
ಹಸಿವು
ಬಟ್ಟಲು ಮುಂದೊತ್ತಿ ಹಿಡಿದ
ಪುಟ್ಟ ಕಂದಮ್ಮಗಳ ಹೊಟ್ಟೆಯಲಿ
ಸೂರ್ಯ ಕುದಿಯುತ್ತಿದ್ದಾನೆ
ಶಮನಕ್ಕೆ ತುತ್ತು ಅನ್ನ ಹನಿ ನೀರು
ಬೇಡಿದರೂ ದಕ್ಕದು ಬೆಂಗಾಡು ನೆಲದ ಒಡಲು
ಹಸಿವೆಗೆ ಜಾತಿ ಧರ್ಮಗಳಿಲ್ಲ
ಮೇಲುಕೀಳುಗಳಿಲ್ಲ
ವರ್ಣ ಭೇದ ಭಾವಗಳಿಲ್ಲ
ದೇಶ ಭಾಷೆಗಳ ಗಡಿರೇಖೆಗಳಿಲ್ಲ
ಕ್ಷಿಪಣಿ ದಾಳಿ ಬಾಂಬುಗಳ ಮಳೆ
ಉರಿದ ಕಟ್ಟಡಗಳು ಸತ್ತವರ ಗೋರಿ
ಕಳೆದವರ ನಡುವೆ ಉಳಿದ ಕಂದಮ್ಮಗಳಿಗೆ ಅಮ್ಮನ ತೋಳ ಬಂಧಿಯ ಭದ್ರತೆಯಿಲ್ಲ ಅಪ್ಪನ ಬಿಗಿದಪ್ಪುಗೆಯ ಆಸರೆಯಿಲ್ಲ
ನಿರಾಶ್ರಿತ ಶಿಬಿರಗಳೇ ಸೂರು
ಬೆಳಕಿದ್ದರೂ ಕತ್ತಲೆ
ಬದುಕು ಭರವಸೆಯ ನಾಳೆಗಳಿಲ್ಲ
ಸುತ್ತಲೂ ನರಕ ಯಾತನೆ
ರಕ್ಕಸ ಮನಸ್ಸಿನ ಕಠೋರತೆಗೆ
ಚೆಲ್ಲಾಡಿದ ರುಂಡ ಮುಂಡಗಳು ರಣಭೀಕರತೆಯ ನಡುವೆ ಆಕಾಶದಲ್ಲಿ ಹಾರಾಡುತ್ತವೆ ರಣಹದ್ದುಗಳು

*ರಾಧಕೃಷ್ಣ ತೊಡಿಕಾನ












