ಮಂಡ್ಯ ಜಿಲ್ಲೆಯ ಮದ್ದೂರಿನ ಗಣೇಶೋತ್ಸವ ಮೆರವಣಿಗೆಯ ಕಲ್ಲು ತೂರಾಟ ಪ್ರಸಂಗವು ರಾಜ್ಯದ ಜೆ.ಡಿ. ಎಸ್ ಪಾಲಿಗೆ ಜಗಿಯಲಾಗದಷ್ಟು ಗಟ್ಟಿಯಾದ ಮದ್ದೂರು ವಡೆಯಾಗಿ ಪರಿಣಮಿಸಿದೆ. ಕಾಂಗ್ರೆಸ್ಸಿನ ಸಿದ್ಧರಾಮಯ್ಯ ಮೇಲಿನ ಸಿಟ್ಟು ದ್ವೇಷದಿಂದ ಕಾಂಗ್ರೆಸ್ ಪಕ್ಷ ಜೊತೆ ವಿರೋಧ ಕಟ್ಚಿಕೊಂಡು ಬಿಜೆಪಿಯೊಡನೆ ಸಖ್ಯ ಬೆಳೆಸಿದ್ದ ಹೆಚ್. ಡಿ. ಕುಮಾರ ಸ್ವಾಮಿಯ ಲೆಕ್ಕಾಚಾರವು ಈಗ ಪಕ್ಷ ಬುಡಕ್ಕೇ ಕೊಡಲಿಯೇಟು ಬೀಳುವಂತಾಗಿದೆ. ಪ್ರಜ್ವಲ್ ರೇವಣ್ಣನನ್ನು ಬಂಧಿಸಿ ಜೈಲೆಗೆ ಕಳುಹಿಸುವಲ್ಲಿಂದಲೇ ಜೆಡಿಎಸ್ ಬಹಳಷ್ಟು ಮುಜುಗರಕ್ಕೊಳಗಾಗಲಾರಂಭಿಸಿತು. ಹೆಚ್. ಡಿ. ರೇವಣ್ಣ ಜೀವಂತವಿದ್ದೂ ಇಲ್ಲದ ಹಾಗೆ ರಾಜಕೀಯ ಮಾಡುವಂತಾಯಿತು. ಹೆಚ್. ಡಿ. ಕುಮಾರಸ್ವಾಮಿಗೆ ಒಂದು ಮಗ್ಗುಲಿನಲ್ಲಿ ನೆಮ್ಮದಿ ಕೊಟ್ಟಿದೆಯಾದರೂ ಹೆಚ್. ಡಿ. ದೇವೇಗೌಡರ ಕುಟುಂಬ ರಾಜಕಾರಣವನ್ನೇ ಅಶ್ಲೀಲಗೊಳಿಸಿತು. ಮೈಸೂರು ಭಾಗದಲ್ಲಿ ತನ್ನ ಪಾರುಪತ್ಯವನ್ನು ಸ್ಥಾಪಿಸಿಕೊಂಡಿದ್ದ ಜೆಡಿಎಸ್ ಇದೀಗ ಮದ್ದೂರು ಪ್ರಕರಣದಿಂದ ಸಾಕಷ್ಟು ಹಿಂದೇಟು ಪಡೆಯುವಂತಾಗಿದೆಯಂತೂ ಸತ್ಯ. ಇಪ್ಪತ್ತಕ್ಕೂ ಹೆಚ್ಚು ಮಂದಿ ಮುಸ್ಲಿಮ್ ಯುವಕರನ್ನೇ ಬಂಧಿಸಲಾಗಿರುವದರ ಹಿಂದೆ ಹೆಚ್ ಡಿ ಕುಮಾರಸ್ವಾಮಿಯ ಪ್ರಭಾವವನ್ನು ಕುಗ್ಗಿಸುವ ತಂತ್ರಗಾರಿಕೆಯೂ ಅಡಗಿಕೊಂಡಿದೆ. ಅದಲ್ಲವಾಗಿದ್ದರೆ ಅಲ್ಪಸಂಖ್ಯಾತರ ಹಿತಕಾಯುವ ಪಕ್ಷವೆಂದೇ ಹೇಳಲಾಗುವ ಕಾಂಗ್ರೆಸ್ ಸರಕಾರವು ಅಷ್ಟು ಸಂಖ್ಯೆಯಲ್ಲಿ ಮುಸ್ಲಿಮ್ ಯುವಕರನ್ನು ಬಂಧಿಸುವ ತರಾತುರಿಗೆ ಮುಂದಾಗುತ್ತಿರಲಿಲ್ಲ. ನಾಗರ ಹಾವೊಂದು ತನ್ನ ಗುಹೆಯಲ್ಲಿ ಮುಳ್ಳುಹಂದಿಗೆ ತತ್ಕಾಲ ವಾಸಕ್ಕೆ ಜಾಗ ಒದಗಿಸಿ ಕೊನೆಗೆ ಹಂದಿಯ ಮುಳ್ಳು ಒಂದೊಂದಾಗಿ ತನ್ನ ಮೈಯತ್ತ ಸಿಡಿದು ಬಂದು ಚುಚ್ಚುತ್ತಿರುವಾಗ ಆ ನಾಗರಹಾವು ತಾನಾಗಿ ಆ ಗುಹೆಯನ್ನು ಮುಳ್ಳುಹಂದಿಗೆ ಬಿಟ್ಟು ಹೊರಟ ಕತೆಯಂತೆಯೆ ಜೆಡಿಎಸ್ ಹಾಗೂ ಬಿಜೆಪಿಯ ಸಖ್ಯದ ಪರಿಣಾಮ.
ಹೆಚ್. ಡಿ. ಕುಮಾರ ಸ್ವಾಮಿಯನ್ನು ಕೇಂದ್ರ ಕ್ಯಾಬಿನೆಟ್ಚಿಗೆ ಸೇರಿಸಿ ತುಕ್ಕು ಹಿಡಿದ ಕಾರ್ಖಾನೆಗಳ ಉಸ್ತುವಾರಿಯ ಸಚಿವ ಹುದ್ದೆಯನ್ನು ಕೈಗೆಕೊಟ್ಟು ರಾಜ್ಯದಲ್ಲಿ ಪಕ್ಷ ಸಂಘಟನೆಯಲ್ಲಿ ತೊಡಗದ ಹಾಗೆ ಮಾಡಿದ್ದಾರೆ. ಸೈಲ್(SAIL steel authority of India)ಅನ್ನು ಮಾರಾಟ ಮಾಡುವುದಾದರೆ ಗಿರಾಕಿ ಹುಡುಕು ಎಂದೂ ಆಸೆ ಹುಟ್ಚಿಸಿದ್ದಾರೋ ಏನೋ ! ಉತ್ತರ ಭಾರತದಲ್ಲೇ ಸುತ್ತಾಡಿಸುತ್ತಿದ್ದಾರೆ, ಆರೋಗ್ಯ ಕೆಡುವಂತೆಯೂ ನೋಡಿಕೊಳ್ಳುವುದೂ ಆಗಿರುತ್ತದೆ. ಆ ಸಂಕಷ್ಟದಿಂದಲೇ ಮಗ ನಿಖಿಲ್ ಕುಮಾರಸ್ವಾಮಿಗೆ ರಾಜ್ಯದಲ್ಲಿ ಪಕ್ಷದ ಜವಾಬ್ದಾರಿಯನ್ನು ಕೊಟ್ಟು ಏನೂ ಮಾಡಿಕೊಂಡಿರು ಎನ್ನುವ ಗ್ರೀನ್ ಸಿಗ್ನಲ್ ತೋರಿಸಲಾಗಿದ್ದು.
ಸಿದ್ಧರಾಮಯ್ಯನವರು ಹೆಗಡೆ ಜೊತೆಗೆನೆ ಇದ್ದು ನಂತರ ದೇವೇಗೌಡರ ಪಾಳಯಕ್ಕೆ ಸೇರಿದವರು. ರಾಜಕೀಯದ ಎಲ್ಲ ತಾಲೀಮುಗಳನ್ನೂ ಗೈಡರಿಂದ ಕಲಿತಿದ್ದರಿಂದಲೇ ಈಗ ಪದ್ಮನಾಭನಗರದ ಮನೆಯಲ್ಲಯೇ ಶ್ಮಶಾನ ನೆಲೆಯಾಗುವಂತೆ ಮಾಡುವಲ್ಲಿ ಸಿದ್ಧು ಯಶಸ್ಸಾದರು.
