ಸುಪ್ರೀಮ್ ಗೆ ಹೆದರಿದ ಹೈಕಮಾಂಡ್ ಯತ್ನಾಳನ್ನು ಬಲಿಪಡೆಯಿತು
-ವಿ. ಕೆ. ವಾಲ್ಪಾಡಿ
ರಾಜ್ಯ ಬಿಜೆಪಿಯ ಪ್ರಭಾವಿ ಮುಖಂಡರು ಹಾಗೂ ಇನ್ನಿತರ ಮಟ್ಚದ ನಾಯಕರುಗಳಿಗೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಅವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದಲೆ ಮುಂದಿನ ಆರು ವರ್ಷ ಕಾಲ ಉಚ್ಛಾಟನೆ ಮಾಡಿರುವುದು ಒಂದು ಸ್ಪಷ್ಟ ಪಾಠವಾಗಿದೆ. ಉಗ್ರಹಿಂದುತ್ವದ ಅಲೆಯನ್ನೇ ಬಂಡವಾಳ ಮಾಡಿಕೊಂಡವರಿಗೆ ಸಣ್ಣಗೆ ನಡುಕವೂ ಹುಟ್ಟಿದೆ.
ಅವರನ್ನು ಹೊಡೆಯಿರಿ,ಬಡಿಯಿರಿ,ಕತ್ತರಿಸಿರಿ ,ನೆಲಸಮಗೊಳಿಸಿರಿ ಪದಗಳನ್ನು ಭಾಷಣದಲ್ಲಿ,ಗೋಷ್ಠಿಯಲ್ಲಿ ಬಳಸುವುದರಿಂದ ಪಕ್ಷಕ್ಕೆ ಅಂಥದ್ದೇನು ಬಲಸಿಗುವುದಿಲ್ಲ, ಜಾತ್ಯತೀತ ಸಂಪ್ರದಾಯದ ಕರ್ನಾಟಕದಲ್ಲಿನ ಜನರು ತಮ್ಮಲ್ಲಿನ ಸೌಹಾರ್ದತೆಯನ್ನು ಬಿಟ್ಟುಕೊಡುವುದಿಲ್ಲ ಎಂಬುದನ್ನು ಮೊನ್ನೆ ತನಕದ ವಿಧಾನಸಭಾ ಚುನಾವಣೆಗಳೇ ಸಾಕ್ಷಿಯಾಗಿದೆ ಅನ್ನುವುದನ್ನು ಬಿಜೆಪಿ ಹೈಕಮಾಂಡ್ ಮನದಟ್ಟುಮಾಡಿಕೊಂಡಿದೆ.
1983 ರಲ್ಲಿ ಕರ್ನಾಟಕದಲ್ಲಿ ಅಸ್ತಿತ್ವಕ್ಕೆ ಬಂದ ಮೊದಲ ಕಾಂಗ್ರೆಸ್ಸೇತರ ರಾಮಕೃಷ್ಣ ಹೆಗಡೆಯವರ ಸರಕಾರಕ್ಕೆ ಬಿಜೆಪಿಯ ಹದಿನೆಂಟು ಶಾಸಕರು ಬಾಹ್ಯ ಬೆಂಬಲ ಕೊಟ್ಟದ್ದು ಹೊರತಾದರೆ ನಂತರ ಬಿಜೆಪಿಗೆ ಕರ್ನಾಟಕ ಸರಕಾರದ ಗೂಟದ ಕಾರು ಕೊಡಿಸಿದ್ದು ಹೆಚ್. ಡಿ. ಕುಮಾರ ಸ್ವಾಮಿ. ಅದುವೇ ,ಜೆಡಿಎಸ್ ಮತ್ತು ಬಿಜೆಪಿಯು ಒಟ್ಟಾಗಿ ಸರಕಾರ ರಚಿಸಿದ್ದು. ಅಧಿಕಾರ ಹಸ್ತಾಂತರದಲ್ಲಿ ಬಿಕ್ಕಟ್ಟು ಬಂದಿರುವುದರಿಂದ ಮುಂದೆ ಚುನಾವಣೆ ಘೋಷಣೆಯಾದಾಗ ಬಿ ಎಸ್ ವೈ ಯವರ ನಾಯಕತ್ವದಲ್ಲಿ ಸುಮಾರು ನೂರಹತ್ತು ಶಾಸಕರು ಗೆದ್ದು ಬಂದರು.
