ಹಾಲಿನ ಪ್ರೋತ್ಸಾಹಧನಕ್ಕಾಗಿ ಹಾತೊರೆಯುತ್ತಿರುವ ಹೈನುಗಾರರು
ಕಾರ್ಕಳ : ಸುಮಾರು 6 ತಿಂಗಳಿನಿoದ ಹಾಲು ಉತ್ಪಾದಕರ ಪ್ರೋತ್ಸಾಹಧನವನ್ನು ಸರಕಾರ ಬಿಡುಗಡೆ ಮಾಡಿಲ್ಲ. ರೈತರ ನಿರಂತರ ಹಕ್ಕೋತ್ತಾಯಕ್ಕೂ ಸರಕಾರ
ಯಾವುದೇ ಮನ್ನಣೆ ಈವರೆಗೆ ನೀಡಿಲ್ಲ. ಇದೇ ರೀತಿ ಪರಿಸ್ಥಿತಿ ಮುಂದುವರೆದಲ್ಲಿ ಹೈನುಗಾರರ ಒಕ್ಕೂಟಕ್ಕೆ ತೀವ್ರವಾದಂತಹ ಹೊಡೆತ ಬೀಳುವ ದಿನಗಳು
ದೂರವಿಲ್ಲ ಎಂದು ಭಾರತೀಯ ಕಿಸಾನ್ ಸಂಘ ಕಾರ್ಕಳ ತಾಲೂಕು ಸಮಿತಿ ರಾಜ್ಯ ಸರಕಾರವನ್ನು ಎಚ್ಚರಿಸಿದೆ
ಭಾರತೀಯ ಕಿಸಾನ್ ಸಂಘ ಕಾರ್ಕಳ ತಾಲೂಕು ಸಮಿತಿ ಕಚೇರಿಯಲ್ಲಿ ಅಧ್ಯಕ್ಷ ಗೋವಿಂದರಾಜ್ ಭಟ್ ಕಡ್ತಲ ಇವರ ಅದ್ಯಕ್ಷತೆಯಲ್ಲಿ ಜರುಗಿದ್ದ ಮಾಸಿಕ ಸಭೆಯಲ್ಲಿ ಸಂಕಷ್ಟದಲ್ಲಿ ಇರುವ ಹೈನುಗಾರರ ವಿಚಾರ ಕುರಿತು ವಿಷಯ ಮಂಡಿಸಲಾಯಿತು.
ಪ್ರತಿಯೊಬ್ಬ ರೈತನು ದೊಡ್ಡಮಟ್ಟದ ಹಾಲು ಉತ್ಪಾದನೆಯಿಂದ ವಿಮುಖಗೊಂಡು ತನ್ನ ಮನೆ ಖರ್ಚಿಗೆ ಬೇಕಾದಷ್ಟು ಮಾತ್ರವೇ ಹಾಲು ಉತ್ಪಾದನೆ ಮಾಡುವ ಬಗ್ಗೆ ಅನೇಕ ರೈತರು ಸಭೆಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿ
ಚರ್ಚೆ ನಡೆಸಿದರು.
ಕೆಲವು ರೈತರು ಒಟ್ಟುಗೂಡಿ ಚಿಕ್ಕ ಪ್ರಮಾಣದ ಪ್ಯಾಂಕಿಗ್ ಘಟಕವನ್ನು ಸ್ಥಳೀಯ ಮಟ್ಟದಲ್ಲಿ ಸ್ಥಾಪಿಸುವ ಬಗ್ಗೆ ಒಲವು ವ್ಯಕ್ತ ಪಡೆಸಿದರು. ಒಂದು ವೇಳೆ ಹಾಲಿಗೆ ಸರಿಯಾದ ದರ ಮತ್ತು ಸರಕಾರದ ಪ್ರೋತ್ಸಾಹಧನ ಸಿಗದಿದ್ದಲ್ಲಿ ಮುಂದಿನ ದಿನಗಳಲ್ಲಿ ಹೈನುಗಾರರು ತಮ್ಮ ಉತ್ಪಾದಿತ ಹಾಲಿಗೆ ಹೆಚ್ಚಿನ ದರ ಸಿಗುವ ರೀತಿಯಲ್ಲಿ ಮಾರುಕಟ್ಟೆ ಹುಡುಕುವ ಯಾ
ದೊಡ್ಡ ಪ್ರಮಾಣದ ಹೈನುಗಾರಿಕೆಯನ್ನು ಕೈ ಬಿಡುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಲಾಯಿತು.