ಕಾಂಗ್ರೆಸ್ ಮತ್ತು ಬಿಜೆಪಿ ಬೇರೆ ಬೇರೆ ಸಿದ್ಧಾಂತಗಳ ಪಕ್ಷವಾಗಿದೆಯಾದರೂ ಮದ್ದೂರು ಪ್ರಕರಣದಲ್ಲಿ ಎರಡೂ ಪಕ್ಷಗಳವರ ಸಿದ್ಧಾಂತ ಒಂದೇ ಆಗಿದೆ. ಅದುವೇ ಜೆಡಿಎಸ್ ಪಕ್ಷವನ್ನು ಮೈಸೂರು ಭಾಗದಿಂದ ಔಟ್ ಮಾಡಿಸುವುದು. ಪರಿಣಾಮದ ಲಾಭ ವಿಚಾರ ಯಾರಿಗೇ ದೊರಕುವುದಿದ್ದರೂ ಜೆಡಿಎಸ್ ಅಸ್ಥಿತ್ವವನ್ನು ತೆಗೆದುಹಾಕಲಿಕ್ಕೆ ಸಿದ್ಧರಾಮಯ್ಯನವರು ಬಿಜೆಪಿಯ ತಂತ್ರಗಾರಿಕೆಗೆ ಪರೋಕ್ಷ ಬೆಂಬಲ ಕೊಡುತ್ತಿರುವುದಂತೂ ಸತ್ಯ.
ಹೆಚ್. ಡಿ. ಕುಮಾರ ಸ್ವಾಮಿಯವರು ಕೇಂದ್ರದಲ್ಲಿ ದೊಡ್ಡ ಖಾತೆಯ ಸಚಿವನಾಗಿರುವ ಕಾರಣದಿಂದಷ್ಟೆ ಹಾಲಿಯಿರುವ ಶಾಸಕರುಗಳು ಪಕ್ಷದ ಲೇಬಲಿನಲ್ಲಿ ಓಡಾಡಿಕೊಂಡಿದ್ದಾರೆ. ಭವಿಷ್ಯದಲ್ಲಿ ಯಾವ ಪಕ್ಷದ ಜೊತೆ ಸೇರಿಕೊಳ್ಳಬೇಕೆಂಬುದನ್ನೂ ಕೆಲವರು ಆಗಾಗ ಹೇಳಿಕೊಳ್ಳುತ್ತಿದ್ದಾರೆ. ವಿರೋಧಿಗಳನ್ನು ಜೈಲಿಗೆ ತಳ್ಳುವುದರ ಉದ್ದೇಶದಿಂದಲೇ ಜೈಲು ಶಿಕ್ಷೆಗೊಳಪಟ್ಚಿರುವ ಮುಖ್ಯಮಂತ್ರಿ,ಸಚಿವರುಗಳನ್ನು ಹುದ್ದೆಯಿಂದ ವಜಾಮಾಡುವಂಥ ಮಸೂದೆಯನ್ನು ಅಮಿತ್ ಶಾ ಮಂಡಿಸಿದ್ದರ ಹಿಂದೆಯೂ ಕುಮಾರ ಸ್ವಾಮಿಯ ಜೆಡಿಎಸ್ ನಿರ್ಮೂಲನ ಚಿಂತೆ ಇದ್ದೇ ಇದೆ. ಅಧಿಕಾರ ದುರುಪಯೋಗಪಡಿಸಿಯೋ,ಪ್ರಭಾವ ಬಳಸಿಯೊ ಮಾಡಿದ್ದ ಹಗರಣಗಳ ತನಿಖೆಗೆ ಕೊಡಲಾಗಿರುವ ತಜೆಯಾಜ್ಞೆ ಕೂಡಾ ಒಂದೊಂದಾಗಿ ತೆರವುಗೊಳ್ಳುತ್ತಿರುತ್ತದೆ ಅನ್ನುವುದರಲ್ಲಿ ಅನುಮಾನವಿಲ್ಲ. ಕಳೆದ ಸಂಸತ್ ಚುನಾವಣೆಯ ಸಮಯದಲ್ಲಿ ಜೆಡಿಎಸ್ ನ್ನು ಮಡಿಲಿಗೆ ಹಾಕ್ಕೊಂಡ ಉದ್ದೇಶ ಕೂಡಾ ಹಳೆ ಮೈಸೂರು ಭಾಗದಲ್ಲಿ ಬಿಜೆಪಿಗೆ ಮತ ಹೆಚ್ಚಿಸಿಕೊಳ್ಳುವುದೇ ಆಗಿದ್ದು, ಸಂಸತ್ತಿನ ಚುನಾವಣೆಯಲ್ಲಿ ಜಯಗಳಿಸುವುದಕ್ಕೆ ಒಕ್ಕಲಿಗ ಸಮುದಾಯದ ಮತಬ್ಯಾಂಕಿಗೆ ಕನ್ನ ಹಾಕುವುದೂ ಆಗಿತ್ತು. ಆ ತಂತ್ರಗಾರಿಕೆಯಲ್ಲಿ ಜಯಗಳಿಸಿದ ಅಮಿತ್ ಶಾ ಇನ್ನೀಗ ಆಗದವನನ್ನು ಆಡಿಸಿ ಕೊಲ್ಲಬೇಕು ಎಂಬ ದಾಸರವಾಣಿಯಂತೆ ಜೆಡಿಎಸ್ ಜೊತೆಗೇ ರಾಜ್ಯ ಪ್ರವಾಸ ಮಾಡುತ್ತಿರಬೇಕು ಎಂದು ಸ್ಪಪಕ್ಷೀಯರಿಗೆ ಬುಸುಗುಟ್ಚುವ ಅಮಿತ್ ಶಾ ಇನ್ನೊಂದು ಕಡೆಯಿಂದ ಜೆಡಿಎಸ್ ಅನ್ನು ನುಂಗಿ ಹೊಟ್ಟೆಗಿಳಿಸಿಕೊಳ್ಳುವುದಕ್ಕೆ ಬಾಯ್ದೆರೆದುಕೊಂಡಿರುವಂತೆಯೂ ಸೂಚನೆ ಕೊಡುತ್ತಾರೆ.ಆ ಸೂಚನೆಯ ಮೊದಲ ಕಾರ್ಯತಂತ್ರವೇ ನಾಗಮಂಗಲದ ಮದ್ದೂರು ಪ್ರಕರಣ. ಅಲ್ಲಿ ಈಗ ಕಾಂಗ್ರೆಸ್ ಪಕ್ಷದ ಚೆಲುವನಾರಾಯಣ ಸ್ವಾಮಿ ಶಾಸಕನಾಗಿದ್ದಾರೆ. ಜೆಡಿಎಸ್ ನಲ್ಲಿ ದ್ದಾಗ ಬಹಳ ಪ್ರಭಾವಿ ಶಾಸಕನಾಗಿದ್ದವರು.
ಹಿಂದುತ್ವವನ್ನೇ ಟಾರ್ಗೆಟ್ ಮಾಡದೆ ಬೇರೆ ಯಾವ ದಾರಿಯೂ ಇಲ್ಲವೆಂದು ಮನವರಿಕೆಯಾದ ನಂತರವೇ ಬಿಜೆಪಿಯು ಧರ್ಮಸ್ಥಳ ವಿಚಾರವನ್ನು ಕೈಗೆತ್ತಿಕೊಂಡಿತು. ಭಾನುಮುಷ್ತಾಕ್ ಅವರು ದಸರಾ ಕಾರ್ಯಕ್ರಮ ಉದ್ಘಾಟನೆ ವಿಚಾರದಲ್ಲಿ ಹಿಂದುತ್ವವನ್ನು ಮುಂದಿಟ್ಟು ಚಾಮುಂಡಿ ಕ್ಷೇತ್ರವನ್ನು ಕೈಗೆತ್ತಿಕೊಂಡಿತು.