ಆ ಮಧ್ಯಂತರ ಚುನಾವಣೆಯಲ್ಲಿಯೂ ಕೂಡ ಉಗ್ರ ಹಿಂದುತ್ವದ ಭಾಷಣಗಳನ್ನು ನೀಡದೆ ಯೆಜಿಯೂರಪ್ಪನವರು ಬಲಿಷ್ಠವಾದ ಒಬ್ಬ ಲಿಂಗಾಯತ ನಾಯಕನಷ್ಟೇ ಅಲ್ಲ ರೈತರ ಹಿತಾಸಕ್ತಿಯನ್ನು ಕಾಪಾಡಿಕೊಂಡು ಬಂದಿರುವ ರೈತನಾಯಕನೂ ಕೂಡಾ ಅನ್ನುವ ಕಾರಣಕ್ಕಾಗಿ ಸುಮಾರು ನೂರಹತ್ತು ಶಾಸಕರ ಬಲವನ್ನು ಗೆದ್ದು ಪಡೆದರು.
ಬಿ. ಎಸ್. ಯಡಿಯೂರಪ್ಪ ಅವರು ಇಂದಿಗೂ ಕೂಡ ಉಗ್ರಹಿಂದುತ್ವವಾದಿ ಎಂಬ ಹಣೆಪಟ್ಟಿ ಹೊತ್ತವರಾಗಲೇ ಇಲ್ಲ. ಕೆಲವು ಸಂದರ್ಭಕ್ಕೆ ಹಿಂದುತ್ವವನ್ನು ಸಮರ್ಥಿಸಿ ಹೇಳಿಕೆಗಳನ್ನು ಕೊಟ್ಟವರೇ ವಿನಾ ಒಂದರ್ಥದಲ್ಲಿ ಅವರು ಕೂಡ ಜಾತ್ಯತೀತ ಸಿದ್ಧಾಂತವನ್ನೇ ಪಾಲಿಸಿಕೊಂಡು ಬಂದವರಾಗಿದ್ದಾರೆ.
ಸಂಸದ ಅನಂತ ಕುಮಾರ ಹೆಗಡೆ ಮಾತಾಡುವುದೇ ಉಗ್ರಹಿಂದುತ್ವದ ಕಿಡಿಗಳಲ್ಲಿ. ಪಂಥಾಹ್ವಾನದಲ್ಲಿಯೇ ಮುಸ್ಲಿಮ್ ಸಮುದಾಯವನ್ನು ಉಗ್ರವಾಗಿ ಟೀಕಿಸುತ್ತಾರೆ, ಕಟುಹಿಂದುತ್ವವಾದಿಯಾಗಿರುತ್ತಾರೆ.
ರಾಜ್ಯದಲ್ಲಿ ಉಗ್ರಹಿಂದುತ್ವದ ಭಾಷಣ ಶುರುಮಾಡಿದವರೇ ಅವರು. ಉತ್ತರ ಕನ್ನಡ ಭಾಗದಲ್ಲಿ ಅಂಥ ಕೆನ್ನಾಲಗೆ ಪಕ್ಷಕ್ಕೆ ಬೇಕು ಎಂದು ಅವರನ್ನು ಬೆಳೆಸಿ ಉಳಿಸಿಕೊಂಡು ಬಂದಿದ್ದರೂ ಸಂವಿಧಾನ ಬದಲಾವಣೆಯ ಖಡಕ್ ಮಾತು ಹೊರಬಿದ್ದ ಕೂಡಲೇ ಪಕ್ಷ ತನ್ನ ಅಂತರವನ್ನು ಮಾರು ದೂರ ಇಟ್ಟುಕೊಂಡಿತು. ಅವರಿಗೆ ಯಾವುದೇ ಸ್ಥಾನಮಾನ ಕೊಡುವುದನ್ನು ನಿಲ್ಲಿಸಿಬಿಟ್ಟಿತು.
