವೃಕ್ಷ ಸಮ್ಮಾನ ಪುರಸ್ಕೃತರು, ಎಸ್. ಪ್ರವೀಣ್ ಕುಮಾರ್(ಅಧ್ಯಕ್ಷ ,ಕೃಷಿ ಪತ್ತಿನ ಸಹಕಾರಿ ಸಂಘ ಶಿರ್ತಾಡಿ ) ಸಮಾರಂಭದ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಎಂ. ಸಿ. ಎಸ್. ಸಂಘದ ವಿಶೇಷ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ ಎಂ. ಅವರು ಅತಿಥಿ ಹಾಗೂ ಸಭಾಸದರನ್ನು ಸ್ವಾಗತಿಸಿದರು.
ಸಿ. ಹೆಚ್. ಅಬ್ದುಲ್ ಗಫೂರ್ ಅವರು ಕಲ್ಪವೃಕ್ಷ ಸನ್ಮಾನ ಪುರಸ್ಕೃತ ಜಾರ್ಜ್ ಮೊನೀಸ್ ಅವರ ಪರಿಚಯ ಭಾಷಣ ಮಾಡಿದರು. ಗಾಯಕ ನಿಹಾಲ್ ತಾವ್ರೋ ಸ್ವಾಗತ ಪ್ರಾರ್ಥನೆ ಹಾಡಿದರು. ಚೇತನ ಹೆಗ್ಡೆ ಕಾರ್ಯಕ್ರಮ ನಿರೂಪಣೆಗೈದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top