ದೃಢ ಮನಸ್ಸು, ದೈಹಿಕ ಸಾಮಾರ್ಥ್ಯಕ್ಕೆ ಕ್ರೀಡಾ ಸಹಕಾರಿ
ಕಾರ್ಕಳ: ದೃಢ ಮನಸ್ಸನ್ನು ದೈಹಿಕ ಸಾಮಾರ್ಥ್ಯವನ್ನು ಯಾಕೆ ಹೊಂದಬೇಕು ಎಂಬುದನ್ನು ತಿಳಿಯಲು ಕ್ರೀಡೆ ಸಹಾಯ ಮಾಡುತ್ತದೆ. ನಾವು ನಮ್ಮ ಸ್ವಇಚ್ಛೆಯಿಂದ ಈ ದೇಹವನ್ನು ಶಾರೀರಿಕ ವ್ಯಾಯಾಮಗಳ ಮೂಲಕ ಗಟ್ಟಿಗೊಳಿಸಲು ಪ್ರಯತ್ನಿಸಬೇಕು. ಕ್ರೀಡೆಯು ಮನಸಿಗೂ ಆನಂದವನ್ನು ನೀಡಿ ನಮ್ಮನ್ನು ಸದಾ ಕಾಲ ಲವಲವಿಕೆಯಿಂದ ಇರುವಂತೆ ಮಾಡುತ್ತದೆ ಎಂದು ಭುವನೇಂದ್ರ ಕಾಲೇಜಿನ ವಿಶ್ವಸ್ಥ ಮಂಡಳಿಯ ಸದಸ್ಯ ಶಿವಾನಂದ ಕಾಮತ್ ಹೇಳಿದರು.
ಸ್ವರಾಜ್ ಮೈದಾನದಲ್ಲಿ ಏರ್ಪಡಿಸಲಾಗಿದ್ದ ಶ್ರೀ ಭುವನೇಂದ್ರ ಕಾಲೇಜಿನ ಐಕ್ಯೂಎಸಿ ಆಶ್ರಯದಲ್ಲಿ 2025-26ನೇ ಸಾಲಿನ ಪದವಿ ಹಾಗೂ ಪದವಿಪೂರ್ವ ವಿದ್ಯಾರ್ಥಿಗಳ ವಾರ್ಷಿಕ ಕ್ರೀಡಾಕೂಟವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಅಧ್ಯಕ್ಷತೆಯನ್ನು ವಹಿಸಿದ ಪದವಿ ಕಾಲೇಜಿನ ಪ್ರಾಂಶುಪಾಲ ಡಾ.ಮಂಜುನಾಥ ಎ. ಕೋಟ್ಯಾನ್ ಮಾತನಾಡುತ್ತಾ, ಹಿಮಾಲಯದಂತಹ ಎತ್ತರದ ಪರ್ವತವನ್ನು ಏರುವುದು ಕಷ್ಟವಲ್ಲ. ಹತ್ತಿದ ನಂತರ ಅಲ್ಲಿ ನಿಲ್ಲುವುದು ಕಷ್ಟ. ನಿಲ್ಲುವ ದೃಢತೆಯನ್ನು ನಾವು ಹೊಂದಿದಾಗ ಬದುಕು ಸುಲಭವೆನಿಸುತ್ತದೆ. ಕಷ್ಟಗಳು ಕಾಡುವುದಿಲ್ಲ ವಿದ್ಯಾರ್ಥಿ ದಿಸೆಯಲ್ಲಿ ಕ್ರೀಡೆಯ ಮೂಲಕ ಅಂತಹ ಸೋಲನ್ನೆಲ್ಲ ಎದುರಿಸಲು ದೈಹಿಕ ಚಟುವಟಿಕೆಗಳು ಸಹಾಯ ಮಾಡುತ್ತದೆ. ಇದರ ಪ್ರಯೋಜನಗಳನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು ಮತ್ತು ಈ ದಿನಗಳನ್ನೆಲ್ಲ ನಿಮ್ಮ ಜೀವನದಲ್ಲಿ ನೆನಪಿನಲ್ಲಿಟ್ಟು ಜೀವಂತವಾಗುವ ಹಾಗೆ ಮಾಡಬೇಕು. ಛಲದಿಂದ ಗುರಿ ತಲುಪಲು ಸಾಧ್ಯವೆಂದು ಕ್ರೀಡಾ ದಿನಕ್ಕೆ ಶುಭಾಶಯ ಕೋರಿದರು.
ಈ ಸಂದರ್ಭದಲ್ಲಿ ಭುವನೇಂದ್ರ ಕಾಲೇಜಿನ ವಿಶ್ವಸ್ಥ ಮಂಡಳಿಯ ಸದಸ್ಯ ನರೇಂದ್ರ ಕಾಮತ್, ಐಕ್ಯುಎಸಿ ಸಂಯೋಜಕ ಲಕ್ಷ್ಮೀನಾರಾಯಣ ಕೆ. ಎಸ್, ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಡಾ. ಈಶ್ವರ ಭಟ್, ಭುವನೇಂದ್ರ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ನವೀನ್ ಚಂದ್ರ, ಪದವಿ ವಿಭಾಗದ ಕ್ರೀಡಾ ಕಾರ್ಯದರ್ಶಿಗಳಾದ ಧವಲ್, ಅನನ್ಯಾ ಶೆಟ್ಟಿ ಪದವಿಪೂರ್ವ ವಿಭಾಗದ ಕಾರ್ಯದರ್ಶಿಗಳಾದ ಗೌತಮ್ ಹಾಗೂ ಅನನ್ಯಾ ಉಪಸ್ಥಿತರಿದ್ದರು.
ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ರಮೇಶ್ ಎಸ್. ಸಿ. ಸ್ವಾಗತಿಸಿದರು. ಅಂತಿಮ ಬಿ.ಸಿ.ಎ.ವಿದ್ಯಾರ್ಥಿನಿ ಹಿತ ನಿರೂಪಿಸಿದರು. ಅನನ್ಯ ಶೆಟ್ಟಿ ವಂದನಾರ್ಪಣೆಗೈದರು.





