ಶಿವಮೊಗ್ಗ ಜಿಲ್ಲೆಯಲ್ಲಿ ಕೆ. ಎಸ್. ಈಶ್ವರಪ್ಪನವರಿಂದ ಬಿಜೆಪಿ ಯು ಹಿಂದುತ್ವದ ಘೋಷಣೆಯೊಂದಿಗೆ ಬಲಗೊಳ್ಳುವಂತಾಯಿತು. ಅದನ್ನು ಅವರು ಕಡಿಮೆ ಮಾಡಿಕೊಂಡು ಮುಂದುವರಿಯದೆ ಉಗ್ರವಾದ ಹಿಂದುತ್ವದ ಮಾತುಗಳನ್ನೇ ಮೂಲಾಧಾರವಾಗಿಟ್ಟುಕೊಂಡರು ಕೂಡಾ ತನ್ನ ಹರಕು ಬಾಯಿಯಿಂದಾಗಿ ಪಕ್ಷದಿಂದ ದೂರಮಾಡಿಕೊಂಡಂತಾಯಿತು. ಆ ಸಂದರ್ಭವಕ್ಕೇ ಹೊಂಚು ಹಾಕುತ್ತಿದ್ದ ಬಿ ಎಸ್ ಯೆಡಿಯೂರಪ್ಪ ಮತ್ತು ಹೈಕಮಾಂಡ್ , ಕೆ. ಎಸ್. ಈಶ್ವರಪ್ಪನವರ ಪುತ್ರನಿಗೆ ಚುನಾವಣೆಯಲ್ಲಿ ಸ್ಪರ್ಧಿಸುವುದಕ್ಕೆ ಟಿಕೇಟು ನಿರಾಕರಿಸಬೇಕಾಯಿತು.
ಬಿ ಎಸ್ ವೈ ಪಟ್ಟಿಯಲ್ಲಿದ್ದ ಮತ್ತೊಬ್ಬ ಉಗ್ರಹಿಂದುತ್ವವಾದಿ ಪ್ರತಾಪಸಿಂಹ ಅವರನ್ನು ಕೂಡಾ ಪಕ್ಷದ ಹೈಕಮಾಂಡ್ ಬದಿಗೆ ತಳ್ಳಿತು. ಅದೇ ರೀತಿ ಉಗ್ರಹಿಂದುತ್ವವಾದಿ ಸಿ. ಟಿ. ರವಿಯವರನ್ನು ಕೂಡಾ ಮೂಲೆಗುಂಪು ಮಾಡುವಲ್ಲಿ ಯೆಡ್ಯೂರಪ್ಪ ಬಣ ಸಾಕಷ್ಟು ದುಡಿದಿದೆ ಅನ್ನುವ ಮಾತೂ ಇದೆ.ಅದಕ್ಕೆ ಪುಷ್ಠಿ ದೊರಕುವಂತೆ ರವಿ ಸೋತದ್ದೂ ಆಯಿತು. ಅದೇ ರೀತಿ ಮತ್ತೊಬ್ಬ ವಿರೋಧಿ ಕಾರ್ಕಳದ ವಿ. ಸುನಿಲ್ ಕುಮಾರ್ ಅವರನ್ನು ಸೋಲಿಸುವುದಕ್ಕೂ ಮುತಾಲಿಕರ ಪ್ರವೇಶ ಮತ್ತು ಖರ್ಚುವೆಚ್ಚಗಳಿಗೆ ಬಿಎಸ್ ವೈಯವರದ್ದೇ ಕೊಡುಗೆ ಎನ್ನುವುದೂ ನಂಬಿಕೆಗೆ ಹತ್ತಿರವಾಗಿತ್ತು ಅನ್ನುವುದು . ಬಿ ಎಸ್ ವೈ ವಿರೋಧಿಸಿದವರ ಪೈಕಿ ಗೆದ್ದಿರುವುದು ವಿ. ಸುನಿಲ್ ಕುಮಾರ್ ಮಾತ್ರ !ತನ್ನ ವಿರೋಧಿಗಳನ್ನು ಮಟ್ಟ ಹಾಕುವುದಕ್ಕಾಗಿ ಅವರಲ್ಲಿನ ಉಗ್ರಹಿಂದುತ್ವವಾದವನ್ನೇ , ಅದು ಪಕ್ಷಕ್ಕೆ ಕೆಟ್ಟದು ಅನ್ನುತ್ತ ಹೈಕಮಾಂಡಿಗೆ ದೂರುವಾಗ ಮುಂದಿಡಲು ಪ್ರಯತ್ನಪಟ್ಟ ಬಿಎಸ್ ವೈ ಅದರಿಂದ ಗೆಲುವು ಪಡೆದರು ಕೂಡಾ.