ಜಿಲ್ಲಾಧ್ಯಕ್ಷ ನವೀನ್‌ಚಂದ್ರ ಜೈನ್ ಮಾತನಾಡಿ, ಹವಾಮಾನ ಆಧಾರಿತ ಬೆಳೆವಿಮೆಯ ಬಗ್ಗೆ ರೈತರಿಗೆ ಮಾಹಿತಿ ನೀಡಿದರು. ಈ ತಿಂಗಳ 15ನೇ ತಾರೀಖಿನ ನಂತರ 30ರ ಒಳಗೆ ವಿಮಾ ಕಂತು ಪಾವತಿಯ ಪ್ರಕ್ರಿಯೆಗಳು ಕೊನೆಗೊಳ್ಳುತ್ತದೆ ಎಂದು ತಿಳಿಸಿ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಅಡಿಕೆ ಮತ್ತು ಕಾಳುಮೆಣಸಿಗೆ ಇರುವ ಈ ವಿಮಾ ವ್ಯವಸ್ಥೆಯ ಸದುಪಯೋಗವನ್ನು
ಪಡೆದುಕೊಳ್ಳುವಂತೆ ಕರೆ ನೀಡಿದರು.
ಅಧ್ಯಕ್ಷ ಗೋವಿಂದರಾಜ್ ಭಟ್ ಕಡ್ತಲ ಮಾತನಾಡಿ ಪ್ರತೀ ಚುನಾವಣಾ ಸಂದರ್ಭಗಳಲ್ಲಿ ರೈತರು ತಾವು ಬೆಳೆ ರಕ್ಷಣೆಗೆ ಪಡೆದ ಬಂದೂಕುಗಳನ್ನು ಠೇವಣಿ ಇಡುವುದರಿಂದ
ವಿನಾಯಿತಿಯನ್ನು ಕೋರಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸುತ್ತಾ ಬರುತ್ತಿದ್ದು ಈ ವರ್ಷ ದಕ್ಷಿಣ ಕನ್ನಡದ ಕೆಲವು ರೈತರು ಉಚ್ಛ ನ್ಯಾಯಾಲಯದಲ್ಲಿ ದಾವೆ ಹೂಡಿ
ಹೋರಾಟಮಾಡಿ ಜಯ ಸಾಧಿಸಿದ್ದಾರೆ. ಆ ಪ್ರಕಾರವಾಗಿ ಘನ ನ್ಯಾಯ ಪೀಠವು ಇನ್ನು ಮುಂದಿನ ದಿನಗಳಲ್ಲಿ ಸಾರಾಸಗಟಾಗಿ ಕೋವಿಗಳನ್ನು ಠೇವಣಿ ಇಡುವಂತೆ
ಸೂಚಿಸಬಾರದು ಎಂದು ತೀರ್ಪು ನೀಡಿರುತ್ತದೆ. ಅಲ್ಲದೆ ಚುನಾವಣಾ ಆಯೋಗವು ಈ ಹಿಂದೆಯೇ ಕೋವಿ ಠೇವಣಿ ಇಡುವುದರ ಬಗ್ಗೆ ಮಾರ್ಗಸೂಚಿಉನ್ನು ಸ್ಪಷ್ಟವಾಗಿ ನಿಗದಿ ಮಾಡಿದ್ದು, ಅದರಲ್ಲಿಯೂ ಕೂಡಾ ಅಪರಾಧಿಗಳು ಮತ್ತು ಜಾಮೀನಿನಲ್ಲಿ ಹೊರಗೆ ಇರುವ ವ್ಯಕ್ತಿಗಳಿಂದ ಮಾತ್ರ ಕೋವಿ ಠೇವಣಿ ಇರಿಸಿಕೊಳ್ಳಬೇಕೆಂದು ನಿರ್ದೇಶನವಿರುತ್ತದೆ.
