ಸರಪಾಡಿ ಬಳಿ ನೇತ್ರಾವತಿ ನದಿಯಲ್ಲಿ ಶವ ಪತ್ತೆ!
ಭಾಗ-೩
ಕೆ.ಎಂ. ಇಸ್ಮಾಯಿಲ್ ಅವರು ನಾಪತ್ತೆಯಾಗಿ ಅಥವಾ ಪೊಲೀಸ್ ಜೀಪಿನಲ್ಲಿ ಅಪಹರಿಸಲ್ಪಟ್ಟು ದಿನ 4 ಕಳೆದರೂ ಯಾವುದೇ ಮಾಹಿತಿಗಳು ಲಭ್ಯವಾಗಿರಲಿಲ್ಲ. ಬಂಟ್ವಾಳ ಪೊಲೀಸರು ಒಂದು ಕಡೆಯಿಂದ ತನಿಖೆ ಶುರು ಹಚ್ಚಿದರೆ ಸಿಓಡಿ ಎಸ್ಪಿ ಎಲ್. ರೇವಣ್ಣಸಿದ್ದಯ್ಯ ಅವರ ನೇತೃತ್ವದಲ್ಲಿ ಬೇರೆಯೇ ರೀತಿಯಲ್ಲಿ ತನಿಖೆ ಆರಂಭವಾಗಿತ್ತು. ಸಿಓಡಿ ಪೊಲೀಸರ ತಂಡ ಬಂಟ್ವಾಳದ ಪ್ರವಾಸಿ ಬಂಗಲೆಯಲ್ಲಿ ತಳವೂರಿ ತನಿಖೆ ನಡೆಸುತ್ತಿತ್ತು. ಈ ಸಂದರ್ಭದಲ್ಲಿ ಸಿಓಡಿ ಪೊಲೀಸರಿಗೆ ಮೊದಲ ಅನುಮಾನ ಆರಂಭವಾದದ್ದೇ ಸ್ಥಳೀಯ ಪೊಲೀಸರ ಮೇಲೆ. ಅದಕ್ಕೆ ಕಾರಣವೂ ಇತ್ತು.
ಕೆ.ಎಂ. ಇಸ್ಮಾಯಿಲ್ ಅವರು ಸ್ಥಳೀಯ ಕಾಂಗ್ರೆಸ್ ಮುಖಂಡರು. ಗ್ರಾಮ ಮಟ್ಟದಿಂದ ರಾಜ್ಯ ಮಟ್ಟದವರೆಗೆ ಸಂಪರ್ಕ ಬೆಳೆಸಿಕೊಂಡಿದ್ದವರು. ಸ್ಥಳೀಯ ಪೊಲೀಸರೊಂದಿಗೆ ಒಡನಾಟ ಇಟ್ಟುಕೊಂಡಿದ್ದವರು. ಪೊಲೀಸರಿಗೆ ಮಾಹಿತಿದಾರರಾಗಿಯೂ ಕೆಲಸ ಮಾಡುತ್ತಿದ್ದವರು. ತುರ್ತು ಪರಿಸ್ಥಿತಿ ಜಾರಿಯಲ್ಲಿದ್ದುದರಿಂದ, ಮೀಸಾ ಕಾಯ್ದೆ ಅಸ್ತಿತ್ವದಲ್ಲಿದ್ದುದರಿಂದ ಸರಕಾರದ ವಿರುದ್ಧ ಯಾರೆಲ್ಲಾ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ ಎಂಬ ಬಗ್ಗೆ ಮಾಹಿತಿಗಳನ್ನು ಪೊಲೀಸರಿಗೆ ನೀಡುತ್ತಿದ್ದರು. ಆ ಸಂದರ್ಭದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದೊಂದಿಗೆ ಗುರುತಿಸಿಕೊಂಡಿದ್ದವರ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡುತ್ತಿದ್ದರು. ಬಹುತೇಕ ಆರೆಸ್ಸೆಸ್ ಕಾರ್ಯಕರ್ತರು ಭೂಗತರಾಗಿದ್ದುಕೊಂಡೇ ಸರಕಾರದ ವಿರುದ್ಧ ಜನಾಂದೋಲನ ರೂಪಿಸುತ್ತಿದ್ದರು. ಇದನ್ನು ತಡೆಯಲು ಪೊಲೀಸರು ಇಸ್ಮಾಯಿಲ್ರಂತಹ ಕಾಂಗ್ರೆಸ್ ಮುಖಂಡರನ್ನು ಹೆಚ್ಚಾಗಿ ಅವಲಂಬಿಸುತ್ತಿದ್ದರು. ಇದರಿಂದಾಗಿ ಕಾಣೆಯಾದ ಅಥವಾ ಅಪಹರಿಸಲ್ಪಟ್ಟ ಇಸ್ಮಾಯಿಲ್ ಅವರ ಪತ್ತೆ ಪೊಲೀಸರ ಆದ್ಯ ಕರ್ತವ್ಯವಾಗಿತ್ತು. ಆ ನಿಟ್ಟಿನಲ್ಲಿಯೇ ತನಿಖೆಯ ಜಾಡು ಸಾಗುತ್ತಿತ್ತು.