ಕಾಕತಾಳೀಯವೆನ್ನುವಂತೆ ಬುಲ್ಡೋಜರ್ ಮಾತು ಯತ್ನಾಳ್ ಮಾತಿನಲ್ಲಿ ಹೊರಬಂತು ಅಲ್ಲಿ ,ಸುಪ್ರೀಮ್ ಕೋರ್ಟ್ ಕಣ್ಣುಗಳು ಕೂಡಾ ಕೆಂಪಾಗುತ್ತಲೇ ಇತ್ತು. ಯತ್ನಾಳರಿಗೆ ಅಂಕುಶ ಬಿತ್ತು!
ದಕ್ಷಿಣ ಕನ್ನಡದ ಶೋಭಾ ಕರಂದ್ಲಾಜೆಯವರು ಬಹಳಷ್ಟು ಸುಧಾರಿಸಿಕೊಂಡಿದ್ದಾರೆ ! ಅವರಿಗೆ ಯೆಡಿಯೂರಪ್ಪ ಹೊರತಾಗಿ ರಾಜ್ಯ ರಾಜಕಾರಣಿಗಳ ಬೆಂಬಲವೇ ಅಷ್ಟೊಂದು ಇಲ್ಲವಾಗಿರುವ ಸ್ವಂತ ಅನುಭವದಿಂದಾಗಿ ಉಗ್ರ ಭಾಷಣವನ್ನು ಖೈದು ಮಾಡಿಕೊಂಡಿದ್ದಾರೆ.
ಈಗಿನ ಕಾಲಘಟ್ಟದಲ್ಲಿ ಯಾವುದೇ ರಾಜಕೀಯ ಪಕ್ಷಕ್ಕೂ ಸಾಕಷ್ಟು ಬೆಂಬಲ ದೊರಕಬೇಕಾದರೆ ಹಿಂದುತ್ವದ ಮತ್ತು ರಾಷ್ಟ್ರೀಯತೆಯ ಭಾವನಾತ್ಮಕ ವಿಚಾರಗಳನ್ನೇ ಪ್ರಧಾನವಾಗಿಟ್ಟುಕೊಂಡಿರಬೇಕಾದ ಅಗತ್ಯ ಕಂಡುಬಂದಿದೆ. ಅದರಿಂದಲೇ ಉತ್ತರ ಭಾರತದ ಜನರನ್ನು ಪಕ್ಷದತ್ತ ಸೆಳೆದು, ಆ ಸಿದ್ಧಾಂತದಲ್ಲಿ ಉತ್ತರ ಭಾರತದಲ್ಲಿ ಗೆಲುವು ಕಂಡುಕೊಂಡ ಬಿಜೆಪಿಯು ಇನ್ನು ಮುಂದೆ ಉಗ್ರಹಿಂದುತ್ವವಾದವನ್ನು ಕಡಿಮೆ ಮಾಡುವುದಕ್ಕಾಗಿ ದಕ್ಷಿಣ ಭಾರತದಲ್ಲಿ ರಾಜ್ಯವಾರು ಪರಿಸ್ಥಿತಿ,ಜನರ ಜೀವನ ಕ್ರಮ,ಆಚರಣೆ ಮತ್ತು ಹೊಂದಾಣಿಕೆಯ ಬದುಕಿನ ವಿವರಗಳನ್ನು ಗಮನದಲ್ಲಿಡಲು ಯತ್ನಿಸುತ್ತದೆ.
