ಹುಸಿಯಾಗದಿರಲಿ ಭರವಸೆ : ನಿಷ್ಕ್ರಿಯಗೊಳ್ಳದಿರಲಿ ರಾಷ್ಟ್ರೀಯ ಹೆದ್ದಾರಿ
ಕಾರ್ಕಳ : ಸಾಣೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಪುಲ್ಕೇರಿ ಬೈಪಾಸ್ ಸರ್ಕಲ್ ನ ಸುತ್ತದ ಡಾಮರಿಕೃತ ರಸ್ತೆಯ ಮೇಲ್ಮೈ ಸಂಪೂರ್ಣ ಕಿತ್ತು ಹೋಗಿದ್ದು , ಗುಂಡಿ ಬಿದ್ದು ಮಳೆ ನೀರು ನಿಂತು ನಾಲ್ಕು ಕಡೆಗಳಿಂದ ನಿರಂತರವಾಗಿ ಬರುತ್ತಿರುವ ವಾಹನಗಳ ಸಂಚಾರಕ್ಕೆ ತೊಡಕುಂಟು ಮಾಡಿ ಅಪಾಯಕಾರಿ ಸ್ಥಿತಿ ನಿರ್ಮಾಣವಾಗಿದೆ.
ಇತ್ತೀಚೆಗೆ ಭಾರೀ ಸುರಿಯುತ್ತಿರುವ ಮಳೆಯಲ್ಲಿ ಹಲವಾರು ಅಪಘಾತಗಳು ಸಂಭವಿಸಿ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಈ ಕುರಿತು ಉಡುಪಿಯ ಸಂಸದ ಕೋಟಾ ಶ್ರೀನಿವಾಸ್ ಪೂಜಾರಿಯವರಿಗೆ ಹೆದ್ದಾರಿ ಹೋರಾಟ ಸಮಿತಿಯ ಪ್ರಮುಖ ಸಾಣೂರು ನರಸಿಂಹ ಕಾಮತ್ ಮನವಿ ಸಲ್ಲಿಸಿದ್ದಾರೆ.
ಈ ನಡುವೆ ರಾಷ್ಟ್ರೀಯ ಹೆದ್ದಾರಿ ಇಂಜಿನಿಯರ್ ಸಂತೋಷ್ ಕುಮಾರ್ ಮತ್ತು ದಿಲೀಪ್ ಬಿಲ್ಡ್ ಕಾನ್ ಕಸ್ಟ್ರೆಕ್ಷನ್ ಮ್ಯಾನೇಜರ್ ಬಾಲಾಜಿಯವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಒಂದು ವಾರದ ಒಳಗೆ ಬೈಪಾಸ್ ಸರ್ಕಲ್ ಸುತ್ತ ಮತ್ತು ಕಾರ್ಕಳದ ಕಡೆಗೆ ಹೋಗುವ ರಸ್ತೆಯ ಮೇಲ್ಮೈಯನ್ನು ಮರುಡಾಮರೀಕರಣ ಮಾಡಿ ಕೊಡುವುದಾಗಿ ಭರವಸೆ ನೀಡಿದರು.






