ಪ್ರಸಕ್ತ ವರ್ಷ ಬೆಳೆ ಕಟಾವಿನ ಸಂದರ್ಭದಲ್ಲಿಯೇ ಚುನಾವಣೆ ಬಂದ ಕಾರಣಕ್ಕಾಗಿ ರೈತರು ನೀತಿಸಂಹಿತೆಯ ಸಂದರ್ಭದಲ್ಲಿ ಸುಮಾರು 3೦ ಸಾವಿರದಿಂದ 1 ಲಕ್ಷದವರೆಗೆ
ಕಾಡು ಪ್ರಾಣಿಗಳ ಉಪಟಳದಿಂದ ನಷ್ಟವನ್ನು ಅನುಭವಿಸುವಂತಾಗಿದೆ. ಈ ಎಲ್ಲಾ ವಿಚಾರಗಳನ್ನು ಜಿಲ್ಲಾಧಿಕಾರಿಗಳಿಗೆ ಮನವರಿಕೆ ಮಾಡಿದ ಕಾರಣಕ್ಕಾಗಿ ವಿನಾಯಿತಿ ಕೇಳಿದಂತಹ ಕೆಲವು ರೈತರಿಗೆ ಕೋವಿ ವಾಪಾಸು ನೀಡಿರುವುದು ನಮ್ಮ ಹೋರಾಟಕ್ಕೆ ಸಂದ ಗೌರವವೇ ಆಗಿದೆ ಎಂದು ತಿಳಿಸಿದರು.
ಜಿಲ್ಲಾ ಉಪಾಧ್ಯಕ್ಷರಾದ ಶ್ರೀನಿವಾಸ್ ಭಟ್ ಇರ್ವತ್ತೂರು ಮಾತನಾಡಿ, ನಾವು ರೈತರು ನಾವು ಉತ್ಪಾದಿಸುವ ಹಾಲಿನ ಮೌಲ್ಯವರ್ಧನಗೊಳಿಸಿ ಹೆಚ್ಚಿನ ದರ ಪಡೆದುಕೊಳ್ಳುವ ಬಹಳ ಉತ್ತಮ ಅವಕಾಶವಿದ್ದಲ್ಲಿ ಅದನ್ನು ಎಲ್ಲರೂ ಸದುಪಯೋಗ ಪಡೆಸಿಕೊಳ್ಳುವಂತೆ ವಿನoತಿಸಿದರು.
ಸಭೆಯಲ್ಲಿ ಉಪಾಧ್ಯಕ್ಷರಾದ ಸುಂದರ ಶೆಟ್ಟಿ ಮುನಿಯಾಲು, ಕೆ.ಪಿ.ಭಂಡಾರಿ ಕೆದಿಂಜೆ, ಮೋಹನದಾಸ ಅಡ್ಯಂತಾಯ, ಶ್ರೀಮತಿ ನಿರ್ಮಲ ಮಿಯ್ಯಾರು,
ವಿಜಯಲಕ್ಷ್ಮೀ ಕಡ್ತಲ, ವೃಷಭ್ ಕುಮಾರ್, ಮಂಜುನಾಥ ನಾಯಕ್, ಕರುಣಾಕರ ಕಡಂಬ, ಕರುಣಾಕರ ವಿ ಶೆಟ್ಟಿ ಬೋಳಾ, ಅನಂತ್ ಭಟ್ ಇರ್ವತ್ತೂರು, ಶೇಖರ್ ಶೆಟ್ಟಿ ನೀರೆ ಹಾಗೂ ಗ್ರಾಮ ಮತ್ತು ತಾಲೂಕು ಪದಾಧಿಕಾರಿಗಳು ಉಪಸ್ಥಿತರಿದ್ದರು.
ಪ್ರಧಾನ ಕಾರ್ಯದರ್ಶಿ ಚಂದ್ರಹಾಸ ನಿರ್ವಹಿಸಿದರು.



































