ಎಡನೀರು ಶ್ರೀಗಳಿಂದ ಲಾಡಿ ಚತುರ್ಮುಖ ಬ್ರಹ್ಮ, ಬಲಮುರಿ ಗಣಪತಿ ಬಿಂಬ ಪ್ರತಿಷ್ಠಾಪನೆ
ವರದಿ : ರಾಯಿ ರಾಜಕುಮಾರ ಮೂಡುಬಿದಿರೆ


ಮೂಡುಬಿದಿರೆ: ಹದಿಮೂರು ಶತಮಾನಗಳ ಇತಿಹಾಸ ಇರುವ, ಶಾಂಭವಿ ನದಿ ಉಗಮ ಸ್ಥಾನ ಅಂಗ ಜಾಲು ಬರ್ಕೆಯ ತಡಿಯಲ್ಲಿರುವ ನಾಗಬ್ರಹ್ಮ ಬನ, ರಕ್ತೇಶ್ವರಿ, ಕೊಡಮಣಿತ್ತಾಯ ದೈವದ ಸಾನ್ನಿಧ್ಯದ ಚತುರ್ಮುಖ ಬ್ರಹ್ಮ ದೇವಸ್ಥಾನ ಸಂಪೂರ್ಣ ಶಿಲಾಮಯಗೊಂಡು ರಾರಾಜಿಸುತ್ತಿದೆ.
ಸುಮಾರು ಐದು ಕೋಟಿ ವೆಚ್ಚದಲ್ಲಿ ದಾನಿಗಳ ನೆರವಿನಿಂದ ವಾಸ್ತು ತಜ್ಞ ಪ್ರಸಾದ್ ಮುನಿಯಂಗಳರ ನೇತೃತ್ವದಲ್ಲಿ ಪದ್ಮನಾಭ ಶಿಲ್ಪಿ ಬಳಗದ ನಿರ್ಮಾಣ ಸುಂದರವಾಗಿ ಮೂಡಿಬಂದಿದೆ. ಹಂಸ ವಾಹನ, ಜಪಮಾಲೆ, ಅಮೃತ ಕಲಶ, ವೇದ ಪುಸ್ತಕ ಧಾರಿ, ಅಭಯ ಹಸ್ತದ ಧನ್ವಂತರಿಯ ಸ್ವರೂಪಿ ಬ್ರಹ್ಮದೇವರ ಶಿಲ್ಪವು ಸುಮನ್ಹರವಾಗಿ ನಾಗಶಿಲ್ಪಗಳೊಂದಿಗೆ ಕಂಗೊಳಿಸುತ್ತಿದೆ. ಇದು ಬ್ರಹ್ಮ ಬಲಾಂಡಿಯ ಪವಿತ್ರ ಉಗಮ ತಾಣವು ಆಗಿರುವುದು ವಿಶೇಷ. ಕುದುರೆ ಏರಿ ಬಂದ ಮಂತ್ರಿ ನಾಡು ಈ ದೇವಾಲಯದ ಪೂರ್ವ ದಿಕ್ಕಿನ ನೀರಿನ ಗುಂಡಿಯಲ್ಲಿ ಶಿಲೆಯಾಗಿ ಕುದುರೆ ಗುಂಡಿ ರಚನೆಯಾಗಿದೆ. ಮುಂದೆ ಈತ ಪೆರಾರದಲ್ಲಿ ಬಲಾಂಡಿಯಾಗಿ ಅವತರಿಸಿದನು ಎಂಬ ಪ್ರತೀತಿಯೂ ಇದೆ.
ಇಂತಹ ಪ್ರಸಿದ್ಧ ಲಾಡಿ ಚತುರ್ಮುಖ ಬ್ರಹ್ಮ ದೇವಸ್ಥಾನದ ಪುನರ್ ಪ್ರತಿಷ್ಠ ಕಾರ್ಯ ಇಂದು ನಡೆಯಿತು. ಎಡನೀರು ಶ್ರೀಗಳ ಉಪಸ್ಥಿತಿಯಲ್ಲಿ ಶಿಖರ ಪ್ರತಿಷ್ಠೆ, ದೇವಳದ ಅನಾವರಣ, ಬಿಂಬಗಳ ಪ್ರತಿಷ್ಠೆ, ಹೋಮ ಹವನಾದಿಗಳು, ಬ್ರಹ್ಮ ಕಳಶ ಪ್ರತಿಷ್ಠೆಗಳು ನಡೆದವು.
ಪ್ರತಿಷ್ಠಾಪನೆ ಗೈದು ಮಾತನಾಡಿದ ಶ್ರೀಗಳು ಭಕ್ತರ ಅಭಿಷೇಕಗಳನ್ನು ಭಗವಂತ ನೆರವೇರಿಸಲಿ. ಇಂತಹ ಪುಣ್ಯಕ್ಷೇತ್ರ ಸುಂದರವಾಗಿ ಶಿಲಾಮಯಗೊಂಡು ಭಕ್ತರಿಗೆ ದೊರಕಿರುವುದು ಪುಣ್ಯ ಪ್ರದ ಕಾರ್ಯವಾಗಿದೆ ಎಂದು ಮನತುಂಬಿ ಹಾರೈಸಿದರು.

