[t4b-ticker]

ಸಾಣೂರು ಪದವಿ ಪೂರ್ವ ವಿದ್ಯಾಲಯದ ಕಟ್ಟಡದ ಹಿಂಭಾಗದ ಗುಡ್ಡ ಅಗೆತ ಶುರು…ಆರ್.ಬಿ.ನ್ಯೂಸ್ ವರದಿಯ ಫಲಶ್ರುತಿ

Picture of RB NEWS

RB NEWS

Bureau Report

ಪ್ರತಿಭಟನೆಯ ಎಚ್ಚರಿಕೆಗೆ ಎಚ್ಚತ್ತುಗೊಂಡ ರಾಷ್ಟ್ರೀಯ ಹೆದ್ದಾರಿ ಇಲಾಖೆ ; ಆರ್.ಬಿ.ನ್ಯೂಸ್ ವರದಿಯ ಫಲಶ್ರುತಿ

ಕಳೆದ ಒಂದು ತಿಂಗಳಿನಿಂದ ಸಾಣೂರು ಪದವಿ ಪೂರ್ವ ವಿದ್ಯಾಲಯದ ನೂತನ ಕಟ್ಟಡದ ಹಿಂಭಾಗದ ಗುಡ್ಡವನ್ನು ಅರ್ಧ ಕಡಿದು ಅಪಾಯಕಾರಿ ಸ್ಥಿತಿಯಲ್ಲಿದ್ದ ಉಳಿದ ಭಾಗದ ಮಣ್ಣನ್ನು ಜೆಸಿಬಿ ಯಂತ್ರಗಳ ಮೂಲಕ ಅಗೆದು ತೆಗೆಯುವ ಕಾರ್ಯವನ್ನು ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಸೂಚನೆಯ ಮೇರೆಗೆ ಗುತ್ತಿಗೆದಾರ ಕಂಪನಿ ಬಿಲ್ಡ್ ಕಾನ್ ಕಂಪನಿ ಯವರು ಕೆಲಸವನ್ನು ಆರಂಭಿಸಿದ್ದಾರೆ.

ಕಟ್ಟಡದ ಹಿಂಭಾಗದ ಗುಡ್ಡ ಜರಿದು ಕಟ್ಟಡಕ್ಕೆ ಹಾನಿಯಾದರೆ ರಾಷ್ಟ್ರೀಯ ಹೆದ್ದಾರಿ ಇಲಾಖೆಗೆ ಮುತ್ತಿಗೆ ಹಾಕುವುದಾಗಿ ಸಾಣೂರು ಹೆದ್ದಾರಿ ಹೋರಾಟ ಸಮಿತಿಯ ಅಧ್ಯಕ್ಷ ಸಾಣೂರು ನರಸಿಂಹ ಕಾಮತ್ ಮತ್ತು ಕಾಲೇಜು ಅಭಿವೃದ್ಧಿಯ ಸಮಿತಿಯ ಅಧ್ಯಕ್ಷರು ಹಾಗೂ ಗ್ರಾಮಸ್ಥರು ಪ್ರತಿಭಟನೆಗೆ ಸಿದ್ಧತೆ ನಡೆಸುತ್ತಿದ್ದರು. ಈ ಕುರಿತು ಆರ್.ಬಿ.ನ್ಯೂಸ್ ಸಮಗ್ರ ವರದಿ ಪ್ರಕಟಿಸಿ ಜಿಲ್ಲಾಡಳಿತವನ್ನು ಎಚ್ಚರಿಸಿತು.

ಗ್ರಾಮಸ್ಥರ ಪ್ರತಿರೋಧಕ್ಕೆ ಮಣಿದ ಹೆದ್ದಾರಿ ಇಲಾಖೆ ಇದೀಗ ಶಾಲಾ ಕಟ್ಟಡದ ಹಿಂಭಾಗದ ಗುಡ್ಡದ
ಗುಡ್ಡದ ಅಗೆತದ ಕಾರ್ಯ ಪ್ರಾರಂಭಿಸಿದೆ.

