10 ವರ್ಷಗಳ ಹಿಂದೆ ಕಾಣೆಯಾದ ಮಹಿಳೆಯ ಪತ್ತೆ
ಪಡುಬಿದ್ರಿ ಪೊಲೀಸ್ ಠಾಣಾ ಅ.ಕ್ರ 67/2014 ಕಲಂ ಹೆಂಗಸು ಕಾಣೆ.
ಪಡುಬಿದ್ರಿ: 2014 ಜೂನ್ 25ರಂದು ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಪಲಿಮಾರು ಎಂಬಲ್ಲಿ ವಾಸವಾಗಿದ್ದ ಶ್ರುತಿ ಶೆಟ್ಟಿ ಎಂಬವರು ತನ್ನ ಅಜ್ಜಿ ಮನೆಗೆ ಹೋಗಿ ಬರುತ್ತೇನೆ ಎಂದು ಹೇಳಿ ಹೋದವರು ಬಳಿಕ ಮನೆಗೆ ಬಾರದೆ ಕಾಣೆಯಾಗಿದ್ದರು.
ಈ ಬಗ್ಗೆ ಅವರ ಗಂಡ ಶಂಕರ ಶೆಟ್ಟಿ ಎಂಬವರು ಪಡುಬಿದ್ರೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿ ಪ್ರಕರಣ ದಾಖಲಾಗಿತ್ತು.
ಬಳಿಕ ತನಿಖೆ ನಡೆಸಿ ಕಾಣೆಯಾದ ಮಹಿಳೆ ಪತ್ತೆಯಾಗದೆ ಇದ್ದುದರಿಂದ ಸದರಿ ಪ್ರಕರಣದ ಕಡತವನ್ನು 2016 ಜನವರಿ 30 ರಂದು ನಿಶ್ಚಲ ಕಡತದಲ್ಲಿ ಇರಿಸಲಾಗಿತ್ತು.
ಸದರಿ ಪ್ರಕರಣದಲ್ಲಿ ಕಾಣೆಯಾದ ಮಹಿಳೆ ಶ್ರುತಿ ಶೆಟ್ಟಿ ರವರ ಪತ್ತೆಯ ಬಗ್ಗೆ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಆದೇಶದಂತೆ ಪಡುಬಿದ್ರಿ ಪೊಲೀಸ್ ಠಾಣಾ ಪಿಎಸ್ಐ ಪ್ರಸನ್ನ ಎಂ ಎಸ್ ರವರ ನಿರ್ದೇಶನದಂತೆ ಠಾಣಾ ಎಎಸ್ಐ ರಾಜೇಶ್ ಪಿ ಮತ್ತು ಹೆಡ್ ಕಾನ್ಸ್ಟೇಬಲ್ ದೇವರಾಜ್ ರವರು ಕಾಣೆಯಾದ ಮಹಿಳೆ ಶ್ರುತಿ ಶೆಟ್ಟಿ ರವರು ಪತ್ತೆ ಹಚ್ಚಿದ್ದಾರೆ.
ಬೆಂಗಳೂರಿನಲ್ಲಿ ವಾಸವಾಗಿರುವ ಬಗ್ಗೆ ಮಾಹಿತಿ ಸಂಗ್ರಹಿಸಿ ಬೆಂಗಳೂರಿನ ವರ್ತೂರು ಎಂಬಲ್ಲಿಗೆ ತೆರಳಿದ ಪಡುಬಿದ್ರಿ ಪೊಲೀಸರು, ವರ್ತೂರು ಪೊಲೀಸ್ ಠಾಣಾ ಮಹಿಳಾ ಸಿಬ್ಬಂದಿ ರವರೊಂದಿಗೆ ಶ್ರುತಿ ಶೆಟ್ಟಿ ರವರನ್ನು ಪತ್ತೆಮಾಡಿದ್ದಾರೆ.
ದೂರುದಾರರಾದ ಶಂಕರ್ ಶೆಟ್ಟಿ ಅವರನ್ನು ಠಾಣೆಗೆ ಕರೆಸಿ ಕಾಣೆಯಾದ ಶ್ರುತಿ ಶೆಟ್ಟಿ ರವರ ಭಾವಚಿತ್ರವನ್ನು ತೋರಿಸಲಾಗಿದ್ದು, ಭಾವಚಿತ್ರದಲ್ಲಿರುವ ಮಹಿಳೆಯು ತನ್ನ ಹೆಂಡತಿ ಶೃತಿ ಶೆಟ್ಟಿ ಆಗಿರುವುದಾಗಿ ಗುರುತಿಸಿರುತ್ತಾರೆ.
ನನ್ನ ಹೆಂಡತಿ ಶೃತಿ ಶೆಟ್ಟಿ ಪತ್ತೆಯಾಗಿರುವುದರಿಂದ ಈ ಬಗ್ಗೆ ತಾನು ನೀಡಿದ ದೂರಿನಂತೆ ದಾಖಲಾದ ಪ್ರಕರಣವನ್ನು ಮುಕ್ತಾಯಗೊಳಿಸಬೇಕಾಗಿ ಹೇಳಿಕೆಯನ್ನು ನೀಡಿದ ಮೇರೆಗೆ ಪ್ರಕರಣವನ್ನು ಮುಕ್ತಾಯಗೊಳಿಸಲಾಗಿದೆ.





















