


ಸಾಮಾಜಿಕ ಗುರಿ -ಶ್ರೀರಾಮ ದಿವಾಣ
ವಿಕ್ರಂ ಗೌಡ್ಲು ಅವರಲ್ಲೂ ಇದ್ದಿರಬಹುದೊಂದು ಸಾಮಾಜಿಕ ಗುರಿ,
ಸಿದ್ಧಾರ್ಥ ಗೌತಮನಿಗಿತ್ತಲ್ಲ ಹಾಗೆ.
ಸಿದ್ಧಾರ್ಥನಲ್ಲಿದ್ದಿದ್ದೂ ಸಮಾನತೆಯ ತುಡಿತ,
ಶಾಂತಿಗಾಗಿ ಯುದ್ಧ ವಿರೋಧಿ ನಿಲುವಿನಲ್ಲೇ ಹಿತ,
ದುಃಖ ನಿವಾರಣೆಗಾಗಿ ಶೋಷಣೆ ರಹಿತ ಪರಿಹಾರ ಸೂತ್ರ.
ವಿಕ್ರಂರದ್ದೂ ಸಮಾನತೆಯ ಮಂತ್ರ,
ಶೋಷಣಾಮುಕ್ತ ಸಮಾಜದ ಕನಸು,
ಪಾಳೆಗಾರರ, ಜಮೀನ್ದಾರರ, ಕಾರ್ಪೋರೇಟ್ ದುಷ್ಟಶಕ್ತಿಗಳ ಪರವಿರುವ ಸರಕಾರಗಳ ಜನವಿರೋಧಿ ನೀತಿಗಳ ವಿರುದ್ಧದ ರಾಜಿ ರಹಿತ ದಿಟ್ಟ ಬಿಗಿ ಪಟ್ಟು,
ಗುರಿ ಸಾಧನೆಗಾಗಿ ಆಯ್ದದ್ದು ಮಾತ್ರ
ನಕ್ಸಲೀಯ ತಂತ್ರ.
ಮಗ ಸಿದ್ಧಾರ್ಥ ಸನ್ಯಾಸಿಯಾದ ಏಳು ವರ್ಷಗಳ ಬಳಿಕ ತಂದೆ ಶುದ್ಧೋದನ ಅಂತಿಮ ಪ್ರಯತ್ನ ನಡೆಸಿದ್ದ
ಗೃಹಸ್ಥ ಜೀವನಕ್ಕೆ ಮರಳುವಂತೆ ವಿನಂತಿಸಿದ್ದ
ಮಂತ್ರಿ, ರಾಜ ಪುರೋಹಿತರನ್ನು ಸನ್ಯಾಸಿ ಸಿದ್ಧಾರ್ಥ ಗೌತಮನ ಮನವೊಲಿಸಲು ಕಳಿಸಿದ್ದ.
ಬುದ್ಧನ ನಿರ್ಧಾರ, ಉತ್ತರದಲ್ಲಿ ಆತ ಏನನ್ನೂ ಬಿಡಲಿಲ್ಲ,
ಬದಲಿಸಲಿಲ್ಲ,
ಅರ್ಥ ಮಾಡಿಕೊಳ್ಳಲು ಕಷ್ಟವಿರಲಿಲ್ಲ
ನಡೆ ನುಡಿಯಲ್ಲಿ ಅಚಲ
ಮನವೊಲಿಸಲು ಬಂದವರಿಗೆ ಬೆನ್ನು ತಿರುಗಿಸಿ ಎದ್ದು ಹೊರಟುಹೋಗಿದ್ದ ಬುದ್ಧ.
ಬುದ್ಧನಂಥದ್ದೇ ನಿರ್ಧಾರ, ಉತ್ತರ.
“ಪೊಲೀಸರ ಬಂದೂಕಿಗೆ ಬೇಕಾದರೂ ಬಲಿಯಾದೇನು,
ಉದ್ಧೇಶ ಸಾಧಿಸದೆ ಶರಣಾಗಲಾರೆ”
ಹುತಾತ್ಮನಾಗಿ ಚಿತೆಯಲ್ಲಿ ಮಲಗಿ ಹೊರಟುಹೋಗಿದ್ದಾನೆ ಗೆದ್ದು.
ಬುದ್ಧನ ಕನಸೂ ಸಂಪೂರ್ಣ ಈಡೇರಲಿಲ್ಲ.
ವಿಕ್ರಮನ ಆಶಯವೂ ಈಡೇರಲಿಲ್ಲ
ಆದರೆ ಯಾವುದೂ ಖಂಡಿತಾ ನಿಷ್ಪ್ರಯೋಜನಕವಲ್ಲ
ಹೋರಾಟದ ಸಾಗರಕ್ಕೆ ಸಾವಿರಾರು ನದಿಗಳು
ಒಂದೊಂದು ಒಂದೊಂದೂ ಸಮಸಮಾಜದ ದಾರಿಯಲ್ಲಿನ ಮೈಲಿಗಲ್ಲು.
~ ಶ್ರೀರಾಮ ದಿವಾಣ



































