ಸುಳ್ಯ-ಉಬರಡ್ಕದಲ್ಲಿ ಸಂಶಯಿತ ಜೀಪು ವಶಕ್ಕೆ
[ಭಾಗ-12]
ಕಲ್ಲಡ್ಕ ಇಸ್ಮಾಯಿಲ್ ಹತ್ಯಾ ಪ್ರಕರಣದ ವಿಚಾರಣೆಯು ಕೊನೆಯ ಹಂತಕ್ಕೆ ಅಂದರೆ ಪ್ರಾಸಿಕ್ಯೂಷನ್ ಪರವಾದ ಸರಕಾರಿ ಅಧಿಕಾರಿಗಳ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಯಿತು ಅಲ್ಲದೆ ಪೊಲೀಸರು ತನಿಖೆಯ ಸಂದರ್ಭದಲ್ಲಿ ಆರೋಪಿಗಳನ್ನು ಜೊತೆ ಸೇರಿಸಿಕೊಂಡು ಸೊತ್ತು ಸ್ವಾಧೀನ ಪಡಿಸಿಕೊಂಡ ಸಂದರ್ಭದಲ್ಲಿ ಜತೆಗಿದ್ದ ಸಾಕ್ಷಿದಾರರ ವಿಚಾರಣೆಯೂ ನಡೆಯಿತು.
ಬೆಂಗಳೂರಿನ ಕೈಬರಹ ತಜ್ಞ ಎಫ್.ಎಂ. ಮುಖಾ ಅವರು ಹೇಳಿಕೆ ನೀಡುತ್ತಾ ಸಿಓಡಿ ಪೊಲೀಸರ ವಿನಂತಿಯ ಮೇರೆಗೆ ಈ ಪ್ರಕರಣದ 1,3,4, 5ನೇ ಆರೋಪಿಗಳಾದ ಶ್ರೀಧರ್ ಭಟ್, ಈಶ್ವರ ಭಟ್, ಮಹಾಬಲ ದೇವಾಡಿಗ ಮತ್ತು ಭೋಜರಾಜ ಸೇಮಿತರ ಲಿಖಿತ ಬರಹಗಳು ಮತ್ತು ತನಿಖೆ ಸಮಯದಲ್ಲಿ ಅವರ ತಪ್ಪೊಪ್ಪಿಗೆಯ ಲಿಖಿತ ಬರೆದುದನ್ನು ಪರೀಕ್ಷಿಸಿ ನೋಡಲಾಯಿತು. ಶ್ರೀಧರ್ ಭಟ್ಟರು, ಮಹಾಬಲ ದೇವಾಡಿಗ ಮತ್ತು ಭೋಜರಾಜ ಸೇಮಿತ ಇವರು ಬರೆದ ಪತ್ರಗಳು ಅವರ ಕೈಬರಹದಲ್ಲೇ ಇದ್ದವು. ಮೂರನೇ ಆರೋಪಿ ಈಶ್ವರ ಭಟ್ ಲಿಖಿತದಲ್ಲಿ ಕೆಲವು ಅಂಕೆಸoಖ್ಯೆಗಳೇ ಅದುದರಿಂದ ಅದನ್ನು ಸರಿಯಾಗಿ ಗುರುತಿಸಲು ಸಾಧ್ಯವಾಗಲಿಲ್ಲ’ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಇವರಿಗೇನೂ ಪಾಟಿ ಸವಾಲು ಇರಲಿಲ್ಲ. 38ನೇ ಸಾಕ್ಷಿ ಕೆ.ಎ. ಅಬೂಬಕರ್ ಅವರು ತಮ್ಮ ಹೇಳಿಕೆಯಲ್ಲಿನಾನು ತಾ. 18ರಂದು ಸಿಓಡಿ ಪೊಲೀಸರು ಕರೆದ ಮೇರೆಗೆ ಸುಳ್ಯದಲ್ಲಿ ಪೊಲೀಸ್ ಜೀಪಿನ ಹತ್ತಿರ ಹೋದೆ. ಆಗ 1ನೇ ಆರೋಪಿ ಶ್ರೀಧರ್ ಭಟ್ ಅಲ್ಲಿದ್ದರು. ಶ್ರೀಧರ್ ಭಟ್ಟರು ಸಿಓಡಿ ಪೊಲೀಸರನ್ನು, ನನ್ನನ್ನು ಮತ್ತು ಇತರರನ್ನು ಉಬರಡ್ಕದಲ್ಲಿರುವ ಮೋಹನ ಭಟ್ಟರ ಮನೆಗೆ ಕರೆದುಕೊಂಡು ಹೋದರು. ಮೋಹನ ಭಟ್ಟರನ್ನು ಹಾಗೂ ಅವರ ಜೀಪು ಎಂವೈಎಸ್ 3821 ಅದನ್ನು ತೋರಿಸಿಕೊಟ್ಟರು. ಆ ಜೀಪನ್ನು ಪೊಲೀಸರು ಸ್ವಾಧೀನಪಡಿಸಿಕೊಂಡರು.
