ಮಾಹಿತಿ ಹಕ್ಕು ಕಾರ್ಯಕರ್ತರದ್ದು ಅಡ್ಡ ವ್ಯವಹಾರ ಎಂದು ಬರೆದು ಇಬ್ಬರಿಗೆ ಜಾಮೀನು ನಿರಾಕರಿಸಿದ ಭಾರತದ ಸರ್ವೋಚ್ಚ ನ್ಯಾಯಾಲವು ನಮ್ಮ ರಾಜ್ಯದ ಅರಣ್ಯ ಇಲಾಖೆಯವರೂ ಆ ವ್ಯವಹಾರಕ್ಕೆ ಹೊರತಾದವರಲ್ಲ ಅಂತೇನಾದರೂ ಹೇಳಿದರೆ ಅದು ಸುವರ್ಣಾಕ್ಷರಗಳ ಆದೇಶವಾಗಬಹುದು.
ಕಾಡು ಸಿಗಿದು ರಸ್ತೆ ಮಾಡುವುದಕ್ಕೆ ಅನುಮತಿ ಕೊಡುವುದೂ ಅರಣ್ಯ ಇಲಾಖೆ! ಡಾಮಾರು ಅಂಟಿಸುವಾಗ ಇಲಾಖೆಯ ಆಕ್ಷೇಪಣಾ ಪತ್ರದೊಡನೆ ರಸ್ತೆಗಡ್ಡ ಮಲಗುವುದೂ ಅದೇ ಇಲಾಖೆ! ಕಾಡಿನೊಳಗೆ ವಿಹಾರ,ಕುಡಿತ ಮೇಜವಾನಿಯ ಸುಂದರ ಕಟ್ಟಡಕ್ಕೆ ನಿರಕ್ಷೇಪಣಾ ಪತ್ರ ಕೊಡುವುದೂ ಮತ್ತು ಜಿಂಕೆ ಮಾಂಸವನ್ನು ಕುಕ್ಕರಿಂದಲೇ ವಶಪಡಿಸಿಕೊಳ್ಳುವುದೂ ಅದೇ ಇಲಾಖೆ ಎಲ್ಲ ರೀತಿಯ #ಧಾರಾಳತನುಮನಧನದ ಇಲಾಖೆಯೆಂದರೆ ಅರಣ್ಯ ಇಲಾಖೆ ಮಾತ್ರ! ಅರಣ್ಯ ಇಲಾಖೆಯ ಬಗ್ಗೆ ಬರೆದಷ್ಟೂ ಇದೆ.ಅದೊಂದು ಖಾಕಿಯಲ್ಲಡಗಿರುವ #ಕೃತಕಹಸಿರು!!
ಕಾರ್ಕಳ ವಿಧಾನಸಭಾ ಕ್ಷೇತ್ರದ ಹೆಬ್ರಿ ತಾಲೂಕು ,ಅದು ಈಗ ಎತ್ತರಕ್ಕೆ ಬೆಳೆದಿದ್ದರೂ ಅಡ್ಡ ಅಗಲಕ್ಕೆ ಬೆಳೆಯಲು ಅರಣ್ಯ ಇಲಾಖೆ ಬಿಡುತ್ತಿಲ್ಲ. ಅನೇಕವುಗಳಲ್ಲಿ ಒಂದು ಚಿಕ್ಕ ಉದಾಹರಣೆ ಕುಚ್ಚೂರು ರಸ್ತೆಗೆ ಡಾಮರೀಕರಣ ಮಾಡದಂತೆ ಘನವಾದ ಅಡ್ಡಿ ಆಕ್ಷೇಪಣೆ ಮಾಡಿದ್ದು.
