ಹೆಬ್ರಿಯಲ್ಲಿ ಸರ್ಕಾರಿ ವ್ಯವಸ್ಥೆಯ ಅವ್ಯವಸ್ಥೆ ವಿರುದ್ಧ ನ.5ರಂದು ಬೃಹತ್ ಪ್ರತಿಭಟನೆ
RB NEWS
Bureau Report
ಹೆಬ್ರಿಯಲ್ಲಿ ಸರ್ಕಾರಿ ವ್ಯವಸ್ಥೆಯ ಅವ್ಯವಸ್ಥೆ ವಿರುದ್ಧ ನ.5ರಂದು ಬೃಹತ್ ಪ್ರತಿಭಟನೆ
15 ಪ್ರಮುಖ ಬೇಡಿಕೆಗಳ ಈಡೇರಿಕೆಗೆ ಆಗ್ರಹ – ಜಿಲ್ಲಾಧಿಕಾರಿ ಅಥವಾ ಜಿಲ್ಲಾ ಉಸ್ತುವಾರಿ ಸಚಿವರು ಸ್ಥಳಕ್ಕೆ ಬರುವಂತೆ ಒತ್ತಾಯ
ಹೆಬ್ರಿ: ತಾಲೂಕಿನಲ್ಲಿ ಸರ್ಕಾರಿ ವ್ಯವಸ್ಥೆಯಲ್ಲಿನ ಅವ್ಯವಸ್ಥೆ, ವಿವಿಧ ಇಲಾಖೆಗಳಲ್ಲಿನ ಅಧಿಕಾರಿಗಳು ಮತ್ತು ಸಿಬ್ಬಂದಿ ಕೊರತೆ, ಸಾರ್ವಜನಿಕರ ಸಮಸ್ಯೆಗಳ ನಿರ್ಲಕ್ಷ್ಯ ಹಾಗೂ ಅಭಿವೃದ್ಧಿ ಕಾಮಗಾರಿಗಳ ವಿಳಂಬವನ್ನು ಖಂಡಿಸಿ ನವೆಂಬರ್ 5ರಂದು ಬೃಹತ್ ಸಾರ್ವಜನಿಕ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.
ಗುರುವಾರ ಬೆಳಿಗ್ಗೆ 10 ಗಂಟೆಗೆ ಹೆಬ್ರಿ ಸರ್ಕಲ್ನಲ್ಲಿ ಪ್ರತಿಭಟನೆ ನಡೆಯಲಿದ್ದು, ಹೆಬ್ರಿ ತಾಲೂಕಿನ 15 ಪ್ರಮುಖ ಸಮಸ್ಯೆಗಳ ಪರಿಹಾರಕ್ಕೆ ಹೋರಾಟಗಾರರು ಆಗ್ರಹಿಸಲಿದ್ದಾರೆ. ಪ್ರತಿಭಟನಾ ಸ್ಥಳಕ್ಕೆ ಜಿಲ್ಲಾಧಿಕಾರಿಗಳು ಅಥವಾ ಜಿಲ್ಲಾ ಉಸ್ತುವಾರಿ ಸಚಿವರು ಆಗಮಿಸಿ ಸಮಸ್ಯೆಗಳನ್ನು ಆಲಿಸಿ, ಸ್ಥಳದಲ್ಲೇ ಪರಿಹಾರಕ್ಕೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಲಾಗಿದೆ.
15 ಪ್ರಮುಖ ಬೇಡಿಕೆಗಳು
ಹೆಬ್ರಿಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸಮರ್ಪಕ ವೈದ್ಯಕೀಯ ಸೌಲಭ್ಯಗಳು ಹಾಗೂ ಅಗತ್ಯ ಚಿಕಿತ್ಸೆ ಲಭ್ಯವಾಗದೆ ಸಾರ್ವಜನಿಕರು ಪರದಾಡುವಂತಾಗಿದೆ. ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಿ ಅಗತ್ಯ ವೈದ್ಯಕೀಯ ವ್ಯವಸ್ಥೆ ಕಲ್ಪಿಸಬೇಕು ಎಂಬುದು ಪ್ರಮುಖ ಬೇಡಿಕೆಯಾಗಿದೆ.
ತಾಲೂಕು ಕಚೇರಿ, ತಾಲೂಕು ಪಂಚಾಯತ್, ಗ್ರಾಮ ಪಂಚಾಯತ್ ಹಾಗೂ ಗ್ರಾಮ ಆಡಳಿತಾಧಿಕಾರಿಗಳ ಕಚೇರಿಗಳಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿ ಕೊರತೆಯಿಂದ ಸಾರ್ವಜನಿಕರ ಕೆಲಸಗಳು ವಿಳಂಬವಾಗುತ್ತಿವೆ. ಕೂಡಲೇ ಖಾಲಿ ಹುದ್ದೆಗಳನ್ನು ಭರ್ತಿ ಮಾಡಬೇಕು ಎಂದು ಒತ್ತಾಯಿಸಲಾಗಿದೆ.