ಆಗ ಆ ಬಗ್ಗೆ ಮಾಡಿದ ರೆಕಾರ್ಡಿಗೆ ನಾನು ಸಹಿ ಹಾಕಿದೆ’ ಎಂದು ವಿವರಿಸಿದರು. ಆರೋಪಿ ಪರ ವಕೀಲರು 1ನೇ ಆರೋಪಿ ಜೀಪು ತೋರಿಸಲಿಲ್ಲ. ನೀವು ಸುಳ್ಳು ಹೇಳುತ್ತೀರಿ’ ಎಂದು ಪ್ರಶ್ನಿಸಿದಾಗ ಸಾಕ್ಷಿ ಅದನ್ನು ನಿರಾಕರಿಸಿದರು.
39ನೇ ಸಾಕ್ಷಿ ಬಿದ್ದಪ್ಪ ಎಂಬವರು ತಮ್ಮ ಹೇಳಿಕೆಯಲ್ಲಿ ತಾ. 18-2-77ರಲ್ಲಿ 1ನೇ ಆರೋಪಿ ಶ್ರೀಧರ್ ಭಟ್ ನನ್ನನ್ನು, ಅಬೂಬಕ್ಕರ್ ನನ್ನು ಮತ್ತು ಸಿಓಡಿ ಪೊಲೀಸರನ್ನು ಮೋಹನ ಭಟ್ಟರ ಮನೆಗೆ ಕರೆದುಕೊಂಡು ಹೋದರು. ಅವರು ಅಲ್ಲಿ ತೋರಿಸಿದ ಜೀಪು ಎಂವೈಎಸ್ 3821ನ್ನು ಪೊಲೀಸರು ಸ್ವಾಧೀನಪಡಿಸಿಕೊಂಡರು’ ಎಂದು ಹೇಳಿದರು.
ಅಡ್ಡ ವಿಚಾರಣೆಯಲ್ಲಿ ಈ ಬಗ್ಗೆ ಮಾಡಿದ ಮಹಜರಿಗೆ ತಾನು ಸುಳ್ಯ ಪೊಲೀಸ್ ಠಾಣೆಯಲ್ಲಿ ದಸ್ಕತ್ತು ಹಾಕಿದುದಾಗಿ ಒಪ್ಪಿಕೊಂಡರು. ಈ ಸಾಕ್ಷಿಯನ್ನು ಪ್ರಾಸಿಕ್ಯೂಷನ್ ಕಡೆಗೆ ವಿರೋಧ ಸಾಕ್ಷಿ ಎಂದು ಪರಿಗಣಿಸುವಂತೆ ಪಬ್ಲಿಕ್ ಪ್ರಾಸಿಕ್ಯೂಟರ್ ಮಾಡಿದ ಮನವಿಯನ್ನು ಕೋರ್ಟು ನಿರಾಕರಿಸಿತು.
