ಸುಂಟರಗಾಳಿ ಮತ್ತು ಅತಿಯಾದ ಮಳೆ: ತುರ್ತು ಪರಿಹಾರಕ್ಕೆ ಶಾಸಕ ವಿ ಸುನಿಲ್ ಕುಮಾರ್ ಮನವಿ
ಬೆಂಗಳೂರು : ಕಾರ್ಕಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಆ. 18 ರಂದು ಅತಿಯಾದ ಮಳೆ ಹಾಗೂ ಸುಂಟರ ಗಾಳಿಯಿಂದಾಗಿ ಸಾರ್ವಜನಿಕ ಆಸ್ತಿ ಪಾಸ್ತಿಗಳಿಗೆ ಹಾನಿ ಉಂಟಾಗಿದ್ದು ತುರ್ತು ಅನುದಾನ ಬಿಡುಗಡೆ ಕೋರಿ ಕಂದಾಯ ಸಚಿವ ಕೃಷ್ಣ ಭೈರೇಗೌಡ ಅವರನ್ನು ಭೇಟಿ ಮಾಡಿದ ಶಾಸಕ ವಿ.ಸುನೀಲ್ ಕುಮಾರ್ ಮನವಿ ಸಲ್ಲಿಸಿರುತ್ತಾರೆ.
ಕಾರ್ಕಳ ತಾಲೂಕಿನ ಬೆಳ್ಮಣ್, ಸೂಡ, ನಂದಳಿಕೆ, ರೆಂಜಾಳ, ಬೈಲೂರು, ಕಡ್ತಲ ಹಾಗೂ ಯರ್ಲಪಾಡಿ ಗ್ರಾಮಗಳ ಪರಿಸರದಲ್ಲಿ ಮತ್ತು ಹೆಬ್ರಿ ತಾಲೂಕಿನ ಚಾರ, ಕುಚ್ಚೂರು ಮತ್ತು ಮುದ್ರಾಡಿ ಗ್ರಾಮಗಳ ಪರಿಸರದಲ್ಲಿ ನಿನ್ನೆಯ ಸಂಜೆಯ ಹೊತ್ತಿಗೆ ಒಮ್ಮೆಲೆ ಬಂದ ಸುಂಟರಗಾಳಿ ಹಾಗೂ ಅತಿಯಾದ ಮಳೆ ಗಾಳಿಯಿಂದ ಆ ಪ್ರದೇಶದ ಹಲವು ಕಡೆಗಳಲ್ಲಿ ವಾಸದ ಮನೆಗಳು, ಕೃಷಿ ಸೇರಿದಂತೆ ಸಾರ್ವಜನಿಕ ಆಸ್ತಿ ಪಾಸ್ತಿಗಳಿಗೆ ಹಾನಿ ಉಂಟಾಗಿದ್ದು, ತುರ್ತು ಪರಿಹಾರೋಪಾಯಗಳನ್ನು ಒದಗಿಸುವುದು ತುಂಬಾ ಅವಶ್ಯಕವಾಗಿರುವುದನ್ನು ಮನಗಂಡ ಕಾರ್ಕಳ ಶಾಸಕ ವಿ ಸುನಿಲ್ ಕುಮಾರ್ ರವರು ವಿಧಾನ ಸಭಾ ಅಧಿವೇಶನ ಸಂದರ್ಭದಲ್ಲಿ ಕಂದಾಯ ಸಚಿವ ಕೃಷ್ಣ ಭೈರೇಗೌಡ ಅವರನ್ನು ಭೇಟಿ ಮನವಿ ಸಲ್ಲಿಸಿರುತ್ತಾರೆ.
ಪ್ರಾಕೃತಿಕ ವಿಕೋಪದಿಂದ, ಪ್ರಮುಖವಾಗಿ ವಾಸದ ಮನೆಗಳಿಗೆ ಆಗಿರುವ ಹಾನಿಗೆ ಸಂಬಂದಿಸಿದಂತೆ ಸಚಿವರಿಗೆ ಮಾಹಿತಿ ನೀಡಿ, ತುರ್ತು ಅನುದಾನವನ್ನು ಬಿಡುಗಡೆ ಮಾಡುವಂತೆ ಹಾಗೂ ಆದಷ್ಟೂ ಶೀಘ್ರವಾಗಿ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕೆಂದು ಮನವಿ ಮಾಡಿರುತ್ತಾರೆ ಎಂದು ಕಾರ್ಕಳ ಶಾಸಕರ 'ವಿಕಾಸ' ಕಛೇರಿ ಮೂಲಗಳು ಪ್ರಕಟಣೆಯಲ್ಲಿ ತಿಳಿಸಿದೆ.



































