ರಾಜ್ಯ ಸರ್ಕಾರದಿಂದ ಪಂಚಾಯತ್ ರಾಜ್ ವ್ಯವಸ್ಥೆಯ ಕಡೆಗಣನೆ
ಕಾರ್ಕಳ : ಈಗಾಗಲೇ ರಾಜ್ಯದಲ್ಲಿ ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ಚುನಾವಣೆಗಳು ನಡೆಯದೇ 5 ವರ್ಷಗಳಾಗುತ್ತಾ ಬಂದಿದೆ.
ಕ್ಷೇತ್ರ ಪುನರ್ ವಿಂಗಡಣೆ_ ಮೀಸಲಾತಿ ಕಾರಣಕ್ಕೆ ಚುನಾವಣೆಗಳನ್ನು ಮುಂದೂಡುತ್ತಾ ಬರಲಾಗುತ್ತಿದೆ.
ನ್ಯಾಯಾಲಯ ಹಲವಾರು ಬಾರಿ ರಾಜ್ಯ ಸರ್ಕಾರದಿಂದ ಆಗುತ್ತಿರುವ ಅನವಶ್ಯಕ ವಿಳಂಬದ ಬಗ್ಗೆ ಛೀಮಾರಿ ಹಾಕಿ ಗಡು ನಿಗದಿ ಪಡಿಸಿದೆ.
ಆದರೂ ಸರಕಾರವು ಮೀಸಲಾತಿ ಪಟ್ಟಿಯನ್ನು ಇನ್ನೂ ಅಂತಿಮಗೊಳಿಸಿಲ್ಲ.
ರಾಜ್ಯದೆಲ್ಲೆಡೆ ಜಿ.ಪಂ ಮತ್ತು ತಾಪಂ ಕಚೇರಿಗಳಲ್ಲಿ ಜನಸಾಮಾನ್ಯರನ್ನು ಯಾರೂ ಕೇಳುವ ಗತಿಯಿಲ್ಲ.
ಕೇವಲ ಆಡಳಿತ ಅಧಿಕಾರಿಗಳ ದರ್ಬಾರ್ ನಡೆಯುತ್ತಿದೆ.
ಮುಂದೆ ಇದೇ ಪರಿಸ್ಥಿತಿ ರಾಜ್ಯದ ಎಲ್ಲಾಗ್ರಾಮ ಪಂಚಾಯತ್ ಗಳಿಗೂ ಬರುವ ಸಾಧ್ಯತೆ ಇದೆ.
ಹಿಂದೆ ಚುನಾವಣಾ ಆಯೋಗವೇ ಸ್ಥಳೀಯ ಸಂಸ್ಥೆಗಳ ಕ್ಷೇತ್ರವಾರು ಮೀಸಲಾತಿ ನಿಗದಿ ಪಡಿಸುತ್ತಿತ್ತು.
ಆದರೆ 2020 ರಲ್ಲಿ ಪಂಚಾಯತ್ ರಾಜ್ ಕಾಯ್ದೆಗೆ ತಂದ ತಿದ್ದುಪಡಿ ಪ್ರಕಾರ ಮೀಸಲಾತಿ ನಿಗದಿ ಪಡಿಸುವ ರಾಜ್ಯ ಚುನಾವಣಾ ಆಯೋಗದ ಅಧಿಕಾರವನ್ನು ಮೊಟಕುಗೊಳಿಸಿ ರಾಜ್ಯ ಸರಕಾರವೇ ನಿಗದಿಪಡಿಸಬೇಕಾಗಿದೆ.
ಈ ವರ್ಷದ ಅಕ್ಟೋಬರ್ ಅಂತ್ಯಕ್ಕೆ ಗ್ರಾಮ ಪಂಚಾಯತ್ ಗಳ ಮೀಸಲಾತಿ ಪಟ್ಟಿಯನ್ನು ಅಂತಿಮಗೊಳಿಸಿ ರಾಜ್ಯ ಸರಕಾರವೇ ಚುನಾವಣಾ ಆಯೋಗಕ್ಕೆ ನೀಡಬೇಕು.
ಆದರೆ ಸರಕಾರದ ಮಟ್ಟದಲ್ಲಿ ಮೀಸಲಾತಿ ನಿಗದಿ ಪ್ರಕ್ರಿಯೆ ಇನ್ನೂ ಪ್ರಾರಂಭವಾಗಿಲ್ಲ.
ರಾಜ್ಯದ ಎಲ್ಲಾ ಗ್ರಾಮ ಪಂಚಾಯಿತಿಗಳ ಅವಧಿ ಈ ವರ್ಷಾಂತ್ಯಕ್ಕೆ ಮುಗಿಯಲಿದ್ದು ಡಿಸೆಂಬರ್ ಅಥವಾ ಜನವರಿ ಒಳಗಡೆ ಎಲ್ಲಾ ಗ್ರಾಮ ಪಂಚಾಯತಿಗಳಿಗೆ ಸಾರ್ವತ್ರಿಕ ಚುನಾವಣೆ ನಡೆಯಬೇಕು.
