ಪರಶುರಾಮ ಪ್ರತಿಮೆ ಮರುಸ್ಥಾಪನೆ ಕೋರಿ ಪಿಐಎಲ್ ಅರ್ಜಿದಾರರಿಗೆ ರೂ. 5 ಲಕ್ಷ ಠೇವಣಿ ಇರಿಸಲು ಹೈಕೋರ್ಟ್ ಸೂಚನೆ
ಬೆಂಗಳೂರು : ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಬೈಲೂರಿನ ಉಮಿಕಲ್ ಬೆಟ್ಟದಲ್ಲಿ ಪರಶುರಾಮ ಥೀಮ್ ಪಾರ್ಕ್ನಲ್ಲಿರುವ ಪರಶುರಾಮ ಪ್ರತಿಮೆಯನ್ನು ಮರು ಸ್ಥಾಪಿಸಲು ಸರಕಾರಕ್ಕೆ ನಿರ್ದೇಶಿಸುವಂತೆ ಕೋರಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿರುವ ವ್ಯಕ್ತಿಯೊಬ್ಬರಿಗೆ 5 ಲಕ್ಷ ರೂ. ಠೇವಣಿ ಇರಿಸುವಂತೆ ಹೈಕೋರ್ಟ್ ಸೂಚಿಸಿದೆ.

ಮುನಿಯಾಲು ಉದಯಶೆಟ್ಟಿ
ಪರಶುರಾಮ ಪ್ರತಿಮೆಯನ್ನು ಮರು ನಿರ್ಮಿಸಲು ಸರಕಾರ ಹಾಗೂ ಜಿಲ್ಲಾಡಳಿತಕ್ಕೆ ನಿರ್ದೇಶಿಸುವಂತೆ ಕೋರಿ ಉಡುಪಿಯ ಉದಯ ಶೆಟ್ಟಿ ಮುನಿಯಾಲು ಎಂಬವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಬುಧವಾರ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ವಿಭು ಬಬ್ರು ಹಾಗೂ ನ್ಯಾಯಮೂರ್ತಿ ಸಿ.ಎಮ್.ಜೋಶಿ ಅವರಿದ್ದ ವಿಭಾಗಿ ಯ ನ್ಯಾಯಪೀಠ, ಪ್ರತಿಮೆ ನಿರ್ಮಾಣಕ್ಕೆ ಅರ್ಜಿದಾರರು ತಮ್ಮ ವೈಯುಕ್ತಿಕ ಕಾಣಿಕೆಯಾಗಿ 5 ಲಕ್ಷ ರೂ. ನೀಡಬೇಕು. ಈ ಮೊತ್ತವನ್ನು 2 ವಾರಗಳಲ್ಲಿ ಹೈಕೋರ್ಟ್ ರಿಜಿಸ್ಟ್ರಾರ್ ಬಳಿ ಠೇವಣಿ ಇಡಬೇಕು ಎಂದು ಸೂಚಿಸಿ, ಅರ್ಜಿ ವಿಚಾರಣೆಯನ್ನು 2 ವಾರಗಳ ಕಾಲ ಮುಂದೂಡಿತು.
ಇದಕ್ಕೂ ಮುನ್ನ ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ, ಹಿಂದೂ ನಂಬಿಕೆಯ ಪ್ರಕಾರ ಪರಶುರಾಮನನ್ನು ತುಳುನಾಡು ಹಾಗೂ ಕರಾವಳಿ ಪ್ರದೇಶದ ಸೃಷ್ಟಿಕರ್ತ ಎಂದು ಭಾವಿಸಲಾಗಿದೆ. ಭಗವಾನ್ ಪರಶುರಾಮನ ಬಗ್ಗೆ ಕರಾವಳಿ ಕರ್ನಾಟಕದ ಲಕ್ಷಾಂತರ ಹಿಂದೂಗಳಿಗೆ ಅಪಾರ ಭಕ್ತಿ ಇದೆ ಪ್ರತಿಮೆ ನಿರ್ಮಾಣ ಆಗದಿದ್ದರೆ ಜನರ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಲಿದೆ. ಆದ್ದರಿಂದ, ಪರಶುರಾಮ ಪ್ರತಿಮೆಯನ್ನು ಮರುನಿರ್ಮಿಸಲು ಸಂಬಂಧಪಟ್ಟ ಇಲಾಖೆಗಳಿಗೆ ನಿರ್ದೇಶಿಸಬೇಕು ಎಂದು ಕೋರಿದರು.
ವಾದ ಆಲಿಸಿದ ನ್ಯಾಯಪೀಠ, ಜನರ ಭಾವನೆಗಳಿಗೆ ಧಕ್ಕೆಯಾಗುತ್ತದೆ ಎಂದು ವಾದಿಸುತ್ತಿದ್ದೀರಿ. ಪ್ರತಿಮೆ ನಿರ್ಮಾಣಕ್ಕೆ ನಿಮ್ಮ ವೈಯಕ್ತಿಕ ಕಾಣಿಕೆ ಏನು ಎಂದು ಪ್ರಶ್ನಿಸಿತಲ್ಲದೆ, ನೀವು 5 ಲಕ್ಷ ರೂ. ಠೇವಣಿ ಇಡುವಿರೇ ಎಂದು ಪ್ರಶ್ನಿಸಿತು. ಅರ್ಜಿದಾರರು ವಕೀಲರು ಅದಕ್ಕೆ ಸಮ್ಮತಿ ಸೂಚಿಸಿದರು.
ಆಗ ನ್ಯಾಯಪೀಠ, ನಿಮ್ಮ ಹೇಳಿಕೆಯನ್ನು ದಾಖಲಿಸಿಕೊಳ್ಳುತ್ತೇವೆ. ನಿಮ್ಮ ಹೇಳಿಕೆಗೆ ಬದ್ಧರಾಗಿ ರಬೇಕು ಎಂದು ತಿಳಿಸಿತಲ್ಲದೆ, ಮುಂದಿನ 2 ವಾರಗಳಲ್ಲಿ ಹೈಕೋರ್ಟ್ ರಿಜಿಸ್ಟ್ರಾರ್ ಬಳಿ 5 ಲಕ್ಷ ರೂ. ಠೇವಣಿ ಇಡಬೇಕು ಎಂದು ಸೂಚಿಸಿ, ವಿಚಾರಣೆ ಮುಂದೂಡಿತು





































