ಹೆದ್ದಾರಿ ಅಭಿವೃದ್ಧಿಯ ನಡುವೆ ನೂರಾರು ವರ್ಷಗಳ ಜಲಧಾರೆಗೆ ಕಂಟಕ?

Picture of RB NEWS

RB NEWS

Bureau Report


ಹೆದ್ದಾರಿ ಅಭಿವೃದ್ಧಿಯ ನಡುವೆ ನೂರಾರು ವರ್ಷಗಳ ಜಲಧಾರೆಗೆ ಕಂಟಕ?
ಸಾಣೂರು ಚಿಲಿಂಬಿ ಸಂರಕ್ಷಣೆಗೆ ಸಾರ್ವಜನಿಕರ ಆಗ್ರಹ – ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸಲು ಒತ್ತಾಯ


ಸಾಣೂರು: ಅಭಿವೃದ್ಧಿಯ ಹೆಸರಿನಲ್ಲಿ ನೈಸರ್ಗಿಕ ಸಂಪನ್ಮೂಲಗಳು ನಾಶವಾಗಬಾರದು. ನೂರಾರು ವರ್ಷಗಳಿಂದ ಜನರ ದಾಹ ನೀಗಿಸುತ್ತಾ, ಪ್ರಯಾಣಿಕರ ದಣಿವಾರಿಸುತ್ತಾ ಬಂದಿರುವ ಸಾಣೂರು ಚಿಲಿಂಬಿ ಜಲಮೂಲವನ್ನು ರಾಷ್ಟ್ರೀಯ ಹೆದ್ದಾರಿ 169ರ ಅಗಲೀಕರಣ ಕಾಮಗಾರಿಯ ನಡುವೆ ಸಂರಕ್ಷಿಸಬೇಕೆಂಬ ಸಾರ್ವಜನಿಕರ ಒತ್ತಾಯ ಕೇಳಿಬಂದಿದೆ.
ಮಂಗಳೂರು–ಕಾರ್ಕಳ ರಾಷ್ಟ್ರೀಯ ಹೆದ್ದಾರಿ 169ರ ಸಾಣೂರು ಗ್ರಾಮದ ಗಡಿ ಪ್ರದೇಶದಲ್ಲಿ, ಮುರತಂಗಡಿ ಸರ್ಕಾರಿ ಪದವಿ ಪೂರ್ವ ವಿದ್ಯಾಲಯದ ಆಟದ ಮೈದಾನದಿಂದ ಸುಮಾರು 400 ಮೀಟರ್ ದೂರದಲ್ಲಿ ರಸ್ತೆಯ ಎಡಭಾಗದಲ್ಲಿರುವ ಈ ನೈಸರ್ಗಿಕ ಜಲಚಿಲುಮೆ ‘ಸಾಣೂರು ಚಿಲಿಂಬಿ’ ಎಂದೇ ಪ್ರಸಿದ್ಧಿ ಪಡೆದಿದೆ. ಇರುವತ್ತೂರು ಕಡೆಯಿಂದ ಚಿಲಿಂಬಿ ಗುಡ್ಡದ ಮೂಲಕ ಹರಿದುಬರುವ ಈ ನೀರಿನ ಸೆಲೆ ವರ್ಷವಿಡೀ ನಿರಂತರವಾಗಿ ಹರಿಯುತ್ತಿರುವುದು ಇಲ್ಲಿನ ವಿಶೇಷತೆ.
