ಅಪಾಯಕಾರಿ ತಡೆಬೇಲಿ! ಸುಗಮ ಸಂಚಾರಕ್ಕೆ ಇರಲಿ ಎಚ್ಚರಿಕೆ !!

ಮಂಗಳೂರು -ಮೂಡುಬಿದಿರೆ ಕಾರ್ಕಳ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ169 ರ ನಿರ್ಮಾಣದಲ್ಲಿ ಬಹಳಷ್ಟು ಎಡವಟ್ಚುಗಳು ಕಾಣುತ್ತುಂಟು. ಹೆದ್ದಾರಿ ಕಾಮಗಾರಿ ಇನ್ನೂ ಪೂರ್ತಿಯಾಗದಿದ್ದರೂ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಸರ್ವೀಸ್ ಮಾರ್ಗವು ಕೂಡಾ ಬಾಕಿಯಿದೆ.
ಆ ಎಲ್ಲ ಅಪೂರ್ಣಗಳಲ್ಲಿ ರಸ್ತೆ ಬದಿಗೆ ಕಬ್ಬಿಣದ ಬೇಲಿ ಹಾಕಿ ದೊಡ್ಡ ಅಪಾಯವನ್ನು ಸೃಷ್ಠಿಸಿದೆ. ಬೇಲಿ ಹಾಕಿದರೇ ಅಂತಿಟ್ಟುಕೊಳ್ಳೋಣ ಸರಿಯಾದ ಸೂಚನೆಯಾಗಲಿ,ಅದಕ್ಕೆ ಅನುಮೋದಿತ ಬಣ್ಣವನ್ನೂ ಬಳಿಯುವುದಾಗಲಿ, ಪ್ರತಿಪಲಕವನ್ನಾಗಲಿ ಏನನ್ನೂ ಒದಗಿಸದೆ ಅಕ್ಷರಶಃ ಬೇಜವಾಬ್ದಾರಿಯನ್ನು ಪ್ರದರ್ಶಿಸಿದೆ.
ಅದೆಲ್ಲವನ್ನು ಗಮನಿಸುವಾಗ ಮಂಗಳೂರಲ್ಲಿರುವ NHAI( National Highway Authority of India ಭಾರತ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ) ನ ಅಧಿಕಾರಿಗಳು ಈ ರಸ್ತೆ ನಿರ್ಮಾಣವಾದಂತೆ ಒಮ್ಮೆಯೂ ತಮ್ಮಲ್ಲಿರುವ ಸರಕಾರಿ ವಾಹನದಲ್ಲಿ ಈ ಮಾರ್ಗಕ್ಕೆ ಬಂದಿರುವುದೇ ಇಲ್ಲವೆನ್ನಬೇಕು. ನೇರವಾಗಿ ನಿರ್ಮಾಣವಾಗದೆ ಕೇರೆಹಾವಿನ ಸಂಚಾರದಂತೆ ಕಾಣುವ ಈ ಹೆದ್ದಾರಿಯಲ್ಲಿ ದಿನದಲ್ಲಿ ಒಂದೆರಡು ವಾಹನಗಳು ಆ ಬೇಲಿಗೆ ಉಜ್ಜಿಕೊಂಡು,ಢಿಕ್ಕಿ ಹೊಡೆದುಕೊಂಡು ವಾಹನದ ಮುಂಭಾಗವನ್ನು ಸರಿಪಡಿಸಿ ಮುಂದುವರಿಯುತ್ತಿರುತ್ತವೆ.
ರಾಷ್ಟ್ರೀಯ ಹೆದ್ದಾರಿ ನಿಯಮದ ಪ್ರಕಾರ ಅಂಗೀಕೃತ ಬಣ್ಣ ಬಳಿಯುತ್ತಿದ್ದರಾದರೂ ಅಪಘಾತಗಳಾಗುವುದಿಲ್ಲ. “ಬೆಕ್ಕಿನ ಕಣ್ಣು” ಪ್ರತಿಪಲನ ಅಂಟಿಸಿದ್ದಿಲ್ಲ. ಅವರು ಲೇನ್ ಗಡಿಗಳನ್ನು ಸ್ಪಷ್ಟವಾಗಿ ಗುರುತು ಮಾಡಲಿಲ್ಲ. ಹಾಗಾಗಿ ವಾಹನಗಳು ಬೇಲಿಗೆ ಗುದ್ದಿಕೊಂಡು ಅಪಘಾತಕ್ಕೊಳಗಾಗುತ್ತಿವೆ.
ರಸ್ತೆ ನಿರ್ಮಾಣ ಪೂರ್ತಿಯಾಗಿಲ್ಲವಾದರೂ ವಾಹನಗಳ ಓಡಾಟಕ್ಕೆ ಅನುಮತಿ ಕೊಟ್ಟಿರುವಾಗ ಅಲ್ಲಿ ತತ್ಕಾಲ ಬಾಳ್ವಿಕೆಯ ರಸ್ತೆ ಸೂಚಕಗಳನ್ನು ಅಳವಡಿಸಬೇಕಾಗಿತ್ತು.
ಸಂಸದರಿಗೆ ಈ ಸಂಗತಿಗಳೇ ಗೊತ್ತಿಲ್ಲವೆಂದರೆ ಅದು ತಪ್ಪಾಗಲಿಕ್ಕಿಲ್ಲ.ಯಾಕೆಂದರೆ ದ. ಕ. ಜಿಲ್ಲೆಯ ದಿನಪತ್ರಿಕೆಗಳಲ್ಲಿ ಸುದ್ದಿಯಾಗುವುದೇ ಇಲ್ಲ! ಮಧ್ಯಪ್ರದೇಶದ ಕಾಂಟ್ರಾಕ್ಟ್ ದಾರ(DBL)ನಿಗೂ ಇಲ್ಲಿನ ಪತ್ರಿಕೆಗಳಿಗೂ ಅದೇನು ಗಾಢ ಸ್ನೇಹ ಸಂಬಂಧವಿರುವುದೋ ಅಚ್ಚರಿಯೆನಿಸುತ್ತದೆ.
NHAI ನ ಮಂಗಳೂರು ವಿಭಾಗದ ಅಥವಾ ಈ ರಸ್ತೆಗೆ ಸಂಬಂಧಿಸಿದ ವಿಭಾಗದ ಯಾವನಾದರೂ ದಕ್ಷ ಅಧಿಕಾರಿಯೊಬ್ಬನಿದ್ದಲ್ಲಿ ಈ ಮಾರ್ಗದಲ್ಲಿ ಒಮ್ಮೆ ಸಂಚಾರ ಮಾಡುವುದರೊಂದಿಗೆ ಸಮಸ್ಯೆ ಪರಿಹರಿಸುವ ಪ್ರಯತ್ನ ಮಾಡಬೇಕು.ನಾಗರಿಕರ ಜೀವಕ್ಕೆ ಅಪಾಯವಾಗದಂತೆ ಮಾಡಬೇಕಾದ ಕ್ರಮ ಪೂರೈಸಬೇಕು.
-ವಿ. ಕೆ. ವಾಲ್ಪಾಡಿ






























