ಮರದ ಮರ್ಮರದಿಂದ ಅರಳಿತು! ಸ್ವಾಭಿಮಾನದ ಸರಿಗಮ!
ಆರ್ ಎಸ್ ಎಸ್ ಎಂಬ ಆಲದ ಮರವಿದು
ಬಲ್ಲಿರೇನಯ್ಯ ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಎಂಬ ದೇಶ ಭಕ್ತ ಸಂಘಟನೆಯ ಹೆಜ್ಜೆಯ ನಾದವ,
ಅಂದು ಡಾಕ್ಟರ್ ಬಲಿರಾಮ್ ಹೆಡ್ಗೇವಾರ್ ಎಂಬ ಮಾಹಾನ್ ವ್ಯಕ್ತಿಯ ಮುಂದಾಲೋಚನೆಯ ಕೂಸು ಬೆಳೆದು ಬಂದ ಪ್ರತೀ ಹೆಜ್ಜೆ ಹೆಜ್ಜೆಗೂ ಏರಿಳಿತಗಳ ಕಂಡು ಇಂದು ಬ್ರಹತ್ ಆಕಾರದ ಆಲದ ಮರವಾಗಿ ಬೆಳೆದು ನಿಂತು ಶತ ವರುಷದ ಸಂಭ್ರಮವನು ಆಚರಿಸುತ್ತಿರುವುದು ನಮಗಂತೂ ವಿಜಯ ಸಂಭ್ರಮ.
ಸಂಘಟನೆಯಲ್ಲಿ ಶಕ್ತಿ ಇದೆ! ಸಂಘದ ಹೃದಯ ಹೃದಯದೊಳು ದೇಶಭಕ್ತಿ ಇದೆ
ಸುಮಾರು ಎಪ್ಪತ್ತರ ದಶಕವದು, ನನಗಂತೂ ಹದಿನೈದರ ಹರೆಯ, ನನ್ನ ವಾಸಸ್ಥಳ ಕಾರ್ಕಳವಾದರೂ ನನ್ನ ಬಾಲ್ಯದ ತುಂಟಾಟದ ಹೆಚ್ಚು ಸಮಯವನ್ನು ನಾನು ಕಳೆದುದು ನನ್ನ ಹೆತ್ತಬ್ಬೆಯ ತವರಾದ ಉಡುಪಿಯಲ್ಲಿ. ಆ ಸುಂದರ ಸಮಯದಲ್ಲಿ ನನ್ನ ಬದುಕಿಗೆ ಸಂಸ್ಕಾರದ ಲೇಪನ ದೊರೆತದ್ದು ಅದು ಸಂಘ ಅರ್ಥಾತ್ ರಾಷ್ಟ್ರೀಯ ಸ್ವಯಂಸೇವಕ ಸಂಘದ ಒಡನಾಟದಿಂದ ಎಂದು ನಾನಿಂದು ಹೆಮ್ಮೆಯಿಂದ ಸಾರುವೆನು.
ಅಂದಿನ ಆ ಸಮಯದಲ್ಲಿ ಗಣ್ಯರಾದ ಹಾಗೂ ಹಿರಿಯರಾದ ಉಡುಪಿಯ ಗುಜ್ಜಾಡಿ ಸಂಸ್ಥೆಗಳ ಸ್ಥಾಪಕ ಗುಜ್ಜಾಡಿ ನರಸಿಂಹ ನಾಯಕ್ ಇವರ ಮಾರ್ಗದರ್ಶನದಲ್ಲಿ ನಡೆದ ಶಾಖೆಯದು ಉಡುಪಿಯ ಕಲ್ಪನಾ ಟಾಕೀಸ್ ಎದುರು ಸಾಲಿನಲ್ಲಿನ ಒಂದು ಪುಟ್ಟ ಮೈದಾನದಲ್ಲಿ ನಡೆಯುತ್ತಿತ್ತು. ಅವರ ಮಕ್ಕಳಾದ ರಘುವೀರ್,ಮಾಧವ ಹಾಗೂ ರಾಮದಾಸ ನಾಯಕ್ ಇವರೊಂದಿಗೆ ನಾನು ನನ್ನ ಶಾಲಾ ರಜಾದಿನಗಳಲ್ಲಿ ಈ ಶಾಖೆಯಲ್ಲಿ ಶಾರೀರಿಕ ಹಾಗೂ ಬೌದ್ಧಿಕ ಚಟುವಟಿಕೆಗಳಲ್ಲಿ ಸತತವಾಗಿ ಭಾಗವಹಿಸುತ್ತಿದ್ದೆ.
