

29 ವರ್ಷಗಳಿಂದ ತಲೆಮರೆಸಿಕೊಂಡಿದ್ದ ದಂಡುಪಾಳ್ಯ ಗ್ಯಾಂಗ್ ಸದಸ್ಯನ ಬಂಧನ
ಉರ್ವಾ ಪೊಲೀಸ್ ಠಾಣೆ ಪೊಲೀಸರಿಂದ ಆಂಧ್ರಪ್ರದೇಶದಲ್ಲಿ ದಸ್ತಗಿರಿ
ಮಂಗಳೂರು:1997ರಲ್ಲಿ ಉರ್ವಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಜೋಡಿ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ಹಾಗೂ 29 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಕುಖ್ಯಾತ “ದಂಡುಪಾಳ್ಯ ಗ್ಯಾಂಗ್” ಸದಸ್ಯನನ್ನು ಮಂಗಳೂರು ಉರ್ವಾ ಠಾಣೆ ಪೊಲೀಸರು ಆಂಧ್ರಪ್ರದೇಶದಲ್ಲಿ ಬಂಧಿಸಿದ್ದಾರೆ.
ದಾಂಡುಪಾಳ್ಯ ಗ್ಯಾಂಗ್
ಬಂಧಿತ ಆರೋಪಿಯನ್ನು ಚಿಕ್ಕ ಹನುಮ @ ಚಿಕ್ಕ ಹನುಮಂತಪ್ಪ @ ಕೆ. ಕೃಷ್ಣಪ್ಪ @ ಕೃಷ್ಣ (ಎ–6) ಎಂದು ಗುರುತಿಸಲಾಗಿದೆ. ಆರೋಪಿಯ ವಯಸ್ಸು ಸುಮಾರು 55 ವರ್ಷವಾಗಿದ್ದು, ತಂದೆ ವೆಂಕಟಪ್ಪ. ಮೂಲತಃ ಬೆಂಗಳೂರು ಜಿಲ್ಲೆಯ ಹೊಸಕೋಟೆ ತಾಲೂಕು ದಂಡುಪಾಳ್ಯ ಗ್ರಾಮದ ನಿವಾಸಿಯಾಗಿರುವ ಈತ, ಇತ್ತೀಚೆಗೆ ಆಂಧ್ರಪ್ರದೇಶದ ಅನ್ನಮಯ್ಯ ಜಿಲ್ಲೆಯ ಮದನಪಳ್ಳಿ ತಾಲೂಕಿನ ವಿಜಯನಗರ ಕಾಲೋನಿಯಲ್ಲಿ ತಲೆಮರೆಸಿಕೊಂಡಿದ್ದನು.
ಈ ಬಂಧನವು ಉರ್ವಾ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 113/1997, ಐಪಿಸಿ ಕಲಂ 460, 396, 400 ಅಡಿಯಲ್ಲಿ ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದೆ. ಆರೋಪಿಯನ್ನು ಆಂಧ್ರಪ್ರದೇಶದ ಮದನಪಳ್ಳಿಯಲ್ಲಿ ದಸ್ತಗಿರಿ ಮಾಡಿ, ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.
ಪ್ರಕರಣದ ಹಿನ್ನೆಲೆ:
ದಿನಾಂಕ 11-10-1997ರಂದು ಮಧ್ಯರಾತ್ರಿ ಮಂಗಳೂರು ತಾಲೂಕು ಉರ್ವಾ ಮಾರಿಗುಡಿ ಕ್ರಾಸ್ ಸಮೀಪದ ಅನ್ವರ್ ಮಹಲ್ ಮನೆಗೆ ನುಗ್ಗಿದ್ದ ದಂಡುಪಾಳ್ಯ ಗ್ಯಾಂಗ್ ಸದಸ್ಯರು, ಮನೆಯಲ್ಲಿದ್ದ
ಶ್ರೀಮತಿ ಲೂವಿಸ್ ಡಿಮೆಲ್ಲೋ (80 ವರ್ಷ)
ರಂಜಿತ್ ವೇಗಸ್ (19 ವರ್ಷ)
ಇವರನ್ನು ಕ್ರೂರವಾಗಿ ಕೊಲೆ ಮಾಡಿ ಚಿನ್ನಾಭರಣಗಳನ್ನು ದೋಚಿಕೊಂಡು ಪರಾರಿಯಾಗಿದ್ದರು.
