ಮೂಡುಬಿದಿರೆಯಲ್ಲಿ ಹೊಸ ರಾಜಕೀಯ ಸೇಡುಗಳು ಹುಟ್ಟಿಕೊಳ್ಳುತ್ತಿದ್ದು ಕಾಂಗ್ರೆಸ್ಸ್ ತನ್ನ ಪ್ರಾದೇಶಿಕ ಸಿದ್ಧಾಂತವನ್ನು ಕೂಡಾ ಉಳಿಸಿಕೊಳ್ಳದಂತಹ ಮಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದೆ.
ರಾಜಕೀಯ ಗೆಲುವು ಸಾಧಿಸುವ ಹೋರಾಟದ ಸೇಡು ಎಲ್ಲಿಗೆ ತಲುಪಿದೆ ಎಂದರೆ ಮೂಡುಬಿದಿರೆಯ ಅಭಿವೃದ್ಧಿಯ ಹರಿಕಾರನಾಗಿ ತನ್ನ ಸಾಮಾಜಿಕ ಹಾಗೂ ರಾಜಕೀಯ ಕರ್ತವ್ಯವನ್ನು ಮಾಡಿ ಮುಗಿಸಿದ್ದ ಕೆ. ಅಮರನಾಥ ಶೆಟ್ಟಿಯವರ ಶಿಫಾರಸ್ಸಿನಲ್ಲಿ ನೇಮಕಮಾಡಿದ್ದ ಉದ್ಯೋಗಿಯೊಬ್ಬಳಿಗೆ ಹಿಂಭಡ್ತಿ ಕೊಡುವಲ್ಲಿಗೆ ತಲುಪಿದೆ. ಅಷ್ಟಾದರೂ ಕಾಂಗ್ರೆಸ್ಸಿನ ಹಿರಿಯ ರಾಜಕಾರಣಿ ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಅವರು ಧೃತರಾಷ್ಟ್ರನ ದೃಷ್ಠಿಯಂತೆ ಮಾಡಿಕೊಂಡದ್ದರಲ್ಲೂ ಪ್ರಕಟಿಸಲಾಗದಂತಹ ಪ್ರಾಯಶ್ಚಿತ್ತ ಇದೆ.
ಕಲ್ಲಬೆಟ್ಟು ವ್ಯವಸಾಯ ಸೇವಾ ಸಹಕಾರಿ ಸಂಘಕ್ಕೊಳಪಟ್ಚಿರುವ ಕೆಲವು ಗ್ರಾಮಗಳನ್ನು ಪ್ರತ್ಯೇಕಿಸಿ ಶಿರ್ತಾಡಿ ಪತ್ತಿನ ಸಹಕಾರಿ ಸಂಘವನ್ನು (ಕಾಂಗ್ರೆಸ್) ರಚಿಸಲಾಗಿದ್ದು ಅಲ್ಲಿಂದ ನಂತರ ಹೊಸ ವರಸೆಗಳು ಹುಟ್ಟಲಾರಂಭಿಸಿದೆ.
ಕಲ್ಲಬೆಟ್ಟು ಸೊಸೈಟಿಯಿಂದ ಶಿರ್ತಾಡಿ ಸಹಕಾರಿ ಸಂಘಕ್ಕೆ ದಿಢೀರನೆ ಭಾರೀ ಮೊತ್ತದಲ್ಲಿ ಹಣ ವರ್ಗಾಯಿಸಿಕೊಂಡ ಬಗ್ಯೆ ಮತ್ತು ಚಿನ್ನಾಭರಣಗಳನ್ನು ಕೂಡಲೇ ವರ್ಗಾಯಿಸಿಕೊಡಬೇಕೆನ್ನುವ ವಿಚಾರದ ನೆಪ ಮಾಡಿಕೊಂಡು ಹೊಸ ರಾಜಕೀಯವನ್ನೇ ಸಾಧಿಸಲಾಗಿದೆ.
ಅಲ್ಲಿ ಅನಿತಾ ಶೆಟ್ಟಿ ಎಂಬಾಕೆ ಪ್ರಬಂಧಕಳಾಗಿ ಕಾರ್ಯನಿರ್ವಹಿಸುತ್ತಿದ್ದರು. ಕಳೆದ ಮೂವತ್ತು ವರ್ಷಗಳ ಹಿಂದೆ ಕೆ. ಅಮರನಾಥ ಶೆಟ್ಟಿಯವರ ಶಿಫಾರಸ್ಸಿನ ಮೇಲೆ ಗುಮಾಸ್ತೆ ಹುದ್ದೆಗೆ ನೇಮಕಗೊಂಡಿದ್ದವರು. ಏನೋ ಒಂದು ವಿಷಯಕ್ಕೆ ಸಂಬಂಧಿಸಿದಂತೆ ಆಕೆಗೆ ಪ್ರಶ್ನಾವಳಿ ನೋಟೀಸು ನೀಡಿದ್ದರ ಹಿನ್ನೆಲೆಯನ್ನು ವಸ್ತುವನ್ನಾಗಿಸಿ ಪದವಿಯಿಂದ ಹಿಂಭಡ್ತಿಗೊಳಿಸಲಾಗಿದೆ.
