2028 ರಲ್ಲಿ ಮತ್ತೇ ಕಾಂಗ್ರೆಸ್ ಅಧಿಕಾರ ಚುಕ್ಕಾಣಿ ಹಿಡಿಯಲಿದೆ : ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್
ಕಾರ್ಕಳ : ಚುನಾವಣೆ ಸಮಯದಲ್ಲಿ ಕೊಟ್ಟ ಭರವಸೆಯ ಮಾತಿನಂತೆ ನಮ್ಮ ಸರಕಾರವು ಪ್ರಮಾಣ ವಚನ ಸ್ವೀಕಾರ ಮಾಡಿದ ನಂತರದ ಮೊದಲ ಸಂಪುಟ ಸಭೆನಲ್ಲಿಯೆ ಆ ಎಲ್ಲ ಐದು ಭರವಸೆಗಳನ್ನು ಜ್ಯಾರಿ ಮಾಡಿದೆವು. ಕೊಟ್ಟ ಮಾತನ್ನು ಉಳಿಸಿಕೊಂಡೆವು,ಅದು ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾಧ್ಯ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.







ಕಾರ್ಕಳ ಗಾಂಧಿಮೈದಾನದಲ್ಲಿ ಮಾಜಿ ಶಾಸಕ ಹೆಚ್. ಗೋಪಾಲ ಭಂಡಾರಿ ವೇದಿಕೆಯಲ್ಲಿ ಕಾರ್ಕಳ ಬ್ಲಾಕ್ ಹಾಗೂ ಹೆಬ್ರಿ ಬ್ಲಾಕ್ ಆಯೋಜಿಸಿದ ಕುಟುಂಬೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಹಾಗೂ ನೂತನ ಪದಾಧಿಕಾರಿಗಳಿಗೆ ಪ್ರಮಾಣವಚನ ಬೋಧಿಸಿ ಮಾತನಾಡಿದರು.
ಕಮಲ ಕೆಸರಿನಲ್ಲಿದ್ದರೆನೆ ಚೆಂದ, ತೆನೆ ಹೊತ್ತ ಮಹಿಳೆ ಹೊಲದಲ್ಲಿದ್ದರೆನೆ ಚೆಂದ, ದಾನ ಧರ್ಮ ಮಾಡುವ ಕೈ ಆಡಳಿತ ಮಾಡಬೇಕು ಎಂದು ನಾನು ಹೇಳುತ್ತಲೇ ಬಂದವನು ,ಅದೇ ಪ್ರಕಾರ ನಮ್ಮ ಪಕ್ಷ ಅಧಿಕಾರಕ್ಕೆ ಬಂದ ಕ್ಷಣದಿಂದಲೇ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ, ತಿಂಗಳಿಗೆ ಎರಡು ಸಾವಿರ ಪಿಂಚಣಿ ಮತ್ತು ಉಚಿತ ವಿದ್ಯುತ್ ಸೌಲಭ್ಯವನ್ನು ಒದಗಿಸಿದ್ದೇವೆ. ನಮ್ಮ ಮಾತಿಗೆ ನಾವು ಬದ್ಧರಾಗಿದ್ದೇವೆ .
ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ಸೇರಿದವರ ಪರಿಸ್ಥಿತಿ ಏನಾಯಿತೆನ್ನುನುದನ್ನು ಸ್ವತಃ ಸುಧಾಕರ್ ಹೇಳಿದ್ದಾರೆ. ಆ ರೀತಿ ಸಮಾಧಿಯಾಗುತ್ತಿರುವವರ ಹೆಸರಿನ ಪಟ್ಟಿಯೊ ನನ್ನಲ್ಲಿ ಇದೆ, ಅದನ್ನು ಅಧಿವೇಶನದ ವೇಳೆ ಹೇಳಲಿಕ್ಕಿದ್ದೇನೆ.