ತಾಲೂಕು ಪಂಚಾಯತ್ ವ್ಯಾಪ್ತಿಯ ಎಂಆರ್ಎಫ್ ಘಟಕಕ್ಕೆ ಬೆಂಕಿ ಬಿದ್ದು ಅಪಾರ ನಷ್ಟ ಸಂಭವಿಸಿದ್ದರೂ, ಸೂಕ್ತ ತನಿಖೆ ನಡೆಸದೆ ಕಾಟಾಚಾರದ ವರದಿ ಸಲ್ಲಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಘಟಕವನ್ನು ಪುನರಾರಂಭಿಸದೆ ಇರುವುದರಿಂದ ಹೆಬ್ರಿ ಸುತ್ತಮುತ್ತ ಕಸದ ಸಮಸ್ಯೆ ಹೆಚ್ಚಾಗಿದ್ದು, ಕೂಡಲೇ ಘಟಕವನ್ನು ಕಾರ್ಯಾರಂಭಗೊಳಿಸಬೇಕು ಎಂದು ಆಗ್ರಹಿಸಲಾಗಿದೆ.
ಹೆಬ್ರಿ ಅಂಚೆ ಕಚೇರಿಗೆ ಸ್ವಂತ ನಿವೇಶನವಿದ್ದರೂ ಖಾಸಗಿ ಕಟ್ಟಡದ ಎರಡನೇ ಮಹಡಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ವಯೋವೃದ್ಧರು ಹಾಗೂ ಅನಾರೋಗ್ಯ ಪೀಡಿತರಿಗೆ ಮೆಟ್ಟಿಲು ಹತ್ತಿ ಹೋಗುವುದು ಕಷ್ಟವಾಗಿರುವುದರಿಂದ ಸ್ವಂತ ನಿವೇಶನದಲ್ಲಿ ಶೀಘ್ರ ಕಟ್ಟಡ ನಿರ್ಮಿಸಿ ಅಂಚೆ ಕಚೇರಿಯನ್ನು ಸ್ಥಳಾಂತರಿಸಬೇಕು ಎಂದು ಒತ್ತಾಯಿಸಲಾಗಿದೆ.
ತಾಲೂಕು ಕಚೇರಿ ಅಥವಾ ತಾಲೂಕು ಪಂಚಾಯತ್ನಲ್ಲಿ ಶಾಶ್ವತ ಆಧಾರ್ ನೋಂದಣಿ ಮತ್ತು ತಿದ್ದುಪಡಿ ಕೇಂದ್ರ ಆರಂಭಿಸಬೇಕು. ಹೆಬ್ರಿ ಪೇಟೆಯಲ್ಲಿ ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲದೆ ಸಣ್ಣ ಮಳೆಯಾದರೂ ರಸ್ತೆಗಳು ಜಲಾವೃತಗೊಳ್ಳುತ್ತಿದ್ದು, ಶಾಲಾ ಮಕ್ಕಳು ಮತ್ತು ಸಾರ್ವಜನಿಕರು ಎದುರಿಸುತ್ತಿರುವ ಸಮಸ್ಯೆಗೆ ಪರಿಹಾರ ಕಲ್ಪಿಸಬೇಕು ಎಂಬ ಬೇಡಿಕೆಯೂ ಇದೆ.
ಕಸ್ತೂರಿರಂಗನ್ ವರದಿಗೆ ಸಂಬಂಧಿಸಿದಂತೆ ಗ್ರಾಮಮಟ್ಟದಲ್ಲಿ ಸಭೆ ನಡೆಸಿ ಜನರ ಅಹವಾಲುಗಳನ್ನು ಸಂಗ್ರಹಿಸಿ ಸರ್ಕಾರಕ್ಕೆ ವರದಿ ಸಲ್ಲಿಸಬೇಕು. 169ಎ ರಾಷ್ಟ್ರೀಯ ಹೆದ್ದಾರಿ ಹೆಬ್ರಿ ಪೇಟೆಯ ಮಧ್ಯೆ ಹಾದುಹೋಗುವುದರಿಂದ ಶಾಲಾ ಮಕ್ಕಳು, ವಾಹನ ಸವಾರರು ಹಾಗೂ ನಾಗರಿಕರಿಗೆ ಉಂಟಾಗುತ್ತಿರುವ ತೊಂದರೆ ನಿವಾರಿಸಲು ರಸ್ತೆ ಅಗಲೀಕರಣ ಮಾಡಬೇಕು ಎಂದು ಆಗ್ರಹಿಸಲಾಗಿದೆ.
