ಕಾರ್ಕಳ : ತಾಲೂಕು ಕಾನೂನು ಸೇವೆಗಳ ಸಮಿತಿ ಕಾರ್ಕಳ, ನ್ಯಾಯವಾದಿಗಳ ಸಂಘ (ರಿ.), ಕಾರ್ಕಳ ಮತ್ತು ಸರಕಾರಿ ಪದವಿ ಪೂರ್ವ ಕಾಲೇಜು ಬೈಲೂರು ಇದರ ಸಂಯುಕ್ತ ಆಶ್ರಯದಲ್ಲಿ ಅಂತರಾಷ್ಟ್ರೀಯ ಮಾನವ ಕಳ್ಳ ಸಾಗಾಣಿಕೆ ತಡೆ ದಿನಾಚರಣೆಯ ಅಂಗವಾಗಿ ಉಚಿತ ಕಾನೂನು ಅರಿವು ಮಾಹಿತಿ ಕಾರ್ಯಕ್ರಮವು ಬೈಲೂರು ಸರಕಾರಿ ಪದವಿ ಪೂರ್ವ ಕಾಲೇಜುನಲ್ಲಿ ಜು.30ರಂದು ಜರಗಿತು.
ನ್ಯಾಯವಾದಿಗಳ ಸಂಘ (ರಿ.)ದ ಪ್ರಧಾನ ಕಾರ್ಯದರ್ಶಿ ಅನಿಲ್ ಕುಮಾರ್ ನಿಟ್ಟೆ ಉದ್ಘಾಟಿಸಿ ಮಾತನಾಡಿ, ಮಾನವ ಕಳ್ಳ ಸಾಗಾಣಿಕೆ ತಡೆ ಕಾಯ್ದೆಯು 1956ರಲ್ಲಿ ಜಾರಿಗೆ ಬಂದು, 1958ರಲ್ಲಿ ಅನುಷ್ಠಾನಕ್ಕೆ ಬಂತು. ಭಾರತದ ಬಿಹಾರ, ಛತ್ತೀಸ್ಗಡ ಮತ್ತು ಇತರ ರಾಜ್ಯಗಳಲ್ಲಿ ಭಿಕ್ಷಾಟನೆ, ವೇಶ್ಯಾಟಿಕೆ, ಮತ್ತು ಮನೆಕೆಲಸಕ್ಕೆ ನಿಯೋಜನೆ ಮೊದಲಾದ ಕೆಲಸಗಳಿಗೋಸ್ಕರ ಮಾನವ ಕಳ್ಳ ಸಾಗಾಣಿಕೆ ನಡೆಯುತ್ತಿವೆ. ಮಾನವ ಕಳ್ಳ ಸಾಗಾಣಿಕೆಗೆ ಬಡತನವೇ ಮೂಲ ಕಾರಣ ಎಂದು ತಿಳಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಸೀತಾರಾಮ, ಈ ಸಮಾಜದಲ್ಲಿ ಅತ್ಯಂತ ದುರ್ಬಲ ವ್ಯಕ್ತಿ ಗೌರವಯುತವಾಗಿ ಬದುಕುವ ಹಕ್ಕಿದೆ. ಹಾಗಾಗಿ ಕಾನೂನಿನ ಅರಿವು ಸಮಾಜದ ಎಲ್ಲರಿಗೂ ಸಿಗಬೇಕಾದದ್ದು ಅತ್ಯಂತ ಅವಶ್ಯಕ. ವಿದ್ಯಾರ್ಥಿಗಳು ಈ ಬಗ್ಗೆ ಜ್ಞಾನವನ್ನು ಹೆಚ್ಚಿಸಿಕೊಳ್ಳುವ ಮೂಲಕ ಸಮಾಜಕ್ಕೆ ಕಾನೂನಿನ ಅರಿವನ್ನು ಪಸರಿಸುವ ಅಗತ್ಯವಿದೆ ಎಂದರು. ಪ್ರಾಧ್ಯಾಪಕ ನರಸಿಂಹ ವರ್ಧನ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಪ್ರಾಧ್ಯಾಪಕ ರತ್ನಾಕರ್ ವಂದನಾರ್ಪಣೆಗೈದರು.