ಸರಕಾರದ ಈಗಿನ ಧೋರಣೆ ಗಮನಿಸಿದರೆ ನಿಗದಿತ ಅವಧಿಯಲ್ಲಿ ಗ್ರಾಮ ಪಂಚಾಯತ್ ಚುನಾವಣೆಗಳನ್ನು ನಡೆಸುವ ಇಚ್ಛಾ ಶಕ್ತಿಯನ್ನು ತೋರಿಸದೆ ಉದಾಸೀನ ಪ್ರವೃತ್ತಿಯನ್ನು ತೋರುತ್ತಿದೆ.
ಒಂದು ವೇಳೆ ರಾಜ್ಯ ಸರ್ಕಾರ ಈ ಹಿಂದಿನಂತೆ ವಿಳಂಬದ ತಂತ್ರಗಾರಿಕೆಯನ್ನು ಕೈಗೊಂಡರೆ ಗ್ರಾಮ ಪಂಚಾಯತ್ ಗ ಳಲ್ಲಿ ಚುನಾಯಿತ ಪ್ರತಿನಿಧಿಗಳ ಅಧಿಕಾರ ಕೊನೆಗೊಂಡು ಅಧಿಕಾರಿಗಳ ದರ್ಬಾರ್ ಆರಂಭವಾಗಲಿದೆ.
ಈಗಾಗಲೇ ಕಳೆದ 5 ವರ್ಷಗಳಿಂದ ರಾಜ್ಯದ 31 ಜಿ.ಪಂ ಮತ್ತು 219 ತಾ.ಪಂ ಗಳಲ್ಲಿ ಚುನಾಯಿತ ಪ್ರತಿನಿಧಿಗಳೇ ಇಲ್ಲದೆ ಕೇವಲ ಅಧಿಕಾರಿಗಳ ಕಾರುಬಾರು ನಡೆಯುತ್ತಿದೆ.
ಇದೀಗ ರಾಜ್ಯದ 5900 ಕ್ಕೂ ಅಧಿಕ ಗ್ರಾಮ ಪಂಚಾಯಿತಿಗಳಿಗೆ ನಿಗದಿತ ಅವಧಿಯಲ್ಲಿ ಚುನಾವಣೆ ನಡೆಯದೆ ಆಡಳಿತಾಧಿಕಾರಿಗಳ ನೇಮಕವಾದರೆ ಗ್ರಾಮೀಣ ಭಾಗದಲ್ಲಿ ಆಡಳಿತ ವ್ಯವಸ್ಥೆ ಅಧಿಕಾರಗಳ ಕೈಗೆ ಹೋಗಿ ಪ್ರಜಾಪ್ರಭುತ್ವ ಮತ್ತು ಪಂಚಾಯತ್ ರಾಜ್ ವ್ಯವಸ್ಥೆಯನ್ನು ಬುಡ ಮೇಲು ಮಾಡಿದ ಅಪಖ್ಯಾತಿಗೆ ರಾಜ್ಯ ಸರಕಾರ ಸಿಲುಕಲಿದೆ.
ರಾಜ್ಯ ಸರಕಾರದ ಈ ಪ್ರಜಾತಂತ್ರ ಮತ್ತು ಪಂಚಾಯತ್ ರಾಜ್ ವ್ಯವಸ್ಥೆ ವಿರೋಧಿ ಧೋರಣೆಯ ವಿರುದ್ಧ ಎಲ್ಲಾ ಸ್ಥಳೀಯ ಆಡಳಿತ ಪ್ರತಿನಿಧಿಗಳು, ಜನಸಾಮಾನ್ಯರು ಅನಿವಾರ್ಯವಾಗಿ ಬೀದಿಗಿಳಿದು ತೀವ್ರ ಪ್ರತಿಭಟನೆ ಮಾಡಬೇಕಾದೀತೆಂದು ಕರ್ನಾಟಕ ಪಂಚಾಯತ್ ರಾಜ್ ಪರಿಷತ್ ಬೆಂಗಳೂರು (ರಿ.)ಇದರ ಆಡಳಿತ ಮಂಡಳಿ ಸದಸ್ಯರು ಹಾಗೂ ಸಾಣೂರು ಗ್ರಾ.ಪಂ. ಮಾಜಿ ಅಧ್ಯಕ್ಷ ಸಾಣೂರು ನರಸಿಂಹ ಕಾಮತ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Post Views: 165



























