ಸಾಣೂರಿನಲ್ಲಿ ಸರ್ವಿಸ್ ರಸ್ತೆ ಅಭಾವ: ಅಪಘಾತಗಳ ಸರಣಿ – ಜನರಲ್ಲಿ ಆತಂಕ
ಸಾಣೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದರೂ, ಅತಿ ಅವಶ್ಯಕವಾದ ಸುಮಾರು 2 ಕಿಲೋಮೀಟರ್ ಸರ್ವಿಸ್ ರಸ್ತೆ ನಿರ್ಮಾಣವಾಗದಿರುವುದು ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ. ಸಾಣೂರು ಬೈಪಾಸ್ ಸರ್ಕಲ್‌ನಿಂದ ಶಾಂಭವಿ ನದಿ ಸಂಪರ್ಕ ರಸ್ತೆಯವರೆಗೆ ಹಾಗೂ ಯುವಕ ಮಂಡಲ ಮೈದಾನದ ಎದುರು ಭಾಗದಿಂದ ಸೇತುವೆ ಆರಂಭದವರೆಗೆ ಸರ್ವಿಸ್ ರಸ್ತೆ ಅಗತ್ಯವಿದೆ ಎಂದು ಗ್ರಾಮಸ್ಥರು ಒತ್ತಾಯಿಸುತ್ತಿದ್ದಾರೆ.
ಈ ಭಾಗಕ್ಕೆ ಭೂಸ್ವಾಧೀನ ಪ್ರಕ್ರಿಯೆ ನಡೆದಿದ್ದರೂ, ಮೂಲ ಯೋಜನೆಯಲ್ಲಿ ಸರ್ವಿಸ್ ರಸ್ತೆ ಸೇರಿಸದ ಕಾರಣ ನಿರ್ಮಾಣಕ್ಕೆ ತೊಂದರೆ ಉಂಟಾಗಿದೆ. ಕಳೆದ ವರ್ಷ ಉಡುಪಿ ಸಂಸದರಾದ ಕೋಟ ಶ್ರೀನಿವಾಸ್ ಪೂಜಾರಿ ಅವರ ಗಮನಕ್ಕೆ ಈ ಸಮಸ್ಯೆಯನ್ನು ತಂದು ಮನವಿ ಸಲ್ಲಿಸಲಾಗಿತ್ತು. ಅವರು ಸಂಬಂಧಿತ ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಅಧಿಕಾರಿಗಳಿಗೆ ಶೀಘ್ರ ಪ್ರಸ್ತಾವನೆ ಸಲ್ಲಿಸಲು ಸೂಚಿಸಿದ್ದರೂ, ಇದುವರೆಗೆ ಯಾವುದೇ ಕ್ರಮ ಕೈಗೊಳ್ಳದಿರುವುದಾಗಿ ಆರೋಪಿಸಲಾಗಿದೆ.
ಈ ಬಗ್ಗೆ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ ಸಂದರ್ಭದಲ್ಲಿ, ಹೆದ್ದಾರಿ ಇಲಾಖೆಯ ಇಂಜಿನಿಯರ್ ಮೂಲ ಯೋಜನೆಯಲ್ಲಿ ಸರ್ವಿಸ್ ರಸ್ತೆ ಅಂದಾಜು ಪಟ್ಟಿ ಇಲ್ಲದ ಕಾರಣ, ಯೋಜನೆ ಪೂರ್ಣಗೊಂಡ ನಂತರವೇ ಹೊಸ ಪ್ರಸ್ತಾವನೆ ಸಲ್ಲಿಸಬಹುದು ಎಂದು ತಿಳಿಸಿದ್ದಾರೆ. ಈ ನಿಲುವು ಜನರ ಅಸಮಾಧಾನವನ್ನು ಮತ್ತಷ್ಟು ಹೆಚ್ಚಿಸಿದೆ.
ಸರ್ವಿಸ್ ರಸ್ತೆ ಇಲ್ಲದ ಪರಿಣಾಮ, ಸಾಣೂರಿನ ಹತ್ತಾರು ಅಡ್ಡರಸ್ತೆಗಳಿಂದ ವಾಹನಗಳು ನೇರವಾಗಿ ಹೆದ್ದಾರಿಗೆ ಪ್ರವೇಶಿಸುತ್ತಿದ್ದು, ಅಪಘಾತಗಳ ಭೀತಿ ಹೆಚ್ಚಾಗಿದೆ. ಕಳೆದ ಮಾರ್ಚ್ 18 ರಂದು ಯುಗಾದಿ ಹಬ್ಬದ ಮುನ್ನಾ ದಿನ ಸಂಜೆ ಸಂಭವಿಸಿದ ಅಪಘಾತದಲ್ಲಿ, ಸ್ಕೂಟರ್ ಸವಾರರು ಸ್ಥಳದಲ್ಲೇ ಮೃತಪಟ್ಟ ಘಟನೆ ಸಾರ್ವಜನಿಕರಲ್ಲಿ ಭೀತಿ ಮೂಡಿಸಿದೆ.

ಸಾಣೂರು ನರಸಿಂಹ ಕಾಮತ್
ಇದಲ್ಲದೆ, ವಾಹನ ಸವಾರರು ವಿರುದ್ಧ ದಿಕ್ಕಿನಲ್ಲಿ ಸಂಚರಿಸುವುದು ಸಾಮಾನ್ಯವಾಗಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಅಪಘಾತಗಳು ಸಂಭವಿಸುವ ಸಾಧ್ಯತೆ ಇದೆ ಎಂದು ಸ್ಥಳೀಯರು ಎಚ್ಚರಿಸಿದ್ದಾರೆ.
ಸಾಣೂರು ನರಸಿಂಹ ಕಾಮತ್ ಸೇರಿದಂತೆ ರಾಷ್ಟ್ರೀಯ ಹೆದ್ದಾರಿ ಹೋರಾಟ ಸಮಿತಿ ಪ್ರಮುಖರು, ತಕ್ಷಣವೇ ಬಾಕಿ ಉಳಿದಿರುವ 2 ಕಿಲೋಮೀಟರ್ ಸರ್ವಿಸ್ ರಸ್ತೆ ನಿರ್ಮಾಣ ಕಾರ್ಯ ಕೈಗೊಂಡು ಜನರ ಸುರಕ್ಷತೆಗೆ ಆದ್ಯತೆ ನೀಡಬೇಕೆಂದು ಆಗ್ರಹಿಸಿದ್ದಾರೆ.


