ಆ ಎರಡರ ನಡುವೆಯೆ ಸಂಭವಿಸಿದ್ದ ಮದ್ದೂರಿನ ಗಣಪತಿ ವಿಗ್ರಹ ಮೆರವಣಿಗೆಯಲ್ಲಿ ನಡೆದ ಕಲ್ಲು ತೂರಾಟ ಘಟನೆಯೂ ಬಿಜೆಪಿಗೆ ಹಳೆ ಮೈಸೂರು ಭಾಗದಲ್ಲಿ ಪಾರುಪತ್ಯ ಸ್ಥಾಪಿಸುವ ಕೆಲಸಕ್ಕೆ ಮತ್ತೊಂದು ಅಸ್ತ್ರ ಸಿಕ್ಕಿದಂತಾಯಿತು. ರಾಜ್ಯದಲ್ಲಿ ಜೆಡಿಎಸ್ ಶಕ್ತಿ ಮತ್ತು ಪ್ರಭಾವ ಏನೇ ಉಳಿದಿದ್ದರೂ ಅದು ಹೆಚ್ ಡಿ ದೇವೇಗೌಡ ಮತ್ತು ಹೆಚ್ ಡಿ ಕುಮಾರಸ್ವಾಮಿಯವರ ಪ್ರಭಾವದಿಂದ. ನಿಖಿಲ್ ಕುಮಾರಸ್ವಾಮಿಯಿಂದ ಪಕ್ಷ ಬೆಳೆಸುವುದು ಆಗಲಿಕ್ಕಿಲ್ಲ ಎಂದು ತಿಳಿದೇ ಬಿಜೆಪಿಯು ಹೆಚ್ ಡಿ ಕುಮಾರಸ್ವಾಮಿಯನ್ನು ಬಿಟ್ಟುಕೊಡುತ್ತಿಲ್ಲ, ಅವರನ್ನು ದೇಶ ಸುತ್ತಾಡಿಸಿ ಆರೋಗ್ಯ ಸಹಿತ ಎಲ್ಲ ವಿಧದಿಂದಲೂ ದುರ್ಬಲಗೊಳಿಸುತ್ತದೆ. ಅದನ್ನು ಸ್ವತಃ ಹೆಚ್ ಜಿ ಕುಮಾರ ಸ್ವಾಮಿ ಅರಿತಿದ್ದಾರಾದರೂ ಬಿಜೆಪಿಯಿಂದ ದೂರವಾಗುವಂತಿಲ್ಲ. ರಾಜ್ಯ ಬಿಜೆಪಿ ಅದಾಗಿಯೇ ಜಗಳಕ್ಕಿಳಿದರೂ ಮರುಮಾತಾಡುವುದಕ್ಕೂ ಅವರಾಶವಿಲ್ಲದಂತಾಗಿದೆ.ಯಾಕೆಂದರೆ ತನ್ನ ಶಾಸಕರಿಗೆ,ಕಾರ್ಯಕರ್ತರಿಗೆ ಕೇಂದ್ರದ ಮಂತ್ರಿ ಎಂಬ ಭರವಸೆಯಾದರೂ ಇರುವುದು. ಅದೂ ಅಲ್ಲದೆ ಪಕ್ಷ ಏಕಾಕಿಯಾಗಿ ಸ್ಪರ್ಧಿಸುವುದಕ್ಕೂ ಪ್ರಜ್ವಲ್ ಮೇಲಿನ ದೋಷಾರೋಪದ ನಂತರ ಜನರ ನೈತಿಕ ಬೆಂಬಲವೂ ಇಲ್ಲದಂತಾಗಿದೆ. ಒಟ್ಟಾರೆಯಾಗಿ ರಾಜ್ಯದಲ್ಲಿ ಜೆಡಿಎಸ್ ಅನ್ನು ರಾಜಕೀಯ ರಂಗಸ್ಥಳದಿಂದ ಮರೆಗೆ ಸರಿಸುವ ಕೆಲಸವನ್ನು ಬಿಜೆಪಿ ಮಾಡುವುದು ಅನಿವಾರ್ಯವಾಗುತ್ತದೆ. ಅದು ಯಶಸ್ಸವೀಯಾದಲ್ಲಿ ರಾಜ್ಯದಲ್ಲಿ ಎರಡು ಪಕ್ಷಗಳ ನಡುವಿನ ಕಾದಾಟವಷ್ಚೇ ಆಗುತ್ತದೆ. ಮತಗಳನ್ನು ಲೆಕ್ಕಾಚಾರ ಪ್ರಕಾರ ಪಡೆಯುವ ಅಥವಾ ತಿಳಿದುಕೊಳ್ಳುವುದಕ್ಕೆ ಅನುಕೂಲವಾಗುತ್ತದೆ.