ಬೆಳೆ ಸಾಲಗಳಿಗೆ ಮಾರ್ಜಿನ್ ಹಣ ಕಡಿತ : ಸಂಕಷ್ಟದಲ್ಲಿ ರಾಜ್ಯದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳು : ಮಾರ್ಜಿನ್ ಹಣ ಏರಿಸಲು ಸಹಕಾರ ಭಾರತಿ ಅಗ್ರಹ
RB NEWS
Bureau Report
ಬೆಳೆ ಸಾಲಗಳಿಗೆ ಮಾರ್ಜಿನ್ ಹಣ ಕಡಿತ : ಸಂಕಷ್ಟದಲ್ಲಿ ರಾಜ್ಯದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳು : ಮಾರ್ಜಿನ್ ಹಣ ಏರಿಸಲು ಸಹಕಾರ ಭಾರತಿ ಅಗ್ರಹ
ಕಾರ್ಕಳ : ರೈತರಿಗೆ ನೀಡುವ ಬೆಳೆ ಸಾಲ ಮದ್ಯಮಾವಧಿ ಸಾಲಗಳ ವ್ಯವಹಾರದಲ್ಲಿ ಬಡ್ಡಿಯ ಮಾರ್ಜಿನ್ ಹಣ ಶೇ. 3 ರಷ್ಟನ್ನು ರಾಜ್ಯ ಸರ್ಕಾರ 2015 – 16 ರ ವರೆಗೆ ನೀಡುತ್ತಾ ಬಂದಿದ್ದು, ಇದರಿಂದ ಸಹಕಾರ ಸಂಘಗಳಿಗೆ ಬಹಳ ಅನುಕೂಲವಾಗಿತ್ತು.
ನಂತರದ ವರ್ಷಗಳಲ್ಲಿ ಶೇ. 2.5 ಶೇ.2.40, ಶೇ.2.20, ಶೇ. 2.10, ಶೇ.2. 00 ಗಳಿಗೆ ಹಂತ ಹಂತವಾಗಿ ಕಡಿಮೆ ಮಾಡುತ್ತಾ ಬಂದಿದ್ದು, ಈಗ ಸರಕಾರದ ಸಹಕಾರಿ ಇಲಾಖೆಯ ಕಾರ್ಯದರ್ಶಿಗಳ ಪತ್ರ ಸಂಖ್ಯೆ ಸಿ.ಓ 185 ಸಿ.ಎಲ್.ಎಸ್ 2025 ದಿನಾಂಕ 20.09.2025 ರಂತೆ ಆದೇಶ ಮಾಡಿ ಸಾಲ ನೀಡುವಿಕೆಗೆ ಸಂಘಗಳಿಗೆ ಕೊಡುತ್ತಿದ್ದ ಮಾರ್ಜಿನ್ ಹಣವನ್ನು ಶೇ.1.75 ಇಳಿಸಿ ಈ ಪ್ರಕಾರ ಬಿಲ್ಲ್ ಗಳನ್ನು ತಯಾರಿಸಲು ಆದೇಶಿಸಿರುತ್ತಾರೆ.
ಇದರಿಂದ ಸಹಕಾರಿ ಸಂಘಗಳಿಗೆ ನುಂಗಲಾರದ ಬಿಸಿ ತುಪ್ಪವಾಗಿ ಪರಿಣಮಿಸಿದೆ ಎಂದು ಸಹಕಾರ ಭಾರತಿಯ ರಾಜ್ಯಾಧ್ಯಕ್ಷ ಪ್ರಭುದೇವ ಆರ್ ಮಾಗನೂರ ತಿಳಿಸಿರುತ್ತಾರೆ.
ಸರಕಾರದ ಈ ಆದೇಶದಿಂದಾಗಿ ರಾಜ್ಯದಲ್ಲಿರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳಿಗೆ ದೊಡ್ಡ ಆರ್ಥಿಕ ಹೊಡೆತ ನೀಡಿದಂತಾಗಿದೆ.
ಆರ್ಥಿಕ ಇಲಾಖೆಯವರ ಪ್ರಕಾರ ಪ್ರತಿ ವರ್ಷ ಸಾಲ ನೀಡುವಿಕೆ 200 ರಿಂದ 500 ಕೋಟಿ ರೂಪಾಯಿ ಹೆಚ್ಚಾಗುತ್ತಿದ್ದು, ಇದರಿಂದ ಸಂಘಗಳಿಗೆ ಹೆಚ್ಚಿನ ಮಾರ್ಜಿನ್ ಹಣ ದೊರೆಯುತ್ತಿದ್ದು, ಆದುದರಿಂದ ಸರಕಾರ ಮಾರ್ಜಿನ್ ಹಣವನ್ನು ಕಡಿಮೆ ಮಾಡಿರುತ್ತದೆ ಎಂದು ಸಮಜಾಯಿಸಿಕೆ ನೀಡಿರುತ್ತಾರೆ.
ಸರಕಾರವೇ ಸಹಕಾರಿ ಸಂಘಗಳ ನ್ನು ಆರ್ಥಿಕ ಸಂಕಷ್ಟಕ್ಕೆ ದೂಡುತ್ತಿದ್ದು, ಸಹಕಾರ ವ್ಯವಸ್ಥೆಯ ಮೇಲೆ ಗದಾ ಪ್ರಹಾರ ನಡೆಸಲು ಹೊರಟಂತಿದೆ.
ಸಹಕಾರ ಸಂಘಗಳು ತಮ್ಮ ಆದಾಯದಲ್ಲಿಯೇ ಸಿಬ್ಬಂದಿ ವೇತನ ಮತ್ತು ಇನ್ನಿತರ ಖರ್ಚು ವೆಚ್ಚಗಳನ್ನು ನಿಭಾಯಿಸಿಕೊಂಡು ಹೋಗಬೇಕಾಗಿರುತ್ತದೆ.
ಆದುದರಿಂದ ಕೂಡಲೇ ಮಾರ್ಜಿನ್ ಹಣವನ್ನು ಏರಿಸಿ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ನೆರವನ್ನು ನೀಡಬೇಕಾಗಿರುವುದು ಸರಕಾರದ ಆದ್ಯ ಕರ್ತವ್ಯ.
ಸರಕಾರವೇ ಸಹಕಾರಿ ಸಂಸ್ಥೆಗಳ ಕತ್ತು ಹಿಚುಕಲು ಹೊರಟರೆ, ಸಹಕಾರ ಭಾರತಿ ಅನಿವಾರ್ಯವಾಗಿ ರಾಜ್ಯದಲ್ಲಿರುವ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘಗಳ ಉಳಿವಿಗಾಗಿ ಬೃಹತ್ ಹೋರಾಟವನ್ನು ಸಂಘಟಿಸಬೇಕಾಗುತ್ತದೆ ಎಂದು ರಾಜ್ಯ ಸರ್ಕಾರಕ್ಕೆ ಸಹಕಾರ ಭಾರತಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ಸಾಣೂರು ನರಸಿಂಹ ಕಾಮತ್ ಆಗ್ರಹಿಸಿದ್ದಾರೆ.