40ನೇ ಸಾಕ್ಷಿ ಯು.ಆರ್. ಮೋಹನ್ ಭಟ್ ಅವರು ಕೋರ್ಟಿನಲ್ಲಿ ಸಾಕ್ಷಿ ಹೇಳುತ್ತಾ ನನಗೆ ಉಬರಡ್ಕದಲ್ಲಿ ಸಾಗುವಳಿ ಇದೆ. ನನಗೆ ಎಂವೈಎಸ್ 3821 ಜೀಪು ಇದೆ. ತಾ. 18-2 77ರಂದು ಸಿಓಡಿ ಪೊಲೀಸರು ಮತ್ತು ಸಾಕ್ಷಿಗಳು ನನ್ನ ಮನೆಗೆ ಬಂದರು. ಅವರ ಜತೆಯಲ್ಲಿ ಶ್ರೀಧರ್ ಭಟ್ ಇದ್ದರು. ಸದ್ರಿ ಜೀಪನ್ನು ಪೊಲೀಸರು ರಿಕಾರ್ಡ್ ಮೂಲಕ ಸ್ವಾಧೀನಪಡಿಸಿಕೊಂಡರು. ಆ ರಿಕಾರ್ಡ್ಗೆ ನಾನು ಕೂಡಾ ಸಹಿ ಹಾಕಿದ್ದೇನೆ’ ಎಂದು ಹೇಳಿದರು.
ತನಗೆ 1ನೇ ಆರೋಪಿ ಉರಿಮಜಲು ಶ್ರೀಧರ್ ಭಟ್ ಮತ್ತು ಬಾಲಕೃಷ್ಣ ಮಲ್ಯ (ತಲೆಮರೆಸಿಕೊಂಡ ಆರೋಪಿ) ಇವರ ಪರಿಚಯ ಇದೆ ಎಂದು ಹೇಳಿದ ಮೋಹನ್ ಭಟ್ ಅವರುಅವರಿಬ್ಬರೂ ಜುಲೈ 1976ರಲ್ಲಿ ನನ್ನ ಮನೆಗೆ ಮೋಟಾರು ಸೈಕಲಿನಲ್ಲಿ ಸಂಜೆ 5.30ಕ್ಕೆ ಬಂದಿದ್ದರು. ಮೋಟಾರು ಸೈಕಲನ್ನು ಅಲ್ಲೇ ಬಿಟ್ಟು ನನ್ನ ಜೀಪನ್ನು ತೆಗೆದುಕೊಂಡು ಅವರಿಬ್ಬರೂ ಹೋದರು. ಮತ್ತು ರಾತ್ರಿ 12 ಗಂಟೆ ಸಮಯಕ್ಕೆ ಮರಳಿ ಜೀಪನ್ನು ತಂದರು. ನನ್ನ ಮನೆಯಲ್ಲಿಟ್ಟಿದ್ದ ಅವರ ಮೋಟಾರು ಬೈಕ್ನಲ್ಲಿ ಅವರಿಬ್ಬರೂ ಮರಳಿ ಹೋದರು. ಯಾತಕ್ಕೆ ಜೀಪು ಕೊಂಡುಹೋದರೆoದು ಕೇಳಿದಾಗ ಶ್ರೀಧರ್ ಭಟ್ಟರು ಆಮೇಲೆ ತಿಳಿಸುತ್ತೇನೆಂದು ಹೇಳಿಹೋದರು’ ಎಂದು ವಿವರಿಸಿದರು.
