ಕೆಂಪು ಕಲ್ಲು ಮತ್ತು ಮರಳು ಅಭಾವ, ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರಿಗೆ ಕೆಲಸವಿಲ್ಲದ ಪರಿಸ್ಥಿತಿ – ತುರ್ತುಕ್ರಮ ಕೈಗೊಳ್ಳಲು ಆಗ್ರಹ

Picture of RB NEWS

RB NEWS

Bureau Report

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಾರಾ ಸಾಗಾಟವಾಗಿ ಯಾವುದೇ ಅಡೆ ತಡೆ ಇಲ್ಲದೆ ಪೊಲೀಸ್ ಮತ್ತು ಜಿಲ್ಲಾಡಳಿತದ ಬಾಹ್ಯ ಬೆಂಬಲದ ಪರಿಣಾಮವಾಗಿ ನಡೆಯುತ್ತಿದ್ದ ಅಕ್ರಮ ದಂಧೆಗಳಿಗೆ ಈಗ ಅಧಿಕಾರ ವಹಿಸಿಕೊಂಡಿರುವ ದಕ್ಷ ಮತ್ತು ನಿಷ್ಠುರ ಪೊಲೀಸ್ ಅಧಿಕಾರಿ ಮತ್ತು ಜಿಲ್ಲಾಧಿಕಾರಿಗಳು ಕಟ್ಟು ನಿಟ್ಟಾಗಿ ಕ್ರಮವಹಿಸಿರುವ ಕಾರಣ ಕೆಂಪು ಕಲ್ಲು ಮತ್ತು ಮರಳು ಅಭಾವ ಉಂಟಾಗಿದೆ. ಮರಳು ಮತ್ತು ಕಲ್ಲು ಗಣಿಗಾರಿಕೆ ಮತ್ತು ಸಾಗಾಣಿಕೆಯು ಅಕ್ರಮವಾಗಿ ನಡೆಯುತ್ತಿದ್ದು ಇದೊಂದು ಪ್ರಬಲ ಮಾಫಿಯಾವಾಗಿದೆ. ಅಧಿಕಾರಿಗಳ ಪ್ರಕಾರ 2025 ಅಕ್ಟೋಬರ್ 15ರ ವರೆಗೆ ಮರಳುಗಾರಿಕೆಗೆ ನಿಷೇಧವಿರುವ ಕಾರಣ ಸದ್ಯ ಎಲ್ಲೂ ಮರಳು ತೆಗೆಯುವಂತಿಲ್ಲ. ಕಾನೂನು ಪ್ರಕಾರ ಗಣಿಗಾರಿಕೆ ಮತ್ತು ಮರಳು ಸಾಗಾಟ ಮಾಡಲು ಅವಕಾಶ ನೀಡುವುದಾಗಿ ಆಡಳಿತಾಧಿಕಾರಿಗಳು ಬಲವಾಗಿ ಪ್ರತಿಪಾದಿಸುತ್ತಿದ್ದಾರೆ. ಅಕ್ರಮ ಮತ್ತು ಕಾನೂನು ಬಾಹಿರ ಕೃತ್ಯಗಳನ್ನು ತಡೆಗಟ್ಟಲು ನಮ್ಮ ಸಂಘಟನೆ ಅಧಿಕಾರಿಗಳೊಂದಿಗೆ ಸಹಮತವಿದೆ ಮತ್ತು ಸ್ವಾಗತಾರ್ಹವಾಗಿದೆ.


