ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಲಯದಲ್ಲಿ ಮಲೆಕುಡಿಯರಿಗೆ ಸ್ಥಾನಮಾನ ಹೋರಾಟಕ್ಕೆ ಸಂದ ಜಯ
- ಶ್ರೀಧರ ಗೌಡ ಈದು ರಾಜ್ಯಾಧ್ಯಕ್ಷ ಮಲೆಕುಡಿಯ ಸಂಘ

- ಕಾರ್ಕಳ : ದೇಶದ ಪ್ರತಿಷ್ಠಿತ ನಾಗಾರಾಧನೆಯ ಕ್ಷೇತ್ರವಾಗಿರುವ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿಗೆ ಮೂಲ ನಿವಾಸಿಗಳಾದ ಮಲೆಕುಡಿಯ ಸಮುದಾಯದವರಿಗೆ ಸ್ಥಾನಮಾನ ನೀಡಿರುವ ಸರಕಾರದ ಕ್ರಮ ಶ್ಲಾಘನೀಯ. ಇದು ಹೋರಾಟಕ್ಕೆ ಸಂದ ಜಯವಾಗಿದೆ ಎಂದು ಮಲೆಕುಡಿಯ ಸಂಘದ ರಾಜ್ಯಾಧ್ಯಕ್ಷ ಶ್ರೀಧರ ಗೌಡ ಈದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ. ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಪ್ರತಿ ಸಂದರ್ಭದಲ್ಲಿಯೂ ವ್ಯವಸ್ಥಾಪನ ಸಮಿತಿ ರಚನೆಯಾಗುವಾಗ, ಈ ದೇವಸ್ಥಾನದ ನಿರ್ಮಾಣಕ್ಕೆ ಮೂಲ ಕಾರಣಕರ್ತರಾದ ಮಲೆಕುಡಿಯ ಸಮುದಾಯದವರನ್ನು ಪರಿಗಣಿಸಲಾಗುತ್ತಿತ್ತು. ಆದರೆ ಈ ಬಾರಿ ಪ್ರಾರಂಭದಲ್ಲಿ ಸಮಿತಿಯಲ್ಲಿ ಮಲೆಕುಡಿಯರ ಹೆಸರನ್ನು ಕೈ ಬಿಡಲಾಗಿದೆ ಎಂಬ ಮಾಹಿತಿ ಲಭ್ಯವಾದ ಹಿನ್ನೆಲೆಯಲ್ಲಿ ರಾಜ್ಯಮಲೆ ಕುಡಿಯ ಸಂಘಟನೆ ಹಾಗೂ ಸ್ಥಳೀಯರು ವಿವಿಧ ಸ್ತರಗಳಲ್ಲಿ ಮುಜರಾಯಿ ಇಲಾಖೆ, ಹಾಗೂ ಸರಕಾರದ ಮೇಲೆ ನಿರಂತರ ಒತ್ತಡವನ್ನು ತಂದ ಕಾರಣದಿಂದ ವ್ಯವಸ್ಥಾಪನ ಸಮಿತಿಯಲ್ಲಿ ಮಲೆಕುಡಿಯರಿಗೆ ಸ್ಥಾನ ನೀಡಲಾಗಿದೆ.
ವ್ಯವಸ್ಥಾಪನ ಸಮಿತಿ ಸದಸ್ಯೆಯಾಗಿ ಸೌಮ್ಯ

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಸದಸ್ಯರಾಗಿ ಆಯ್ಕೆಯಾಗಿರುವ ಮಲೆಕುಡಿಯ ಸಮುದಾಯದ ಸೌಮ್ಯ ಅವರನ್ನು ನಿಯೋಜಿಸಲಾಗಿದೆ.

ನೂತನ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಹಾಗೂ ಎಲ್ಲಾ ಪದಾಧಿಕಾರಿಗಳಿಗೂ ಅಭಿನಂದನೆಗಳು. ನಿಮ್ಮ ಆಡಳಿತ ಅವಧಿಯಲ್ಲಿ ಕ್ಷೇತ್ರದಲ್ಲಿ ಉತ್ತಮ ಕಾರ್ಯಗಳು ನೆರವೇರಲಿ, ಅನಾದಿ ಕಾಲದಿಂದಲೂ ಶ್ರೀ ಸ್ವಾಮಿಯ ಸೇವೆಯನ್ನು ಮಾಡಿಕೊಂಡು ಬರುತ್ತಿರುವ ಮಲೆಕುಡಿಯ ಸಮುದಾಯದ ಜನರಿಗೆ ಉದ್ಯೋಗ, ಜೀವನ ಭದ್ರತೆ ಮುಂತಾದ ಸಕಲ ಸೌಕರ್ಯಗಳು ಲಭಿಸಲಿ ಎಂಬ ಆಶಯದೊಂದಿಗೆ ಹೊಸ ವ್ಯವಸ್ಥಾಪನ ಸಮಿತಿಗೆ ಮಲೆಕುಡಿಯ ಸಂಘ ಶುಭ ಹಾರೈಸಿದೆ.


