ಅಡ್ಡ ವಿಚಾರಣೆಯಲ್ಲಿ ಮೋಹನ ಭಟ್ಟರು ತಾ. 18 2.77ರಲ್ಲಿ ಸಿಓಡಿ ಪೊಲೀಸರ ಜೊತೆ ಶ್ರೀಧರ್ ಭಟ್ಟರೊಂದಿಗೆ ಮೂರನೇ ಆರೋಪಿ ಈಶ್ವರ ಭಟ್, 4ನೇ ಆರೋಪಿ ಮಹಾಬಲ ದೇವಾಡಿಗ ಹಾಗೂ 5ನೇ ಆರೋಪಿ ಭೋಜರಾಜ ಸೇಮಿತರು ಬಂದಿದ್ದರೆAದು ಹೇಳಿದರು. 41ನೇ ಸಾಕ್ಷಿ ಭದ್ರಯ್ಯ ನಾಯಕ್ ಅವರು ತಮ್ಮ ಹೇಳಿಕೆಯಲ್ಲಿ ನಾನು ಉಜಿರೆಯಲ್ಲಿ ಶರಾಬು ಅಂಗಡಿಯಲ್ಲಿ ಕೆಲಸಕ್ಕಿದ್ದೇನೆ. ತಾ. 21-3-77ರಲ್ಲಿ ನಾನು ಬೆಳ್ತಂಗಡಿ ಪೊಲೀಸ್ ಠಾಣೆಗೆ ಹೋದೆ. ಅಲ್ಲಿ ಒಂದು ಪೊಲೀಸ್ ಟೆಂಪೊ ಇತ್ತು. 3ನೇ ಆರೋಪಿ ಈಶ್ವರ ಭಟ್ ಹಾಗೂ ಸಿಓಡಿ ಪೊಲೀಸರು ಠಾಣೆಯಲ್ಲಿದ್ದರು.
ಅಲ್ಲಿಂದ 3ನೇ ಆರೋಪಿ ಈಶ್ವರ ಭಟ್ ನಮ್ಮೆಲ್ಲರನ್ನು ಕೊಯ್ಯೂರಿನಲ್ಲಿರುವ ತನ್ನ ಮನೆ ಕಡೆಗೆ ದಾರಿ ತೋರಿಸಿ ಟೆಂಪೊದಲ್ಲಿ ಕರೆದುಕೊಂಡು ಹೋದರು. ಆ ಟೆಂಪೊ ಅವರ ಮನೆಯ ಹತ್ತಿರವಿರುವ ಮೋರಿಯ ಹತ್ತಿರ ಹೋದಾಗ ಟೆಂಪೊವನ್ನು ನಿಲ್ಲಿಸುವಂತೆ ಈಶ್ವರ ಭಟ್ ಹೇಳಿದರು. ಎಲ್ಲರೂ ಟೆಂಪೊದಿAದ ಕೆಳಗಿಳಿದೊಡನೆ ಮೆಟ್ಟು ಬಿಸಾಡಿದ ಸ್ಥಳವನ್ನು ಅವರು ತೋರಿಸಿದರು. ಎಲ್ಲರೂ ಇಳಿದು ತೋಡಿನಲ್ಲಿ ಹುಡುಕಿದಾಗ ಮೊದಲು ಬಲಕಾಲಿನ ಕೊಲ್ಲಾಪುರ ಚಪ್ಪಲೊಂದು ಸಿಕ್ಕಿತು. ಆಮೇಲೆ ಹುಡುಕಿದಾಗ ಎಡಕಾಲಿನ ಚಪ್ಪಲಿ ಸಿಕ್ಕಿತು. ಅಲ್ಲಿ ಹತ್ತಿರದಲ್ಲಿ ಮತ್ತೊಂದು ಪ್ಲಾಸ್ಟಿಕ್ ಚಪ್ಪಲಿ ಇತ್ತು. ಇವೆಲ್ಲವನ್ನು ಪೊಲೀಸರು ಮಹಜರು ಮೂಲಕ ಸ್ವಾಧೀನಪಡಿಸಿಕೊಂಡರು. ನಾನು ಮಹಜರಿಗೆ ಸಹಿ ಹಾಕಿದ್ದೇನೆ’ ಎಂದು ಹೇಳಿದರು.