ಭೂಸ್ವಾಧೀನಾಧಿಕಾರಿ ಕಚೇರಿಯ ಸರ್ವೆಯರ್ ಪ್ರಾಂಶುಪಾಲರನ್ನು ಭೇಟಿಯಾಗಿ ಶಾಲಾ ಜಾಗಕ್ಕೆ ಕೊಡಬೇಕಾದ ಪರಿಹಾರ ಮೊತ್ತವನ್ನು ಶೀಘ್ರ ಕೊಡುವುದಾಗಿ ಭರವಸೆ ನೀಡಿರುತ್ತಾರೆ.

ದಿಲೀಪ್ ಬಿಲ್ಡ್ ಕಾನ್ ಕಂಪನಿಯ ಕನ್ಸ್ಟ್ರಕ್ಷನ್ ಮ್ಯಾನೇಜರ್ ಪ್ರಾಂಶುಪಾಲರಿಗೆ ದೂರವಾಣಿ ಮೂಲಕ ಸಂಪರ್ಕಿಸಿ, ಹೆದ್ದಾರಿಯಿಂದ ಪದವಿ ಪೂರ್ವ ವಿದ್ಯಾಲಯಕ್ಕೆ ಸಂಪರ್ಕಿಸುವ ರಸ್ತೆಯ ಡಾಮರೀಕರಣ ,ಕಾಂಕ್ರೀಟ್ ಪ್ರವೇಶ ದ್ವಾರ ,ಗೇಟ್ ಮತ್ತು ಸುರಕ್ಷತಾ ಗ್ರಿಲ್ ಶೀಘ್ರವಾಗಿ ಅಳವಡಿಸಿ ಕೊಡುವುದಾಗಿ ಭರವಸೆಯನ್ನು ನೀಡಿರುತ್ತಾರೆ.

ಆಟದ ಮೈದಾನದಲ್ಲಿ ಹೊಸದಾಗಿ ಕೊರೆದ ಬೋರ್ವೆಲ್ ಗೆ ವಿದ್ಯುತ್ ಸಂಪರ್ಕ, ಹೊಸ ಪಂಪ್ ಮತ್ತು ಪೈಪ್ ಲೈನ್ ಮುಂದಿನ ವಾರ ಅಳವಡಿಸುವುದಾಗಿ ತಿಳಿಸಿರುತ್ತಾರೆ.

ಆರ್.ಬಿ.ನ್ಯೂಸ್ ನಲ್ಲಿ ವರದಿ ಹೀಗಿತ್ತು !

ರಾಷ್ಟ್ರೀಯ ಹೆದ್ದಾರಿ ಅವಾಂತರ : ಸಾಣೂರು ಪದವಿಪೂರ್ವ ಕಾಲೇಜು ಮೂಲಸೌಕರ್ಯಕ್ಕೆ ಧಕ್ಕೆ ಗ್ರಾಮಸ್ಥರಿಂದ ಪ್ರತಿಭಟನೆಗೆ ಸಿದ್ಧತೆ

ಸಾಣೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕಳೆದ ಒಂದು ವರ್ಷದಿಂದ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯುತ್ತಿದ್ದು, ಭೂಸ್ವಾಧೀನಗೊಂಡ ಸಾಣೂರು ಸರಕಾರಿ ಪ್ರೌಢಶಾಲೆ ಮತ್ತು ಪದವಿಪೂರ್ವ ಕಾಲೇಜಿನ ಸರ್ವೇ ನಂಬರ್ 357/2 ಜಾಗದ ಪರಿಹಾರದ ಮತ್ತ ಇನ್ನೂ ನಿಗದಿಪಡಿಸಿ ಕೊಟ್ಟಿರುವುದಿಲ್ಲ.