ಆದರೆ ಇಂತಹ ದಿಡೀರ್ ಕ್ರಮ ಕೈಗೊಳ್ಳುವುದರ ಬದಲು ದೂರ ದೃಷ್ಟಿಯಿಂದ ಯೋಜನೆಯನ್ನು ಹಮ್ಮಿಕೊಂಡಿದ್ದರೆ ಒಳ್ಳೆಯದಿತ್ತು. ಪ್ರಸ್ತುತ ಸಮಸ್ಯೆಯಿಂದ ಜಿಲ್ಲೆಯಲ್ಲಿ ಕೆಂಪು ಕಲ್ಲು ಮತ್ತು ಮರಳು ಅಭಾವದಿಂದಾಗಿ ಕಟ್ಟಡ ಮತ್ತು ನಿರ್ಮಾಣ ರಂಗದ ಕೆಲಸಗಳು ಕೆಲವು ಕಡೆ ಶಾಶ್ವತವಾಗಿ, ಇನ್ನೂ ಕೆಲವು ಕಡೆ ಬಾಗಷಃವಾಗಿ ಸ್ಥಗಿತಗೊಂಡಿದೆ. ಕಟ್ಟಡ ಮತ್ತು ನಿರ್ಮಾಣ ರಂಗದಲ್ಲಿ ಕೆಲಸ ಮಾಡುವ ವಿವಿಧ ನಮೂನೆಯ ಕಾರ್ಮಿಕರಿಗೆ ಕೆಲಸವಿಲ್ಲದೆ ಒಂದು ತಿಂಗಳು ಕಳೆದವು. ಅವರು ಮತ್ತು ಅವರ ಮನೆ ಮಂದಿ ಜೀವನ ನಿರ್ವಹಣೆ ಮಾಡುವುದು ತ್ರಾಸದಾಯಕವಾಗಿದೆ. ಜನಸಾಮಾನ್ಯರು ತಮ್ಮ ವಸತಿಗಾಗಿ ಮನೆ ಕಟ್ಟುವ ಯೋಜನೆ ಸಂಪೂರ್ಣ ಸ್ಥಗಿತಗೊಂಡು ಕಂಗಾಲಾಗಿದ್ದಾರೆ. ಕಟ್ಟಡ ಮತ್ತು ನಿರ್ಮಾಣ ರಂಗದ ಕಚ್ಚಾ ವಸ್ತುಗಳ ಅಭಾವದಿಂದಾಗಿ ಪರೋಕ್ಷವಾಗಿ ಲಾರಿಗಳಲ್ಲಿ ದುಡಿಯುವ ಕಾರ್ಮಿಕರು, ಅಂಗಡಿ-ಮುಗ್ಗಟ್ಟುಗಳ ಮಾಲೀಕರು, ಕೆಲಸಗಾರರು, ಇತರೆ ವ್ಯಾಪಾರಿವರ್ಗ ಮತ್ತು ಆರ್ಥಿಕ ಸಂಸ್ಥೆಗಳು ದೊಡ್ಡ ಪ್ರಮಾಣದಲ್ಲಿ ತೊಂದರೆಗೊಳಗಾಗಿವೆ. ಅಭಿವೃದ್ಧಿಗೆ ಹಿನ್ನಡೆಯಾಗಿದೆ.
ಜಿಲ್ಲೆಯಲ್ಲಿ ಸಾಕಷ್ಟು ಮರಳಿನ ಸಂಗ್ರಹವಿದ್ದು ‘ಸ್ಯಾಂಡ್ ಬಜಾರ್’ ಚಿಠಿಠಿ ಮೂಲಕ ಮರಳು ಪಡೆಯಬಹುದು ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ ಸ್ಯಾಂಡ್ ಬಜಾರ್ ಸರಿಯಾಗಿ ತೆರೆಯುತ್ತಿಲ್ಲ.
ಬೇರೆ ಬೇರೆ ಕಡೆಗಳಿಂದ ಬರುವ ಮರಳು ಒಂದು ಲೋಡಿಗೆ ರೂ.22ಸಾವಿರದಷ್ಟು ದುಬಾರಿಯಾಗಿದೆ. ಕೆಂಪು ಕಲ್ಲು ಒಂದಕ್ಕೆ ರೂ.50ಕ್ಕೂ ಮಿಕ್ಕಿ ಏರಿಕೆ ಆಗಿರುತ್ತದೆ. ಇದೆಲ್ಲ ನಿಷೇಧದ ನಂತರ ಆದ ಬೆಳವಣಿಗೆಗಳಾಗಿವೆ.
ಅಕ್ರಮ ಮರಳುಗಾರಿಕೆ, ಅಕ್ರಮ ಕೆಂಪು-ಕಪ್ಪು ಕಲ್ಲಿನ ಗಣಿಗಾರಿಕೆ ಮತ್ತು ಸಾಗಾಟ ನಿಷೇಧಿಸಿರುವುದು ಒಳ್ಳೆಯ ಬೆಳವಣಿಗೆ. ಅದರ ಒಟ್ಟಿಗೆ ಕಾನೂನುಬದ್ಧ ಮರಳುಗಾರಿಕೆ, ಕೆಂಪು ಮತ್ತು ಕಪ್ಪು ಕಲ್ಲು, ಜಲ್ಲಿ ಪೂರೈಕೆ ಮಾಡಲು ವ್ಯವಸ್ಥೆಯೂ ಆಗಬೇಕಾಗಿದೆ. ಬೀದಿ ಪಾಲಾಗುತ್ತಿರುವ ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರ ಬದುಕಿನ ಪ್ರಶ್ನೆಯೂ ಪ್ರಮುಖ ಆದ್ಯತೆ ಆಗಬೇಕಾಗಿದೆ.
ಈ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರ ಫೆಡರೇಶನ್ (CWFI—CITU) ಜಿಲ್ಲಾ ಸಮಿತಿಯು ಸಭೆ ಸೇರಿ ಗಂಭೀರವಾಗಿ ಪರಿಗಣಿಸಿದೆ.