ಜನರು ಹೇಳಿಕೊಂಡು ಕೊಂಡಾಡುವಂಥ ಕೆಲಸವನ್ನು ಬಿಜೆಪಿಯವರು ಮಾಡಿಲ್ಲ. ನಾವು ಮಾಡಿರುವ ಜನಪರ ಕೆಲಸ ನಿಮಗೆ ಹಿಡಿಸಲಿಲ್ಲವೆಂದಾದರೆ ಕಾಂಗ್ರೆಸ್ಸಿನವರು ಮಾಡಿದ ಕಾರ್ಯಕ್ರಮ ನಮಗೆ ಬೇಡ ಎಂದು ಬಸ್ಸಲ್ಲಿ ಟಿಕೆಟ್ ಖರೀದಿಸಿ,ತಿಂಗಳ ಪಿಂಚಣಿ ತಗೊಂಡಿದ್ದೆಲ್ಲವನ್ನೂ ಮರಳಿಸಿ,ಮನೆಯ ವಿದ್ಯುತ್ ಬಿಲ್ ಬಾಕಿ ಸಮೇತ ಪಾವತಿಸಿ ನಿಮ್ಮ ನೈಜ ವಿರೊಧವನ್ನು ತೋರಿಸಿಕೊಟ್ಟು ಬದ್ಧತೆಯನ್ನು ಸಾಬೀತುಪಡಿಸಿ ಎಂದು ಬಿಜೆಪಿಯವರ ಬದ್ಧತೆಗೆ ಸವಾಲೆಸೆದರು.
ಜಿಲ್ಲೆಯಲ್ಲಿ ಪ್ರವಾಸ ಕಾರ್ಯಕ್ರಮವನ್ನು ಏರ್ಪಡಿಸಿ ಬೈಲೂರಿನ ಪರಶುರಾಮ ಥೀಮ್ ಪಾರ್ಕಿನ ಅವಸ್ಥೆಯನ್ನು ಕೂಡಾ ತೋರಿಸುವ ವ್ಯವಸ್ಥೆ ಮಾಡಿ. ಮುಂದಿನ ವಿಧಾನಸಭಾ ಚುನಾವಣೆ ವೇಳೆ ಅದೇ ಅರೆಬರೆ ಥೀಮ್ ಪಾರ್ಕನ್ನು ತೋರಿಸುತ್ತಲೇ ಮತಪಡೆಯಿರಿ.
ಈ ಭೂಮಿಲ್ಲಿ ಜನ್ಮಕ್ಕೆ ಬರುವಾಗ ಯಾರೂ ಜಾತಿ ಕೇಳಲಿಲ್ಲ. ಈ ಜಾತಿಯನ್ನು ಎತ್ತಿಕಟ್ಟಿರುವುದೇ ಬಿಜೆಪಿಯವರು ಎಂದರು.
ಕಳೆದ ವಿಧಾನಸಭಾ ಚುನಾವಣೆನಲ್ಲಿ ಸೋತವರೆಲ್ಲರನ್ನೂ ಕರೆಸಿ ಸಭೆ ನಡೆಸಿದ್ದೇನೆ.
ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಸೋತವರು,ಜಿಲ್ಲಾ ಹಾಗೂ ತಾಲೂಕು ಮತ್ತು ಬ್ಲಾಕ್ ಮಟ್ಟದ ಮತ್ತು ಎಲ್ಲ ಘಟಕಗಳ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಎಲ್ಲರೂ ಸಭೆ ಸೇರಿ ಯಾರೆಲ್ಲ ಕಾರ್ಯಕರ್ತರಿಗೆ ಸರಕಾರದ ಸಮಿತಿಗಳಲ್ಲಿ ನೇಮಕಾತಿ ಮಾಡಿದೆ ಅವರನ್ನೆಲ್ಲರನ್ನೂ ಸಭೆ ಸೇರಿಸಿ ಸನ್ಮಾನ ಮಾಡಬೇಕು. ಬಾಕಿ ಸಮಿತಿಗಳಿಗೆ ನೇಮಕವನ್ನೂ ಪೂರ್ತಿ ಮಾಡುತ್ತೇವೆ. ಯಾರನ್ನೆಲ್ಲ ಗುರುತಿಸುವಲ್ಲಿ ಲೋಪವಾಗಿದೆ ಎಂದು ಎಲ್ಲವನ್ನೂ ಗುರುತಿಸಬೇಕು. ಮುಂದಿನ ಮಾರ್ಚ್ ತಿಂಗಳಲ್ಲಿ ರಾಜ್ಯದಲ್ಲಿ ಅದೇ ಕಾರ್ಯಕ್ರಮದ ಆಚರಣೆಯ ವಾರವನ್ನಾಗಿ ಮಾಡಲಿಕ್ಕಿದೆ. ಇದು ನನ್ನ ಆದೇಶವಲ್ಲ ಹೈಕಮಾಂಡ್ ಸೂಚನೆ.
