ಹಸಿದವರಿಗೆ ಆಹಾರ ನೀಡುವುದು ಮಾನವೀಯತೆಯ ಮೌಲ್ಯ

Picture of RB NEWS

RB NEWS

Bureau Report

ಕಾರ್ಕಳ : ಆಹಾರವನ್ನು ಸೇವನೆಗೆ ಬಳಸಬೇಕೇ ವಿನ: ಎಸೆಯುವುದಕ್ಕಲ್ಲ. ಹಸಿದವರಿಗೆ ಆಹಾರ ನೀಡುವುದೇ ಮಾನವೀಯತೆಯ ಮೌಲ್ಯವಾಗಿದೆ. ಹಂಚಿ ತಿನ್ನುವುದು ಸೌಹಾರ್ದತೆಯ ಸಂಕೇತವಾಗಿದೆ ಎಂದು ಕಾರ್ಕಳ ಹೆಚ್ಚುವರಿ ಸಿವಿಲ್ ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಧೀಶೆ ಗೀತಾ ಡಿ.ಅಭಿಮತ ವ್ಯಕ್ತಪಡಿಸಿದರು.

ಕಾರ್ಕಳ ಸರಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ತಾಲೂಕು ಕಾನೂನು ಸೇವೆಗಳ ಸಮಿತಿ ಕಾರ್ಕಳ, ನ್ಯಾಯವಾದಿಗಳ ಸಂಘ (ರಿ.), ಕಾರ್ಕಳ ಮತ್ತು ರಾಷ್ಟ್ರೀಯ ಸೇವಾ ಯೋಜನೆ ಮತ್ತು ಯುವ ರೆಡ್ ಕ್ರಾಸ್ ಘಟಕ ಸರಕಾರಿ ಪಾಲಿಟೆಕ್ನಿಕ್ ಕಾಲೇಜು, ಕಾರ್ಕಳ ಇದರ ಸಂಯುಕ್ತ ಆಶ್ರಯದಲ್ಲಿ ವಿಶ್ವ ಪೌಷ್ಠಿಕಾಂಶ ದಿನಾಚರಣೆಯ ಅಂಗವಾಗಿ ಉಚಿತ ಕಾನೂನು ಅರಿವು ಮಾಹಿತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಶಾಲೆಯಲ್ಲಿ ಮಧ್ಯಾಹ್ನದ ಬಿಸಿಯೂಟ, ಅಂಗನವಾಡಿ ಕಾರ್ಯಕರ್ತೆಯರು ಗರ್ಭಿಣಿಯವರಿಗೆ ಮತ್ತು ಚಿಕ್ಕ ಮಕ್ಕಳಿಗೆ ಒದಗಿಸುವ ಆಹಾರ ಇವುಗಳು ಜನರಲ್ಲಿ ಪೌಷ್ಟಿಕಾಂಶತೆಯನ್ನು ಹೆಚ್ಚಿಸುತ್ತದೆ ಎಂದರು.

ಕಾರ್ಕಳ ನ್ಯಾಯವಾದಿಗಳ ಸಂಘ (ರಿ.) ಅಧ್ಯಕ್ಷ ಸುನೀಲ್ ಕುಮಾರ್ ಶೆಟ್ಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ ಹಿಂದಿನ ಕಾಲದಲ್ಲಿ ಸಾಂಪ್ರಾದಾಯಿಕ ಆಹಾರವನ್ನೇ ಸೇವನೆಗೈಯುತ್ತಿದ್ದರು. ಪ್ರಸಕ್ತ ಕಾಲಘಟ್ಟದಲ್ಲಿ ಸಾಂಪ್ರದಾಯಿಕ ಆಹಾರಕ್ಕಿಂತ ಫಾಸ್ಟ್ ಫುಡ್ ಮೊರೆ ಹೋಗುವವರ ಸಂಖ್ಯೆಯೇ ಹೆಚ್ಚಾಗಿದೆ. ಇದರಿಂದ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರಲು ಕಾರಣವಾಗಿದೆ ಎಂದರು.

ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದ ನ್ಯಾಯವಾದಿ ಶುಭರಾಜ್ ವಾಮನ್‌, ಪೌಷ್ಠಿಕ ಆಹಾರ ಸೇವನೆಯಿಂದ ಒಬ್ಬ ವ್ಯಕ್ತಿಯ ಮಾನಸಿಕ ಹಾಗೂ ದೈಹಿಕ ಬದಲಾವಣೆಯ ಕುರಿತು ಮಾತನಾಡಿದರು. ಮಕ್ಕಳ ಉಜ್ವಲ ಭವಿಷ್ಯಕ್ಕೆ ದೈಹಿಕ ಚಟುವಟಿಕೆಯು ಅವಶ್ಯ ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಶ್ರೀ ಕುಮಾರ ಕೆ.ಎಂ., ಪೌಷ್ಟಿಕಾಂಶವನ್ನು ಪಡೆಯಲು ಸಮತೋಲಿತ, ವೈವಿಧ್ಯಮಯ ಆಹಾರ ಸೇವಿಸುವುದು ಉತ್ತಮ ಆರೋಗ್ಯಕ್ಕೆ ಅಡಿಪಾಯ ಹಾಗೂ ಜಂಕ್ ಫುಡ್‌ನಿಂದ ದೂರವಿರುವುದು ಸೂಕ್ತ ಎಂದರು.‌

ಹಿರಿಯ ಪ್ರಾಧ್ಯಾಪಕಿ ಸಹನಾ, ಪೌಷ್ಠಿಕಾಂಶ ದಿನಾಚರಣೆ ಬಗ್ಗೆ ಮಾತನಾಡಿದರು.

ವಿದ್ಯಾರ್ಥಿ ವಿಜಯ ಆಚಾರ್ಯ ಪ್ರಾರ್ಥನೆ ನೆರವೇರಿಸಿದರು. ಪ್ರಾಧ್ಯಾಪಕ ಚಿತ್ರಕುಮಾರ್ ಸ್ವಾಗತಿಸಿದರು. ರಾಷ್ಟ್ರೀಯ ಸೇವಾ ಯೋಜನಾ ಕೋ ಆರ್ಡಿನೇಟರ್ ಹರೀಶ್ ಕುಮಾರ್ ಧನ್ಯವಾದ ವಿತ್ತರು.‌

ಪ್ರಾಧ್ಯಾಪಕ ಬಾಲಚಂದ್ರ ಹೆಬ್ಬಾರ್ ನಿರೂಪಿಸಿದರು. ಕಾಲೇಜಿನ ಸುಪರಿಡೆಂಟೆಡ್ ವಾಸುದೇವ ಹೆಚ್. ಉಪಸ್ಥಿತರಿದ್ದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top