ಜಿಲ್ಲಾಡಳಿತದ ಮುಂದಿರಿಸಿದೆ. ಬೇಡಿಕೆಗಳು


೧. ಕರಾವಳಿ ಜಿಲ್ಲೆಗಳಲ್ಲಿ ಸರಾಗವಾಗಿ ಮತ್ತು ಸರಳವಾಗಿ ಮರಳು ಪೂರೈಕೆಯಾಗುವಂತೆ ಕರಾವಳಿ ಮರಳು ನೀತಿ ರೂಪಿಸಬೇಕು.
೨. ಪರಿಸರ ಸ್ನೇಹಿ ಮರಳುಗಾರಿಕೆ ಹಾಗೂ ನಿಯಮಬದ್ದ ಕೆಂಪು ಕಲ್ಲು ಮತ್ತು ಕಪ್ಪು ಕಲ್ಲು ಗಣಿಗಾರಿಕೆಗೆ ಅವಕಾಶ ನೀಡಬೇಕು.
೩. ಜನಸಾಮಾನ್ಯರಿಗೆ ಕೈಗೆಟಕುವ ದರದಲ್ಲಿ ಮರಳು, ಕೆಂಪು ಕಲ್ಲು, ಕಪ್ಪು ಕಲ್ಲು ಮತ್ತು ಜಲ್ಲಿ ಸಿಗುವಂತಾಗಬೇಕು.
೪. ಜನಸಾಮಾನ್ಯರಿಗೆ ಮನೆ ಕಟ್ಟಲು ಬೇಕಾಗುವ ಕಚ್ಛಾ ವಸ್ತುಗಳ ಪೂರೈಕೆಯಲ್ಲಿ ಯಾವುದೇ ಅಡೆ ತಡೆ ಉಂಟಾಗದಂತೆ ಕ್ರಮ ಕೈಗೊಳ್ಳಬೇಕು.
೫. ಕಳೆದ ಒಂದು ತಿಂಗಳಿನಿಂದ ಕಟ್ಟಡ ಮತ್ತು ನಿರ್ಮಾಣ ರಂಗದ ಕಾರ್ಮಿಕರು ಕೆಲಸವಿಲ್ಲದೆ ಬಳಲುತ್ತಿದ್ದಾರೆ. ಅವರಿಗೆ ಕಾರ್ಮಿಕ ಇಲಾಖೆಗಳ ಮುಖಾಂತರ ಜಿಲ್ಲಾಡಳಿತ/ಸರಕಾರ ಆರ್ಥಿಕ ಪರಿಹಾರ ನೀಡಬೇಕು.
೬. ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಪ್ರಾಮಾಣಿಕವಾಗಿ, ದಕ್ಷತೆಯಿಂದ ಕಾರ್ಯನಿರ್ವಹಣೆ ಮಾಡಬೇಕು.
ನಮ್ಮ ಸಂಘಟನೆಯ ವತಿಯಿಂದ ಜಿಲ್ಲೆಯಾದ್ಯಂತ ಪ್ರಸ್ತುತ ಸಮಸ್ಯೆ ಬಗೆಹರಿಯುವ ತನಕ ವಿವಿಧ ಹಂತದ ತೀವ್ರ ತರದ ಹೋರಾಟ, ಮಧ್ಯ ಪ್ರವೇಶ ಮಾಡಲು ನಿರ್ಣಯಿಸಿರುತ್ತದೆ. ದಿನಾಂಕ 