ಆಂಧ್ರಪ್ರದೇಶ,ತೆಲಂಗಾಣ,ತಮಿಳುನಾಡು,ಕರ್ನಾಟಕ,ಕೇರಳ ಈ ಐದು ರಾಜ್ಯಗಳಲ್ಲಿ ಅಲ್ಲಿನ ಭೌಗೋಳಿಕ ಸನ್ನಿವೇಶಗಳನ್ನು , ಜನಜೀವನದ ಮಾದರಿಗಳನ್ನು ಜೊತೆಯಲ್ಲಿಟ್ಟುಕೊಂಡೇ ಪಕ್ಷವನ್ನು ಬೆಳೆಸಬೇಕು ಅನ್ನುವ ಶಾಂತ ಚಿತ್ತಕ್ಕೆ ಬಿಜೆಪಿ ಹೈಕಮಾಂಡ್ ಇಳಿದಿದೆ.
ಆ ಪ್ರಯೋಗವನ್ನು ಕರ್ನಾಟಕದಲ್ಲಿ ಪ್ರಥಮವಾಗಿ ಪ್ರಯೋಗಿಸಲು ಮುಂದಾಗಿದೆ.
ಮಹಾರಾಷ್ಟ್ರದಲ್ಲಿ ನಡೆಸಿದ ಬುಲ್ಡೋಜರ್ ಕಾರ್ಯಕ್ರಮಕ್ಕೆ ಸುಪ್ರೀಮ್ ಕೋರ್ಟ್ ಕಿಡಿಕಾರುತ್ತಿದ್ದಂತೆಯೆ ಕರ್ನಾಟಕದಲ್ಲಿ ಬಸನಗೌಡ ಪಾಟೀಲ ಯತ್ನಾಳರು , ‘ತಾನು ಮುಖ್ಯಮಂತ್ರಿಯಾದರೆ ಒಂದು ಸಾವಿರ ಬುಲ್ಡೋಜರ್ ತಂದಿಡುತ್ತೇನೆ ‘ ಎಂದು ಬಹಿರಂಗ ಮಾತು ಸಿಡಿಸಿದ್ದು ಹೈಕಮಾಂಡಿಗೆ ಇರಿಸುಮುರಿಸು ತಂದಿತ್ತು. ಅರಗಿಸಿಕೊಳ್ಳಲಾಗದ ಆಹಾರವಾಯಿತು! ಯತ್ನಾಳ್ ಇನ್ನು ಹೇಳದೆ ಉಳಿಸಿಕೊಂಡಿದ್ದ ಪದಗಳೊಂದಿಗೆ ಮಾತಾನಾಡುವುದಕ್ಕೆ ಅವಕಾಶವನ್ನೇ ಕೊಡುವುದು ಸರಿಯಲ್ಲ ಎಂದು ದಿಢೀರಾಗಿ ತೀರ್ಮಾನಿಸಿಯೇ ಪಕ್ಷದ ಪ್ರಾಥಮಿಕ ಸದಸ್ಯತನದಿಂದಲೇ ಉಚ್ಚಾಟಿಸುವ ಕ್ರಮ ಕೈಗೊಂಡರು.
ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಅವರ ಉಗ್ರಹಿಂದುತ್ವದ ಮಾತು ಆಲಿಸಿದ ತತ್ಕ್ಷಣವೇ ಬಿಜೆಪಿಯು ರಾಜ್ಯದಲ್ಲಿನ ಸಧ್ಯದ ಬೆಳವಣಿಗೆಗಳಿಂದ ಮುಂದಿನ ದಿನಗಳಲ್ಲಿ ಪಕ್ಷಕ್ಕೆ ಬಹುಮತಗಳ ಗೆಲುವು ಕೂಡ ಕಷ್ಟವಾಗಲಿದೆ ಎನ್ನುವುದನ್ನು ಅರ್ಥಮಾಡಿಕೊಂಡಿತು.
ಯತ್ನಾಳರ ಬುಲ್ಡೋಜರ್ ಹೇಳಿಕೆಯು ಅದೊಂದು ಹಿಂದುತ್ವದ ಸಿಂಹ ಘರ್ಜನೆಯಾಗಬಹುದು, ಬಿಜೆಪಿಗೆ ಉತ್ತರಭಾರತ ಮತ್ತು ಮಹಾರಾಷ್ಟ್ರದ ನಾಯಕರ ಖದರ್ ಹಚ್ಚಿಕೊಂಡಿತು ಎಂದು ಪರಿಗಣಿಸಿಕೊಳ್ಳುವುದಕ್ಕೆ ಹೈಕಮಾಂಡ್ ಅವಕಾಶ ಕೊಡಲಿಲ್ಲ.
ಕರ್ನಾಟಕದಲ್ಲಿ ಕಾಂಗ್ರೆಸ್ಸಿನ ಆಂತರಿಕ ಭಿನ್ನಾಭಿಪ್ರಾಯಗಳೇನೇ ಇದ್ದರೂ ಸಿದ್ಧರಾಮಯ್ಯನವರ ಆಡಳಿತದ ನಿರ್ಣಯಗಳು,ಯೋಜನೆಗಳು ಬಿಜೆಪಿಯನ್ನು ಬಲವಾಗಿ ಹೆಜ್ಜೆಯೂರುವುದಕ್ಕೂ ಆಗದ ಸ್ಥಿತಿಗೆ ತಂದಿಟ್ಟಿದೆ ಅನ್ನುವ ಸತ್ಯ ಬಿಜೆಪಿಯ ಹೈಕಮಾಂಡಿಗೆ ಗೊತ್ತಾಗಿ ವರ್ಷ ಮುಗಿದಿದೆ.
ಯತ್ನಾಳ್ ಮಾತು ,ನಡೆಗಳನ್ನು ಬೆಂಬಲಿಸುವ ರೀತಿಯಲ್ಲಿ ಸಿದ್ಧರಾಮಯ್ಯನವರ ಕಾಂಗ್ರೆಸ್ ವರ್ತಿಸಿಕೊಳ್ಳುವುದನ್ನೂ ಬಿಜೆಪಿ ಗಮನಿಸುತ್ತಲೇ ಬಂದಿದೆ. ಹಾಗಂತ ಯತ್ನಾಳ್ ಇನ್ನೇನು ಕಾಂಗ್ರೆಸ್ ಪಕ್ಷಕ್ಕೆ ಸೇರುವುದಿಲ್ಲವಂತೂ ಸ್ಪಷ್ಟ.
ಬಿಜೆಪಿ ತಾನು ಬಲವಾಗಿದ್ದೇನೆ ಅಂತ ತೋರಿಸಿಕೊಳ್ಳುವುದಕ್ಕಾಗಿ ಯತ್ನಾಳರನ್ನು
ಉಚ್ಛಾಟನೆ ಮಾಡಿದೆ. ಬಿ. ಎಸ್. ವಿಜೇಂದ್ರರನ್ನು ದೂರುವ ಹಾಗೂ ಯತ್ನಾಳ್ ಬೆಂಬಲಿಗರೆಂದು ಗುರುತಿಸಿಕೊಂಡಿರುವ ಇತರ ಕೆಲವರಿಗೂ ನೋಟೀಸ್ ಜ್ಯಾರಿಗೊಳಿಸಿದೆ.