ಆದರೆ ಮುಂದಿನ ಒಂದು ದಶಕದಲ್ಲಿ ಜೀವನದ ಏಳುಬೀಳುಗಳನ್ನು ಕಂಡ ನನ್ನ ಆ ಬಡತನದ ಯೌವನದಲ್ಲಿ ಚ್ಯುತಿಯಾಯಿತು ನನ್ನ ವಿದ್ಯಾರ್ಥಿ ಜೀವನ. ಕಿತ್ತು ತಿನ್ನುವ ಆ ಬಡತನದೊಡನೆ ಹೋರಾಡಲು ನಾನು ಹೆತ್ತವರಿಗೆ ನೆರವಾಗಲು ಸುತ್ತುಮುತ್ತಲಿನ ಹತ್ತು ಹಲವು ಜನರಲ್ಲಿ ಉದ್ಯೋಗ ನಡೆಸಿದ್ದು ಅದು ನನಗೆ ದೊರೆತ ಜ್ಞಾನದ ಶಿಕ್ಷಣ.
ಮತ್ತೆ ದಶಕವೊಂದು ಉರುಳಿ ಸುತ್ತಿ ಬಂತು ಸಂಘದ ಶಿಕ್ಷಣ. ಇದು ನಡೆದದ್ದು ನನ್ನೂರಾದ ಕಾರ್ಕಳದ ಪ್ರತಾಪ್ ಪ್ರಭಾತ್ ಶಾಖೆಯಲ್ಲಿ. ಇದು ತಾಲೂಕಿನ ಮೂಲ ಸ್ಥಳವಾದ ಕಾರಣ ಹತ್ತುಹಲವು ಸಜ್ಜನರ ಒಡನಾಟ ಒದಗಿದ್ದು ಅದು ನನ್ನ ಭಾಗ್ಯ.
ಅಂದಿನ ದಿನಗಳಲ್ಲಿ ನಮಗೆ ಮಾರ್ಗದರ್ಶನ ನೀಡಿದ ದಿವಂಗತ ಇಡ್ಯ ರಾಮಮೂರ್ತಿ ರಾವ್, ಆರ್ ನರಸಿಂಹ ಶೆಣೈ ಮತ್ತು ನಂತರದ ದಿನಗಳಲ್ಲಿ ಒಂದು ಹೊಸ ಶಾಖೆಯನ್ನು ರಚಿಸಲು ಕಾರಣರಾದ ಇಂದಿಗೂ ಸಂಘಕ್ಕಾಗಿ ದುಡಿಯುತ್ತಿರುವ ಆರ್ ಸುರೇಂದ್ರ ಶೆಣೈ ಯಾನೆ ಸುಂದಣ್ಣ ಇವರು ನಮ್ಮ ನಾಯಕರಾಗಿದ್ದರು.
ಹೆಚ್ಚಾಗಿ ಸಂಘದ ಶಾಖೆಗಳು ಪ್ರಾತಃಕಾಲ ಹಾಗೂ ಸಾಯಂಕಾಲ ನಡೆಯುವುದು ರೂಢಿ. ಅದು ನಮ್ಮಂತಹ ದುಡಿದು ಜೀವನ ನಡೆಸುವವರಿಗೆ ಹೊಂದಿಕೊಳ್ಳಲು ಕಷ್ಟವಾಗುತ್ತಿತ್ತು. ಆದರೆ ಸಂಘದ ಮೇಲಿನ ನಮ್ಮ ಪ್ರೀತಿ ಹಾಗೂ ಭಕ್ತಿ ಕುಂದಾಗದೆ ನಮ್ಮ ಅಂತರಾಳದಲ್ಲಿ ಸ್ಥಿರವಾಗಿ ನೆಲೆಸಿತ್ತು.
ವಿಷಯವನರಿತ ಹಿರಿಯರಾದ ದಿವಂಗತ ಆರ್ ನರಸಿಂಹ ಶೆಣೈ ಹಾಗೂ ಅವರ ಸಹೋದರ ಆರ್ ಸುರೇಂದ್ರ ಶೆಣೈಯವರ ನೇತೃತ್ವದಲ್ಲಿ ಪ್ರತಾಪ್ ರಾತ್ರಿ ಎಂಬ ಶಾಖೆಯು ಪ್ರಾರಂಭವಾಯಿತು. ಇದಕ್ಕೆ ಜನಬೆಂಬಲವು ಕೂಡಾ ಲಭಿಸಿ ವಿಜ್ರಂಬಿಸಿತು. ಈ ಶಾಖೆಯು ನಾನು ಸಹಿತ ನೂರಾರು ಗಣವೇಷಧಾರಿಗಳು ಮೂಡಿ ಬರಲು ಕಾರಣವಾಯಿತು.