ಜಿಲ್ಲೆಯ ಪ್ರತಿಯೊಂದು ಸಹಕಾರಿ ಸಂಘದಲ್ಲಿಯೂ ಕೂಡಾ ಅದರ ಸಿಬ್ಬಂದಿಗಳ ಕಾರ್ಯ ಚಟುವಟಿಕೆ ಮತ್ತಿನ್ನಿತರ ವ್ಯವಹಾರ ಕುಶಲತೆ,ಲೋಪಗಳೇನೇ ಇದ್ದರೂ ಅದನ್ನು ಆಡಳಿತ ಮಂಡಳಿಯೇ ಪರಿಶೀಲನೆ ಮಾಡುವುದು. ಸಮತೋಲನಕ್ಕೆ ಮಾರಿದ ಸಂದರ್ಭದಲ್ಲಿ ಉಪನಿಬಂಧಕರಿ ವಿವರಣೆಯನ್ನು ರವಾನಿಸಿ ಅಲ್ಲಿಂದ ನಿರ್ಣಯವನ್ನು ಪಡೆಯುವುದು. ಅದು ಸಹಕಾರಿ ಸಂಘದೊಳಗಿನ ನಡವಳಿಕೆಗಳು. ಅದೆಲ್ಲವನ್ನೂ ಪಾಲಿಸದೆ ಏಕಾಏಕಿಯಾಗಿ ಜಿಲ್ಲಾ ಸಹಕಾರಿ ಉಪನಿಬಂಧಕರಿಂದ ಹಿಂಭಡ್ತಿ ಆದೇಶ ರವಾನೆಯಾಗಿರುವುದು ಕಲ್ಲಬೆಟ್ಟುವಿನಲ್ಲಿ ಶೆಟ್ಟಿ V/s ಕಾಂಗ್ರೆಸ್ ರಾಜಕೀಯಕ್ಕೆ ಆರಂಭ ಕೊಟ್ಟಂತಾಗಿದೆ. ಕಾಂಗ್ರೆಸ್ ಬೆಂಬಲಿತ ಸದಸ್ಯರುಗಳಲ್ಲಿ ಸುರೇಶ ಕೋಟ್ಯಾನ್ ಸಹಿತ ನಾಲ್ವರು ಪಕ್ಷಾತೀತವಾದ ನೆಲೆಯಲ್ಲಿ ಬೇಂಕಿನ ಪರವಾಗಿ ನಿಂತಿರುವುದು ಗಮನಾರ್ಹ ಸಂಗತಿಯಾಗಿದೆ.
ಮೂಡುಬಿದಿರೆ ಶಾಸಕ ಕೆ. ಉಮಾನಾಥ ಕೋಟ್ಯಾನ್ ಅವರು ಜಿಲ್ಲಾ ಸಹಕಾರಿ ಡಿ ಆರ್ ನಡವಳಿಕೆಯನ್ನು ಬಹಿರಂಗವಾಗಿ ಪ್ರಶ್ನಿಸಿದ್ದು , ಆ ಬಗ್ಯೆ ವಿಧಾನಸಭೆಯಲ್ಲಿ ಪ್ರಸ್ತಾಪಿಸುತ್ತೇನೆ ಎಂಬುದನ್ನೂ ಬೇಂಕಿನ ನಿರ್ದೇಶಕರ ಪ್ರತಿಭಟನಾ ಸಭೆಯಲ್ಲಿ ಹೇಳಿದ್ದಾರೆ.
ಈ ಬಗ್ಯೆ ಕಾಂಗ್ರೆಸ್ ಕೆಲವು ಪ್ರಮುಖರನ್ನು ಕೇಳಿದಾಗ ಎಲ್ಲರ ಅಭಿಪ್ರಾಯವೇನೆಂದರೆ, ‘ಹಾಗೆ ಮಾಡಿಸಿದ್ದು ಖಂಡಿತ ಅನ್ಯಾಯ ತಪ್ಪು. ಪಕ್ಷದ ಮುಖಂಡರು ಹಾಗೆ ಮಾಡಿಸಬಾರದಿತ್ತು.’ -ವಿ. ಕೆ. ವಾಲ್ಪಾಡಿ