

ಸ್ವರಾಜ್ಯ ಮೈದಾನದ ಪುರಸಭಾ ಮಾರುಕಟ್ಟೆ ಪ್ರದೇಶದಲ್ಲಿ ನಿನ್ನೆ, ಇಂದು ನಡೆಸಿದ ಸ್ವಚ್ಛತೆಗೆ ಮೊದಲಿನ ಸ್ಥಿತಿಯ ಫೋಟೋ…
ಅನಾಗರಿಕ ವರ್ತನೆಯಿಂದ ಪರಿಸರದ ಮೇಲೆ ದುಷ್ಪರಿಣಾಮ !
ವರದಿ: ರಾಯಿ ರಾಜಕುಮಾರ ಮೂಡುಬಿದಿರೆ
ಮೂಡುಬಿದಿರೆ : ಸ್ವಚ್ಚ, ಸುಂದರ ಮೂಡಬಿದಿರೆ ಕಲ್ಪನೆ ಸಕಾರಗೊಳಿಸುವ ನಿಟ್ಟಿನಲ್ಲಿ ಮೂಡಬಿದಿರೆಯ ಪುರಸಭೆಯು ಹಲವು ಯೋಜನೆಗಳನ್ನು ಹಮ್ಮಿಕೊಂಡಿದ್ದು, ಅವುಗಳನ್ನೆಲ್ಲ ಅನುಷ್ಠಾನಗೊಳಿಸುತ್ತಿರುವ ಹೊತ್ತಿನಲ್ಲಿಯೇ ಕೆಲವರು ಅನಾರಿಕ ವರ್ತನೆ ತೋರಿಸುತ್ತಿರುವುದರಿಂದ ಯೋಜನೆಗೆ ಒಂದಿಷ್ಟು ಹಿನ್ನಡೆ ಕಂಡಿದೆ.
ಸ್ವಚ್ಚ, ಸುಂದರ ಯೋಜನೆ ಯಶಸ್ಸುಗೊಳಿಸಬೇಕೆಂಬ ನಿಟ್ಟಿನಲ್ಲಿ ಜನಪ್ರತಿನಿಧಿಗಳು, ಅಧಿಕಾರಿಗಳು ಪ್ರಯತ್ನಿಸುತ್ತಿದ್ದಾರೆ. ಪೌರ ಕಾರ್ಮಿಕರು ದುಡಿದು ಇಡೀ ಪರಿಸರವನ್ನು ಸ್ವಚ್ಛವಾಗಿಡಲು ಪ್ರಯತ್ನಿಸುತ್ತಿರುತ್ತಾರೆ.
ಅಂಗಡಿ ಮುಂಗಟ್ಟುಗಳಿಂದ ಶೇಖರಣೆ ಗೊಳ್ಳುವ ಒಣ, ಹಸಿ ಸೇರಿದಂತೆ ಅಪಾಯಕಾರಿ ತ್ಯಾಜ್ಯವನ್ನು ಬೇರ್ಪಡಿಸಿ ಪುರಸಭೆ ತ್ಯಾಜ್ಯ ಸಂಗ್ರಹದ ವಾಹನಕ್ಕೆ ನೀಡಬೇಕಾಗಿರುವುದು ಕಡ್ಡಾಯವಾಗಿದ್ದರೂ ಕೆಲವರು ಅದನ್ನು ಪರಿಪಾಲಿಸುವುದೇ ಇಲ್ಲ.
ಕೇವಲ ಲಾಭವನ್ನು ದೃಷ್ಟಿಕೋನದಲ್ಲಿ ಇಟ್ಟುಕೊಳ್ಳುವ ಕೆಲ ವ್ಯಾಪಾರಸ್ಥರು ವ್ಯಾಪಾರ ಕೇಂದ್ರದ ಪರಿಸರದಲ್ಲಿ ತ್ಯಾಜ್ಯ ಎಸೆದು ಪರಿಸರದ ಮೇಲೆ ದುಷ್ಪರಿಣಾಮ ಬೀರುವಂತೆ ಮಾಡುತ್ತಿದ್ದಾರೆ.ಸ್ವರಾಜ್ಯ ಮೈದಾನದ ಪರಿಸರದಲ್ಲಿ ತಾತ್ಕಾಲಿಕವಾಗಿ ಇರುವ ಪುರಸಭಾ ಮಾರುಕಟ್ಟೆ ಪ್ರದೇಶದಲ್ಲಿ ಸ್ವಚ್ಚತೆಗೆ ಕಿಮ್ಮತ್ತು ಇಲ್ಲ. ಪರಿಣಾಮವಾಗಿ ಆ ಪ್ರದೇಶದಲ್ಲಿ ಸಾಂಕ್ರಾಮಿಕ ರೋಗಾಣುಗಳ ಉತ್ಪಾದನೆಯ ತಾಣವಾಗಿ ಮಾರ್ಪಟ್ಟಿದೆ.

ಪ್ರಜ್ಞಾವಂತ ನಾಗರಿಕರಿಂದ ದೂರು ಬಂದ ಹಿನ್ನಲ್ಲೆಯಲ್ಲಿ ಸ್ವರಾಜ್ಯ ಮೈದಾನ ಪರಿಸರದಲ್ಲಿ ಸ್ವಚ್ಚತೆ ಕಾಪಾಡುವ ಪ್ರಯತ್ನ ನಡೆದಿದೆ.
ಸಾರ್ವಜನಿಕ ಜಾಗದಲ್ಲಿ ತ್ಯಾಜ್ಯ ಎಸೆಯುವವರ ವಿರುದ್ಧ ದಂಡ ಪ್ರಯೋಗಕ್ಕೆ ಮೂಡಬಿದಿರೆ ಪುರಸಭೆ ಆಡಳಿತ ವರ್ಗ ಮುಂದಾಗಿದೆ ಎಂದು ತಿಳಿದುಬಂದಿದೆ.