ಕರಾವಳಿಯ ಭಾಗವನ್ನು ಒಂದು ಹೊಸತಾದ ಪ್ರವಾಸೋದ್ಯಮಕ್ಕೆ ಪರಿವರ್ತನೆಗೊಳಿಸುವುದಕ್ಕಿದೆ. ಉದ್ಯೋಗ ಸೃಷ್ಠಿಯಾಗುವಂತಹ ಹೊಸ ನಿರ್ಮಾಣಗಳ ಬಗ್ಯೆ ಈಗಾಗಲೇ ಯೋಜನೆ ಹಾಕಿಕೊಳ್ಳಲಾಗಿದೆ ಎಂದು ಡಿ .ಕೆ.ಶಿವಕುಮಾರ್ ಹೇಳಿದರು.
ತಾನು ಮೈಾಲಿಯವರ ಶಿಷ್ಯನಾಗಿ ಅವರನ್ನು ಸನ್ಮಾನಿಸುವ ಘನಕಾರ್ಯವನ್ನು ಮಾಡಲು ಒಪ್ಪಿಕೊಳ್ಳುತ್ತಿರಲಿಲ್ಲ ಬದಲಾಗಿ, ಕೆ ಪಿ ಸಿ ಸಿ ಅಧ್ಯಕ್ಷನ ನೆಲೆಯಲ್ಲಿ ಅವರಿಗೆ ಶಾಲು ಹೊದಿಸಿ ಸನ್ಮಾನಿಸುವ ಜವಾಬ್ದಾರಿ ವಹಿಸಿಕೊಂಡಿದ್ದೇನೆ. ನನ್ನ ರಾಜಕೀಯ ಏಳಿಗೆಯಲ್ಲಿ ಅವರ ಆಶೀರ್ವಾದ ಅಪಾರವೂ,ಪ್ರಮುಖವೂ ಆಗಿದೆ ಎಂದು ಮೈಾಲಿಯವರನ್ನು ಕೊಂಡಾಡಿದರು.
ಮುಂದಿನ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ : ಮೈಾಲಿ ಹಾರೈಕೆ
ರಾಜ್ಯದ ಮುಖ್ಯಮಂತ್ರಿಯಾಗುವ ಎಲ್ಲ ಅನುಭವಗಳನ್ನು ಹೊಂದಿರುವ ಡಿ. ಕೆ. ಶಿವಕುಮಾರ್ ಮುಂದೆ ಮುಖ್ಯಮಂತ್ರಿಯಾಗುತ್ತಾರೆ. ಯಾವುದಕ್ಕೂ ಅವರಿವರ ಬೆಂಬಲ ಕಾಯುವಂಥದ್ದೇನಿಲ್ಲ ಎಲ್ಲವನ್ನೂ ಸಮಯ ನಿರ್ಣಯಿಸುತ್ತದೆ ಎಂಬುದಾಗಿ ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪ ಮೈಾಲಿ ಹೇಳಿದರು.
