ನಿಜಕ್ಕೂ ಗಡಿನಾಡಿನ ಆಟಿದೈವಗಳು ಇನ್ನೆಷ್ಟು ದಿನ..?
“ಈಗ ಮಕ್ಕಳು ಯಾರೂ ಈ ರೀತಿ ಆಟಿದೈವ ಕೋಲ ಕಟ್ಟಿ ಬರಿಗಾಲಲ್ಲಿ ಊರೂರು, ಮನೆಮನೆ ಅಲೆಯಲು ಬರುತ್ತಿಲ್ಲ ಮತ್ತು ಸಿಗುತ್ತಿಲ್ಲ.
ಅವರಿಗೆ ಶಾಲೆ ಇದೆ, ಕಲಿಕೆಗಳಿವೆ. ನಮ್ಮಲ್ಲೀಗ ಮಕ್ಕಳ ಸಂಖ್ಯೆಯೂ ಕಡಿಮೆ. ಹೀಗಾಗಿ ಶಾಲಾ ರಜೆಯಲ್ಲಿ ಮಾತ್ರವೇ ಮರಿದೈವಗಳ ಸಂಚಾರ ಎಂದರು ನಮ್ಮೂರಲ್ಲಿ ಆಟಿ ದೈವಗಳನ್ನು ತರುವ ಚೋಮಣ್ಣ
ಗಡಿನಾಡು ಕಾಸರಗೋಡು ಜಿಲ್ಲೆಯಲ್ಲಿ ತುಳು ಪರಂಪರೆಯ ಆಟಿ ದೈವಗಳಂತೆಯೇ ಮಲಯಾಳಂ ಸಂಪ್ರದಾಯದ ಕರ್ಕಾಟಕ ತೈಯಂ ಗಳೂ ಇದೆ.
ನಮ್ಮ ನಲಿಕೆಯವರಂತೆಯೇ ಮಲಯನ್ ಪಂಗಡದವರು ಇದನ್ನು ಸಂಪ್ರದಾಯವಾಗಿ ಮುಂದುವರಿಸಿದ್ದಾರೆ.
ಆದರೆ ಉಭಯರದ್ದೂ ಸಮಸ್ಯೆ ಒಂದೇ…
ಹೊಸ ಪೀಳಿಗೆಯಲ್ಲಿ ಮಕ್ಕಳಿಗಿದರಲ್ಲಿ ಉತ್ಸಾಹವೂ ಇಲ್ಲ, ಮಕ್ಕಳೂ ಸಿಗುತ್ತಿಲ್ಲ..!
ಹಾಗಿದ್ದರೆ ತುಳುನಾಡಿನ ಪರಂಪರೆಯೊಂದು ಅಳಿಯುವ ಸಂಕೇತ ನೀಡುತ್ತಿದೆಯಾ??
ಹೌದು..,
ಹಾಗೆನ್ನುತ್ತಿದೆ ಈಚಿನ ಬೆಳವಣಿಗೆ.
ತುಳುನಾಡಲ್ಲಿ ಮತ್ತು ಕೇರಳದ ತೀರದ ಗಡಿನಾಡಲ್ಲಿ ಆಟಿ, ಸೋಣ ತಿಂಗಳಲ್ಲಿ ಮನೆ,ಮನೆಗೆ ಮರಿದೈವಗಳನ್ನು ಕೊಂಡೊಯ್ದು ‘ ಮಾರಿ ಕಳೆಯುವ’ ಸಂಪ್ರದಾಯವಿದೆ. ಆಟಿಯಲ್ಲಿ ಆಟಿಕಳೆಂಜ ಮತ್ತು ಸೋಣ ತಿಂಗಳಲ್ಲಿ ಜೋಗಿ ಬರುವುದು ವಾಡಿಕೆ.
ಇದೇ ಸಂಪ್ರದಾಯ ಮಲಬಾರಿನಲ್ಲೂ ಇದೆ.
ಇಲ್ಲಿನ ದೈವಗಳನ್ನು ಮಕ್ಕಳೇ ಕಟ್ಟುವುದು ರೂಢಿ.
ಮುಂದಕ್ಕೆದೈವ ಕೋಲಗಳನ್ನು ಕಟ್ಟುವುದಕ್ಕಿರುವ ಪೂರ್ವ ತಾಲೀಮಿನ ಭಾಗವಿದು.
ಆದರೆ ಹೊಸ ಪೀಳಿಗೆಯ “ನ್ಯೂ ಜೆನ್” ಇದರಿಂದ ಹಿಂದುಳಿಯುತ್ತಾರೆ ಮತ್ತು ಶಿಕ್ಷಣದ ಹೆಸರಲ್ಲಿ ಈ ಸಂಪ್ರದಾಯಕ್ಕೆ ಜನ ಇಲ್ಲ ಎಂದಾದರೆ ಕ್ರಮೇಣ ಈ ಪರಂಪರೆಯೂ ಕಣ್ಮರೆಯಲ್ಲವೇ..?
ಇದನ್ನು ದೈವಾರಾಧಕ ಸಮುದಾಯದವರು ಪ್ರಮಾಣಿಕವಾಗಿ ಒಪ್ಪುತ್ತಾರೆ ಕೂಡ..!
ಆದ್ದರಿಂದಲೇ ಮರಿದೈವಗಳ ಪುಟ್ಟಪಾದಗಳು ನಡೆದು ದಣಿಯಬಾರದೆಂಬ ಕಾಳಜಿಯಿಂದಲೇ ಅದನ್ನು ಮನೆ,ಮನೆ ಕರೆದೊಯ್ಯುವವರು ಇಲ್ಲಿ ಹೆಗಲೇರಿಸಿದ್ದಾರೆ!
ಇದು ಕಾಞಂಗಾಡು ಪರಿಸರದಿಂದ ಒದಗಿದ ಚಿತ್ರ.
ಅದು ಮಲಯ ಸಮುದಾಯದವರು ಕಟ್ಟುವ, ಆಟಿ ಕಳಂಜನಿಗೆ ಸಮಾನವಾದ “ವೇಡನ್”.
ಬೇಡ, ಬೇಡ ಎಂದರೂ ಒಂದು ಕಾಲದಲ್ಲಿ ವೇಡನ್ ಬರುತಿತ್ತು. ಈಗ ಬೇಕೆಂದರೂ ಬರಬೇಕಿದ್ದರೆ ಮಕ್ಕಳಿಗೆ ಶಾಲೆಗೆ ರಜೆ ಇರಬೇಕು ಮತ್ತವರು ತಯಾರಾಗಬೇಕು!

ಹೆಗಲೇರಿದ ಮರಿದೈವ..!!
ಇಂದು ಜಾಲತಾಣದಲ್ಲಿ ತೇಲಿಬಂದ
ಅಪರೂಪದ ಚಿತ್ರ…!
ಇದು ಗಡಿನಾಡಿನ ಆಟಿ ವಿಶೇಷ….

– ಎಂ.ನಾ.ಚಂಬಲ್ತಿಮಾರ್





































