ಸಹಕಾರ ಕ್ಷೇತ್ರದ ಧ್ಯೇಯ -ತನ್ನ ಉದ್ಧಾರ ತನ್ನಿಂದಲೇ – ಎಂ.ವೀರಪ್ಪ ಮೊಯಿಲಿ
-ವರದಿ: ರಾಯಿ ರಾಜಕುಮಾರ ಮೂಡುಬಿದಿರೆ

ಮೂಡುಬಿದಿರೆ: ವಿವಿಧ ಜೀವಿಗಳು ವಿವಿಧ ರೀತಿಯಿಂದ ಬದುಕು ಕಟ್ಟಿಕೊಂಡಿವೆ. ಸಹಕಾರ ಕೇಂದ್ರಗಳು ಹಣದ ಭರವಸೆಯ ನಿಜ ಕೇಂದ್ರಗಳಾಗಿ ಸದುಪಯೋಗ ಆಗುವಂತೆ ನೋಡಿಕೊಳ್ಳಬೇಕಾಗಿದೆ ಎಂದು ಮೂಡುಬಿದಿರೆ ಜೈನ ಮಠದ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯ ಸ್ವಾಮೀಜಿ ಹೇಳಿದರು.



ಮೂಡುಬಿದಿರೆ ಕೋ-ಓಪರೇಟಿವ್ ಸರ್ವಿಸ್ ಸೊಸೈಟಿ, ಅ. ಅಯೋಜಿಸಿದ 71ನೇ ಅಖಿಲ ಭಾರತ ಸಹಕಾರ ಸಪ್ತಾಹ 2024 – ಕಲ್ಪವೃಕ್ಷ ಪ್ರಶಸ್ತಿ ಮತ್ತು ಸಮಗ್ರ ಸಾಧಕ ಪ್ರಶಸ್ತಿ ಪ್ರದಾನ ಸಪ್ತ ಸಂಧ್ಯಾ – ಸಹಕಾರಿ ಚಿಂತನ ಸರಣಿ ಮತ್ತು ಸಾಂಸ್ಕೃತಿಕ ವೈಭವ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.
ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಕಾರ್ಯಕ್ರಮ ಉದ್ಘಾಟನೆ ನೆರವೇರಿಸಿ ಮೂಡುಬಿದಿರೆಯ ತಮ್ಮ ಬಾಲ್ಯದ ದಿನಗಳ ಸವಿ ನೆನಪು ಹಂಚಿ ಕೊಂಡರು. ತನ್ನ ಉದ್ಧಾರ ತನ್ನಿಂದಲೇ ಎಂಬ ಸಹಕಾರದ ಧ್ಯೇಯ ದೊಂದಿಗೆ ಸಜ್ಜನಿಕೆಯ ಮಹಾಜನರು ಸಾಮರಸ್ಯದಿಂದ ಬೆಳೆಯಬಲ್ಲರು ಎಂದರು.
ಇದೇ ಸಂದರ್ಭದಲ್ಲಿ 53 ವರ್ಷಗಳಿಂದ ನಿರ್ದೇಶಕರಾಗಿ, ಅಧ್ಯಕ್ಷರು, ಉಪಾಧ್ಯಕ್ಷರು ಸೇರಿದಂತೆ ಇತರ ಕಾರ್ಯವನ್ನು ನಿರ್ವಹಿಸಿ ಸೊಸೈಟಿಯನ್ನು ಅತ್ಯುನ್ನತ ಮಟ್ಟಕ್ಕೆ ಏರಿಸಿದ ಎಂ ಗಣೇಶ್ ನಾಯಕ್ ಅವರಿಗೆ ಆರತಿ ಬೆಳಗಿ, ಚಿನ್ನದ ಪದಕ, ಬೆಳ್ಳಿಯ ಫಲಕ ದೊಂದಿಗೆ ಸಹಕಾರ ಕಲ್ಪವೃಕ್ಷ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಲಾಯಿತು.
ಎಂ ಸಿ ಎಸ್ ಸೊಸೈಟಿಯ ವಿಶೇಷ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ ಚಂದ್ರಶೇಖರ್ ಅವರು ಸ್ವಾಗತಿಸಿ ಪ್ರಾಸ್ತಾವಿಕ ಮಾತಿನೊಂದಿಗೆ ಅಭಿನಂದನಾ ಭಾಷಣವನ್ನು ಮಾಡಿದರು.
ನಾಲ್ಕು ದೇವಾಲಯಗಳಿಗೆ ಆರ್ಥಿಕ ನೆರವಿನ ಚೆಕ್ ಹಸ್ತಾಂತರಿಸಲಾಯಿತು.
ವೇದಿಕೆಯಲ್ಲಿ ಮಾಜಿ ಸಚಿವ ಕೆ ಅಭಯಚಂದ್ರ ಜೈನ್, ಚೌಟದ ಅರಮನೆಯ ಕುಲದೀಪ್ ಎಂ, ಮಂಗಳೂರು ಡಿ ಆರ್ ಪಿ ಎಸ್ ನ ಡಾ. ರಮೇಶ್, ಜಯಶ್ರೀ ಅಮರನಾಥ ಶೆಟ್ಟಿ ಹಾಜರಿದ್ದರು. ಸೊಸೈಟಿಯ ಅಧ್ಯಕ್ಷ ಎಂ ಬಾಹುಬಲಿ ಪ್ರಸಾದ್ ಅಧ್ಯಕ್ಷತೆ ವಹಿಸಿದ್ದರು.
ಶಾರ್ವರಿ ಪಿ ದೇವಾಡಿಗ ರಿಂದ ವಾದ್ಯ ನೀನಾದ, ಯಕ್ಷನಿಧಿ ಇವರಿಂದ ಯಕ್ಷಗಾನ ಕಾರ್ಯಕ್ರಮ ನಡೆಯಿತು. ಚೇತನ ಹೆಗ್ಡೆ ಕಾರ್ಯಕ್ರಮ ನಿರ್ವಹಿಸಿದರು.




