ಹಿಂದೆ ದೂರದ ಊರುಗಳಿಗೆ ಪ್ರಯಾಣಿಸುತ್ತಿದ್ದ ವಾಹನ ಚಾಲಕರು ಹಾಗೂ ಪ್ರಯಾಣಿಕರಿಗೆ ಈ ಜಲಧಾರೆ ಪ್ರಮುಖ ತಂಗುದಾಣವಾಗಿತ್ತು. ವಾಹನಗಳನ್ನು ನಿಲ್ಲಿಸಿ ಕಲ್ಲುಚಪ್ಪಡಿಗಳ ಮೇಲೆ ಕುಳಿತು ಮುಖ ತೊಳೆದು, ತಂಪಾದ ನೀರು ಕುಡಿದು ದಣಿವಾರಿಸಿಕೊಳ್ಳುತ್ತಿದ್ದರು. ಕೆಲವರು ಸ್ನಾನ ಮಾಡಿ, ಬಟ್ಟೆ ತೊಳೆದು, ಮರಗಳ ನೆರಳಿನಲ್ಲಿ ವಿಶ್ರಾಂತಿ ಪಡೆದು ಮುಂದಿನ ಪ್ರಯಾಣ ಮುಂದುವರಿಸುತ್ತಿದ್ದರು. ಹೀಗೆ ಸಾಣೂರು ಚಿಲಿಂಬಿ ಕೇವಲ ನೈಸರ್ಗಿಕ ಜಲಮೂಲವಾಗಿ ಉಳಿಯದೆ, ಹಲವು ತಲೆಮಾರುಗಳ ಜನರ ನೆನಪುಗಳೊಂದಿಗೆ ಬೆಸೆದುಕೊಂಡಿರುವ ಪಾರಂಪರಿಕ ತಾಣವಾಗಿದೆ.
ಅಗಲೀಕರಣ ಕಾಮಗಾರಿಯಿಂದ ಜಲಮೂಲಕ್ಕೆ ಅಪಾಯದ ಆತಂಕ
ಪ್ರಸ್ತುತ ರಾಷ್ಟ್ರೀಯ ಹೆದ್ದಾರಿ 169ರ ಅಗಲೀಕರಣ ಕಾಮಗಾರಿ ಆರಂಭಗೊಂಡಿದ್ದು, ರಸ್ತೆಯ ಎಡಭಾಗದ ಮರಗಳನ್ನು ತೆರವುಗೊಳಿಸಿ ಗುಡ್ಡದ ಮಣ್ಣನ್ನು ಅಗೆಯುವ ಕಾರ್ಯ ನಡೆಯುತ್ತಿದೆ. ಈ ಕಾಮಗಾರಿಯಿಂದ ನೈಸರ್ಗಿಕ ಜಲಚಿಲುಮೆಯ ಮೂಲಕ್ಕೆ ಹಾನಿಯಾಗುವ ಸಾಧ್ಯತೆ ಇದೆ ಎಂಬ ಆತಂಕ ಸ್ಥಳೀಯರಲ್ಲಿ ಮೂಡಿದೆ.
ಹೆದ್ದಾರಿ ಅಭಿವೃದ್ಧಿ ಅತ್ಯಗತ್ಯವೇ ಆಗಿದ್ದರೂ, ಕಾಮಗಾರಿಯ ಸಂದರ್ಭದಲ್ಲಿ ಜಲಮೂಲದ ಸ್ವಾಭಾವಿಕ ಹರಿವಿಗೆ ಧಕ್ಕೆಯಾಗದಂತೆ ಮುನ್ನೆಚ್ಚರಿಕೆ ವಹಿಸಬೇಕಿದೆ. ವೈಜ್ಞಾನಿಕ ಅಧ್ಯಯನ ನಡೆಸಿ, ನೀರಿನ ಸೆಲೆಗೆ ಹಾನಿಯಾಗದ ರೀತಿಯಲ್ಲಿ ಶಾಶ್ವತ ಸಂರಕ್ಷಣಾ ಕ್ರಮಗಳನ್ನು ಕೈಗೊಳ್ಳುವುದು ಸಂಬಂಧಪಟ್ಟ ಇಲಾಖೆಗಳ ಜವಾಬ್ದಾರಿಯಾಗಿದೆ.