ಹೆಬ್ರಿ ಸರ್ಕಾರಿ ಬಸ್ ನಿಲ್ದಾಣದ ಕಾಮಗಾರಿ ಸುಮಾರು ನಾಲ್ಕು ವರ್ಷಗಳಿಂದ ನಿಧಾನಗತಿಯಲ್ಲಿ ಸಾಗುತ್ತಿದ್ದು, ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಿ ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸಬೇಕು. ಅಕ್ರಮ-ಸಕ್ರಮ ಯೋಜನೆಯ 94ಸಿ ಹಾಗೂ 57ರ ಅರ್ಜಿಗಳು ವಿಲೇವಾರಿಯಾಗದೆ ಬಡವರು ಮತ್ತು ಕೃಷಿಕರು ತೊಂದರೆ ಅನುಭವಿಸುತ್ತಿದ್ದು, ಅರ್ಜಿಗಳನ್ನು ತ್ವರಿತವಾಗಿ ಇತ್ಯರ್ಥಪಡಿಸಬೇಕು ಎಂದು ಒತ್ತಾಯಿಸಲಾಗಿದೆ.
ಇದಲ್ಲದೆ, ನಿವೇಶನ ಲಭ್ಯವಿದ್ದರೂ ಹೆಬ್ರಿಯಲ್ಲಿ ಅಗ್ನಿಶಾಮಕ ಠಾಣೆ ಆರಂಭಿಸದಿರುವುದು, ತಾಲೂಕಿಗೆ ಸಬ್ ರಿಜಿಸ್ಟ್ರಾರ್ ಕಚೇರಿ ಇಲ್ಲದೆ ಉಡುಪಿ, ಕಾರ್ಕಳ ಹಾಗೂ ಬ್ರಹ್ಮಾವರಕ್ಕೆ ಅಲೆಯಬೇಕಾದ ಪರಿಸ್ಥಿತಿ, ಪ್ರಾದೇಶಿಕ ಸಾರಿಗೆ ಕಚೇರಿ ಸ್ಥಾಪನೆ, ವಾರಾಹಿ ನೀರಾವರಿ ಯೋಜನೆಯ ಅವ್ಯವಸ್ಥೆ ಹಾಗೂ ಅರಣ್ಯ ಅಂಚಿನ ಪ್ರದೇಶಗಳ ಜನರಿಗೆ ಅರಣ್ಯ ಇಲಾಖೆಯಿಂದ ಮಾನಸಿಕ ಕಿರುಕುಳವಾಗುತ್ತಿದೆ ಎಂಬ ಆರೋಪಗಳ ಬಗ್ಗೆಯೂ ಪ್ರತಿಭಟನೆಯಲ್ಲಿ ಧ್ವನಿ ಎತ್ತಲಾಗುತ್ತದೆ.
ಪಕ್ಷಾತೀತ ಹೋರಾಟಕ್ಕೆ ಕರೆ
ಸಂಬಂಧಪಟ್ಟ ಎಲ್ಲ ಇಲಾಖೆಗಳ ಅಧಿಕಾರಿಗಳು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿ, ಪರಿಹಾರಕ್ಕೆ ಕಾಲಮಿತಿಯ ಭರವಸೆ ನೀಡಬೇಕು ಎಂದು ಸಂಘಟಕರು ಆಗ್ರಹಿಸಿದ್ದಾರೆ.
ರಾಜಕೀಯ ಪಕ್ಷಗಳ ಭೇದಭಾವ ಹಾಗೂ ಪಕ್ಷದ ಹುದ್ದೆಗಳನ್ನು ಒಂದು ದಿನದ ಮಟ್ಟಿಗೆ ಬದಿಗಿಟ್ಟು, ಹೆಬ್ರಿ ತಾಲೂಕಿನ ಸಮಗ್ರ ಅಭಿವೃದ್ಧಿ ಮತ್ತು ಜನರ ಮೂಲಭೂತ ಸಮಸ್ಯೆಗಳ ಪರಿಹಾರಕ್ಕಾಗಿ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಪ್ರತಿಭಟನೆಯಲ್ಲಿ ಭಾಗವಹಿಸಬೇಕು ಎಂದು ಹೋರಾಟಗಾರರು ಮನವಿ ಮಾಡಿದ್ದಾರೆ.