ಶಾಲಾ ಕಟ್ಟಡಗಳ ಪಕ್ಕದಲ್ಲಿಯೇ ಜಮೀನನ್ನು ಅಗೆದು, ರಸ್ತೆ ನಿರ್ಮಾಣ ಮಾಡಿರುವುದರಿಂದ ರಾಷ್ಟ್ರೀಯ ಹೆದ್ದಾರಿಯಿಂದ ವಿದ್ಯಾಸಂಸ್ಥೆಗೆ ಹೋಗುವ ಮಣ್ಣಿನ ಹಾದಿ ಸಂಪೂರ್ಣ ಹಾಳಾಗಿದ್ದು, ದಿನಂಪ್ರತಿ ನೂರಾರು ವಿದ್ಯಾರ್ಥಿಗಳು ಅಧ್ಯಾಪಕರು ಸಂಚರಿಸುವ ಮಾರ್ಗ ಅಪಾಯಕಾರಿಯಾಗಿ ಪರಿಣಮಿಸಿದೆ.

ದಾನಿಗಳಿಂದ ನಿರ್ಮಾಣಗೊಂಡ ಕಾಂಕ್ರೀಟ್ ಪ್ರವೇಶ ದ್ವಾರ, ಆವರಣ ಗೋಡೆ, ಗೇಟ್ ದ್ವಂಸವಾಗಿದ್ದು, ಪಕ್ಕದಲ್ಲಿಯೇ ಬ್ಯಾಂಕ್ ಆಫ್ ಬರೋಡದವರು ಕಟ್ಟಿಸಿ ಕೊಟ್ಟಿದ್ದ ಬಸ್ಸು ತಂಗುದಾಣವನ್ನು ಕೆಡವಿ ಹಾಕಲಾಗಿದೆ.

ಸರಕಾರಿ ವಿದ್ಯಾ ಸಂಸ್ಥೆಯ ಬಗ್ಗೆ ತೀರಾ ಅವಗಣನೆ :*

ಗ್ರಾಮೀಣ ಭಾಗದಿಂದ ದಿನಂಪ್ರತಿ ನೂರಾರು ಸಂಖ್ಯೆಯಲ್ಲಿ ಬರುವ ವಿದ್ಯಾರ್ಥಿಗಳು
ಬಸ್ಸಿಗಾಗಿ ಬಹಳ ಹೊತ್ತು ರಸ್ತೆ ಬದಿಯಲ್ಲಿಯೇ ಬಿಸಿಲಿಗೆ ಕಾಯಬೇಕಾದ ಪರಿಸ್ಥಿತಿ ಇದ್ದು, ವೇಗವಾಗಿ ಕೆಲವೊಮ್ಮೆ ಹೆದ್ದಾರಿ ಕಾಮಗಾರಿಯ ಕಾರಣದಿಂದ ಅಸ್ತವ್ಯಸ್ತವಾಗಿರುವ ರಸ್ತೆಯಲ್ಲಿ ಅಡ್ಡಾದಿಡ್ಡಿಯಾಗಿ ಚಲಿಸುವ ವಾಹನಗಳಿಂದ ಅಪಾಯಕಾರಿ ಪರಿಸ್ಥಿತಿ ನಿರ್ಮಾಣವಾಗಿದೆ.

ಮನವಿಗೆ ಬೆಲೆಯೇ ಇಲ್ಲ!

