ಕೆ. ಅಮರನಾಥ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಕ್ಯಾನ್ಸರ್ ತಪಾಸಣೆ ಮತ್ತು ಜಾಗೃತಿ ಶಿಬಿರ
ಮೂಡುಬಿದಿರೆ: ಕೆ. ಅಮರನಾಥ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಮೂಡುಬಿದಿರೆ, ಏರ್ಪಡಿಸಿದ್ದ ಕ್ಯಾನ್ಸರ್ ತಪಾಸಣೆ ಮತ್ತು ಜಾಗೃತಿ ಶಿಬಿರವು ಮೂಡುಬಿದಿರೆ ಕನ್ನಡ ಭವನದಲ್ಲಿ ನೆರವೇರಿತು. ರಾಜ್ಯ ಕುಟುಂಬ ಕಲ್ಯಾಣ ಮತ್ತು ಮಹಿಳಾ ಹಾಗೂ ಮಕ್ಕಳ ಕಲ್ಯಾಣ ಇಲಾಖೆಯ ಜಂಟಿ ಸಹಯೋಗದೊಡನೆ ಶಿಬಿರವನ್ನು ಏರ್ಪಡಿಸಲಾಗಿತ್ತು.

ನಿಟ್ಟೆ ವಿದ್ಯಾ ಸಂಸ್ಥೆಯ ಕುಲಪತಿ, ಮೂಳೆ ತಜ್ಞ ಡಾ.ಶಾಂತಾರಾಮ ಶೆಟ್ಟಿಯವರು ಶಿಬಿರವನ್ನು ಉದ್ಘಾಟಿಸಿದರು. ಮೂಡುಬಿದಿರೆ ಜೈನ ಮಠದ ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರು ದಿವ್ಯ ಉಪಸ್ಥಿತರಾಗಿದ್ದರು.
ಪ್ರಾಸ್ತಾವಿಕ ಹಾಗೂ ಸ್ವಾಗತ ಭಾಷಣ ಮಾಡಿದ ಅಮರನಾಥ ಶೆಟ್ಟಿಯವರ ಹಿರಿಯ ಪುತ್ರಿ ಡಾ.ಅಮರಶ್ರೀ ಶೆಟ್ಟಿಯವರು ಚಾರಿಟೇಬಲ್ ಟ್ರಸ್ಟ್ ಅಳವಡಿಸಿಕೊಂಡಿರುವ ನಾಲ್ಕು ಉದ್ದೇಶಗಳನ್ನು ತಿಳಿಸಿದರು. ಅವುಗಳು,
1.ಗ್ರಾಮೀಣ ಭಾಗದ ಮಹಿಳೆಯರ ಸಬಲೀಕರಣ. 2.ಗ್ರಾಮೀಣ ಮಟ್ಟದ ಸರಕಾರಿ ಶಾಲಾ ಮಕ್ಕಳ ಆರೋಗ್ಯ ಮತ್ತು ಶಿಕ್ಷಣದ ಬೆಳವಣಿಗೆ. 3.ವಿಶೇಷ ಚೇತನ ಮಕ್ಕಳ ಸಬಲೀಕರಣ ಮತ್ತು 4.ಪರಿಸರ ಸಂರಕ್ಷಣೆ.




ಅಮರನಾಥ ಶೆಟ್ಟಿಯವರಿಗೆ ಮಹಿಳೆ ಮತ್ತು ಮಕ್ಕಳ ಮೇಲಿದ್ದ ಅಪಾರ ಗೌರವ ಹಾಗೂ ಪ್ರೀತಿಯನ್ನು ಜೀವಂತವಾಗಿ ಸಮಾಜಕ್ಕೆ ಕೊಡುವ ಪ್ರಯತ್ನವನ್ನಾಗಿದೆ. ಅವರು ಸಚಿವರಾಗಿದ್ದಾಗೊಮ್ಮೆ ಮೋಹಿನಿ ಅಪ್ಪಾಜಿ ನಾಯಕ್ ಅವರು ವಾಮಂಜೂರಿನಲ್ಲಿ ನಡೆಸಿಕೊಂಡು ಬರುತ್ತಿದ್ದ ಮಂಗಳ ಜ್ಯೋತಿ ವಿಶೇಷ ಚೇತನ ಮಕ್ಕಳ ಶಾಲೆಗೆ ಭೇಟಿ ನೀಡಿದ್ದರು.ಆ ನಂತರದಿಂದ ಅವರಿಗೆ ವಿಶೇಷ ಚೇತನ. ಮಕ್ಕಳ ಬಗ್ಯೆ ತುಂಬಾ ಕಾಳಜಿ ತೋರಿಸುವ ಅಗತ್ಯ ಹಾಗೂ ಅನಿವಾರ್ಯ ಕಂಡುಬಂದಿತ್ತು.