ಆನಂತರ ಅಲ್ಲಿಂದ ಹತ್ತಿರದಲ್ಲೇ ಇದ್ದ 3ನೇ ಆರೋಪಿ ಈಶ್ವರ ಭಟ್ ಅವರ ಮನೆಗೆ ಹೋಗಿ ಮನೆ ಶೋಧ ಮಾಡಿದಾಗ ಕೆಲವು ನೋಟು ಬುಕ್ಗಳಲ್ಲದೆ ಜನ ಸಂಘದ ಚಂದಾ ರಶೀದಿ ಪುಸ್ತಕ-5, ಒಂದು ಶಾರೀರಿಕ ಶಿಕ್ಷಣ ಕುರಿತ ಪುಸ್ತಕ, ಮೂರು ಜನ ಸಂಘದ ಪೇಪರ್ ಬ್ಯಾಜುಗಳು, ಒಂದು ಪೋಸ್ಟ್ ಕಾರ್ಡ್, ಒಂದು ಗುರೂಜಿ ಭಾವಚಿತ್ರ, ಒಂದು ಕರ್ನಾಟಕ ಪೊಲೀಸ್ ಬಟನ್ ಮತ್ತೊಂದು ಪ್ಲಾಸ್ಟಿಕ್ ಚೀಲ ದೊರಕಿದವೆಂದೂ ಪೊಲೀಸರು ರಿಕಾರ್ಡ್ ತಯಾರಿಸಿ ಅವುಗಳನ್ನು ವಶಪಡಿಸಿಕೊಂಡರೆoದೂ, ತಾನು ಮತ್ತು ಇತರ ಸಾಕ್ಷಿಗಳು ಆ ರಿಕಾರ್ಡ್ಗೆ ಸಹಿ ಮಾಡಿರುವುದಾಗಿಯೂ ತಿಳಿಸಿದರು.
ಅಡ್ಡ ವಿಚಾರಣೆಯಲ್ಲಿ ಬೆಳ್ತಂಗಡಿ ಬಸ್ನಿಲ್ದಾಣದ ಹತ್ತಿರ ಪೊಲೀಸರು ಬಂದು ತನ್ನನ್ನು ಕರೆದರೆಂದೂ ತಾನಿರುವ ಶರಾಬು ಅಂಗಡಿ ಬೆಳ್ತಂಗಡಿಯಿAದ ಮೂರು ಮೈಲು ದೂರದಲ್ಲಿದೆಯೆಂದೂ ತನ್ನನ್ನು ಪೊಲೀಸರು ಕರೆದಾಗ ಬೆಳ್ತಂಗಡಿ ಬಸ್ ನಿಲ್ದಾಣದ ಹತ್ತಿರ ಅನೇಕ ಜನರಿದ್ದರೆಂದೂ ಹೇಳಿದರಲ್ಲದೆ ಅಲ್ಲಿ ಹತ್ತಿರ ಅನೇಕ ಹೊಟೇಲುಗಳು ಮತ್ತು ಅಂಗಡಿಗಳು ಇರುವುದನ್ನು ಒಪ್ಪಿಕೊಂಡರು. ಮನೆಯ ಒಳಗೆ ಮೇಲೆ ಹೇಳಿದ ಸಾಮಾನುಗಳು ದೇವರ ಕೋಣೆಯ ಒಳಗೆ ಸಿಕ್ಕಿದುವೆಂದು ಹೇಳಿದ ಅವರು ಅದರೊಳಗೆ ಪೊಲೀಸರು ಚಪ್ಪಲಿಗಳನ್ನು ಧರಿಸಿಯೇ ಹೋದರೆಂದೂ ಹೇಳಿದರು.
42ನೇ ಸಾಕ್ಷಿ ಜಿ.ಕೆ. ಅಬೂಬಕರ್ ಅವರು ತಮ್ಮ ಹೇಳಿಕೆಯಲ್ಲಿ ನನ್ನ ಅಣ್ಣ ಅಹ್ಮದ್ ಬಾವಾನಿಗೆ ಒಂದು ರಿಕ್ಷಾ ಇದೆ. ನಾನು ಇದನ್ನು ಬಿ.ಸಿ. ರೋಡಿನಲ್ಲಿ ಬಾಡಿಗೆಗೆ ರನ್ ಮಾಡುತ್ತಿದ್ದೇನೆ. ಸುಮಾರು 11 ತಿಂಗಳ ಹಿಂದೆ ಒಂದು ದಿನ ರಾತ್ರಿ ಬಿ.ಸಿ. ರೋಡು ಪೆಟ್ರೋಲ್ ಬಂಕ್ ಹತ್ತಿರ 1ನೇ ಆರೋಪಿ ಶ್ರೀಧರ ಭಟ್ಟರು ಮತ್ತು ಸೈಕಲ್ ಅಂಗಡಿ ಯಾದವ ಎಂಬವರು 8.30 ಗಂಟೆ ಸಮಯ ಕಾಣ ಸಿಕ್ಕಿದರು. 1ನೇ ಆರೋಪಿ ತಮ್ಮ ಮೋಟಾರು ಸೈಕಲ್ ಕೆಟ್ಟಿರುವುದಾಗಿಯೂ ಅಲ್ಲಿಯವರೆಗೆ ಅವರನ್ನು ಕರೆದುಕೊಂಡು ಹೋಗಬೇಕೆಂದು ಹೇಳಿದರು.