ಇಸ್ಮಾಯಿಲ್ ಅವರನ್ನು ಸೆಪ್ಟಂಬರ್ ೪ರಂದು ರಾತ್ರಿ 10.30ರ ವೇಳೆಗೆ ಪೊಲೀಸ್ ಎಂದು ಬರೆದಿದ್ದ ಜೀಪಿನಲ್ಲಿ ಕರೆದುಕೊಂಡು ಹೋಗಲಾಗಿತ್ತು. ಆ ಜೀಪಿನಲ್ಲಿ ಇದ್ದವರು ಪೊಲೀಸ್ ಸಮವಸ್ತ್ರವನ್ನು ಧರಿಸಿದ್ದರು.
ಇಸ್ಮಾಯಿಲ್ ಅವರನ್ನು ಅಂಗಡಿಯಿಂದ ಹೊರಗೆ ಕರೆದು ಜೀಪಿನ ಮುಂಭಾಗದ ಸೀಟಿನಲ್ಲಿ ಕುಳಿತಿದ್ದ ವ್ಯಕ್ತಿ ಮಾತನಾಡಿಸಿದ್ದರು. ಆ ಮಾತುಕತೆಯ ವೇಳೆ ಇಸ್ಮಾಯಿಲ್ ಅವರು ಮೇಲೆ ಕಟ್ಟಿದ್ದ ಲುಂಗಿಯನ್ನು ಕೆಳಗೆ ಇಳಿಸಿ ಮಾತನಾಡಿದ್ದರು. ಇದನ್ನು ಗಮನಿಸಿದ್ದ ಇಸ್ಮಾಯಿಲ್ ಅವರ ಅಂಗಡಿಯ ಪಕ್ಕದ ಕೆ.ಎನ್. ಲಾಂಡ್ರಿಯ ನರಸಿಂಹ ಮಡಿವಾಳ ಅವರು ಬಂಟ್ವಾಳ ಪೊಲೀಸರಿಗೆ ನೀಡಿದ್ದ ದೂರಿನಲ್ಲಿ ಉಲ್ಲೇಖಿಸಿದ್ದರು. ಇದರಿಂದಾಗಿ ಇಸ್ಮಾಯಿಲ್ ಅವರು ಜೀಪಿನಲ್ಲಿ ಮಾತನಾಡಿದ್ದಂತಹ ವ್ಯಕ್ತಿ ಜೀಪಿನಲ್ಲಿ ಇದ್ದಂತಹ ಇತರ ನಾಲ್ವರ ಪೈಕಿ ಉನ್ನತ ದರ್ಜೆಯವರು ಎಂಬುದು ಸಿಓಡಿ ಪೊಲೀಸರ ಊಹೆಯಾಗಿತ್ತು.

ಇಸ್ಮಾಯಿಲ್ ಅವರನ್ನು ಕರೆದೊಯ್ದಿದ್ದ ಜೀಪಿನ ಬಗ್ಗೆ ಸಿಓಡಿ ಪೊಲೀಸರ ತಂಡ ತನಿಖೆಯನ್ನು ಕೈಗೆತ್ತಿಕೊಂಡಿದ್ದರು. ಅವರಿಗೆ ಮೊದಲು ಸಂಶಯ ಬಂದದ್ದೇ ಬಂಟ್ವಾಳ ಪೊಲೀಸ್ ವೃತ್ತ ನಿರೀಕ್ಷಕರ ಜೀಪಿನ ಮೇಲೆ.