ಸುಮಾರು 425 ವಿದ್ಯಾರ್ಥಿಗಳು ಮತ್ತು 35 ಅಧ್ಯಾಪಕ ವ್ರಂದವರನ್ನು ಹೊಂದಿರುವ ಸಾಣೂರು ಪದವಿ ಪೂರ್ವ ವಿದ್ಯಾಲಯಕ್ಕೆ ರಾಷ್ಟ್ರೀಯ ಹೆದ್ದಾರಿಯಿಂದ ವಿದ್ಯಾ ಸಂಸ್ಥೆಯನ್ನು ಸಂಪರ್ಕಿಸುವ ರಸ್ತೆಯನ್ನು ಸರಿಪಡಿಸದೆ, ಸೂಕ್ತವಾದ ಚರಂಡಿ ವ್ಯವಸ್ಥೆಯನ್ನು ಮಾಡದೇ ಇರುವುದರಿಂದ ಮಳೆ ಬಂದಾಗ ಮಳೆ ನೀರು ಮಣ್ಣಿನ ರಸ್ತೆಯಲ್ಲಿ ಹರಿದು, ರಸ್ತೆಯಲ್ಲಿಯೇ ಹೊಂಡ ಗುಂಡಿಗಳು ನಿರ್ಮಾಣವಾಗಿ ಅಪಾಯಕಾರಿಯಾಗಿ ದಿನಂಪ್ರತಿ ತೀರ ತೊಂದರೆಯನ್ನು ಅನುಭವಿಸುತ್ತಿದ್ದಾರೆ.

ಈ ಮೇಲಿನ ಎಲ್ಲಾ ವಿಚಾರಗಳ ಬಗ್ಗೆ ಸವಿವರವಾಗಿ ಪತ್ರವನ್ನು ಬರೆದು ಸಾಣೂರು ಪದವಿಪೂರ್ವ ವಿದ್ಯಾಲಯದ ಪ್ರಾಂಶುಪಾಲರು ಹಲವಾರು ಬಾರಿ ಸ್ವತಹ ಶಾಸಕರನ್ನು, ಜಿಲ್ಲಾಧಿಕಾರಿಯವರನ್ನು, ರಾಷ್ಟ್ರೀಯ ಹೆದ್ದಾರಿ ಅಧಿಕಾರಿಯವರನ್ನು ಹಾಗೂ ಗುತ್ತಿಗೆದಾರರನ್ನು ಸಂಪರ್ಕಿಸಿದರೂ ಯಾವುದೇ ಪ್ರಯೋಜನವಾಗಿಲ್ಲ.

ಕಿತ್ತು ಹಾಕಿರುವುದನ್ನು ಮರು ನಿರ್ಮಾಣ ಮಾಡಿ..!?!

ಕೂಡಲೇ ವಿದ್ಯಾ ಸಂಸ್ಥೆಯನ್ನು ಸಂಪರ್ಕಿಸುವ ರಸ್ತೆಯ ಮರು ನಿರ್ಮಾಣ, ಪ್ರವೇಶ ದ್ವಾರ, ಗೇಟ್, ಆವರಣ ಗೋಡೆಯ ನಿರ್ಮಾಣ, ಹೊಸ ಬಸ್ ನಿಲ್ದಾಣ ಮತ್ತು ಭೂಸ್ವಾಧೀನಗೊಂಡ ಜಾಗದ ಪರಿಹಾರ ಮೊತ್ತವನ್ನು ಕೂಡಲೇ ಸಂಸ್ಥೆಗೆ ನೀಡಬೇಕೆಂದು ಶಾಲಾ ಅಭಿವೃದ್ಧಿ ಸಮಿತಿಯವರು ಒತ್ತಾಯಿಸಿರುತ್ತಾರೆ.

ನಿರಂತರ ಮನವಿ_ ಒತ್ತಡಗಳ ಫಲ ಸ್ವರೂಪವಾಗಿ ವಿದ್ಯಾ ಸಂಸ್ಥೆಯ ಜರಿದ ಭಾಗಕ್ಕೆ ಸುಭದ್ರವಾದ ತಡೆಗೋಡೆ ಹಾಗೂ ಇತ್ತೀಚೆಗೆ ಆಟದ ಮೈದಾನದಲ್ಲಿ ಹೊಸದಾಗಿ ಬೋರ್ ವೆಲ್ ಕೊರೆದಿದ್ದು ಅದರಲ್ಲಿ ಒಳ್ಳೆಯ ನೀರು ಸಿಕ್ಕಿರುವುದು ಮಾತ್ರ ಸಮಾಧಾನಕರ ಅಂಶ.