ಭಗವತ್ ಆರಾಧನೆಯಿಂದ ಎಲ್ಲರಿಗೂ ಶುಭ: ಪೇಜಾವರ ಶ್ರೀ
ಸುಸಜ್ಜಿತ ದೇವಾಲಯದಿಂದ ಮಾತ್ರ ಭಕ್ತರ ಅಭೀಷ್ಠ ನೆರವೇರುತ್ತದೆ. ಭಗವತ್ ಆರಾಧನೆಯಿಂದ ಎಲ್ಲರಿಗೂ ಶುಭವಾಗುತ್ತದೆ. ಆದರೆ ಮಕ್ಕಳು ದೇವಸ್ಥಾನಕ್ಕೆ ಪ್ರತೀ ದಿನ ಬರುವುದರಿಂದ ಅವರ, ಮನೆಯ ಉನ್ನತಿಯಾಗುತ್ತದೆ ಎಂದು ಆಶೀರ್ವಚನದಲ್ಲಿ ಪೇಜಾವರ ಶ್ರೀ ಅವರು ನುಡಿದರು.
ಬ್ರಹ್ಮನಿಗೆ ಆರಾಧಿಸುವ ಶ್ರೀ ಕ್ಷೇತ್ರ: ಡಾ. ವೀರೇಂದ್ರ ಹೆಗ್ಗಡೆ

ಧರ್ಮಸ್ಥಳದ ರಾಜರ್ಷಿ ಡಾ. ವೀರೇಂದ್ರ ಹೆಗ್ಗಡೆ ಮಾತನಾಡಿ ಸೃಷ್ಟಿಕರ್ತ ಬ್ರಹ್ಮನಿಗೆ ದೇವಾಲಯವೇ ಇಲ್ಲದಂತೆ ಶಿವ ಶಾಪ ನೀಡಿದ್ದರು. ಇಡೀ ಭಾರತದಲ್ಲಿ ಪುಷ್ಕರ ಬಿಟ್ಟರೆ ಇದು ಎರಡನೆಯ ದೇವಾಲಯವಾಗಿದೆ. ಒಮ್ಮೆ ಸೃಷ್ಟಿ ಯಾದುದು ನಾಶ ಆಗುವುದಿಲ್ಲ ಎಂಬುದಕ್ಕೆ ಇದೇ ಸಾಕ್ಷಿ ಎಂದು ನುಡಿದರು.
ಇದೆ ಸಂದರ್ಭದಲ್ಲಿ ದೇವಾಲಯದ ಮುರುಳಿಧರ ತಂತ್ರಿ, ವಾಸ್ತು ತಜ್ಞ ಪ್ರಸಾದ್ ಮುನಿಯಂಗಳ, ಶಿಲ್ಪಿ ಪದ್ಮನಾಭ, ನಾಗೇಂದ್ರ ಆಚಾರ್ಯ ರನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಸಂಸದ ಬ್ರಿಜೇಶ್ ಚೌಟ, ಶಾಸಕ ಉಮಾನಾಥ ಕೋಟ್ಯಾನ್, ಮಾಜಿ ಸಚಿವ ಅಭಯ ಚಂದ್ರ ಜೈನ್, ಪುರಸಭಾ ಅಧ್ಯಕ್ಷೆ ಜಯಶ್ರೀ ಕೇಶವ್, ಹೊಸಂಗಡಿ ಅರಮನೆಯ ಸುಕುಮಾರ್ ಶೆಟ್ಟಿ, ಸುರೇಶ್ ಪ್ರಭು ಹಾಜರಿದ್ದರು. ವ್ಯವಸ್ಥಾಪನಾ ಸಮಿತಿ ಹಾಗೂ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಅನಂತ ಕೃಷ್ಣ ರಾವ್ ಅಧ್ಯಕ್ಷತೆ ವಹಿಸಿದ್ದರು. ಗಣೇಶ್ ಕಾಮತ್ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯದರ್ಶಿ ರವಿಪ್ರಸಾದ್ ಶೆಟ್ಟಿ ವಂದಿಸಿದರು.

ಭಜನೆ ವಾದನ ಯಕ್ಷಗಾನ ನಾಟ್ಯ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿದೆ.
ದೇವಾಲಯದ ವ್ಯವಸ್ಥಾಪನ ಜೀವನದ ಸಮಿತಿ ಅಧ್ಯಕ್ಷ ಅನಂತ ಕೃಷ್ಣರಾವ್, ಉಪಾಧ್ಯಕ್ಷ ಗಣೇಶ್ ರಾವ್, ಕಾರ್ಯದರ್ಶಿ ರವಿಪ್ರಸಾದ್ ಶೆಟ್ಟಿ, ಅಚ್ಚಕ ಸುಧಾಕರ ಭಟ್, ಪವಿತ್ರ ಪಾಣಿ ರಾಘವೇಂದ್ರ ರಾವ್, ಕೋಶಾಧಿಕಾರಿ ಸದಾನಂದ ಪೂಜಾರಿ, ಮತವ ಶೆಟ್ಟಿ, ಪ್ರಶಾಂತ್, ಪೂರ್ಣಿಮಾ ಬಂಗೇರ, ಇಂದಿರಾ, ರಾಘವೇಂದ್ರ ರಾವ್, ಈಶ್ವರ ಪೂಜಾರಿ, ಗಂಗಾಧರ ಪೊನ್ನೆಚಾರಿ, ಚಿದಾನಂದ ನಾಯ್ಕ, ಪ್ರಸಾದ್ ಕುಮಾರ್, ಸುರೇಶ್ ಪ್ರಭು, ಇತ್ಯಾದಿ ಹಲವಾರು ಮಂದಿ ವಿವಿಧ ಕಾರ್ಯಗಳಲ್ಲಿ ಸಹಕರಿಸುತ್ತಿದ್ದಾರೆ.