ಹಾಗೆ ಅವರಿಬ್ಬರನ್ನು ರಿಕ್ಷಾದಲ್ಲಿ ಕುಳ್ಳಿರಿಸಿ ಬೈಪಾಸ್ ರೋಡಿಗೆ ಹೋಗುತ್ತಿದ್ದಾಗ ಎದುರು ಕಡೆಯಿಂದ ಒಂದು ಬಸ್ ಬರುವುದನ್ನು ನೋಡಿ ನನ್ನ ರಿಕ್ಷಾವನ್ನು ಎಡ ಬದಿಗೆ ಸರಿಸಿದಾಗ ರಿಕ್ಷಾ ಮಣ್ಣಿನಲ್ಲಿ ಹೂತುಹೋಯಿತು, ಕೂಡಲೇ ಮೂರೂ ಜನರು ಕೆಳಕ್ಕಿಳಿದು ರಿಕ್ಷಾವನ್ನು ಮೇಲಕ್ಕೆತ್ತಿದೆವು. ಆಮೇಲೆ ಮೋಟಾರು ಸೈಕಲ್ ಕೆಟ್ಟಿರುವಲ್ಲಿಗೆ ಅವರನ್ನು ಕರೆದುಕೊಂಡು ಹೋದೆ. ಅಲ್ಲಿ ಶ್ರೀಧರ ಭಟ್ಟರು ಹಾಗೂ ಯಾದವ ರಿಕ್ಷಾದಿಂದ ಕೆಳಗಿಳಿದರು. ಶ್ರೀಧರ ಭಟ್ಟರು ನನಗೆ ಬಾಡಿಗೆ ಕೊಟ್ಟರು. ನಾನು ಅಲ್ಲಿಂದ ಹೋದೆ. ಆ ಬಳಿಕ ಸುಮಾರು ಐದೂವರೆ ತಿಂಗಳು ಕಳೆದ ಮೇಲೆ ಸಿಓಡಿ ಪೊಲೀಸರು ಮತ್ತು ಒಂದನೇ ಆರೋಪಿ ಶ್ರೀಧರ ಭಟ್ಟರು ಬಿ.ಸಿ. ರೋಡಿಗೆ ಬಂದರು. ಒಂದನೇ ಆರೋಪಿ ನನ್ನನ್ನು ಗುರುತಿಸಿದರು. ಆಮೇಲೆ ಸಿಓಡಿ ಪೊಲೀಸರು ನನ್ನ ಹೇಳಿಕೆಯನ್ನು ಪಡೆದುಕೊಂಡರು’ ಎಂದು ವಿವರಿಸಿದರು.
