ಸಾಲ ವಸೂಲಾತಿಯ ನೆಪದಲ್ಲಿ ಮಾನಭಂಗಕ್ಕೆ ಯತ್ನ
ಪುತ್ತೂರು: ಸಾಲ ಮರುಪಾವತಿ ಮಾಡುವಂತೆ ಸೂಚನೆ ನೀಡಲು ಮನೆಯೊಂದಕ್ಕೆ ಹೋದ ಬ್ಯಾಂಕ್ ಸಿಬ್ಬಂದಿಗೆ ಪಿಸ್ತೂಲ್ ತೋರಿಸಿ ಬೆದರಿಕೆ ಒಡ್ಡಿದ್ದಾರೆ ಎನ್ನಲಾದ ಆರೋಪವು ಹೊಸ ಟಿಸ್ಟ್ ಪಡದಿದೆ.
ಕಾರಿನಲ್ಲಿ ಬಂದ ಅಪರಿಚಿತರು ಮನೆಯೊಳಗೆ ಅಕ್ರಮವಾಗಿ ಪ್ರವೇಶಿಸಿ ಮಾನಭಂಗಕ್ಕೆ ಯತ್ನಿಸಿ, ಪಿಸ್ತೂಲ್ ತೋರಿಸಿ ಬೆದರಿಸಿದ್ದಾರೆಂದು ಮನೆಯಲ್ಲಿದ್ದ ಮಹಿಳೆ ಪ್ರತಿದೂರು ನೀಡಿದ್ದಾರೆ.
ದೂರಿನ ವಿವರ….
ಘಟನೆಗೆ ಸಂಬಂಧಿಸಿ ಬಲ್ನಾಡು ಉಜುರಪಾದೆ ನಿವಾಸಿ ಕೀರ್ತಿ ಅವರು ನೀಡಿದ ದೂರಿನಲ್ಲಿ ಉಲ್ಲೇಖಿಸಿರುವಂತೆ, ಪುತ್ತೂರು ಗ್ರಾಮಾಂತರ ಠಾಣೆ ಪೊಲೀಸರು ಬ್ಯಾಂಕ್‌ನ ಮೂವರು ಸಿಬ್ಬಂದಿ ವಿರುದ್ಧ ದೂರು ದಾಖಲಿಸಿದ್ದಾರೆ.
ಸೆ.25ರ ಮಧ್ಯಾಹ್ನ 3 ಗಂಟೆಗೆ ವಿವಾದದ ಕೇಂದ್ರ ಬಿಂದುವಾಗಿರುವ ಮನೆಯಲ್ಲಿ ಗಂಡಸರು ಇಲ್ಲದ ಸಮಯದಲ್ಲಿ ಮೂವರು ಅಪರಿಚಿತ ವ್ಯಕ್ತಿಗಳು ಕಾರಿನಲ್ಲಿ ಮನೆಯಂಗಳಕ್ಕೆ ಅಕ್ರಮವಾಗಿ ಪ್ರವೇಶಿಸಿದ್ದಾರೆ.
ವಿಚಾರಿಸಿದಾಗ ತಮ್ಮ ಗುರುತು ಪರಿಚಯ ನೀಡದೇ ಅವ್ಯಾಚ್ಯ ಶಬ್ದಗಳಿಂದ ನಿಂದಿಸಿ, ನಿಮ್ಮ ಮನೆಯನ್ನು ಜಪ್ತಿ ಮಾಡಿ ನಿಮ್ಮನ್ನು ಬೀದಿಗೆ ಎಳೆಯುತ್ತೇವೆ ಎಂದು ಹೆದರಿಸಿದ್ದಾರೆ. ಆರೋಪಿಗಳ ಪೈಕಿ ಚೈತನ್ಯ ಮತ್ತು ಆಕಾಶ್ ಎಂಬವರು ನಿಮ್ಮ ಲೋನ್ ತೀರಿಸುವ ಬದಲು ನಮ್ಮೊಂದಿಗೆ ಬಂದರೆ ಸಾಕು ಎಂದು ಹೇಳಿ ಕೈ ಹಿಡಿದು ಎಳೆದು ಮಾನಭಂಗಕ್ಕೆ ಯತ್ನಿಸಿದ್ದಾರೆ. ಈ ವೇಳೆ ಇನ್ನೋರ್ವ ಆರೋಪಿ ದಿವ್ಯಾಶ್ರೀ ಎಂಬವರು ಇಬ್ಬರು ಆರೋಪಿಗಳಿಗೆ ಪ್ರಚೋದನೆ ನೀಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.





















