ಸರ್ಕಾರಕ್ಕೆ ಹಲವು ಬೇಡಿಕೆಗಳನ್ನು ಮುಂದಿಟ್ಟ ಮಲೆಕುಡಿಯ ಸಂಘ
ಕಾರ್ಕಳ : ಉಡುಪಿ ಜಿಲ್ಲೆಯ ಪಶ್ಚಿಮಘಟ್ಟ ತಪ್ಪಲಿನ ಪ್ರದೇಶಗಳಲ್ಲಿ ವಾಸವಾಗಿರುವ ಅರಣ್ಯ ಬುಡಕಟ್ಟು ಪರಿಶಿಷ್ಟ ಪಂಗಡದ ಜನಾಂಗವಾದ ಮಲೆಕುಡಿಯ ಸಮುದಾಯದ ಸಮಗ್ರ ಅಭಿವೃದ್ಧಿಗಾಗಿ ಸರ್ಕಾರಕ್ಕೆ ಹಲವು ಬೇಡಿಕೆಗಳನ್ನು ಮುಂದಿಟ್ಟಿದೆ.
ಉಡುಪಿ ಜಿಲ್ಲಾ ಪ್ರೆಸ್ ಕ್ಲಬ್ ನಲ್ಲಿ ಆಯೋಜಿಸಿದ ಸುದ್ದಿಗೋಷ್ಠಿಯಲ್ಲಿ ಮಲೆಕುಡಿಯ ಸಂಘ ಉಡುಪಿ ಜಿಲ್ಲಾಧ್ಯಕ್ಷ ಗಂಗಾಧರ್ ಈದು ಅವರು ಈ ಕುರಿತು ಮಾತನಾಡಿದರು.
ಮಲೆಕುಡಿಯ ಸಮುದಾಯದ ಅಭಿವೃದ್ಧಿಗಾಗಿ ರೂ 100 ಕೋಟಿ ವಿಶೇಷ ಅನುದಾನ ಬಿಡುಗಡೆ ಮಾಡುವುದು.ಕೃಷಿ ಭೂಮಿ ರಹಿತರಿಗೆ 400 ಎಕರೆ ಜಾಗ ಮೀಸಲಿಡಬೇಕು.
ರಾಷ್ಟ್ರೀಯ ಉದ್ಯಾನವನ, ಅಭಯಾರಣ್ಯದಿಂದ ಸ್ವ – ಇಚ್ಛೆಯಿಂದ ಹೊರ ಬರುವ ಕುಟುಂಬಗಳಿಗೆ ಗುಣಮಟ್ಟದ ಬದುಕು ಕಟ್ಟಿಕೊಳ್ಳಲು ವಸತಿ ಸಹಿತ ಕೃಷಿ ಭೂಮಿ, ಶಿಕ್ಷಣ, ಆರೋಗ್ಯ, ಉದ್ಯೋಗ ಸೇರಿದಂತೆ ಪೂರಕವಾದ ವ್ಯವಸ್ಥೆಗಳನ್ನು ಕಲ್ಪಿಸುವುದು. ಪರಿಶಿಷ್ಟ ಪಂಗಡ ಒಳ ಮೀಸಲಾತಿ ಜಾರಿಗೊಳಿಸಬೇಕು ಹಾಗೂ ಸರ್ಕಾರಿ ಉದ್ಯೋಗ ನೇಮಕಾತಿಯಲ್ಲಿ ಅರಣ್ಯ ಇಲಾಖೆಯಲ್ಲಿರುವ ಸ್ಥಳೀಯ ಅರಣ್ಯ ಬುಡಕಟ್ಟು ಮೀಸಲಾತಿಯನ್ನು ಎಲ್ಲಾ ಇಲಾಖೆಗಳಿಗೆ ವಿಸ್ತರಣೆ ಮಾಡಬೇಕು. ಅದಿವಾಸಿ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು. ಕಸ್ತೂರಿ ರಂಗನ್ ವರದಿ ಜಾರಿಯನ್ನು ತಿರಸ್ಕರಿಸಿ ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿರುವ ಎಲ್ಲಾ ಕುಟುಂಬಗಳಿಗೆ ರಸ್ತೆ, ವಿದ್ಯುತ್, ವಸತಿ ಸೇರಿದಂತೆ ಎಲ್ಲಾ ರೀತಿಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವುದು.
ಸಮುದಾಯದಲ್ಲಿ ವೃತ್ತಿ ಶಿಕ್ಷಣ ಪಡೆದವರಿಗೆ ಸಂಬಂಧಿಸಿದ ಇಲಾಖೆಗಳಲ್ಲಿ ನೌಕರಿ ನೀಡುವುದು ಅರಣ್ಯ ಹಕ್ಕು ಕಾಯ್ದೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಿ, ಅರಣ್ಯ ಹಕ್ಕುಪತ್ರ ರೈತರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್ ಒದಗಿಸುವುದು ಇದರ ಒಳಗೊಂಡಿದೆ.

ಕರ್ನಾಟಕ ರಾಜ್ಯ ಸರ್ಕಾರದ ಮುಖ್ಯಮಂತ್ರಿಯವರಿಗೆ ನವಂಬರ್ 26ರಂದು ಜಿಲ್ಲಾಧಿಕಾರಿಯವರ ಮೂಲಕ ಮನವಿ ಸಲ್ಲಿಸಲಾಯಿತು.
ರಾಜ್ಯ ಮಲೆಕುಡಿಯ ಸಂಘದ ಅಧ್ಯಕ್ಷ ಶ್ರೀಧರ ಗೌಡ ಈದು,ಜಿಲ್ಲಾ ಮಲೆಕುಡಿಯ ಸಂಘ ಪೂರ್ವಾಧ್ಯಕ್ಷ ಸುಧಾಕರ ಗೌಡ ನಾಡ್ಪಾಲು, ಜಿಲ್ಲಾ ಉಪಾಧ್ಯಕ್ಷೆ ಶೋಭಾ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಶೋಕ ಕೆರ್ವಾಶೆ, ಜಿಲ್ಲಾವಕ್ತಾರ ದಿನೇಶ್ ಗೌಡ ಉಪಸ್ಥಿತರಿದ್ದರು.



































