ಮೂಡುಬಿದಿರೆ:ಕಾರ್ಮಿಕ ಇಲಾಖೆಯ ಸರಕಾರಿ ಕಾರ್ಯದರ್ಶಿ, ಉಡುಪಿ ಜಿಲ್ಲೆಯ ಉಸ್ತುವಾರಿ ಕಾರ್ಯದರ್ಶಿಯಾಗಿರುವ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಮೂಡುಬಿದಿರೆಯ ಪ್ರಸಿದ್ಧ ಹನುಮಂತ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು.
ದೇವಸ್ಥಾನದಲ್ಲಿ ನಡೆದ ರಂಗಪೂಜೆ ವೇಳೆ ಹಾಜರಿದ್ದ ಅವರು ಸುಮಾರು ಅರ್ಧ ತಾಸು ದೇವಸ್ಥಾನದಲ್ಲಿದ್ದರು. ದೇವಳದ ಪ್ರಧಾನ ಅರ್ಚಕ ಹರೀಶ್ ಭಟ್ ಸಿಂಧೂರಿ ಅವರಿಗೆ ರಂಗಪೂಜೆಯ ಪ್ರಸಾದ ನೀಡಿದರು.
ಸಿಂಧೂರಿಯವರ ಅತ್ತೆ ಜತೆಯಲ್ಲಿದ್ದರು. ಮಾಜಿ ಸಚಿವ ಅಭಯಚಂದ್ರ ಜೈನ್, ಉಡುಪಿ ಯುಪಿಸಿಎಲ್ನ ಸಿಇಒ ಕಿಶೋರ್ ಆಳ್ವ, ದೇವಸ್ಥಾನದ ಮೊಕ್ತೇಸರ ಮನೋಜ್ ಶೆಣೈ ಮತ್ತಿತರರು ಇದ್ದರು.
2011ರಲ್ಲಿ ಪ್ರೊಬೆಷನರಿ ಐಎಎಸ್ ಅಧಿಕಾರಿಯಾಗಿದ್ದ ರೋಹಿಣಿ ಸಿಂಧೂರಿ ಕೆಲವು ತಿಂಗಳು ಮೂಡುಬಿದಿರೆ ಪುರಸಭೆ ಮುಖ್ಯಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದು ತನ್ನ ದಿಟ್ಟ ನಿರ್ಧಾರಗಳಿಂದಾಗಿ ಸಾರ್ವಜನಿಕರ ಗಮನಸೆಳೆದಿದ್ದರು.
ಅವಧಿಯಲ್ಲಿ ಅವರು ಪಟ್ಟಣದ ಮುಖ್ಯ ರಸ್ತೆಯ ಅಗಲೀಕರಣಕ್ಕೆ ಕ್ರಮ ಕೈಗೊಂಡಿದ್ದರು. ಮುಖ್ಯ ರಸ್ತೆಗೆ ತಾಗಿಕೊಂಡಿದೆ ಎಂಬ ಕಾರಣ ನೀಡಿ ಹನುಮಂತ ದೇವಸ್ಥಾನದ ಎದುರಿನ ಸ್ವಲ್ಪ ಭಾಗವನ್ನು ತೆರವುಗೊಳಿಸುವುದಕ್ಕೆ ಮುಂದಾಗಿದ್ದು ವಿವಾದಕ್ಕೆ ಕಾರಣವಾಗಿತ್ತು. ಆವಾಗ ಶಾಸಕರಾಗಿದ್ದ ಅಭಯಚಂದ್ರ ಅಧಿಕಾರಿಯ ನಡೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ ನಂತರ ತೆರವು ಕಾರ್ಯವನ್ನು ಕೈಬಿಡಲಾಗಿತ್ತೆಂಬುದನ್ನು ಇಲ್ಲಿ ಸ್ಮರಿಸಬಹುದು.






