ಸ್ವಚ್ಛತೆ ಮತ್ತು ಸುರಕ್ಷತೆಗೂ ಆದ್ಯತೆ ಅಗತ್ಯ
ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಗಡಿ ಭಾಗದಲ್ಲಿರುವ ಈ ಪ್ರದೇಶ ಈ ಹಿಂದೆ ಸೂಕ್ತ ನಿರ್ವಹಣೆಯ ಕೊರತೆಯಿಂದ ಹಲವು ಸಮಸ್ಯೆಗಳನ್ನು ಎದುರಿಸಿದೆ. ರಾತ್ರಿ ವೇಳೆ ಬೆಳಕಿನ ವ್ಯವಸ್ಥೆ ಇಲ್ಲದೆ ಅಸುರಕ್ಷಿತ ವಾತಾವರಣ ನಿರ್ಮಾಣವಾಗುತ್ತಿತ್ತು. ಹೆದ್ದಾರಿ ಬದಿಯಲ್ಲಿ ಸತ್ತ ಪ್ರಾಣಿಗಳ ತ್ಯಾಜ್ಯ ಹಾಗೂ ಇತರ ಕೊಳಕು ವಸ್ತುಗಳನ್ನು ಎಸೆಯುತ್ತಿದ್ದುದರಿಂದ ಪರಿಸರದಲ್ಲಿ ದುರ್ವಾಸನೆ ಹರಡುತ್ತಿತ್ತು ಎಂಬ ದೂರುಗಳೂ ಇವೆ.
ಹೀಗಾಗಿ ಜಲಮೂಲದ ಸಂರಕ್ಷಣೆಯ ಜೊತೆಗೆ ಪರಿಸರ ಸ್ವಚ್ಛತೆ, ತ್ಯಾಜ್ಯ ನಿರ್ವಹಣೆ, ಬೀದಿ ದೀಪ ಹಾಗೂ ಸುರಕ್ಷತಾ ವ್ಯವಸ್ಥೆಗಳನ್ನು ಕಲ್ಪಿಸುವುದು ಅಗತ್ಯವಾಗಿದೆ.
ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸಲು ಒತ್ತಾಯ
ಸಾಣೂರು ಚಿಲಿಂಬಿಯ ನೈಸರ್ಗಿಕ ಸೌಂದರ್ಯ ಮತ್ತು ಪಾರಂಪರಿಕ ಮಹತ್ವವನ್ನು ಗುರುತಿಸಿ, ಇದನ್ನು ಸಣ್ಣ ಪ್ರವಾಸಿ ವಿಶ್ರಾಂತಿ ತಾಣವನ್ನಾಗಿ ರೂಪಿಸಬಹುದಾಗಿದೆ. ಪ್ರಯಾಣಿಕರಿಗೆ ಶುದ್ಧ ಕುಡಿಯುವ ನೀರು, ವಿಶ್ರಾಂತಿ ಸೌಲಭ್ಯ, ಸ್ವಚ್ಛ ಪರಿಸರ, ಸೂಕ್ತ ಬೆಳಕಿನ ವ್ಯವಸ್ಥೆ ಹಾಗೂ ಜಲಮೂಲದ ಇತಿಹಾಸವನ್ನು ಪರಿಚಯಿಸುವ ಮಾಹಿತಿ ಫಲಕಗಳನ್ನು ಅಳವಡಿಸಿದರೆ ಈ ಪ್ರದೇಶ ಆಕರ್ಷಕ ತಾಣವಾಗಿ ರೂಪುಗೊಳ್ಳಬಹುದು.
ಇದರಿಂದ ಹೆದ್ದಾರಿಯಲ್ಲಿ ಸಂಚರಿಸುವ ಪ್ರಯಾಣಿಕರಿಗೆ ಅನುಕೂಲವಾಗುವುದರ ಜೊತೆಗೆ ಸ್ಥಳೀಯ ಪ್ರಕೃತಿ ಸೌಂದರ್ಯಕ್ಕೂ ಮನ್ನಣೆ ದೊರೆಯಲಿದೆ. ಮುಖ್ಯವಾಗಿ, ಮುಂದಿನ ಪೀಳಿಗೆಗೆ ಈ ಪಾರಂಪರಿಕ ಜಲಮೂಲವನ್ನು ಉಳಿಸಿಕೊಟ್ಟಂತಾಗುತ್ತದೆ.