14-೦7-2025 ರಂದು ಸಂಜೆ ಗಂಟೆ 5ಕ್ಕೆ ಮಂಗಳೂರು ನಗರದ ಜ್ಯೋತಿ ವೃತ್ತದಿಂದ ಮೆರವಣಿಗೆ ಹೊರಟು ಮಿನಿ ವಿಧಾನಸೌಧಧ ಮುಂದುಗಡೆ ಪ್ರತಿಭಟನಾ ಪ್ರದರ್ಶನ ನಡೆಸಲು ನಿರ್ಣಯಿಸಿದೆ. ಅದೇ ರೀತಿ ಅಂದು ಉಳ್ಳಾಲ ತಾಲೂಕಿನ ನಾಟೆಕಲ್‌ನಲ್ಲಿರುವ ತಹಶೀಲ್ದಾರರ ಕಚೇರಿ, ಗುರುಪುರ ಕೈಕಂಭ, ಮೂಡಬಿದ್ರಿ, ಬೆಳ್ತಂಗಡಿ, ಪುತ್ತೂರು, ಸುಳ್ಯ ಮತ್ತು ಬಂಟ್ವಾಳದಲ್ಲಿ ತೀವ್ರ ತರದ ಹೋರಾಟ ನಡೆಸಲು ನಿರ್ಣಯಿಸಿದೆ. ಸರಕಾರ ಈ ಕೂಡಲೇ ಮಧ್ಯಪ್ರವೇಶಿಸಿ ತುರ್ತುಕ್ರಮ ಜರುಗಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ತೀವ್ರ ತರದ ಹೋರಾಟವನ್ನು ಇತರೆ ಸಮಾನ ಮನಸ್ಕ ಸಂಘಟನೆಗಳೊಂದಿಗೆ ಸೇರಿ ನಡೆಸಲಾಗುವುದೆಂದು ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ವಸಂತ ಆಚಾರಿ
ಅಧ್ಯಕ್ಷರು CWFI, ಯೋಗೀಶ್ ಜಪ್ಪಿಮೊಗರು
ಪ್ರಧಾನ ಕಾರ್ಯದರ್ಶಿ CWFI ಸುನಿಲ್ ಕುಮಾರ್ ಬಜಾಲ್ ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ
ರವಿಚಂದ್ರ ಕೊಂಚಾಡಿ – CWFI ಜಿಲ್ಲಾ ಖಜಾಂಚಿ.
ದಿನೇಶ್ ಶೆಟ್ಟಿ – CWFI ಜಿಲ್ಲಾ ಕಾರ್ಯದರ್ಶಿ ಉಪಸ್ಥಿತರಿದ್ದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top