ಅಮರನಾಥ ಶೆಟ್ಟಿಯವರು ತನ್ನ ಸಮಾಜ ಸೇವೆಯಲ್ಲಿ ಶಾಲೆಗಳನ್ನು ತೆರೆಯುವಲ್ಲಿ ಮತ್ತು ಅಭಿವೃದ್ಧಿಗೆ ಸಹಕರಿಸುವಲ್ಲಿ ಬಹಳಷ್ಟು ಶ್ರದ್ಧೆ ಇಟ್ಟುಕೊಂಡವರಾಗಿದ್ದರು. ತನ್ನ ಸಾವಿನ ಎರಡು ದಿನಗಳ ಮೊದಲಷ್ಟೆ ವರ್ಣಬೆಟ್ಟು ಶಾಲೆಗೆ ಅಗತ್ಯ ಹದಿನೈದು ಲಕ್ಷ ಧನಸಹಾಯ ಕೊಡಬೇಕೆಂದು ಜಿಲ್ಲಾಡಳಿಕ್ಕೆ ಕರೆ ಮಾಡಿ ಮನವಿ ಮಾಡಿರುವುದು ಅವರಲ್ಲಿದ್ದ ಸಾರ್ವಜನಿಕ ಶಿಕ್ಷಣದ ಕಾಳಜಿಗೆ ಅದು ದೊಡ್ಡ ಸಾಕ್ಷಿ. ಅವರ ನಿಧನ ನಂತರದ ಕೆಲವೇ ದಿನಗಳಲ್ಲಿ ಆ ಮೊತ್ತವನ್ನು ಜಿಲ್ಲಾಡಳಿತ ಪೂರೈಸಿಕೊಟ್ಟಿತ್ತು ಎನ್ನುವುದು ಅಧಿಕಾರಿಗಳಿಗೂ ಅಮರನಾಥ ಶೆಟ್ಟಿಯವರಿಗೂ ಇರುತ್ತಿದ್ದ ಸ್ನೇಹ ಬಾಂಧವ್ಯ ಇತ್ತು,ಅಧಿಕಾರಿಗಳೊಂದಿಗೆ ಎಂದಿಗೂ ಜಗಳವಾಡಿದವರಲ್ಲ,ನಿಂದನೆ ಮಾಡಿದವರಲ್ಲ. ಅವರೊಡನೆ ಒಳ್ಳೆಯ ಬಾಂಧವ್ಯವನ್ನು ಬೆಸೆದುಕೊಳ್ಳುವುದರೊಂದಿಗೆ ಸಮಾಜಕ್ಕೆ ಸಿಗಬೇಕಾದ ಸರಕಾರಿ ಸವಲತ್ತುಗಳನ್ನು ತನ್ನ ಬೇಡಿಕೆಯಂತೆ ಪೂರೈಸಿಕೊಡುತ್ತಿದ್ದರು.
ಅವರೊಬ್ಬ ರಾಜಕಾರಣಿ ಮಾತ್ರವಲ್ಲ ಭೂ ಸಾಗುವಳಿದಾರನಾಗಿ ಅಡಿಕೆ ,ರಬ್ಬರ್ ಬೆಳೆಯನ್ನು ಸ್ವತಃ ತನ್ನದೇ ಮೇಲ್ವಿಚಾರಣೆಯಲ್ಲಿ ಮಾಡಿಕೊಂಡು ಬಂದವರು.ಆದ ಕಾರಣ ಪರಿಸರ ಸಂರಕ್ಷಣೆಯ ಕಾರ್ಯಕ್ರಮಗಳನ್ನು ಟ್ರಸ್ಟ್ ಅಳವಡಿಸಿಕೊಂಡಿದೆ.
ಈ ಸಮಾಜಮುಖಿ ಸೇವಾ ಟ್ರಸ್ಟ್ ಜೊತೆ ಅಮರನಾಥ ಶೆಟ್ಟಿಯವರ ಅಭಿಮಾನಿಗಳು, ಸಮಾಜ ಸೇವಕರು ಎಲ್ಲರೂ ಕೈಜೋಡಿಸಿ ಟ್ರಸ್ಟ್ ನ ಸೇವಾ ಚಟುವಟಿಕೆಗಳು ಸಮಾಜಕ್ಕೆ ನಿರಂತರವಾಗಿ ದೊರಕುವಲ್ಲಿ ಬೆನ್ನೆಲುಬಾಗಬೇಕು ಎಂದು ಮನವಿ ಮಾಡಿದರು.

ಅಮರನಾಥ ಶೆಟ್ಟಿ ರಾಜ್ಯ ರಾಜಕೀಯದಲ್ಲಿ ಮಿನುಗಿದ ಒಬ್ಬ ಅಪರೂಪದ ಸಜ್ಜನ ರಾಜಕಾರಣಿ . ಬಹಳ ಸೌಜನ್ಯಶೀಲನಾಗಿದ್ದು ಸಾಮಾಜಿಕ ಅಭಿವೃದ್ಧಿ ಚಟುವಟಿಕೆಗಳಲ್ಲಿ ಯಶಸ್ಸು ಕಂಡನರು ಎಂದು ಮೂಡುಬಿದಿರೆ ಜೈನ ಮಠದ ಸ್ವಾಮೀಜಿಯವರು ತನ್ನ ಆಶೀರ್ವಚನ ಭಾಷಣದಲ್ಲಿ ಗುಣಗಾನ ಮಾಡಿ ಟ್ರಸ್ಟ್ ಗೆ ಶುಭ ಹಾರೈಸಿದರು.
ಮುಖ್ಯ ಅತಿಥಿಯಾಗಿ ಶಿಬಿರವನ್ನು ಉದ್ಘಾಟಿಸಿದ ಖ್ಯಾತ ಮೂಳೆ ತಜ್ಞ ಡಾ.ಶಾಂತರಾಮ ಶೆಟ್ಟಿಯವರು ಸಾಂದರ್ಭಿಕ ಮಾತುಗಳಲ್ಲಿ ಅಮರನಾಥ ಶೆಟ್ಟಿಯವರ ಸಾಮಾಜಿಕ ಸೇವಾ ಕಾರ್ಯಗಳನ್ನು ಸ್ಮರಿಸಿಕೊಂಡರು. ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ,ಅದಾನಿ ಗುಂಪಿನ ಅಧ್ಯಕ್ಷ ಕಿಶೋರ್ ಆಳ್ವ, ಕಾಂಗ್ರೆಸ್ ಪಕ್ಷದ ಮುಖಂಡ ಪದ್ಮರಾಜ್ ಅವರು ತಮ್ಮ ಅನಿಸಿಕೆ ಮತ್ತು ಶುಭಹಾರೈಕೆಯನ್ನು ವ್ಯಕ್ತಪಡಿಸಿದರು.

ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಎಂ. ಮೋಹನ್ ಆಳ್ವ, ಶಾಸಕ ಕೆ. ಉಮಾನಾಥ ಕೋಟ್ಯಾನ್,ಉದ್ಯಮಿ ಕೆ. ಶ್ರೀಪತಿ ಭಟ್,ಪ್ರತಾಪಚಂದ್ರ ಶೆಟ್ಟಿ, ಡಾ. ಕಮಲಾಕ್ಷ ಶೆಣೈ, ಡಾ. ಕವಿತಾ ಹಾಗೂ ಟ್ರಸ್ಟಿನ ನಿರ್ದೇಶಕರುಗಳಾಗಿರುವ ಜಯಶ್ರೀ , ಡಾ. ಅಮರಶ್ರೀ ಎ. ಶೆಟ್ಟಿ, ಪ್ರತಾಪ್ ಶೆಟ್ಟಿ, ಡಾ.ಆಶ್ರಿತ ಶೆಟ್ಟಿ ಮತ್ತು ಡಾ.ಪ್ರಶಾಂತ್ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪಾಲ್ಗೊಂಡ ಎಲ್ಲ ಅತಿಥಿಗಳಿಗೆ ಟ್ರಸ್ಟಿನ ನಿರ್ದೇಶಕರುಗಳು ಬೋನ್ಸೈ ಗಿಡವನ್ನು ಕೊಡುವ ಮೂಲಕ ಸ್ವಾಗತಿಸಿದರು. ಪ್ರಾಚಾರ್ಯ ವೇಣುಗೋಪಾಲ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
-ವಿ. ಕೆ. ವಾಲ್ಪಾಡಿ





