ಆ ಜೀಪು ಇಸ್ಮಾಯಿಲ್ ಅವರು ನಾಪತ್ತೆ ಆದ ಸಂದರ್ಭದಲ್ಲಿ ಎಲ್ಲಿತ್ತು ಎಂಬುದನ್ನು ಖಚಿತಪಡಿಸಿಕೊಳ್ಳಲು ಸಿಓಡಿ ತಂಡ ನಿರ್ಧರಿಸಿತ್ತು. ಅದಕ್ಕಾಗಿ ಸಿಓಡಿ ಪೊಲೀಸರು ಬಂಟ್ವಾಳ ವೃತ್ತ ನಿರೀಕ್ಷಕರಾಗಿದ್ದ ಸುಂದರ್ ಪೊಸಮನೆ ಅವರನ್ನು ಬಂಟ್ವಾಳ ಐಬಿಗೆ ಕರೆಸಿ ವಿಚಾರಣೆಗೆ ಗುರಿಪಡಿಸಿದರು.
ಅವರಿಗೆ ಬಂಟ್ವಾಳ ಪೊಲೀಸ್ ಇನ್ಸ್ಪೆಕ್ಟರ್ ಸುಂದರ್ ಪೊಸಮನೆ ಅವರ ಮೇಲೆ ಸಂಶಯ ಬರಲು ಕಾರಣ ಇತ್ತು. ಇಸ್ಮಾಯಿಲ್ ಅವರು ನಾಪತ್ತೆಯಾದ ದಿನದಂದು ಪೊಲೀಸ್ ಇನ್ಸ್ಪೆಕ್ಟರ್ ಅವರ ಇಲಾಖಾ ಜೀಪು ಪೊಲೀಸ್ ಠಾಣೆಯಲ್ಲಿ ಇರಲಿಲ್ಲ. ಬದಲಾಗಿ ಬಂಟ್ವಾಳದ ಗ್ಯಾರೇಜೊಂದರಲ್ಲಿತ್ತು. ಅದನ್ನು ಸಣ್ಣ ರಿಪೇರಿಗಾಗಿ ಇಡಲಾಗಿತ್ತು. ಸಾಮಾನ್ಯವಾಗಿ ಪೊಲೀಸ್ ವಾಹನಗಳನ್ನು ಸ್ಥಳೀಯ ಗ್ಯಾರೇಜುಗಳಲ್ಲಿ ರಿಪೇರಿಗೆ ಇಡುವಂತಿಲ್ಲ. ಪೊಲೀಸ್ ವಾಹನಗಳ ದುರಸ್ತಿ ಮತ್ತು ಮೇಲ್ವಿಚಾರಣೆಯ ಜವಾಬ್ದಾರಿ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಇನ್ಸ್ಪೆಕ್ಟರ್ ಅವರದ್ದು. ಜೀಪಿನಲ್ಲಿ ಏನಾದರೂ ತೊಂದರೆಯಾದಲ್ಲಿ ಅದನ್ನು ಮಂಗಳೂರಿನ ಡಿಎಆರ್ಗೇ ಕಳುಹಿಸಬೇಕು. ಅಲ್ಲಿನ ಅಧಿಕಾರಿಗಳು ಅಧಿಕೃತ ಗ್ಯಾರೇಜಿನಲ್ಲಿ ರಿಪೇರಿ ಮಾಡಿಸಬೇಕು. ಸಂಬoಧಿತ ಅಧಿಕಾರಿಗೆ ಬದಲಿ ವಾಹನದ ವ್ಯವಸ್ಥೆ ಮಾಡಬೇಕು. ಆದರೆ ಈ ಪ್ರಕ್ರಿಯೆ ತಡವಾಗುವುದರಿಂದ ಮತ್ತು ಬಂಟ್ವಾಳ ಪೊಲೀಸ್ ಠಾಣಾ ವ್ಯಾಪ್ತಿ ಸೂಕ್ಷ್ಮವಾಗಿರುವುದರಿಂದ ಇನ್ಸ್ಪೆಕ್ಟರ್ ಸುಂದರ್ ಪೊಸಮನೆ ಅವರು ಜೀಪನ್ನು ಸ್ಥಳೀಯ ಗ್ಯಾರೇಜಿನಲ್ಲಿ ರಿಪೇರಿಗೆ ಇರಿಸಿದ್ದರು. ಅದೇ ದಿನ ಪೊಲೀಸ್ ಜೀಪನ್ನು ಹೋಲುವಂತಹ ಜೀಪಿನಲ್ಲಿ ಇಸ್ಮಾಯಿಲ್ ಅವರನ್ನು ಕರೆದೊಯ್ಯಲಾಗಿತ್ತು.
