ಅನಾಥವಾದ ಪೊಲೀಸ್ ಚೌಕಿ!

ಮೂಡುಬಿದಿರೆ ಪೊಲೀಸ್ ಠಾಣಾ ವ್ಯಾಪ್ತಿಯೊಳಗೆ ಬರುವ ಬೆಳುವಾಯಿ ಚಿಲಿಂಬಿ ನಡುವೆ ಹೆದ್ದಾರಿಯ ಬಳಿಯಲ್ಲಿ ಭಾರೀ ಘನಗಾತ್ರದ ಕಬ್ಬಿಣದ ಗೂಡೊಂದು ಸ್ಥಾಪನೆಯಾಗಿದೆ,ಅಲ್ಲಿ ಇಡಲಾಗಿದೆ ಎಂದರೂ ಸೂಕ್ತ.
ನಾಲ್ಕೈದು ವರ್ಷಗಳ ಹಿಂದೆ ಇಂಥ ಗೂಡು ಅಲ್ಲಿ ಇಲ್ಲಿ ಜಾಗ ಹುಡುಕುತ್ತಿತ್ತು. ಶಿರ್ತಾಡಿಯಲ್ಲೂ ಕೆಲದಿನಗಳವರೆಗೆ ಅನಾಥವಾಗಿ ಇದ್ದು ನಂತರ ಎತ್ತಂಗಡಿಯಾಯಿತು. ಅದುವೇ ಇದು ಅಂತ ಅನಿಸುತ್ತದೆ.
ಆ ಗೂಡಿನ ರಚನೆಗೆ ಸುಮಾರು ಲಕ್ಷ ಹತ್ತಿರ ಖರ್ಚಾಗಬಹುದು.ಅಷ್ಟು ದಪ್ಪದ ಕಬ್ಬಿಣದ ಸಾಮಗ್ರಿಯನ್ನು ಬಳಸಿ ತಯಾರಿಸಲಾಗಿದೆ,ದೊಡ್ಡ ಕ್ರೇನ್ ಮೂಲಕವೇ ಎತ್ತಿ ಲಾರಿಗೆ ಹಾಕಿರುವುದು.
ಯಾವತ್ತಿನಿಂದಲೂ ಆ ಗೂಡು ನಾಗರಿಕರನ್ನು ಅಣಕಿಸುತ್ತಲೇ ಇದೆ. ಗೂಡು ಕಾಣಬಾರದು ಅದರ ಜೊತೆಗೆ ಕರ್ನಾಟಕದ ಹೆಮ್ಮೆಯ ಪೊಲೀಸ್ ಅಕ್ಷರವೂ ಕಾಣಬಾರದು ಎಂಬ ಅತೀವ ಕಾಳಜಿಯಿಂದ ಗಿಡಗಂಟಿಗಳು ಮೇಲೇರುತ್ತಿವೆಯಾದರೂ ಅವುಗಳಿಗಿನ್ನು ಎತ್ತರಕ್ಕೆ ಬೆಳೆಯುವುದಕ್ಕೆ ಸಾಧ್ಯವಿಲ್ಲವೇನೋ ಅಥವಾ ಬಾಕಿ ಉಳಿದುದನ್ನು ಮುಂದಿನ ವರ್ಷ ಮುಚ್ಚಿಬಿಡುವ ತೀರ್ಮಾನವೇನೊ! ಅನಿಸುತ್ತದೆ.
ಆ ಗೂಡನ್ನು ಯಾವನೇ ಒಬ್ಬ ಬಡವನಿಗೆ ದಾನವೋ ಬಾಡಿಗೆಗೊ ಕೊಟ್ಟಿದ್ದರೂ ಆತ ದಿನಸಿ ಅಂಗಡಿ ತೆರೆದು ವ್ಯಾಪಾರ ಮಾಡಿ ತನ್ನ ಕುಟುಂಬ ನಿರ್ವಹಣೆ ಮಾಡುತ್ತಿದ್ದನೋ ಖಚಿತ.
ಹೊಸತಾಗಿ ನೇಮಕಗೊಂಡಿರುವ ಪೊಲೀಸ್ ಕಮೀಷನರಿಗೆ ಕಾರ್ಕಳದತ್ತ ಹೋಗಬೇಕಾದ ಅವಕಾಶ ದೊರಕಿಲ್ಲವಾದ್ದರಿಂದ ಅವರ ಕಣ್ಣಿಗೆ ಕಂಡಿಲ್ಲ.ಇನ್ನಾದರೂ ಅವರೊಂದು ರೌಂಡು ತನ್ನ ಕಾರ್ಯಕ್ಷೇತ್ರ ವ್ಯಾಪ್ತಿಯ ಬೌಂಡರಿಯತ್ತ ಬಂದು ಹೋಗಬಾರದೇ?
-ವಿ. ಕೆ. ವಾಲ್ಪಾಡಿ





































