ಶ್ರೀರಾಮ ಮಂದಿರದಲ್ಲಿ ಕಳವು : ಆರೋಪಿಗೆ ಶಿಕ್ಷೆ
ಕುಂದಾಪುರ : ಗಂಗೊಳ್ಳಿ ಪೊಲೀಸ್ ಠಾಣಾ ಸರಹದ್ದಿನ ನಾಡ ಗ್ರಾಮದ ಪಡುಕೋಣೆ ಶ್ರೀ ರಾಮಮಂದಿರ ದೇವಸ್ಥಾನದಲ್ಲಿ ನಡೆದಿದ್ದ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಕುಂದಾಪುರದ 1ನೇ ಹೆಚ್ಚುವರಿ ಸಿವಿಲ್ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಧೀಶೆ ಶ್ರುತಿ ಶ್ರೀ ರವರು 2ನೇ ಆರೋಪಿತೆಯು ಸದ್ರಿ ಪ್ರಕರಣದ ಸಾಕ್ಷೀ ವಿಚಾರಣೆಯ ಸಂದರ್ಭದಲ್ಲಿ ಗೈರು ಹಾಜರಾಗಿರುವುದರಿಂದ 2ನೇ ಆರೋಪಿತೆಯ ವಿರುದ್ಧ ಪ್ರಕರಣವನ್ನು ಬೇರ್ಪಡಿಸಿ 1ನೇ ಆರೋಪಿಯ ವಿರುದ್ಧದ ಪ್ರಕರಣವು ಸಾಭೀತು ಆಗಿದೆ ಎಂದು ಅಭಿಪ್ರಾಯಪಟ್ಟು Iನೇ ಆರೋಪಿಯಾದ ರಾಜೇಶ್ ನಾಯ್ಕ ಇವನನ್ನು ಅಪರಾಧಿ ಎಂದು ಘೋಷಿಸಿ 1) ಕಲಂ.457 ಭಾರತೀಯ ದಂಡ ಸಂಹಿತೆ ಅಡಿಯ ಅಪರಾಧಕ್ಕೆ 6 ತಿಂಗಳ ಸದಾ ಸಜೆ 2) ಕಲಂ.380 ಭಾರತೀಯ ದಂಡ ಸಂಹಿತೆ ಅಡಿಯ ಅಪರಾಧಕ್ಕೆ 1 ವರ್ಷಗಳ ಸಜೆ ಶಿಕ್ಷೆಯನ್ನು ಅನುಭವಿಸುವಂತೆ ತೀರ್ಪು ನೀಡಿ ಆದೇಶವನ್ನು ನೀಡಿದ್ದಾರೆ.
2020 ಜುಲಾಯಿ13ರ ರಾತ್ರಿ ಸುಮಾರು 11-45 ಗಂಟೆಯ ಸಮಯದಲ್ಲಿ ಈ ಘಟನೆ ನಡೆದಿದೆ. ದೇವಸ್ಥಾನದ ಪ್ರವೇಶ ಬಾಗಿಲಿನ ಬೀಗ ಒಡೆದು ಒಳಪ್ರವೇಶಿಸಿ, ಗರ್ಭಗುಡಿಯ ಬಾಗಿಲಿಗೆ ಹಾಕಿದ್ದ ಬೀಗವನ್ನು ಒಡೆದು, ಗರ್ಭಗುಡಿ ಪ್ರವೇಶಿಸಿ, ಶ್ರೀ ರಾಮ, ಲಕ್ಷ್ಮಣ ಸೀತಾ, ಹನುಮಂತ ದೇವರಿಗೆ ಅಳವಡಿಸಿದ್ದ ರೂ. 1,10,000 ಮೌಲ್ಯದ 3 ಕೆ.ಜಿ ತೂಕದ ಬೆಳ್ಳಿಯ ಪ್ರಭಾವಳಿಯನ್ನು ಕಳವು ಮಾಡಲಾಗಿತ್ತು.
ಈ ಬಗ್ಗೆ 1 ಮತ್ತು 2ನೇ ಆರೋಪಿತರ ವಿರುದ್ಧ ಭಾ.ದಂ.ಸಂ. ಕಲಂ.457, 380 ಜೊತೆಗೆ 34 ರಡಿಯಲ್ಲಿ ಅಪರಾಧಗಳಿಗೆ ಸಂಬಂಧಿಸಿ ಬೈಂದೂರು ವೃತ್ತದ ಪೋಲೀಸ್ ವೃತ್ತನಿರೀಕ್ಷಕ ಸಂತೋಷ್ ಎ. ಕಾಯ್ಕಿಣೆ ಇವರು ದೋಷಾರೋಪಣಾ ಪಟ್ಟಿಯನ್ನು ಆರೋಪಿತರ ವಿರುದ್ಧ ದಾಖಲಿಸಿದ್ದರು.
ಪ್ರಕರಣದಲ್ಲಿ ಸರಕಾರದ ಪರ ಬೈಂದೂರು ಸಹಾಯಕ ಸರ್ಕಾರಿ ಅಭಿಯೋಜಕ ರಾಜಶೇಖರ ಪಿ ಶಾಮರಾವ್ ರವರು ಪ್ರಕರಣದ ಸಾಕ್ಷಿದಾರರ ವಿಚಾರಣೆ ನಡೆಸಿ ವಾದ ಮಂಡಿಸಿರುತ್ತಾರೆ.





































