
ಮುದರಂಗಡಿ ಗುಂಡಿನ ಹತ್ಯೆ ಪ್ರಕರಣ: ಕೃತ್ಯಕ್ಕೆ ಹಣ ವರ್ಗಾವಣೆಯಲ್ಲಿ ಸಹಕರಿಸಿದ ಆರೋಪಿಗಳ ಬಂಧನ
ಉಡುಪಿ: ಮುದರಂಗಡಿಯ ಸೈಂಟ್ ಕ್ಷೇವಿಯರ್ ಚರ್ಚ್ ಕಾಂಪ್ಲೆಕ್ಸ್‌ನಲ್ಲಿ ಪ್ರಿನ್ಸ್ ಎಂಟರ್‌ಪ್ರೈಸಸ್ ಮಾಲೀಕ ಡೇವಿಡ್ ಡಿಸೋಜಾ ಅವರನ್ನು ಗುಂಡಿಕ್ಕಿ ಹತ್ಯೆಗೈದ ಪ್ರಕರಣದ ತನಿಖೆಯನ್ನು ಶಿರ್ವ ಪೊಲೀಸರು ಮತ್ತಷ್ಟು ತೀವ್ರಗೊಳಿಸಿದ್ದಾರೆ. ಪ್ರಕರಣದಲ್ಲಿ ಈಗಾಗಲೇ ಮೂವರು ಆರೋಪಿಗಳನ್ನು ಬಂಧಿಸಿರುವ ಪೊಲೀಸರು, ಕೃತ್ಯಕ್ಕೆ ಅಗತ್ಯವಾದ ಹಣವನ್ನು ವರ್ಗಾವಣೆ ಮಾಡಲು ಸಹಾಯ ಮಾಡಿ ಆರೋಪಿಗಳಿಗೆ ಸಹಕರಿಸಿದ ಆರೋಪದ ಮೇಲೆ ಮತ್ತಿಬ್ಬರನ್ನು ಬಂಧಿಸಿದ್ದಾರೆ.
ಆಗಸ್ಟ್ 7ರಂದು ಮಧ್ಯಾಹ್ನ ಸುಮಾರು 3.45ರ ವೇಳೆಗೆ ಮುದರಂಗಡಿಯ ಸೈಂಟ್ ಕ್ಷೇವಿಯರ್ ಚರ್ಚ್ ಕಾಂಪ್ಲೆಕ್ಸ್‌ನಲ್ಲಿ ಡೇವಿಡ್ ಡಿಸೋಜಾ ಇದ್ದ ಸಂದರ್ಭದಲ್ಲಿ ಮೋಟಾರ್ ಸೈಕಲ್‌ನಲ್ಲಿ ಬಂದಿದ್ದ ಆರೋಪಿಗಳ ಪೈಕಿ ಸಹಸವಾರನಾಗಿದ್ದ ವ್ಯಕ್ತಿ ಪಿಸ್ತೂಲ್‌ನಿಂದ ಡೇವಿಡ್ ಡಿಸೋಜಾ ಅವರ ತಲೆಗೆ ಗುಂಡು ಹಾರಿಸಿದ್ದ. ಗುಂಡೇಟಿನಿಂದ ಗಂಭೀರವಾಗಿ ಗಾಯಗೊಂಡಿದ್ದ ಡೇವಿಡ್ ಡಿಸೋಜಾ ಮೃತಪಟ್ಟಿದ್ದರು.
ಘಟನೆ ಬಳಿಕ ಶಿರ್ವ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದು, ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ಆರಂಭಿಸಿದ್ದರು. ಕೃತ್ಯಕ್ಕೆ ಬಳಸಿದ ವಾಹನ, ಆರೋಪಿಗಳ ಚಲನವಲನ, ಹಣಕಾಸಿನ ವಹಿವಾಟು ಸೇರಿದಂತೆ ಹಲವು ವಿಚಾರಗಳ ಬಗ್ಗೆ ತನಿಖೆ ನಡೆಸಲಾಗಿದೆ.
ತನಿಖೆಯ ಸಂದರ್ಭದಲ್ಲಿ ಕೃತ್ಯದಲ್ಲಿ ನೇರವಾಗಿ ಭಾಗಿಯಾಗಿದ್ದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು. ಇವರ ವಿಚಾರಣೆ ಹಾಗೂ ತನಿಖೆಯಿಂದ ಕೃತ್ಯಕ್ಕೆ ಹಣದ ವ್ಯವಸ್ಥೆ ಮಾಡುವಲ್ಲಿ ಹಾಗೂ ಹಣ ವರ್ಗಾವಣೆ ಪ್ರಕ್ರಿಯೆಯಲ್ಲಿ ಮತ್ತಷ್ಟು ಮಂದಿ ಸಹಕರಿಸಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಲಭಿಸಿದೆ ಎನ್ನಲಾಗಿದೆ.
ಈ ಹಿನ್ನೆಲೆಯಲ್ಲಿ ಆಗಸ್ಟ್ 12ರಂದು ಚಿರಾಗ್ ಪೂಜಾರಿ (26) ಮತ್ತು ಮೊಹಮ್ಮದ್ ಇರ್ಷಾದ್ (43) ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಚಿರಾಗ್ ಪೂಜಾರಿ, ಕಿಶೋರ್ ಪೂಜಾರಿ ಅವರ ಪುತ್ರನಾಗಿದ್ದು, ಎರ್ಮಾಳ್ ತೆಂಕ ಅಂಚೆ, ತೆಂಕ ಗ್ರಾಮ, ಕಾಪು ತಾಲೂಕು ನಿವಾಸಿಯಾಗಿದ್ದಾನೆ. ಮತ್ತೊಬ್ಬ ಆರೋಪಿ ಮೊಹಮ್ಮದ್ ಇರ್ಷಾದ್, ದಿವಂಗತ ಹುಸೇನ್ ಅವರ ಪುತ್ರನಾಗಿದ್ದು, ಎರ್ಮಾಳ್ ತೆಂಕದ ನಿವಾಸಿಯಾಗಿದ್ದಾನೆ.







