ಅಭಿವೃದ್ಧಿ ಮತ್ತು ಪರಿಸರ ಸಂರಕ್ಷಣೆ ಜೊತೆಜೊತೆಯಾಗಿ ಸಾಗಲಿ
ಸಂಬಂಧಪಟ್ಟ ಜಿಲ್ಲಾಧಿಕಾರಿಗಳು, ಜನಪ್ರತಿನಿಧಿಗಳು, ಸ್ಥಳೀಯ ಆಡಳಿತ ಸಂಸ್ಥೆಗಳು ಹಾಗೂ ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ, ಸ್ಥಳೀಯರ ಅಭಿಪ್ರಾಯಗಳನ್ನು ಆಲಿಸಿ ಸಾಣೂರು ಚಿಲಿಂಬಿಯ ಸಂರಕ್ಷಣೆಗೆ ಸಮಗ್ರ ಯೋಜನೆ ರೂಪಿಸಬೇಕೆಂಬ ಆಗ್ರಹ ವ್ಯಕ್ತವಾಗಿದೆ.
ಈ ಕುರಿತು ಸಾಮಾಜಿಕ ಚಿಂತಕರು ಹಾಗೂ ರಾಷ್ಟ್ರೀಯ ಹೆದ್ದಾರಿ ಹೋರಾಟ ಸಮಿತಿಯ ಪ್ರಮುಖರಾದ ಸಾಣೂರು ನರಸಿಂಹ ಕಾಮತ್ ಅವರು ಸಂಬಂಧಪಟ್ಟ ಇಲಾಖೆಗಳ ಗಮನ ಸೆಳೆದಿದ್ದು, ಜಲಮೂಲವನ್ನು ಉಳಿಸುವುದರ ಜೊತೆಗೆ ಪ್ರವಾಸಿ ವಿಶ್ರಾಂತಿ ತಾಣವಾಗಿ ಅಭಿವೃದ್ಧಿಪಡಿಸುವಂತೆ ಒತ್ತಾಯಿಸಿದ್ದಾರೆ.
ರಸ್ತೆಗಳು ಅಭಿವೃದ್ಧಿಯಾಗುವುದು ಕಾಲದ ಅಗತ್ಯ. ಆದರೆ ಅಭಿವೃದ್ಧಿಯ ಹೆಸರಿನಲ್ಲಿ ಪ್ರಕೃತಿಯ ಕೊಡುಗೆಗಳನ್ನು ಕಳೆದುಕೊಳ್ಳುವುದು ವಿವೇಕವಲ್ಲ. ನೂರಾರು ವರ್ಷಗಳಿಂದ ಜನರ ದಾಹ ನೀಗಿಸುತ್ತಿರುವ ಸಾಣೂರು ಚಿಲಿಂಬಿ ಮುಂದಿನ ನೂರಾರು ವರ್ಷಗಳಿಗೂ ಜೀವಂತವಾಗಿರಬೇಕು. ಹೆದ್ದಾರಿ ಅಗಲೀಕರಣದ ನಕ್ಷೆಯಲ್ಲಿ ಈ ಜಲಧಾರೆಗೆ ಜಾಗವಿರಲಿ; ಅಭಿವೃದ್ಧಿಯ ಹಾದಿಯಲ್ಲಿ ಪ್ರಕೃತಿಯ ಅಸ್ತಿತ್ವ ಅಳಿಸಿಹೋಗದಿರಲಿ ಎಂಬುದು ಸ್ಥಳೀಯರ ಆಶಯವಾಗಿದೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top