ಹೆಬ್ರಿ -ಕಾರ್ಕಳ ರಾಜ್ಯ ಹೆದ್ದಾರಿ ನಿರ್ಮಾಣಕ್ಕೋಸ್ಕರ ರಸ್ತೆ ಅಗಲೀಕರಣದ ಕಾರಣಕ್ಕಾಗಿ ಹಳೆಯ ಪೊಲೀಸ್ ಠಾಣಾ ಕಟ್ಟಡವನ್ನು ತೆರವುಗೊಳಿಸಬೇಕಾಗುವುದರಿಂದ ಹೊಸ ಕಟ್ಟಡ ನಿರ್ಮಾಣಕ್ಕೆ ಸರಕಾರ ಜಾಗ ಹುಡುಕುವುದಕ್ಕೆ ಅನುಮತಿ ಕೊಟ್ಟಿತ್ತು. ಪೊಲೀಸ್ ಇಲಾಖೆಯೂ ಕೂಡ ಆ ಜವಾಬ್ದಾರಿಯನ್ನು ತೆಗೆದುಕೊಂಡು ಜಾಗ ಗುರುತು ಮಾಡಿಕೊಂಡದ್ದು ಅರಣ್ಯ ಇಲಾಖೆಯವರ ಕಾದಿಟ್ಟ ಅರಣ್ಯ ಪ್ರದೇಶದಲ್ಲಿಯೆ! ಶಾಸಕರಿಗೆ ಬೇಸರವಾಗದಿರಲಿ,ಆಗಿನ ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ಬೇಸರವಾಗದಿರಲಿ, ಸರಕಾರದ ಗೃಹ ಇಲಾಖೆಗೆ ಬೇಸರವಾಗದಿರಲಿ ಹಾಗೆ ಯಾರಿಗೂ ಮುನಿಸು ಬಾರದಿರಲಿ ಎಂದೋ ,ಏನೊ ಅರಣ್ಯ ಇಲಾಖೆಯು ತನ್ನ ಸುಪರ್ಧಿಯ ಜಾಗದಲ್ಲಿ ಹೆಬ್ರಿ ಪೊಲೀಸ್ ಠಾಣಾ ಕಟ್ಟಡ ನಿರ್ಮಾಣಕ್ಕೆ ಅನುಮತಿ ಕೊಟ್ಟಿದೆ. ಮುಖ್ಯ ರಸ್ತೆಯಿಂದ ಸುಮಾರು ಅರ್ಧ ಕಿಲೋಮೀಟರ್ ದೂರದಲ್ಲಿರುವ ಹೆಬ್ರಿ ಪೊಲೀಸ್ ಠಾಣೆಗೆ ಸರಿಯಾದ ಮಾರ್ಗ ರಚನೆಯಾಗಿಲ್ಲ! ಇದ್ದ ಬಿರುಕು ರಸ್ತೆಗೆ ಗ್ರಾಮ ಪಂಚಾಯತಿನವರ ದಾರಿದೀಪ ಅಳವಡಿಸುವಂತಿಲ್ಲ! ಇನ್ನು ಪೊಲೀಸ್ ಠಾಣೆಯೊಳಗೆ ವಿದ್ಯುತ್ ದೀಪ ಉರಿಸುವುದರಿಂದ ಕಾಡುಪ್ರಾಣಿಗಳು ಭಯಭೀತರಾಗುತ್ತವೆ ಅಂತೇನಾದರೂ ಅರಣ್ಯ ಇಲಾಖೆ ಆದೇಶ ಮಾಡಿದ್ದಿದ್ದರೆ ಪೊಲೀಸರು ಸೀಮೆ ಎಣ್ಣೆಯ ಚಿಮಿಣಿ ಹಚ್ಚಿಟ್ಟುಕೊಂಡು ಇಸ್ಪೀಟು ಎಲೆಯಾಟವನ್ನೇ ಆಡುತ್ತ ಸಂತೋಷಪಡುತ್ತಿರಬೇಕಿತ್ತೋ ಎಂಬುದನ್ನು ಪೆರ್ಡೂರಿನ ಅನಂತಪದ್ಮನಾಭ ಸ್ವಾಮಿಯೇ ಹೇಳಬೇಕಷ್ಟೆ “ಬೆಟ್ಟದ ಮೇಲೊಂದು ಮನೆಯ ಮಾಡಿ ಮೃಘಗಳಿಗಂಜಿದೊಡೆಂತಯ್ಯ..” ಅಕ್ಕ ಮಹಾದೇವಿಯ ವಚನದ ಸಾಲೊಂದನ್ನು ಅಲ್ಲಿನ ಪೊಲೀಸರು ಪಠಿಸಲೇಬೇಕು! ಅವರಲ್ಲಿ ಗನ್ನು,ರೈಫಲ್ ಇದ್ದೂ ರಾತ್ರಿ ಸೊಳ್ಳೆ ಕಾಟ,ಚೇಳು ಕಾಟ, ಹಾವಿನ ಕಾಟ ಅಂತ ಹೇಳುತ್ತಾರೆ! ನಾಶ ಮಾಡುವುದೂ ಅರಣ್ಯ ಕಾಯ್ದೆ ಪ್ರಕಾರ ಘೋರ ಅಪರಾಧ. ಅವರು ಹೇಗೂ ಇರಲಿ,ಹೇಗಾದರೂ ಇರುತ್ತಾರೆ! ಆದರೆ ನಾಗರಿಕರು ಠಾಣೆಗೆ ಅಗತ್ಯ ಹೋಗುವುದಾದರೆ ಸರಿಯಾದ ರಸ್ತೆ ನಿರ್ಮಾಣವಾಗಿಲ್ಲ, ರಸ್ತೆ ದೀಪ ಇಲ್ಲ ಎಂದು ಅಲ್ಲಿನ ಸಾಮಾಜಿಕ ಕಾರ್ಯಕರ್ತ,ಜೆ. ಡಿ. ಎಸ್. ಪಕ್ಷದ ಹೆಬ್ರಿ ತಾಲೂಕು ಅಧ್ಯಕ್ಷ ಶ್ರೀಕಾಂತ್ ಪೂಜಾರಿ ಕುಚ್ಚೂರು ಅವರು ಬೇಸರವ್ಯಕ್ತಪಡಿಸುತ್ತಿರುತ್ತಾರೆ. ಸರಕಾರದ ನೀತಿಯನ್ನು ಪ್ರತಿಭಟಿಸುತ್ತಿರುತ್ತಾರೆ. ಕಾಡೊಳಗಿರಬೇಕಾದ ಅರಣ್ಯಾಧಿಕಾರಿ ಕಚೇರಿ ಹೆದ್ದಾರಿ ಬದಿಯಲ್ಲೇ ಬೆಳೆದು ನಿಂತಿದ್ದು ಹೆದ್ದಾರಿ ಬದಿಯಲ್ಲಿ ಅಥವಾ ಕಂದಾಯ ಭೂಮಿಯಲ್ಲಿ ಇರಬೇಕಾಗಿದ್ದ ಆರಕ್ಷಕ ಠಾಣೆ ಕಾಡೊಳಗೆ ಕನಸು ಕಾಣುತ್ತಿರುವುದು ನಮ್ಮ ಆಡಳಿತ ವ್ಯವಸ್ಥೆಯನ್ನು ಹಾಳುಮಾಡುವ ಅಧಿಕಾರಿ ವರ್ಗದವರ ನಿರ್ಲಕ್ಷ್ಯ ಮತ್ತು ಬೇಜವಾಬ್ದಾರಿಗಳು. ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರು ಆ ಕುರಿತಾಗಿ ಸರಿಯಾದ ವಿವರಣೆಗಳನ್ನು ಸರಕಾರಕ್ಕೆ ಕೊಡುವುದರ ಮೂಲಕ ಹೆಬ್ರಿ ಪೊಲೀಸ್ ಠಾಣೆಯ ರಸ್ತೆ ಮತ್ತು ದೀಪಕ್ಕೆ ವ್ಯವಸ್ಥೆ ಮಾಡಿಸುವುದು ಅತ್ಯಂತ ಯೋಗ್ಯವೆನ್ನಬಹುದಾಗುತ್ತದೆ.