ಬ್ಯಾಂಕಿಂಗ್ ಕ್ಷೇತ್ರದಲ್ಲಿ ಸಹಕಾರಿ ಬ್ಯಾಂಕ್ ಗಳದ್ದೆ ಅತಿ ದೊಡ್ಡ ಕೊಡುಗೆ – ಡಾ.‌ಎಂ. ಎನ್. ಆರ್

Picture of RB NEWS

RB NEWS

Bureau Report

ಮೂಡುಬಿದಿರೆ: ರಾಜ್ಯದಲ್ಲಷ್ಚೇ ಅಲ್ಲ ದೇಶದಲ್ಲಿಯೆ ಕರ್ನಾಟಕದ ದ. ಕ. ಮತ್ತು ಉಡುಪಿ ಜಿಲ್ಲೆಗಳ ಸಹಕಾರಿ ಬ್ಯಾಂಕ್ ಸಾಧನೆಯು ಮೊದಲ ಸ್ಥಾನದಲ್ಲಿದೆ ಎಂದು ಸಹಕಾರೀ ಧುರೀಣ ರಾಜ್ಯ ,ಮಾರುಕಟ್ಟೆ ಸಹಕಾರಿ ಸಂಘ ಹಾಗೂ ದ. ಕ. ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಯರಾಗಿರುವ ಡಾ.ಎಂ. ಎನ್. ರಾಜೇಂದ್ರ ಕುಮಾರ್ ಹೇಳಿದ್ದಾರೆ.


ಅವರು ಮೂಡುಬಿದಿರೆಯಲ್ಲಿ ಪ್ರಾರಂಭಗೊಂಡ ಪ್ರಿಯದರ್ಶಿನಿ ಸಹಕಾರಿ ಸಂಘ,ಹಳೆಯಂಗಡಿ ಅದರ ನಾಲ್ಕನೆಯ ಶಾಖೆಯ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು. ವರ್ಷದಿಂದ ಲಾಗಾಯ್ತು ಉಭಯ ಜಿಲ್ಲೆಗಳಲ್ಲಿನ ಸಹಕಾರಿ ಸೊಸೈಟಿಗಳು ಹತ್ತರಿಂದ ಮೂವತ್ತು ಶೇಕಡಾದಷ್ಟು ಪಾಲುಬಂಡವಾಳ ಕೊಡುತ್ತಿರುವುದು ರಾಜ್ಯದಲ್ಲಿಯೇ ದಾಖಲೆಯಾಗಿದೆ. ಸಹಕಾರಿ ಬ್ಯಾಂಕಿನಿಂದ ಕೃಷಿಕರು ಇನ್ನಿತರರು ಪಡೆದಿರುವ ಸಾಲ ನೂರಕ್ಕೆ ನೂರರಷ್ಟು ಮರುಪಾವತಿಯಾಗಿರುವ ದಾಖಲೆ ನಿರ್ಮಾಣವಾಗಿದೆ. ನಮ್ಮಲ್ಲಿ ಸಾಲ ವಸೂಲಾತಿ ಎನ್ನುವ ಪದವನ್ನೇ ಬಳಸುವುದಕ್ಕೆ ಅವಕಾಶವಿಲ್ಲದಂತಾಗಿ ಸಾಲಗಾರರು ತಾವಾಗಿಯೇ ಸಕಾಲದಲ್ಲಿ ಮರುಪಾವತಿ ಮಾಡುತ್ತಾರೆ ಎನ್ನುವುದಕ್ಕೆ ಹೆಮ್ಮೆಯಾಗುತ್ತದೆ. ಮಹಿಳೆಯರು ಪಡೆದ ಸಾಲದಲ್ಲಿಯೂ 98.5 ಶೇಕಡಾದಷ್ಟು ಮರುಪಾವತಿಯಾಗಿದೆ.
ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಅನೇಕವುಗಳ ಹುಟ್ಟು ಅವಿಭಜಿತ ದ. ಕ. ಜಿಲ್ಲೆಯಾಗಿದೆ. ಈಗ ಕೆಲವು ಬ್ಯಾಂಕುಗಳ ಪತ್ತಯೇ ಇಲ್ಲವಾಗಿ ಬೇರೆಯದರೊಂದಿಗೆ ಸೇರ್ಪಡೆಗೊಂಡಿದೆ. ಜಿಲ್ಲೆಯ ಸಹಕಾರಿ ಬ್ಯಾಂಕುಗಳು ಜನರ ಕಡೆಗೆ ಹೋಗುತ್ತಿದ್ದು ಜನರಿಗೆ ಸಂತಸ ಹಾಗೂ ನೆಮ್ಮದಿಯನ್ನು ಕೊಡುತ್ತಿರುವುದರಿಂದ ಉಭಯ ಜಿಲ್ಲೆಗಳಲ್ಲಿ ಸಹಕಾರಿ ಬ್ಯಾಂಕು,ಸಂಘ ಸಂಸ್ಥೆಗಳು ತುಂಬಾ ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿವೆ. ಆ ರೀತಿಯಲ್ಲಿಯೆ ಈ ಪ್ರಿಯದರ್ಶಿನಿ ಸಹಕಾರಿ ಬ್ಯಾಂಕು ಜನರ ಹತ್ತಿರವಾಗಿದ್ದುಕೊಂಡು ಬೆಳೆದಿರುವುದು ಶ್ಲಾಘನೀಯ. ಮುಂದಿನ ವರ್ಷದೊಳಗೆ ಇದರ ಹತ್ತನೆಯ ಶಾಖೆ ಪ್ರಾರಂಭವಾಗುವಂತಾಗಲಿ ಎಂದು ಎಂ. ಎನ್. ಆರ್. ಶುಭ ಹಾರೈಸಿದರು.