ಬಸನಗೌಡ ಪಾಟೀಲ್ ಯತ್ನಾಳ್ ಅವರು ಬಿ. ಎಲ್. ಸಂತೋಷರ ಕಟ್ಟಾ ಅನುಯಾಯಿಯಾಗಿದ್ದಾರೆ. ಬಿ. ಎಸ್. ಯೆಡ್ಯೂರಪ್ಪರನ್ನು ಮಾತಿನಲ್ಲಿ ನಖಶಿಖಾಂತ ಚುಚ್ಚಲು ಯತ್ನಾಳರ ಹರಕು ಬಾಯಿಯಲ್ಲಿ ಮಾತಿನ ಬಾಣಗಳನ್ನು ಪ್ರಯೋಗಿಸುವಲ್ಲಿ ಸಂತೋಷ್ ಕಾರ್ಯಸಾಧಿಸಿದ್ದಾರೆ. ಯೆಡಿಯೂರಪ್ಪ ಮತ್ತವರ ಮಗನಿಗೆ ಕಡ್ಡಿ ಮುರಿದಂತೆ ತುಚ್ಚ ಪದ ಬಳಸಿ ಮಾತಾಡಬೇಕಾದರೆ ಇತರ ಯಾರಿಗಿಂತಲೂ ಯತ್ನಾಳ್ ಯೋಗ್ಯ ಎಂದೇ ಬಿ. ಎಲ್. ಸಂತೋಷ್ ಆಯ್ಕೆ ಮಾಡಿಕೊಂಡಿದ್ದರು. ಯತ್ನಾಳ್ ಮಾತಿನಲ್ಲಿ ಬುಲ್ಡೋಜರ್ ಪದ ಬರುವುದನ್ನು ಬಿ ಎಲ್ ಸಂತೋಷ್ ಕೂಡಾ ನಿರೀಕ್ಷಿಸಿಲ್ಲ ಮತ್ತು ಸುಪ್ರೀಮ್ ಕೋರ್ಟ್ ಕೂಡಾ ಬುಲ್ಡೋಜರ್ ಕಾರ್ಯಕ್ರಮಕ್ಕೆ ಕೆಂಗಣ್ಣಾಗಿರುವುದರಿಂದ ಹೈಕಮಾಂಡಿನ ಮುಂದೆ ಬಿ ಎಲ್ ಸಂತೋಷ್ ಅವರಿಗೆ ಸಮರ್ಥಿಸಲಿಕ್ಕೂ ಆಗಲಿಲ್ಲ.
ರಾಜ್ಯ ಬಿಜೆಪಿಯಲ್ಲಿ ಗುಂಪುಗಾರಿಕೆಯಿಂದಾಗಿ ಏನೂ ಬಲವಿಲ್ಲದಂತಾಗಿದೆ. ಎತ್ತು ಏರಿಗೆಳೆದರೆ ಕೋಣ ನೀರಿಗೆಳೆಯುವಂತಾಗಿದೆ. ಕಾಂಗ್ರೆಸ್ ಕಾರ್ಯಕ್ರಮ, ಸರಕಾರದ ಭ್ರಷ್ಟಾಚಾರ ,ಸಚಿವರುಗಳಿಂದ ಕ್ಷೇತ್ರಾಭಿವೃದ್ಧಿಯ ಅಸಡ್ಡೆ, ಶಾಸಕರ ನಿಧಿಯನ್ನು ಮಂಜೂರು ಮಾಡದಿರುವುದು ಮುಂತಾದ್ದನ್ನು ಪ್ರಬಲವಾಗಿ ವಿರೋಧಿಸುವ ಆವೇಶದ, ಆರ್ಭಟದ ನಾಯಕತ್ವ ಇಲ್ಲ. ಸದನದೊಳಗೆ ಕೂಡ ಒಬ್ಬಿಬ್ಬರು ಮಾತಾಡಿದರೂ ವಿಪಕ್ಷ ನಾಯಕ ಆರ್. ಅಶೋಕ್ ಅವರು, ಮಾತಿಗೆ ಎದ್ದು ನಿಂತವರ ಅಂಗಿ ಹಿಡಿದೆಳೆದು ಕೂರಿಸುತ್ತಾರೆ. ಪಕ್ಷ ಬೆಳೆಯುವುದಿರಲಿ ಕಾಂಗ್ರೆಸ್ಸಿಗೆ ಬೈಯುವುದಕ್ಕೂ ಆಗದಷ್ಟು ನಾಲಗೆ ಸವೆದು ಕಿರಿದಾಗಿದೆ! ಎಂಬುದು ಹೈಕಮಾಂಡಿಗೆ ಅರ್ಥವಾಗಿದೆ.
