ಜಮ್ಮು : ಯೋಧ ಹುತಾತ್ಮ
ಜಮ್ಮು: ಜಮ್ಮು ಮತ್ತು ಕಾಶ್ಮೀರದ ಉದ್ಧಂಪುರ ಜಿಲ್ಲೆಯ
ದುಡು-ಬಸಂತ್ಗರ್ಗ್ ಪ್ರದೇಶದಲ್ಲಿ ಭದ್ರತಾ ಪಡೆಗಳು ಉಗ್ರರೊಂದಿಗೆ ನಡೆಸುತ್ತಿರುವ ಗುಂಡಿನ ಚಕಮಕಿಯಲ್ಲಿ ಸೇನಾ ಯೋಧರೊಬ್ಬರು ಹುತಾತ್ಮರಾಗಿದ್ದಾರೆ.
ಹುತಾತ್ಮ ಯೋಧನನ್ನು ಗಣ್ಯ 6 PARA (ವಿಶೇಷ ಪಡೆ) ಘಟಕದ ಹವಾಲ್ದಾರ್ ಜಂತು ಅಲಿ ಶೇಖ್ ಎಂದು ಗುರುತಿಸಲಾಗಿದೆ.
“ಅವರ ಅದಮ್ಯ ಧೈರ್ಯ ಮತ್ತು ಅವರ ತಂಡದ ಶೌರ್ಯವನ್ನು ಎಂದಿಗೂ ಮರೆಯಲಾಗುವುದಿಲ್ಲ. ಈ ದುಃಖದ ಸಮಯದಲ್ಲಿ ನಾವು ಮೃತ ಕುಟುಂಬದೊಂದಿಗೆ ನಿಲ್ಲುತ್ತೇವೆ” ಎಂದು ಸೇನೆ ಹೇಳಿಕೆಯಲ್ಲಿ ತಿಳಿಸಿದೆ.
ಉದ್ಧಂಪುರದ ದುಡಿ ಬಸಂತ್ಗಢ ಗ್ರಾಮದಲ್ಲಿ ಉಗ್ರರು ಅಡಗಿರುವ ಮಾಹಿತಿ ಮೇರೆಗೆ ಭದ್ರತಾ ಪಡೆಗಳು ಶೋಧ ಕಾರ್ಯಾಚರಣೆ ಆರಂಭಿಸಿವೆ ಎಂದು ಭದ್ರತಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಶಂಕಿತರು ಅಡಗಿದ್ದ ಸ್ಥಳದಲ್ಲಿ ಭದ್ರತಾ ಪಡೆಗಳು ಜಮಾಯಿಸುತ್ತಿದ್ದಂತೆಯೇ, ಉಗ್ರರು ಅವರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಭದ್ರತಾ ಪಡೆಗಳು ಪ್ರತಿಯಾಗಿ ಗುಂಡಿನ ದಾಳಿ ನಡೆಸಿದ್ದು, ಎನ್ ಕೌಂಟರ್ ಆರಂಭವಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.



