ಸೊಸೈಟಿಯ ಭದ್ರತಾ ಕೊಠಡಿಯನ್ನು ಆಳ್ವಾಸ್ ಸಂಸ್ಥೆಯ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ಉದ್ಘಾಟಿಸಿದರು. ಕೆ. ಎಂ. ಎಫ್. ಹಾಗೂ ಡಿ ಸಿ ಸಿ ಬ್ಯಾಂಕ್ ನಿರ್ದೇಶಕ ಡಾ। ಐಕಳ ದೇವಿಪ್ರಸಾದ್ ಶೆಟ್ಟಿ ಅವರು ಅಮೃತ ನಗದುಪತ್ರ ಠೇವಣಿ ಪತ್ರ ಬಿಡುಗಡೆಗೊಳಿಸಿದರು. ಮೂಡುಬಿದಿರೆ ಚೌಟರ ಅರಮನೆಯ ಕುಲದೀಪ್ ಎಂ. ಅವರು ಠೇವಣಿ ಪತ್ರ ಬಿಡುಗಡೆ ಮಾಡಿದರು. ಪಾವಂಜೆ ಮಹಾಗಣಪತಿ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಬಿ. ಸೂರ್ಯಕುಮಾರ್ ಅವರು ಮೊದಲ ವಾಹನ ಸಾಲದ ಪತ್ರವನ್ನು ಬಿಡುಗಡೆಗೊಳಿಸಿದರು . ಮೂಡುಬಿದಿರೆಯ ನ್ಯಾಯವಾದಿ ಶರತ್ ಡಿ. ಶೆಟ್ಟಿಯವರು ಪ್ರಿಯದರ್ಶಿನಿ ಸ್ವಸಹಾಯ ಸಂಘಕ್ಕೆ ಚಾಲನೆ ನೀಡಿದರು.
ಮುಲ್ಕಿ ಅರಮನೆಯ ಮುಲ್ಕಿ ಸೀಮೆ ಅರಸ ದುಗ್ಗಣ್ಣ ಸಾವಂತ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಸಮಾರಂಭದ ದೀಪ ಪ್ರಜ್ವಲನಕಾರನಾಗಿ ಮಾಜಿ ಸಚಿವ ಕೆ. ಅಭಯಚಂದ್ರ ಜೈನ್, ಕಂಪ್ಯೂಟರ್ ವಿಭಾಗದ ಉದ್ಘಾಟನೆಯನ್ನು ಕೆ. ಪಿ. ಸಿ. ಸಿ. ಪ್ರಧಾನ ಕಾರ್ಯದರ್ಶಿ ಮಿಥುನ್ ರೈ ನೆರವೇರಿಸಿದರು.
ಮೂಡುಬಿದಿರೆ ಮೂಡ ಅಧ್ಯಕ್ಷ ಹರ್ಷವರ್ಧನ ಪಡಿವಾಳ್,ಎಸ್. ಎನ್. ರಮೇಶ್,ಪ್ರವೀಣ್ ಕುಮಾರ್, ಪುರಂದರ ದೇವಾಡಿಗ, ಕುಮಾರ್ ಪೂಜಾರಿ,ಜೊಸ್ಸಿ ಮೆನೇಜಸ್,ಇಕ್ಬಾಲ್ ಕರೀಂ ಅತಿಥಿಗಳಾಗಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪ್ರಿಯದರ್ಶಿನಿ ಸಹಕಾರಿ ಸಂಘದ ಉಪಾಧ್ಯಕ್ಷೆ ಪ್ರತಿಭಾ ಕುಳಾಯಿ,ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುದರ್ಶನ್, ಶಾಖಾ ಪ್ರಬಂಧಕರಾಗಿರುವ ಅನುಷ್ಠಾ ಜೈನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕೆ. ಅಭಯಚಂದ್ರ ಜೈನ್, ಮಿಥುನ್ ರೈ, ಡಾ।ಐಕಳ ದೇವಿಪ್ರಸಾದ್ ಶೆಟ್ಟಿ ಅವರು ಪ್ರಿಯದರ್ಶಿನಿ ಸಹಕಾರಿ ಸಂಘದ ಕುರಿತಾಗಿ ಮಾತಾನಾಡಿ ಸೊಸೈಟಿಗೆ ಶುಭ ಹಾರೈಸಿದರು.
ಸಮಾರಂಭದ ಅಧ್ಯಕ್ಷ ಸ್ಥಾನದಿಂದ ಮಾತನ್ನಾಡಿದ ಮುಲ್ಕಿ ಅರಮನೆಯ ಅರಸ ದುಗ್ಗಣ್ಣ ಸಾವಂತ ಅವರು, ಪ್ರಿಯದರ್ಶಿನಿ ಸಹಕಾರಿ ಸಂಘಕ್ಕೆ ಅದರದ್ದೇ ಆದ ವಿಶಿಷ್ಟ ಸೇವಾ ಧೋರಣೆಗಳಿರುವುದರಿಂದಲೇ ಕೇವಲ ಅಷ್ಟು ಕಡಿಮ ಅವಧಿಯಲ್ಲಿಯೆ ನಾಲ್ಕು ಶಾಖೆಗಳನ್ನು ತೆರೆಯಲಿಕ್ಕೆ ಸಾಧ್ಯವಾಗಿದೆ. ಮೊದಲ ಶಾಖೆಯ ಸಹಿತ ಈ ನಾಲ್ಕೂ ಶಾಖೆಯನ್ನು ಉದ್ಘಾಟನೆ ಮಾಡಿದ ಹೆಗ್ಗಳಿಕೆ ನನ್ನದು. ಈ ಸಹಕಾರಿ ಸಂಘ ಮತ್ತಷ್ಟು ಅಭ್ಯುದಯ ಪಡೆಯಬೇಕು ಎಂದು ಶುಭ ಹಾರೈಸಿದರು. ಪ್ರಿಯದರ್ಶಿನಿ ಸಹಕಾರಿ ಸಂಘದ ಅಧ್ಯಕ್ಷ ಹೆಚ್. ವಸಂತ ಬೆರ್ನಾಡ್ ಅವರು ಅತಿಥಿಗಳನ್ನು ಸ್ವಾಗತಿಸಿ ಪ್ರಾಸ್ತಾವಿಕ ಭಾಷಣ ಮಾಡಿದರು. ಸೊಸೈಟಿಯ ಸಿ. ಇ. ಒ. ಸುದರ್ಶನ್ ವಂದನಾರ್ಪಣೆಗೈದರು
.

ಸನ್ಮಾನ

ಈ ಸಮಾರಂಭದಲ್ಲಿ ಡಾ. ಎಂ. ಎನ್. ರಾಜೇಂದ್ರ ಕುಮಾರ್ ಮತ್ತು ಡಾ. ಐಕಳ ದೇವಿಪ್ರಸಾದ್ ಶೆಟ್ಟಿ ಅವರನ್ನು ಪ್ರಿಯದರ್ಶಿನಿ ಸಹಕಾರಿ ಸಂಘದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

-ವಿ. ಕೆ. ವಾಲ್ಪಾಡಿ

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top