ಇನ್ಸ್ಪೆಕ್ಟರ್ ಸುಂದರ್ ಪೊಸಮನೆ ಅವರ ವಿಚಾರಣೆಯನ್ನು ಸಿಓಡಿ ಪೊಲೀಸರು ಬಂಟ್ವಾಳದ ಐಬಿಯಲ್ಲಿ ನಡೆಸುತ್ತಿರುವಂತೆಯೇ ಸೆಪ್ಟಂಬರ್ ೮ರಂದು ಸಂಜೆ ವೇಳೆ ಸರಪಾಡಿಯ ನೇತ್ರಾವತಿ ನದಿಯ ಮಧ್ಯದಲ್ಲಿದ್ದ ಕಲ್ಲಿನ ಮೇಲೆ ಅಪರಿಚಿತ ಮೃತದೇಹವೊಂದು ಬೆತ್ತಲೆ ಸ್ಥಿತಿಯಲ್ಲಿ ಕವುಚಿಬಿದ್ದಿದೆ ಎಂಬ ಮಾಹಿತಿ ದೊರೆಯಿತು.
ಕಲ್ಲಡ್ಕ ಇಸ್ಮಾಯಿಲ್ ಅವರು ನಾಪತ್ತೆಯಾಗಿರುವ ವಿಚಾರ ಊರಿಡೀ ಪ್ರಚಾರವಾಗಿತ್ತು ಮತ್ತು ಸ್ಥಳೀಯವಾಗಿ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿತ್ತು. ಅಂತಹ ಸಂದರ್ಭದಲ್ಲಿ ಕಡೇಶಿವಾಲಯ ದೇವಸ್ಥಾನದ ಹತ್ತಿರ, ಸರಪಾಡಿ ಸಮೀಪದ ಪೆರ್ಲ ಎಂಬಲ್ಲಿ ನೇತ್ರಾವತಿ ನದಿಯ ಮಧ್ಯ ಭಾಗದಲ್ಲಿ ಕಲ್ಲಿನ ಕೊರಕಲಿನಲ್ಲಿ ಮನುಷ್ಯನ ದೇಹದ ಕಾಲು ಕಾಣುತ್ತಿದೆ ಎಂಬ ಮಾಹಿತಿ ಪೆರ್ಲದ ಸುಲೇಮಾನ್ ಎಂಬವರಿಗೆ ತಿಳಿಯಿತು.
ಅವರು ಈ ವಿಚಾರವನ್ನು ಕಲ್ಲಡ್ಕಕ್ಕೆ ಬಂದು ತಿಳಿಸಿದರು. ವಿಷಯ ತಿಳಿದ ಕಲ್ಲಡ್ಕ ಇಸ್ಮಾಯಿಲ್ ಅವರ ತಂಗಿಯ ಗಂಡ ಅಬ್ದುಲ್ ಹಮೀದ್ ಅವರು ಸ್ನೇಹಿತ ಇಬ್ರಾಹಿಂರೊಂದಿಗೆ ಸ್ಕೂಟರ್ನಲ್ಲಿ ಸರಪಾಡಿ ಪೆರ್ಲಕ್ಕೆ ತೆರಳಿದರು. ಅಲ್ಲಿಂದ ಅಬ್ದುಲ್ಲ ಎಂಬವರ ದೋಣಿಯಲ್ಲಿ ಮೃತದೇಹದ ಹತ್ತಿರ ಹೋಗಿ ಪರಿಶೀಲಿಸಿದರು. ಆಗ ಮೃತದೇಹ ಬೆತ್ತಲೆಯಾಗಿ ಕವುಚಿ ಬಿದ್ದಿತ್ತು. ಮುಖದ ಭಾಗ ಕಾಣುತ್ತಿರಲಿಲ್ಲ. ಬಹುತೇಕ ಕೊಳೆತು ಹೋಗಿತ್ತು. ಕುತ್ತಿಗೆಯ ಭಾಗದಲ್ಲಿ ನೈಲಾನ್ ಮತ್ತು ಹುರಿ ಹಗ್ಗ ಸುತ್ತಲ್ಪಟ್ಟಿತ್ತು. ಮೇಲ್ನೋಟಕ್ಕೆ ಮೃತದೇಹ ನಾಲ್ಕು ದಿನಗಳ ಹಿಂದೆ ಕಾಣೆಯಾಗಿದ್ದ ಕಲ್ಲಡ್ಕ ಇಸ್ಮಾಯಿಲ್ ಅವರದ್ದೇ ಎಂದು ನಂಬಿದ ಅಬ್ದುಲ್ ಹಮೀದ್ ಅವರು ಕಲ್ಲಡ್ಕಕ್ಕೆ ಬಂದು ಇಸ್ಮಾಯಿಲ್ ಅವರ ಮನೆಗೆ ವಿಷಯ ತಿಳಿಸಿದರು. ತದನಂತರ ಬಂಟ್ವಾಳ ಪೊಲೀಸರಿಗೂ ಮಾಹಿತಿ ನೀಡಲಾಯಿತು.