ಕಾರ್ಕಳದಲ್ಲಿ ಆಯೋಜಿಸಲಾಗಿದ್ದ ಕಾಂಗ್ರೆಸ್ ಕುಟುಂಬೋತ್ಸವದ ಸಮಾವೇಶದಲ್ಲಿ ಭಾಗವಹಿಸಿ ಮಾತನ್ನಾಡಿದ ಮೈಾಲಿಯವರು ಈ ಕರಾವಳಿ ಜಿಲ್ಲೆಗಳಿಗೆ ಲಾಗಾಯ್ತಿನಿಂದಲೂ ಕಾಂಗ್ರೆಸ್ ಸರಕಾರ ಹಾಗೂ ಕಾಂಗ್ರೆಸ್ ಜನಪ್ರತಿನಿಧಿಗಳೆ ಎಲ್ಲ ರೀತಿಯ ಸೌಲಭ್ಯವನ್ನು ಕೊಟ್ಟಿರುವುದೇ ಹೊರತು ಬಿಜೆಪಿಯಿಂದ ಏನು ಕೊಡಲ್ಪಟ್ಟಿದೆ ಎನ್ನುವುದನ್ನು ಅವರು ಬಹಿರಂಗಪಡಿಸಲಿ ಎಂದು ಸವಾಲೆಸೆದರು. ಯುದ್ಧ ಸಂದರ್ಭವೇನಾದರೂ ಸಂಭವಿಸಿದ್ದಲ್ಲಿ ತುರ್ತು ಉಪಯೋಗಕ್ಕಾಗಿ ಜಿಲ್ಲೆಯ ಪಾದೂರು ಮತ್ತು ಉಳ್ಳಾಲದಲ್ಲಿ ತೈಲಸಂಗ್ರಹಣಾ ಟ್ಯಾಂಕನ್ನು ಮಾಡಿಸಿದ್ದೇ ಮನಮೋಹನ್ ಸಿಂಗ್ ಸರಕಾರ ಹೊರತು ಅನ್ಯ ಪಕ್ಷದವರಲ್ಲ ಎಂದು ಮೈಾಲಿ ಗುಡುಗಿದರು.
ಡಿಕೆಶಿಯವರು ಶಾಸಕನಾಗಬೇಕೆಂದು ಮೊದಲ ಬಾರಿಗೆ ಬಿ. ಫಾರ್ಮ್ ಕೊಟ್ಟವನು ತಾನು ಎಂದು ನೆನಪುಮಾಡಿದ ಮೈಾಲಿ, ಡಿ. ಕೆ. ಶಿವಕುಮಾರ್ ಅವರೊಬ್ಬ ಅತ್ಯುತ್ಸಾಹಿ ನಾಯಕ,ಕೆಪಿಸಿಸಿ ಅಧ್ಯಕ್ಷ ಮತ್ತು ರಾಷ್ಟ್ರದ ಎಲ್ಲ ರಾಜ್ಯದಲ್ಲೂ ಕಾಂಗ್ರೆಸ್ ಗೆಲುವಿಗೆ ಶಕ್ತಿಮೀರಿ ದುಡಿದ ಧೀಮಂತ ನಾಯಕ ಎಂದು ಭಾರೀ ಮೆಚ್ಚುಗೆ ವ್ಯಕ್ತಪಡಿಸಿದರು.
ಎಲ್ಲ ಜಾತಿ ಧರ್ಮ ಕುಲದವರನ್ನು ಸಮಾನವಾಗಿ ಕಾಣುವ,ಪ್ರೀತಿಸುವ ಪಕ್ಷವೆಂದರೆ ಅದು ಕಾಂಗ್ರೆಸ್ ಮಾತ್ರ. ಕಾಂಗ್ರೆಸ್ ಪಕ್ಷವು ಬಡವರ,ದೀನದಲಿತರ ಅನಾಥರ ಪರವಾಗಿ ಇದ್ದು ಭೂರಹಿತರಿಗೆ ಭೂಮಿಯನ್ನು ಒದಗಿಸಿಕೊಟ್ಟಪಕ್ಷ. ಕರ್ನಾಟಕದಲ್ಲಿ ಜ್ಯಾರಿಗೆ ತಂದಿದ್ದ ಭೂಮಸೂದೆಯು ಇಡೀ ರಾಷ್ಟ್ರದಲ್ಲಿಯೇ ಒಂದು ಮಾದರಿ ಕಾರ್ಯಕ್ರಮವಾಗಿ ಹೊರಹೊಮ್ಮಿದೆ.