ಶಾಲಾ ಕಟ್ಟಡದ ಪಕ್ಕದಲ್ಲಿಯೇ ವಿದ್ಯಾರ್ಥಿಗಳು ದಿನಂಪ್ರತಿ ಸಂಚರಿಸುವುದರಿಂದ, ತಡೆಗೋಡೆಯ ಅಂಚಿಗೆ ಮೇಲ್ಭಾಗದಲ್ಲಿ ಕನಿಷ್ಠ 5 ಅಡಿ ಎತ್ತರದ ಸುಭದ್ರವಾದ ಕಬ್ಬಿಣದ ಗ್ರಿಲ್ ಅಳವಡಿಸುವುದರಿಂದ, ವಿದ್ಯಾರ್ಥಿಗಳ ಸುರಕ್ಷತೆಯನ್ನು ಕಾಯ್ದುಕೊಳ್ಳಬಹುದು.

ಶಾಲಾ ಕಟ್ಟಡದ ಹಿಂಭಾಗ ಗುಡ್ಡ ಕುಸಿತದ ಭೀತಿ :


ಹೆದ್ದಾರಿ ಕಾಮಗಾರಿಗೆಂದು ಕಾಲೇಜು ಕಟ್ಟಡದ ಹಿಂಭಾಗದ ಸುಮಾರು 500ಕ್ಕೂ ಹೆಚ್ಚು ಲೋಡು ಮಣ್ಣು ತೆಗೆದಿರುವುದರಿಂದ, ಇದೀಗ ಅರ್ಧ ಉಳಿದಿರುವ ಗುಡ್ಡದ ಮಣ್ಣು ಕಾಲೇಜು ಕಟ್ಟಡಕ್ಕೆ ಬಿದ್ದು ಕಾಲೇಜು ಕಟ್ಟಡ ಹಾನಿ ಆಗುವ ಅಪಾಯದ ಸಂಭವವಿದೆ.

ಹೆದ್ದಾರಿ ಗುತ್ತಿಗೆದಾರ ಕಂಪನಿ ದಿಲೀಪ್ ಬಿಲ್ಡ್ ಕಾನ್ ಅಧಿಕಾರಿಗಳಿಗೆ ಗುಡ್ಡದ ಸಂಪೂರ್ಣ ಮಣ್ಣನ್ನು ತೆಗೆಯಲು ಸೂಚಿಸಿದ್ದರೂ ಕೂಡ ಆ ಕಡೆ ಗಮನ ಹರಿಸದೆ ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ.

ತೀವ್ರ ಪ್ರತಿಭಟನೆಯ ಎಚ್ಚರಿಕೆ:

ಇದೀಗ ಶಾಲಾ ಅಭಿವೃದ್ಧಿ ಸಮಿತಿಯವರು ,ಹಳೆ ವಿದ್ಯಾರ್ಥಿಗಳು , ಶಾಲೆಯ ವಿದ್ಯಾರ್ಥಿಗಳು ಮತ್ತು ಹೆದ್ದಾರಿ ಹೋರಾಟ ಸಮಿತಿಯ ಪ್ರಮುಖರು ಸಂಸ್ಥೆಗಳ ಜೊತೆಗೂಡಿ ಪ್ರತಿಭಟನೆ ನಡೆಸುವ ಸಿದ್ಧತೆ ಮಾಡುತ್ತಿದ್ದಾರೆಂದು, ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಅಶೋಕ್ ಶೆಟ್ಟಿ, ಹೆದ್ದಾರಿ ಹೋರಾಟ ಸಮಿತಿಯ ಪ್ರಮುಖ ಸಾಣೂರು ನರಸಿಂಹ ಕಾಮತ್ ರವರು ಎಚ್ಚರಿಸಿರುತ್ತಾರೆ

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top