ಪಕ್ಷದ ಪ್ರಭಾವಿ ಹಿರಿಯರೊಬ್ಬರ ಬೆಂಬಲದಿಂದಲೇ ಅಷ್ಟೆಲ್ಲ ಖಡಕ್ ಮಾತುಗಳಿಂದ ವಿಜಯೇಂದ್ರರ ಬಿಜೆಪಿ ಸಾರಥ್ಯವನ್ನು ವಾಚಾಮಗೋಚರವಾಗಿ ನಿಂದಿಸುತ್ತಿದ್ದ ಯತ್ನಾಳ್ ಅವರನ್ನು ನಿಷ್ಠೂರವಾಗಿ ಉಚ್ಛಾಟನೆ ಮಾಡಿದೆ. ಹಾಗೇನು ನಿರ್ಧಾರಕ್ಕೆ ಬಾರದೆ ಇರುತ್ತಿದ್ದರೆ ರಾಜ್ಯದಲ್ಲಿ ಬಿಜೆಪಿಯು ಎಲ್ಲ ವಿಧಗಳಿಂದಲೂ ನೆಲಕಚ್ಚುವುದೇ ಖಾತ್ರಿಯಾಗುತ್ತದೆ. ಪಕ್ಷದ ಗೊಂದಲಗಳಿಂದ ಬೇಸತ್ತ ಶಾಸಕರಲ್ಲಿ ಕೆಲವರು ರಾಜಕೀಯ ನಿವೃತ್ತಿಗೂ ಮುಂದಾಗುವ ನಿರ್ಧಾರಕ್ಕೆ ಬರುತ್ತಿದ್ದರು. ಇನ್ನು ಮುಂದೆ ಬಿಜೆಪಿಯ ಬಣಗಳನ್ನು ಹೊಂದಾಣಿಕೆ ಮಾಡುವಲ್ಲಿ ಹೈಕಮಾಂಡ್ ಯಶಸ್ಸು ಪಡೆಯಬೇಕಾಗುತ್ತದೆ. ವಿರೋಧಿ ಹೇಳಿಕೆಗಳಿಗೆ ಪೂರ್ಣವಿರಾಮ ಹಾಕಿಯಾಗಿದೆ. ಹೈಕಮಾಂಡಿಂದ ಬಿ. ವೈ. ವಿಜಯೇಂದ್ರರಿಗೆ ಇನ್ನು ಮುಂದಿರವ ಸವಾಲುಗಳೇನೆಂದರೆ ಯಾವುದೇ ಕಾರಣಕ್ಕೂ ಭಿನ್ನಮತ ಬೆಳೆಯಬಾರದು.ಈಗಿರುವ ಸಣ್ಣ ಸಣ್ಣ ಭಿನ್ನಾಭಿಪ್ರಾಯ ಹೊಂದಿದವರನ್ನು ಜೊತೆಗೂಡಿಸಿ ಪಕ್ಷವನ್ನು ಮತ್ತಷ್ಟು ಭದ್ರಗೊಳಿಸಬೇಕು. ಆ ನಿಟ್ಟಿನಲ್ಲಿ ಎಷ್ಟು ಯಶಸ್ಸು ಪಡೆಯಬಲ್ಲರು ಕಾದುನೋಡಬೇಕಷ್ಟೆ.




