ಕರಾವಳಿ ಜಿಲ್ಲೆಯನ್ನು ಗಂಡುಮೆಟ್ಟಿದ ನೆಲವೆನ್ನುವುದಕ್ಕೆ ಸಮರ್ಥಿಸುತ್ತ , ನಾಲ್ಕುಬಾರಿ ದಾಳಿ ಮಾಡಿದ ಪೋರ್ಚುಗೀಸರನ್ನು ಬಡಿದೋಡಿಸುವಲ್ಲಿ ರಾಣಿ ಅಬ್ಬಕ್ಕ ಯಶಸ್ವೀಯಾಗುವುದರ ಹಿಂದೆ ಮೊಗವೀರರು ಮತ್ತು ಮುಸಲ್ಮಾನರುಗಳು ಆಕೆಯ ಸೈನಿಕರಾಗಿ ಹೋರಾಡಿದ್ದರು ಎಂದು ಮೈಾಲಿ ಹೇಳಿದರು. ಕಾರ್ಕಳದ ಶಾಸಕ ವಿ. ಸುನಿಲ್ ಕುಮಾರ್ ಅವರು ಸಾಮಾಜಿಕ ಜಾಲತಾಣದಲ್ಲಿ ಬರೆದಿದ್ದ ವಿಷಯಕ್ಕೆ ಉತ್ತರವಾಗಿ ಆ ಮಾತನ್ನು ಹೇಳಿದರು.
ಒಂದು ಕಾಲದಿಂದ ಇತ್ತೀಚಿನವರೆಗೆ ಉಡುಪಿ ಮಠ ಸಹಿತ ಎಲ್ಲ ಮಠ ಮಂದಿರದವರು ,ಧರ್ಮಸ್ಥಳದ ಹೆಗ್ಗಡೆಯವರು ಕೂಡ ಕಾಂಗ್ರೆಸ್ ಪಕ್ಷವನ್ನೆ ಬೆಂಬಲಿಸಿದವರು. ಅದನ್ನೆಲ್ಲ ನೆನಪಿಸಿಕೊಂಡು ನಾವೆಲ್ಲಿ ಎಡವಿದ್ದೇವೆ ,ಅವರುಗಳೆಲ್ಲ ಯಾಕೆ ಪಕ್ಷದಿಂದ ವಿಮುಖರಾದರು ಎನ್ನುವುದನ್ನು ಪರಾಮರ್ಶಿಸಬೇಕು ಎಂದು ಪಕ್ಷೀಯರಿಗೆ ಸಲಹೆ ನೀಡಿದರು.
ಡಿಕೆಶಿಯವರ ಇತ್ತೀಚಿನ ದೇವರ ದರ್ಶನ ಇತ್ಯಾದಿಗಳ ಬಗ್ಯೆ ಎದ್ದಿರುವ ಪುಕಾರುಗಳಿಗೆ ಉತ್ತರವೆನ್ನುವಂತೆ, ಡಿಕೆಶಿವಕುಮಾರ್ ಕೇವಲ ಒಬ್ಬ ಹಿಂದೂ ಮಾತ್ರವಲ್ಲ ಆತ ಈ ನೆಲದ ಮಗ ಎಂದು ಮೈಾಲಿ ವ್ಯಾಖ್ಯಾನಿಸಿದರು.
ತಾನು ಶಾಸಕನಾಗಿ ನಂತರ ಬೇರೆಬೇರೆ ಉನ್ನತ ಸ್ಥಾನಮಾನ ಪಡೆದಾಗಲೂ ಕಾರ್ಕಳದಲ್ಲಿ ಸನ್ಮಾನ ಕೇಳಿದ್ದಿಲ್ಲ, ಈ ಬಾರಿಯೂ ಬೇಡ ಎಂದು ಬ್ಲಾಕ್ ಅಧ್ಯಕ್ಷ ಶುಭದ ರಾವ್ ರಲ್ಲಿ ಮನವಿ ಮಾಡಿದ್ದೆ ಎಂದ ಮೈಾಲಿ ಕಾರ್ಯಕ್ರಮ ಆಯೋಜಿಸಿದವರಿಗೆ ಹೃತ್ಪೂರ್ವಕ ಅಭಿವಂದನೆಗೈದರು.
