ಸಿಪಿಐ(ಎಂ) ಹಿರಿಯ ಸದಸ್ಯರಾದ ಕಾಂ.ಸುಂದರ ಸಾಲ್ಯಾನ್ ಇನ್ನಿಲ್ಲ
ಸಿಪಿಐ(ಎಂ) ಹಿರಿಯ ಸದಸ್ಯರೂ, ಚಿಂತಕರೂ ಆಗಿರುವ ಕಾಂ.ಸುಂದರ ಸಾಲ್ಯಾನ್(80 ) ಇಂದು ಮುಂಜಾನೆ 6 ಗಂಟೆಗೆ ಬಳ್ಳಾಲ್ ಭಾಗ್ ನಲ್ಲಿರುವ ತಮ್ಮ ಸ್ವಗೃಹದಲ್ಲಿ ಅಲ್ಪಕಾಲದ ಅಸೌಖ್ಯದಿಂದ ನಿಧನರಾಗಿದ್ದಾರೆ.
ಕಾರ್ಮಿಕ ಚಳುವಳಿಯ ಪ್ರಮುಖ ಕೇಂದ್ರವಾಗಿದ್ದ ಬೋಳಾರ ಪ್ರದೇಶದ ಅರೆಕೆರೆಬೈಲ್ ನಲ್ಲಿ ಹುಟ್ಟಿ ಬೆಳೆದಿರುವ ಸುಂದರ ಸಾಲ್ಯಾನ್ ರವರು,ಎಳೆಯ ಪ್ರಾಯದಲ್ಲೇ ತಮ್ಮ ಕಣ್ಣೆದುರು ನಡೆಯುತ್ತಿದ್ದ ನೇಯ್ಗೆ ಹಂಚು ಬೀಡಿ ಕಾರ್ಮಿಕರ ಹೋರಾಟಗಳಲ್ಲಿ ಸ್ವತಃ ಭಾಗವಹಿಸುವ ಮೂಲಕ ಎಡಪಂಥೀಯ ವಿಚಾರಧಾರೆಗೆ ಆಕರ್ಷಿತರಾಗಿದ್ದರು. ಬಳಿಕ ತಮ್ಮ ಯೌವ್ವನದಲ್ಲಿ ಕಮ್ಯುನಿಸ್ಟ್ ಕಾರ್ಯಕರ್ತರಾಗಿ ಬೆಳೆದರು. ದೇಶದ ಹಾಗೂ ವಿಶ್ವದ ರಾಜಕೀಯ ಬೆಳವಣಿಗೆಗಳನ್ನು ಬಹಳ ಸೂಕ್ಷ್ಮವಾಗಿ ಅಭ್ಯಸಿಸುತ್ತಾ ಆ ಬಗ್ಗೆ ಪಕ್ಷದ ನಿಲುವುಗಳನ್ನು ಇತರ ಸಂಗಾತಿಗಳಿಗೂ ವಿವರಿಸುತ್ತಾ ತಮ್ಮ ಜೀವನದ ಕೊನೆಯ ಕ್ಷಣದವರೆಗೂ ಅಪ್ಪಟ ಕಮ್ಯುನಿಸ್ಟ್ ರಾಗಿ ಬೆಳೆದರು. ಕಳೆದ 6 ದಶಕಗಳಿಂದ ಕಮ್ಯುನಿಸ್ಟ್ ಪಕ್ಷದ ಸದಸ್ಯರಾಗಿ ದುಡಿದಿರುವ ಸುಂದರ ಸಾಲ್ಯಾನ್ ರವರು ದುಡಿಯುವ ವರ್ಗದ ಚಳುವಳಿ ಹೋರಾಟಗಳು ಎಲ್ಲೇ ನಡೆಯಲಿ,ಅಲ್ಲಿ ಭಾಗವಹಿಸುತ್ತಾ ಇತರ ಸಂಗಾತಿಗಳಿಗೆ ಸ್ಪೂರ್ತಿ ತುಂಬುತ್ತಿದ್ದರು.ಪಕ್ಷದ ರಾಷ್ಟ್ರಿಯ ಸಮ್ಮೇಳನ ಹಾಗೂ ದೆಹಲಿ ಹೋರಾಟಗಳ ವಿಚಾರ ಕಿವಿಗೆ ಬಿದ್ದ ತಕ್ಷಣ ಅದನ್ನು ಕಣ್ಣಾರೆ ನೋಡಬೇಕು, ಅದರಲ್ಲಿ ಭಾಗವಹಿಸಬೇಕೆಂಬ ತಮ್ಮ ಉತ್ಕಟವಾದ ಅಭಿಮಾನದಿಂದ ಇತ್ತೀಚಿನವರೆಗೂ ದೂರದೂರದ ಕಾರ್ಯಕ್ರಮಗಳಲ್ಲೂ ಭಾಗವಹಿಸುವ ಮೂಲಕ ಕಮ್ಯುನಿಸ್ಟ್ ಪಕ್ಷವನ್ನು ತಮ್ಮ ಉಸಿರನ್ನಾಗಿಸಿರುವುದು ಅತ್ಯಂತ ಹೆಮ್ಮೆಯ ಸಂಗತಿಯಾಗಿದೆ. ವಿದ್ಯಾರ್ಥಿ ಯುವಜನ ಚಳುವಳಿಯ ಬೆಳವಣಿಗೆಗೆ ದೊಡ್ಡ ಮಟ್ಟದ ಸಹಾಯ ಸಹಕಾರವನ್ನು ನೀಡುತ್ತಾ ಬಂದಿರುವ ಸುಂದರ ಸಾಲ್ಯಾನ್ ರವರು ಎಳೆಯ ಪ್ರಾಯದ ಕಾರ್ಯಕರ್ತರಿಗೆ ಪ್ರೋತ್ಸಾಹವನ್ನು ನೀಡುತ್ತಿದ್ದರು. ಒಟ್ಟಿನಲ್ಲಿ ಕಾಂ.ಸುಂದರ ಸಾಲ್ಯಾನ್ ರವರ ಅಗಲುವಿಕೆಯು ದ.ಕ.ಜಿಲ್ಲೆಯ ಕಮ್ಯುನಿಸ್ಟ್ ಚಳುವಳಿಗೆ ಅಪಾರ ನಷ್ಟವುಂಟಾಗಿದೆ ಎಂದು ಸಿಪಿಐ(ಎಂ) ದ.ಕ.ಜಿಲ್ಲಾ ಸಮಿತಿಯು ತಮ್ಮ ಭಾವಪೂರ್ಣ ಶ್ರದ್ಧಾಂಜಲಿಯಲ್ಲಿ ತಿಳಿಸಿದೆ.
ಸುಂದರ ಸಾಲ್ಯಾನ್ ರವರು ಪತ್ನಿ ಇಬ್ಬರು ಗಂಡು ಮಕ್ಕಳು ಹಾಗೂ ಅಪಾರ ಸಂಖ್ಯೆಯ ಬಂಧು ಬಳಗವನ್ನು ಅಗಲಿದ್ದಾರೆ.


