ಈ ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ಗ್ಯಾಂಗ್‌ನ ಇತರೆ ಆರೋಪಿಗಳ ವಿರುದ್ಧ ತನಿಖೆ ಪೂರ್ಣಗೊಂಡು, ದೋಷಾರೋಪಣಾ ಪಟ್ಟಿಯನ್ನು ಮಾನ್ಯ ನ್ಯಾಯಾಲಯಕ್ಕೆ ಸಲ್ಲಿಸಲಾಗಿತ್ತು. ಎಸ್.ಸಿ. ನಂ. 728/2010ರಲ್ಲಿ ವಿಚಾರಣೆ ಮುಕ್ತಾಯಗೊಂಡು, ದೊಡ್ಡ ಹನುಮ ಸೇರಿದಂತೆ ಐದು ಆರೋಪಿಗಳನ್ನು ಮಾನ್ಯ ನ್ಯಾಯಾಲಯ ದೋಷಿಗಳೆಂದು ತೀರ್ಪು ನೀಡಿತ್ತು.
ಬಂಧಿತ ಆರೋಪಿ ಚಿಕ್ಕ ಹನುಮನು ತನ್ನ ಹೆಸರನ್ನು ಬದಲಿಸಿಕೊಂಡು ನ್ಯಾಯಾಲಯದ ವಿಚಾರಣೆಗೆ ಹಾಜರಾಗದೇ ಆಂಧ್ರಪ್ರದೇಶದಲ್ಲಿ ತಲೆಮರೆಸಿಕೊಂಡಿದ್ದನು. ಈತನ ವಿರುದ್ಧ 2010ರಲ್ಲಿ ಮಂಗಳೂರು JMFC 2ನೇ ನ್ಯಾಯಾಲಯವು LPC ವಾರೆಂಟ್ ಹೊರಡಿಸಿತ್ತು. ಕರ್ನಾಟಕ ರಾಜ್ಯದಲ್ಲಿ ಈತನ ಮೇಲೆ ಸುಮಾರು 13 ಕೊಲೆ ಹಾಗೂ ದರೋಡೆ ಪ್ರಕರಣಗಳು ದಾಖಲಾಗಿರುವುದು ತಿಳಿದುಬಂದಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ.
ಪತ್ತೆ ಕಾರ್ಯ:
ಈ ಯಶಸ್ವಿ ಕಾರ್ಯಾಚರಣೆಯನ್ನು ಉರ್ವಾ ಪೊಲೀಸ್ ಠಾಣೆಯ
ನಿರೀಕ್ಷಕ ಶ್ಯಾಮ್ ಸುಂಧರ್ ಹೆಚ್.ಎಂ,
ಪಿಎಸ್ಐ ಗುರಪ್ಪ ಕಾಂತಿ,
ಪಿಎಸ್ಐ ಎಲ್. ಮಂಜುಳಾ,
ಎಎಸ್ಐ ವಿನಯ ಕುಮಾರ್,
ಮತ್ತು ಸಿಬ್ಬಂದಿಗಳಾದ ಲಲಿತಲಕ್ಷ್ಮಿ, ಅನಿಲ್, ಪ್ರಮೋದ್, ಆತ್ಮಾನಂದ, ಹರೀಶ್ ಅವರು ನಡೆಸಿದ್ದಾರೆ.
ಈ ಸಾಧನೆಗೆ ಮಂಗಳೂರು ನಗರ ಪೊಲೀಸ್ ಆಯುಕ್ತರು ಅಧಿಕಾರಿ ಹಾಗೂ ಸಿಬ್ಬಂದಿಯನ್ನು ಪ್ರಶಂಸಿಸಿ, ಹೆಚ್ಚು ಬಹುಮಾನಕ್ಕಾಗಿ ಕರ್ನಾಟಕ ರಾಜ್ಯದ ಡಿಜಿ & ಐಜಿಪಿ ಅವರಿಗೆ ಶಿಫಾರಸು ಮಾಡಿದ್ದಾರೆ.





