ಅವರು ಅಡ್ಡ ವಿಚಾರಣೆಯಲ್ಲಿ ಒಂದನೇ ಆರೋಪಿ ಮತ್ತು ಯಾದವರು ತನ್ನ ರಿಕ್ಷಾದಲ್ಲಿ ಹೋದದ್ದು ಸಿಓಡಿ ಪೊಲೀಸರು ಕೇಳುವುದಕ್ಕಿಂತ ಸುಮಾರು 7-8 ತಿಂಗಳು ಮೊದಲು ಎಂದು ಒಪ್ಪಿಕೊಂಡರು. ಆಮೇಲೆ 43ನೇ ಸಾಕ್ಷಿ ಶ್ರೀಮತಿ ಬೇರಟ್ಟೋ ಅವರು ನ್ಯಾಯಾಲಯದಲ್ಲಿ ಹೇಳಿಕೆ ನೀಡುತ್ತಾನಾನು 11-4-77ರಿಂದ 14-4-77ರವರೆಗೆ ಬಂಟ್ವಾಳದಲ್ಲಿ ಇನ್ಚಾರ್ಜ್ ಡೆಪ್ಯುಟಿ ತಹಶೀಲ್ದಾರ್ ಆಗಿದ್ದೆ. ಅದರೊಂದಿಗೆ ಸಬ್ ಜೈಲ್ ಅಧೀಕ್ಷಕರ ಗೈರು ಹಾಜರಿಯಲ್ಲಿ ಸಬ್ ಜೈಲ್ ಸುಪರಿಂಟೆoಡೆoಟ್ನವರ ಚಾರ್ಜ್ನಲ್ಲಿಯೂ ಇದ್ದೆ. ಬಂಟ್ವಾಳ ಮ್ಯಾಜಿಸ್ಟೆçÃಟ್ರವರು ಸಿಓಡಿ ಪೊಲೀಸರಿಗೆ 4ನೇ ಆರೋಪಿ ಮಹಾಬಲ ದೇವಾಡಿಗರ ಮಾದರಿ ಕೈಬರಹ ತೆಗೆಯಲು ಅಪ್ಪಣೆ ಕೊಟ್ಟಿದ್ದರು. ತಾ. 12-4-77ರಲ್ಲೂ ಈ ಮಾದರಿ ಕೈಬರಹ ಪಡೆಯುವಾಗ ನಾನು ಹಾಜರಿದ್ದೆ. ಅಲ್ಲದೆ ಮಾದರಿ ಕೈಬರಹದ ಕಾಗದಕ್ಕೆ ಮತ್ತು ಅದರ ಸಂಬAಧ ಮಾಡಿದ ಮಹಜರಿಗೆ ನಾನು ಕೂಡಾ ಸಹಿ ಮಾಡಿದ್ದೇನೆ’ ಎಂದು ಹೇಳಿದರು.
ಫೊಟೋಗ್ರಾಫರ್ ಸಾಕ್ಷಿ
44ನೇ ಸಾಕ್ಷಿ ಬೆಂಗಳೂರಿನ ಬಿ. ವೆಂಕಟರಾಜು ಎಂಬವರು ತಮ್ಮ ಹೇಳಿಕೆಯಲ್ಲಿ ` ನಾನು ಬೆಂಗಳೂರಿನ ಎಫ್.ಎಸ್.ಎಲ್ನಲ್ಲಿ ಫೊಟೋಗ್ರಾಫರ್ ಆಗಿ ಕೆಲಸ ಮಾಡುತ್ತಿದ್ದೇನೆ. ತಾ. 25-2-77ರಂದು ನಾನು ಬಂಟ್ವಾಳಕ್ಕೆ ಬಂದೆ. ಅಂದು ಸಿಓಡಿ ಪೊಲೀಸರ ಜೊತೆ 2ನೇ ಆರೋಪಿ ಪುರಂದರ ಭಟ್ಟರ ಮನೆಗೆ ಹೋದೆ. ಅಲ್ಲಿ ಮನೆಯ ಪಶ್ಚಿಮ ಬದಿಯ ಕಿಟಕಿಯೊಂದರಲ್ಲಿ ಬಿಳಿ ಪೈಂಟಿನ ಅಚ್ಚು ಇತ್ತಲ್ಲದೆ ಅದರ ಕೆಳಗಡೆ ಬಿಳಿ ಪೈಂಟ್ ಉಜ್ಜಿದ ಕಲೆ ಕೂಡಾ ಇತ್ತು. ಇವೆರಡರ ಫೊಟೋಗಳನ್ನು ನಾನು ತೆಗೆದೆ’ ಎಂದು ವಿವರಿಸಿದರು.
ಮುಂದುವರಿಯುವುದು….





