ಮೊದಮೊದಲು ನಾನು ಸಂಘಗೀತೆ ಹಾಡುತ್ತಿದ್ದೆ ಅಲ್ಲಿಂದ ವೈಯಕ್ತಿಕ ಗೀತೆಗಳನ್ನು ಹಾಡಲು ನನಗೆ ಸುಂದಣ್ಣನವರು ಸಹಕರಿಸಿದ್ದರು. ಇಂದು ನಾನು ಸ್ವತಃ ಗೀತೆಗಳನ್ನು ರಚಿಸಿ ಅದಕ್ಕೆ ರಾಗವನ್ನು ಸಂಯೋಜಿಸಿ ಹಾಡಲು ಮೂಲಕಾರಣ ಅದು ಸಂಘದಾ ಒಡನಾಟ ಎಂದು ಎದೆತಟ್ಟಿ ಸಾರುವೆನು.
ನನ್ನ ಭಾಗ್ಯವೆಂದರದು ಈ ಶಾಖೆಯಲ್ಲಿ ಮುಖ್ಯ ಶಿಕ್ಷಕನಾಗಿ ನಾನು ಸೇವೆ ಸಲ್ಲಿಸಿದ್ದು ಅದರಿಂದ ಸಮಾಜದಲ್ಲಿ ನನಗೆ ಕೆಲವು ಸ್ಥಾನಮಾನ ದೊರೆತದ್ದು ಮತ್ತು ನನ್ನ ಪರಿಚಯ ಮೂಡಿದ್ದು ಎಂದು ಕೂಡಾ ಸಾರುವೆನು.
ಇಲ್ಲಿ ಎದೆತಟ್ಟಿ ಸಾರುವೆನು ನಾನು ಒಬ್ಬ ಸಂಘದ ಸದಸ್ಯ
ಸಂಘವೆಂಬ ಆಲದ ಮರವು ಇಂದು ಬ್ರಹತ್ ಆಕಾರವನ್ನು ತಳೆದು ಅಖಂಡ ಭಾರತ ಮಾತ್ರವಲ್ಲ ವಿಶ್ವದಲ್ಲಿಯೇ ಪ್ರಥಮ ಸ್ಥಾನವ ಪಡೆದ ಸಂಘಟನೆ ಎಂಬ ಬಿರುದು ಪಡೆದ ನಮ್ಮ ಹೆಮ್ಮೆಯ ಸಂಘ ಅರ್ಥಾತ್ ರಾಷ್ಟ್ರೀಯ ಸ್ವಯಂ ಸೇವಕ ಸಂಘ (RSS) ಕ್ಕೆ ಇಂದು ಶತ ವರುಷಗಳ ಸಂಭ್ರಮ. ವಿರೋಧಿಗಳ ಸತತ ಕಿರುಕುಳ ಹಾಗೂ ವಿರೋಧದ ನಡುವೆ ಹಿಮಾಲಯದ ಶಿಖರದೆತ್ತರ ಬೆಳೆದು ಭಾರತದ ಆಡಳಿತದ ಚುಕ್ಕಾಣಿಯನ್ನು ಹಿಡಿದಿರುವುದು ಸಂತಸದ ವಿಷಯವದು. ಅಂದಿನಿಂದ ಇಂದಿನವರೆಗೂ ನಮ್ಮೆಲ್ಲರ ಸಂಕಲ್ಪವಾದ
ಅಖಂಡ ಭಾರತದ ಕನಸು ನನಸಾಗಲಿ! ಭಾರತವು ವಿಶ್ವದಲ್ಲಿ ಗುರುವಿನ ಸ್ಥಾನವ ಪಡೆಯಲಿ! ನಾವೆಲ್ಲಾ ಹಿಂದೂ ನಾವೆಲ್ಲಾ ಬಂಧು! ಎಂಬ ಮೂಲಮಂತ್ರ ಜನ ಮಾನಸದಲ್ಲಿ ನೆಲೆಸಲಿ!
ಎಂದು ಹೇಳುತ್ತಾ ನನ್ನ ಬಾಂಧವರಾದ ತಮಗೆಲ್ಲರಿಗೂ
ಸಂಘದ ಶತ ವರುಷದ ಗತ ವೈಭವದ ಸಂಭ್ರಮದ ಶುಭಾಶಯಗಳು
ಭಾರತ್ ಮಾತಾ ಕೀ ಜೈ
ಕಾಂತಾವರ ಶಿವಾನಂದ ಶೆಣೈ ಕಾರ್ಕಳ



























