ಮೈಸೂರು ಕುರುಬರಹಳ್ಳಿ ನಾಲ್ಕನೇ ಕ್ರಾಸ್ ನಿವಾಸಿ ನಿಶಿತ ಎಂ.ಡಿ. (21), ರಾಮಾನುಜ ರಸ್ತೆ, ಕೆ.ಆರ್ ಮೊಹಲ್ಲಾ ನಿವಾಸಿ ಪಾರ್ವತಿ ಎಸ್ (20), ವಿಜಯ ನಗರ ದೇವರಾಜ ಮೊಹಲ್ಲ ನಿವಾಸಿ ಕೀರ್ತನ ಎನ್(21) ಮೃತ ಯುವತಿಯರು.
ಉಳ್ಳಾಲ : ಸೋಮೇಶ್ವರ ಉಚ್ಚಿಲದ ಖಾಸಗಿ ರೆಸಾರ್ಟ್ ನ ಸ್ವಿಮ್ಮಿಂಗ್ ಪೂಲ್ ನಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರು ಸಾವನ್ನಪ್ಪಿದ ಘಟನೆ ಭಾನುವಾರ ಬೆಳಗ್ಗೆ ನಡೆದಿದೆ.
ಮೈಸೂರು ಮೂಲದ ಮೂವರು ಯುವತಿಯರಾದ ಕೀರ್ತನಾ ಎನ್ (21), ನಿಶಿತಾ ಎಂ ಡಿ (21) ಮತ್ತು ಪಾರ್ವತಿ ಎಸ್ (20) ಮೃತಪಟ್ಟವರು.


ಈ ಮೂವರು ಯುವತಿಯರು ಶನಿವಾರ ಮುಂಜಾನೆ ರೆಸಾರ್ಟ್ ಗೆ ಬಂದಿದ್ದರು. ರವಿವಾರ ಬೆಳಗ್ಗೆ 10:30 ಸಮಯಕ್ಕೆ ಈಜುಕೊಳದಲ್ಲಿ ಈ ಘಟನೆ ನಡೆದಿದೆ. ಯುವತಿಯರು ಈಜುಕೊಳದ ದಂಡೆಯಲ್ಲಿ ಹೊರ ಉಡುಪುಗಳನ್ನ ಕಳಚಿಟ್ಟಿದ್ದು ಐಪೋನ್ ಒಂದನ್ನ ಈಜು ಕೊಳದ ನೀರಿಗೆ ಗುರಿಯಾಗಿ ರೆಕಾರ್ಡ್ ಇಟ್ಟು ನೀರಿಗೆ ಆಟಕ್ಕಿಳಿದಿದ್ದಾರೆ.
ಆರಂಭದಲ್ಲಿ ಓರ್ವ ಯುವತಿ ನೀರಿನಲ್ಲಿ ಮುಳುಗಿದ್ದು, ರಕ್ಷಣೆಗೆ ಮುಂದಾದ ಮತ್ತೊಬ್ಬಾಕೆಯೂ ಮುಳುಗಿದ್ದ ಕಾರಣ ಮೂರನೇ ಯುವತಿಯೂ ನೀರಿಗೆ ಇಳಿದಿದ್ದಾಳೆ. ಕೆಲವೇ ನಿಮಿಷದ ಅಂತರದಲ್ಲಿ ಈ ಘಟನೆ ನಡೆದಿದೆ. ಯುವತಿಯರಿಗೆ ಈಜು ತಿಳಿಯದೆ ಇರುವುದರಿಂದ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ.

ರೆಸಾರ್ಟ್ ಸಿಬ್ಬಂದಿಗಳು ಈಜುಕೊಳದ ಬಳಿ ಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಯುವತಿಯರು ನೀರಿನಲ್ಲಿ ಮುಳುಗುತ್ತಿರುವ ದೃಶ್ಯ ರೆಸಾರ್ಟ್ ಸಿಸಿಟಿವಿಯಲ್ಲಿ ದಾಖಲಾಗಿದೆ. ಉಳ್ಳಾಲ ಪೊಲೀಸ್ ಇನ್ಸ್ ಪೆಕ್ಟರ್ ಹೆಚ್.ಎನ್ ಬಾಲಕೃಷ್ಣ ನೇತೃತ್ವದ ತಂಡ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.














