ಮಂಗಳೂರು: ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪಿಕಪ್ ವಾಹನ ಹಾಗೂ ಮಂಗಳೂರು ದಕ್ಷಿಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೈಕ್ ಕಳ್ಳತನ ಮಾಡಿದ ಕೇರಳದ ಅಂತರ್ ರಾಜ್ಯ ವಾಹನ ಕಳ್ಳನನ್ನು ಪೊಲೀಸರು ಬಂಧಿಸಿದ್ದಾರೆ.
ಕೇರಳದ ತಿರುವನಂತಪುರದ ವರ್ಕಳಾ ಗ್ರಾಮ ರಾತಿಕ್ಕಲ್ ನಿವಾಸಿ ಹಂಝ ಕುಪ್ಪಿಕಂಡ ಯಾನೆ ಹಂಸ ಯಾನೆ ಹಂಝ ಪೊನ್ನನ್ ಪ್ರಾಯ(29) ಬಂಧಿತ.
ಸೆ.30ರಂದು ಕುಳಾಯಿಯ ಸುಕುಮಾರ್ ಎಂಬವರ ಮನೆಯ ಆವರಣದಲ್ಲಿ ನಿಲ್ಲಿಸಿದ್ದ ಪಿಕಪ್ ವಾಹನ ರಾತ್ರಿ ಕಳವಾಗಿತ್ತು. ಈ ಕುರಿತು ಅ.3ರಂದು ಸುರತ್ಕಲ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಈ ಪ್ರಕರಣದಲ್ಲಿ ಭಾಗಿಯಾದ ಆರೋಪಿಗಳ ಪತ್ತೆ ಕಾರ್ಯವನ್ನು ನಡೆಸುತ್ತಿದ್ದ ಪೊಲೀಸರಿಗೆ ಮಂಗಳವಾರ ಯುವಕನೋರ್ವ ಬೈಕ್ ನಲ್ಲಿ ಅನುಮಾನಸ್ಪದ ರೀತಿಯಲ್ಲಿ ತಿರುಗಾಡುತ್ತಿದ್ದು ಆತನನ್ನು ತಡೆದು ನಿಲ್ಲಿಸಿ ವಿಚಾರಣೆ ನಡೆಸಿದ್ದಾರೆ. ಈ ವೇಳೆ ಆತನಲ್ಲಿ ಬೈಕ್ ಗೆ ಸಬಂಧಿಸಿದಂತೆ ಯಾವುದೇ ದಾಖಲೆ ಇರಲಿಲ್ಲ. ಪರಿಶೀಲನೆ ನಡೆಸಿದಾಗ ಮಂಗಳೂರು ದಕ್ಷಿಣ ಪೊಲೀಸ್ ಠಾಣಾ ವ್ಯಾಪ್ತಿಯ ಫಾರಂ ಮಾಲ್ ಬಳಿಯಿಂದ ಕಳ್ಳತನ ಮಾಡಿರುವ ಬೈಕ್ ಎಂದು ತಿಳಿದು ಬಂದಿದೆ. ಇನ್ನಷ್ಟು ವಿಚಾರಣೆಗೆ ಒಳ ಪಡಿಸಿದಾಗ ಆತ ಕುಳಾಯಿಂದ ಪಿಕಪ್ ಕಳ್ಳ ತನ ಮಾಡಿರುವ ಬಗ್ಗೆಯೂ ಬಾಯಿ ಬಿಟ್ಟಿದ್ದಾನೆ. ಆತನಿಂದ ಸ್ವಾಧೀನಪಡಿಸಿಕೊಂಡ ವಾಹನಗಳ ಒಟ್ಟು ಮೊತ್ತ 3.10 ಲ.ರೂ. ಆಗಬಹುದು ಎಂದು ಅಂದಾಜಿಸಲಾಗಿದೆ.
ಕೇರಳದಲ್ಲಿ 17 ಪ್ರಕರಣ
ಆರೋಪಿ ಹಂಝ ಕುಪ್ಪಿಕಂಡ ಕುಖ್ಯಾತ ಕಳ್ಳತನ ಆರೋಪಿಯಾಗಿದ್ದಾನೆ. ಆತನ ವಿರುದ್ದ ಕೇರಳ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮೊಬೈಲ್ ಕಳ್ಳತನ, ವಾಹನ ಕಳ್ಳತನ ಸೇರಿದಂತೆ ಸುಮಾರು 17 ಪ್ರಕರಣಗಳು ದಾಖಲಾಗಿರುತ್ತದೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ.
ಸುರತ್ಕಲ್ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕ ಪ್ರಮೋದ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ಪಿಎಸ್ಐ ಶಶಿಧರ ಶೆಟ್ಟಿ, ಎಎಸ್ಐ ರಾಜೇಶ್ ಆಳ್ವ,ಸಿಬ್ಬಂದಿಗಳಾದ ಉಮೇಶ್, ವಿನೋದ್ ಕುಮಾರ್,ನಾಗರಾಜ್, ಸುನೀಲ್ ಕುಮಾರ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದಾರೆ.