ಹೊಸ್ಮಾರಿನಲ್ಲಿ ಮಾಯವಾದ ಬಸ್ ತಂಗುದಾಣ!

ಕಾರ್ಕಳ : ಗುರುವಾಯನಕೆರೆ -ನಾರಾವಿ ಮಾರ್ಗವಾಗಿ ಕಾರ್ಕಳ,ಶೃಂಗೇರಿಗೆ ಹೋಗುವಾಗ ಹೊಸ್ಮಾರು ಊರು ಸಿಗುವುದು.
ಸುಮಾರು ಮೂವತ್ತು ವರ್ಷಗಳ ಹಿಂದೆ ಅಲ್ಲೊಂದು ಪ್ರಯಾಣಿಕರ ತಂಗುದಾಣವಿತ್ತು. ಯಾರೇ ಆಗಿರಲಿ ಅದರ ಪ್ರಯೋಜನ ಪಡೆಯುತ್ತಲಿದ್ದರು.
ಹೊಸ್ಮಾರು ಪೇಟೆ ಎಷ್ಟು ಬೆಳೆದಿದೆ ಎಂದರೆ ಅಲ್ಲಿ ಒಂದು ಪ್ರಯಾಣಿಕರ ತಂಗುದಾಣ ನಿರ್ಮಾಣಕ್ಕೂ ಸ್ಥಳಾವಕಾಶವಿಲ್ಲ! ರಸ್ತೆ ಬದಿಯಲ್ಲೆ ನಿಂತು ಕಾಯಬೇಕು, ರಸ್ತೆಯನ್ನು ದಾಟುವುದಾದರೆ ಆತ/ಆಕೆ ಗೊತ್ತಿರುವ ದೇವರು,ದೈವಗಳೆಲ್ಲದರ ಸ್ಮರಣೆ ಮಾಡಿಯಾಗಿಯೇ ದಾಟಬೇಕು. ಅಷ್ಟು ಸಂಖ್ಯೆಗಳಲ್ಲಿ ವಾಹನಗಳು ಓಡಾಡುತ್ತಿರುತ್ತವೆ. ಇನ್ನೊಂದು ಮುಖ್ಯ ಕಾರಣ ಉಡುಪಿಯಿಂದ ಕಾರ್ಕಳ ಮಾರ್ಗವಾಗಿ ಧರ್ಮಸ್ಥಳಕ್ಕೆ ಇದುವೇ ಮಾರ್ಗ. ಈ ರಸ್ತೆಯಲ್ಲಿ ಪ್ರತೀ ಏಳು ನಿಮಿಷಕ್ಕೊಂದರಂತೆ ಬಸ್ಸು ಓಡಾಡುತ್ತಿರುವುದು.
ಹೊಸ್ಮಾರು ಅದು ಈದು ಗ್ರಾಮ ಪಂಚಾಯತುಗೆ ಸೇರಿದ್ದಾಗಿರುತ್ತದೆ. ಕಾಂಗ್ರೆಸ್,ಬಿಜೆಪಿಯ ಬಲಾಢ್ಯ ನಾಯಕರು,ಸಂಘಟಕರೇ ತುಳುಕುತ್ತಿದ್ದಾರಾದರೂ ಬಸ್ ಪ್ರಯಾಣಿಕರಿಗಾಗಿ ನಿಲ್ದಾಣ ನಿರ್ಮಿಸಲಿಲ್ಲ. ಆ ಪ್ರಜ್ಞೆ ಇನ್ನೂ ಕೂಡಾ ಚಿಗರೊಡೆಯಲಿಲ್ಲವೆನ್ನಲೇಬೇಕು.
ಬಸ್ ನಿಲ್ದಾಣವಿದ್ದ ಜಾಗ ಈಗ ಗುರುತಿಗೂ ಸಿಗದಂತಾಗಿದೆ.ಕೇರಳದ ಖ್ಯಾತ ಪೊದುವಾಳರವರು ಬಂದು ಹುಡುಕಿ ತೊರಿಸಬೇಕಷ್ಟೆ. ನಾಯಕರುಗಳ ಡೊಂಕು ಬಾಲದ ಕಾರಣವೇ ಇಂಥ ಸೌಲಭ್ಯ ವಂಚನೆಗೆ ಕಾರಣವಾಗುವುದು.
ದೂರದ ಹೊಟೇಲು ಎದುರಾಗಲಿ,ಅಂಗಡಿ ಮೆಟ್ಟಿಲೆದುರಾಗಲಿ ನಿಂತರೂ ಅವಸರದ ಬಸ್ಸುಗಳ ಸಮೀಪಕ್ಕೆ ಧಾವಿಸುವುದೇ ಹರಸಾಹಸವಾಗುತ್ತದೆ.
ಇನ್ನೊಂದು ಮುಖ್ಯ ಸಮಸ್ಯೆಯೆಂದರೆ ಪಿಡಬ್ಲ್ಯೂಡಿ ರಸ್ತೆಯ ಒಡೆತನ ನಮಗೇ ಎಂದು ಸಾಧಿಸಿಕೊಳ್ಳುವ ರಿಕ್ಷಾ ಮತ್ತು ಇತರ ಬಾಡಿಗೆ ವಾಹನಗಳು. ನಡೆದಾಡುವವರಿಗೆ ಜಾಗವೇ ಇಲ್ಲ! ರಸ್ತೆಯಲ್ಲಿ ಓಡುವ ವಾಹನದ ಅದೃಷ್ಟ ಮತ್ತು ಪಾದಾಚಾರಿಯ ಆಯುಷ್ಯ ಮಾತ್ರವೇ ಕಾಪಾಡುವುದು.
ಅಲ್ಲೊಂದು ವೃತ್ತ ನಿರ್ಮಿಸಿದ್ದಾರೆ. ವಾಹನಗಳು ಅಷ್ಟಕ್ಕಾದರೂ ಎಡ ಬಲವನ್ನು ಕ್ರಮಿಸಿಕೊಳ್ಳಲಿ ಎಂದು. ಬಸ್ ಪ್ರಯಾಣಿಕರು ಅದರೊಳಗೇ ಮುದುಡಿ ಕುಳಿತು ಬಸ್ ಕಾಯುವ ಪರಿಸ್ಥಿತಿ ಹೊಸ್ಮಾರಿನಲ್ಲಿ ಉಂಟಾಗಿದೆ.