ಸುನಿಲ್ ಕುಮಾರ್ ವಿರುದ್ಧ ವಾಗ್ದಾಳಿ
ಕಾರ್ಕಳಕ್ಕೆ ಆಗಮಿಸುತ್ತಿರುವ ಡಿಕೆಶಿವಕುಮಾರ್ ಅವರಿಗೆ ಸ್ವಾಗತ ಹೇಳಿ ಕೆಲವೊಂದು ಪದಗಳಲ್ಲಿ ಅಭಿನಂದಿಸಿ ಜಾಲತಾಣದಲ್ಲಿ ಬರೆದಿದ್ದ ಕಾರ್ಕಳದ ಬಿಜೆಪಿ ಶಾಸಕ ವಿ. ಸುನಿಲ್ ಕುಮಾರ್ ಅವರನ್ನು ಮೈಾಲಿ ಮತ್ತು ಡಿಕೆಶಿವಕುಮಾರ್ ಬಹಳಷ್ಟು ಮಾತುಗಳಿಂದ ತರಾಟೆಗೆ ತೆಗೆದುಕೊಂಡರು. ಮೊದಲು ಬಿಜೆಪಿಯವರು ತಮ್ಮ ಮನೆಯನ್ನು ಸರಿಪಡಿಸಲಿ. ಸುನಿಲ್ ಕುಮಾರ್ ಅವರು ರಾಜ್ಯ ಪ್ರಧಾನಕಾರ್ಯದರ್ಶಿ ಹುದ್ದೆಗೆ ರಾಜೀನಾಮೆ ಯಾಕೆ ಕೊಟ್ಟಿದ್ದಾರೆ ಎನ್ನುವುದನ್ನು ಬಹಿರಂಗಪಡಿಸಬೇಕು. ಸುನಿಲ್ ಕುಮಾರ್ ಏನು ಮಾಡಿದ್ದಾರೆ ಎಂದು ಕೇಳುವುದಕ್ಕೆ ಕಾರ್ಕಳದಲ್ಲಿ ವೇದಿಕೆಯೊಂದನ್ನು ಮಾಡಬೇಕು , ಪ್ರಶ್ನೆ ಕೇಳುವುದಕ್ಕೆ ಕಾಂಗ್ರೆಸ್ಸಿನ ಕಾರ್ಯಕರ್ತ ಸುಧೀರ್ ಮರೋಳಿಯೇ ಸಾಕು ಎಂದರು.
ಸುಚೇತಾ ಶೆಟ್ಟಿ ಕೊಲೆಯಿಂದ ಪರಶುರಾಮನ ನಕಲಿ ಮೂರ್ತಿಯ ವರೆಗೆ…
ಹೆಬ್ರಿಯ ಸುಚೇತಾ ಶೆಟ್ಟಿ ಹತ್ಯೆ ಪ್ರಕರಣವನ್ನು ರಾಜಕೀಯ ಗಾಳವನ್ನಾಗಿ ದುರುಪಯೋಗ ಪಡಿಸಿ ಶಾಸಕರಾದ ಸುನೀಲ್ ಕುಮಾರ್ ಚುನಾವಣೆ ಸಂದರ್ಭದಲ್ಲಿ ನೀಡಿದ್ದ ಭರವಸೆ ಮರೆತಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದರೂ ಆರೋಪಿಗಳ ಪತ್ತೆಗೆ ಉತ್ಸುಕತೆ ತೋರದೇ ಹೋದುದರಿಂದ ಹೆಬ್ರಿ ಸುಚೇತಾ ಶೆಟ್ಟಿ ಹತ್ಯೆ ಪ್ರಕರಣದ ಆರೋಪಿಗಳು ಇನ್ನೂ ಪತ್ತೆಯಾಗಿಲ್ಲ ಎಂದು ಕಾಂಗ್ರೆಸ್ ಮುಖಂಡ ಮುನಿಯಾಲು ಉದಯಕುಮಾರ್ ಶೆಟ್ಟಿ ಆರೋಪಿಸಿದರು. ಹಿಂದುತ್ವವನ್ನೇ ಅರ್ಜೆಂಡಾವನ್ನಾಗಿ ಬಳಸಿಕೊಂಡು ಪರಶುರಾಮನ ನಕಲಿ ಮೂರ್ತಿಯನ್ನು ಸ್ಥಾಪಿಸಿ ಹಿಂದು ಶೃದ್ಧೆಗೆ ಚುಕ್ತಿ ತಂದಿದ್ದಾರೆ ಎಂದರು. ಕರಾವಳಿಯವರು ಉದ್ಯೋಗಕ್ಕಾಗಿ ದೂರದ ಊರುಗಳಿಗೆ ಹೋಗುತ್ತಿದ್ದಾರೆ. ಕರಾವಳಿ-ಮಲೆನಾಡು ಸಂಪರ್ಕ ಕೊಂಡಿಯಾದ ಅಗುಂಬೆ ಘಾಟಿಯ ರಸ್ತೆಯನ್ನು ವಿಸ್ತರಣೆಗೆ ಅನುವು ಮಾಡುವುದರಿಂದ ಕರಾವಳಿ-ಮಲೆನಾಡು ಹೆಬ್ಬಾಗಿಲು ತೆರೆಯುವಂತಾಗುತ್ತದೆ. ಆ ಮೂಲಕ ಔದ್ಯೋಗಿಕ ರಂಗ ಬೆಳವಣಿಗೆಗೆ ಪೂರಕವಾಗುತ್ತದೆ ಎಂದರು. ಪ್ರವಾಸೋದ್ಯಮ ನೆಪದಲ್ಲಿ ನಿರ್ಮಾಣವಾದ ಪರಶುರಾಮ ಥೀಂ ಪಾಕ್೯ ಅಭಿವೃದ್ಧಿಗೆ ಸರಕಾರ ಮುಂದಾಗಬೇಕೆಂಬ ಬೇಡಿಕೆಯನ್ನು ಸಾರ್ವಜನಿಕವಾಗಿ ಉಪಮುಖ್ಯಮಂತ್ರಿ ಮುಂದಿಟ್ಟರು.
ಮಾಜಿಸಚಿವರಾದ ಅಭಯಚಂದ್ರ ಜೈನ್, ವಿನಯಕುಮಾರ್ ಸೊರಕೆ, ರಮಾನಾಥ ರೈ,ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ, ವಿಧಾನ ಪರಿಷತ್ತ್ ಸದಸ್ಯರಾದ ಐವನ್ ಡಿ ಸೋಜಾ, ಮಂಜುನಾಥ ಭಂಡಾರಿ, ಮುಖಂಡರಾದ ಎಂ.ಎ .ಗಫೂರ್, ಮಿಥುನ್ ರೈ, ರಕ್ಷಿತ್ ಶಿವರಾಮ, ರಮೇಶ್ ಕಾಂಚನ್, ಕಿರಣ್ ಹೆಗ್ಡೆ, ಬಿಪಿನ್ ಚಂದ್ರ ಪಾಲ್ ನಕ್ರೆ, ಮುದ್ರಾಡಿ ಮಂಜುನಾಥ ಪೂಜಾರಿ, ಪದ್ಮರಾಜ್, ಸುರೇಂದ್ರ ಶೆಟ್ಟಿ, ಕಾರ್ಕಳ ಗ್ಯಾರೆಂಟಿ ಯೋಜನೆಯ ಅಧ್ಯಕ್ಷ ಅಜಿತ್ ಹೆಗ್ಡೆ, ಹೆಬ್ರಿ ಗ್ಯಾರೆಂಟಿ ಯೋಜನೆಯ ಅಧ್ಯಕ್ಷ ಶಂಕರ್ ಸೇರಿಗಾರ್, ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶುಭದರಾವ್, ಹೆಬ್ರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋಪಿನಾಥ ಭಟ್ ಮೊದಲಾದವರು ಉಪಸ್ಥಿತರಿದ್ದರು.
ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಸ್ವಾಗತಿಸಿದರೆ , ಕಾಂಗ್ರೆಸ್ ನಾಯಕ ಮುನಿಯಾಲು ಉದಯ ಕುಮಾರ್ ಶೆಟ್ಟಿ ಪ್ರಾಸ್ತಾವಿಕ ಭಾಷಣ ಮಾಡಿದರು.





































