ಸರ್ಕಾರ ದಲಿತರ ಅಭಿವೃದ್ಧಿಗೆ ಮೀಸಲಿಟ್ಟ ಹಣವನ್ನು ಇತರ ಯೋಜನೆಗಳಿಗೆ ವಿನಿಯೋಗ : ಬಳ್ಕೂರು
RB NEWS
Bureau Report
ಸರ್ಕಾರ ದಲಿತರ ಅಭಿವೃದ್ಧಿಗೆ ಮೀಸಲಿಟ್ಟ ಹಣವನ್ನು ಇತರ ಯೋಜನೆಗಳಿಗೆ ವಿನಿಯೋಗ : ಬಳ್ಕೂರು
ಸರ್ಕಾರ ದಲಿತರ ಅಭಿವೃದ್ಧಿಗೆ ಮೀಸಲಿಟ್ಟ ಹಣವನ್ನು ಇತರ ಯೋಜನೆಗಳಿಗೆ ವಿನಿಯೋಗ : ಬಳ್ಕೂರು
ಉಡುಪಿ : ಸರ್ಕಾರ ದಲಿತರ ಅಭಿವೃದ್ಧಿಗೆ ಮೀಸಲಿಟ್ಟ ಹಣವನ್ನು ಇತರ ಯೋಜನೆಗಳಿಗೆ ಬಳಸುತ್ತಿರುವುದರಿಂದ ದಲಿತ ಕುಟುಂಬಗಳ ವೈಯಕ್ತಿಕ ಅಭಿವೃದ್ಧಿಗೆ ಅಡಚಣೆ ಉಂಟಾಗಿದೆ. ಕೇಂದ್ರ ಸರ್ಕಾರದ ಖಾಸಗೀಕರಣ ನೀತಿಯಿಂದ ಸರ್ಕಾರಿ ಸಂಸ್ಥೆಗಳು ದುರ್ಬಲಗೊಳ್ಳುತ್ತಿವೆ. ಮುಂದಿನ ದಿನಗಳಲ್ಲಿ ಖಾಸಗಿ ಕ್ಷೇತ್ರದಲ್ಲೂ ಮೀಸಲಾತಿ ನೀತಿ ಅನುಕರಣೆಯಾಗಬೇಕು ಎಂದು ದಲಿತ ಹಕ್ಕುಗಳ ಸಮಿತಿಯ ಜಿಲ್ಲಾಧ್ಯಕ್ಷ ಸಂಜೀವ ಬಳ್ಕೂರು ಹೇಳಿದರು.
ಕುಂದಾಪುರ ತಾಲೂಕು ಬಳ್ಕೂರು ಗ್ರಾಮದ ಬಿಎಚ್ ರಸ್ತೆಯ ಸಮೀಪದ ತುಳಸಿ ಕಾಂಪ್ಲೆಕ್ಸ್ ಸಭಾಂಗಣದಲ್ಲಿ ದಲಿತ ಹಕ್ಕುಗಳ ಸಮಿತಿ ಆಯೋಜಿಸಲಾಗಿದ್ದ ಜನಜಾಗೃತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಿಐಟಿಯು ರಾಜ್ಯ ಕಾರ್ಯದರ್ಶಿ ಸುರೇಶ್ ಕಲ್ಲಾಗ ಮುಖ್ಯ ಭಾಷಣ ಮಾಡಿದರು. ದಲಿತರು ಹಾಗೂ ದಲಿತೇತರರು ಒಗ್ಗಟ್ಟಿನಿಂದ ಸಂಘಟಿತರಾಗಿ ಬಲಿಷ್ಠ ಸಮಾಜ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದು ಅವರು ಕರೆ ನೀಡಿದರು. ಅವರು ಕಾರ್ಮಿಕ ಕಾರ್ಡುಗಳ ಮಹತ್ವವನ್ನು ವಿವರಿಸುತ್ತಾ, ಸರ್ಕಾರದಿಂದ ಲಭ್ಯವಾಗುವ ಸೌಲಭ್ಯಗಳನ್ನು ಪಡೆಯಲು ಕಾರ್ಮಿಕರು ತಮ್ಮ ಕಾರ್ಮಿಕ ಕಾರ್ಡ್ಗಳನ್ನು ನಿಯಮಿತವಾಗಿ ನವೀಕರಿಸಿಕೊಳ್ಳಬೇಕು ಎಂದು ತಿಳಿಸಿದರು. ರಾಜ್ಯದಲ್ಲಿ ಜಾರಿಗೆ ಬಂದಿರುವ ಕನಿಷ್ಠ ವೇತನ ₹25,000 ಕಡಿಮೆ ಮೊತ್ತವಾಗಿದ್ದು, ತಿಂಗಳಿಗೆ ಕನಿಷ್ಠ ₹36,000 ನೀಡಬೇಕು ಎಂಬ ಬೇಡಿಕೆಯನ್ನು ಸಿಐಟಿಯು ಸಂಘಟನೆ ರಾಜ್ಯ ಸರ್ಕಾರದ ಮುಂದಿಟ್ಟಿದೆ ಎಂದರು. ಸಂಘಟನೆಯ ಮಹತ್ವ ಅರಿತು ಎಲ್ಲರೂ ಸಂಘಟಿತರಾಗಬೇಕು ಎಂದು ಮನವಿ ಮಾಡಿದರು. ದಲಿತ ಹಕ್ಕುಗಳ ಸಮಿತಿಯ ಜಿಲ್ಲಾ ಕಾರ್ಯದರ್ಶಿ ರವಿ ವಿ.ಎಂ. ಮಾತನಾಡಿ, ಸಮಿತಿಯ ಹೋರಾಟಗಳಲ್ಲಿ ಸಕ್ರಿಯವಾಗಿ ಭಾಗವಹಿಸುವ ಅಗತ್ಯವಿದೆ ಎಂದು ಹೇಳಿದರು. ಸಂಘಟನೆ ಹೋರಾಟ, ಸರ್ಕಾರಿ ಸೌಲಭ್ಯಗಳು ಹಾಗೂ ದಲಿತ ಸಬಲೀಕರಣ ಕುರಿತಾಗಿ ಅವರು ವಿವರಿಸಿದರು.
ಸಭೆಯ ಆರಂಭದಲ್ಲಿ ಜಿಲ್ಲಾ ಸಮಿತಿಯ ಸದಸ್ಸೆ ಸುಶೀಲ ಬಳ್ಕೂರು ಸ್ವಾಗತಿಸಿದರು. ಘಟಕದ ಅಧ್ಯಕ್ಷ ಅಣ್ಣಪ್ಪ ಬಳ್ಕೂರು ವಂದಿಸಿದರು. ಘಟಕದ ಸಹ ಸಂಚಾಲಕ ವಿಜಯ್ ಕುಮಾರ್ ಬಳ್ಕೂರು ಸಭೆಯನ್ನು ಆಯೋಜಿಸಿದರು. ಸಭೆಯಲ್ಲಿ ಹಿರಿಯ ಮುಖಂಡರಾದ ಬಾಬು ಬಳ್ಕೂರು ಹಾಗೂ ಸಂಹಿತ್ ಸುಜಯ್ ಬಳ್ಕೂರು ಉಪಸ್ಥಿತರಿದ್ದರು.