ಸರಪಾಡಿಯ ನೇತ್ರಾವತಿ ಹೊಳೆಯ ಮಧ್ಯದಲ್ಲಿ ಮೃತದೇಹವೊಂದು ಸಿಕ್ಕಿದೆ ಎಂಬ ಮಾಹಿತಿ ತಿಳಿಯುತ್ತಿದ್ದಂತೆಯೇ ಬಂಟ್ವಾಳ ಸಬ್ ಇನ್ಸ್ಪೆಕ್ಟರ್. ಎಸ್. ಬಿ. ಕೋಲ್ಕರ್ ಅವರು ತನ್ನಿಬ್ಬರು ಸಿಬ್ಬಂದಿಗಳೊಂದಿಗೆ ಕಡೇಶಿವಾಲಯ ದೇವಸ್ಥಾನದ ಬಳಿಯ ನೇತ್ರಾವತಿ ನದಿ ದಡಕ್ಕೆ ಹೋದರು. ಆ ಸಂದರ್ಭದಲ್ಲಿ ಕಡೇಶಿವಾಲಯ ಮತ್ತು ಸರಪಾಡಿ ಮಧ್ಯೆ ದೋಣಿ ಕಡವು ಇತ್ತು. ಎರಡೂ ಗ್ರಾಮಗಳ ಗ್ರಾಮಸ್ಥರು ಈ ದೋಣಿ ಸೌಲಭ್ಯವನ್ನು ಬಳಸುತ್ತಿದ್ದರು. ಸರಪಾಡಿ ಗ್ರಾಮಸ್ಥರು ಪುತ್ತೂರು ಕಡೆಗೆ ಹೋಗಬೇಕಿದ್ದರೆ ದೋಣಿಯನ್ನೇ ಬಳಸುತ್ತಿದ್ದರು. ಕಡೇಶಿವಾಲಯ ಗ್ರಾಮಸ್ಥರು ಬಂಟ್ವಾಳ ಕಡೆಗೆ ಹೋಗಬೇಕಿದ್ದರೆ ಈ ದೋಣಿಯನ್ನು ಬಳಸುತ್ತಿದ್ದರು. ಈ ರೀತಿಯಾಗಿ ಸಾರ್ವಜನಿಕ ಉಪಯೋಗಕ್ಕೆ ಬಳಸಲಾಗುತ್ತಿದ್ದ ದೋಣಿಯಲ್ಲಿ ಬಂಟ್ವಾಳ ಸಬ್ ಇನ್ಸ್ಪೆಕ್ಟರ್ ಮತ್ತು ಸಿಬ್ಬಂದಿಗಳು ಸ್ಥಳಕ್ಕೆ ಹೋದರು.
ಆ ಸಂದರ್ಭದಲ್ಲಿ ಮೃತದೇಹವನ್ನು ಈ ಮೊದಲು ಕಂಡಿದ್ದ ಅಬ್ದುಲ್ ಹಮೀದ್ ಅವರೂ ಇದ್ದರು. ಆ ವೇಳೆಗಾಗಲೇ ಕತ್ತಲು ಅವರಿಸಿತ್ತು. ಅಲ್ಲಿಗೆ ಪೆಟ್ರೊಮ್ಯಾಕ್ಸನ್ನು ತರಿಸಿ ಉರಿಸಿ ಇಡಲಾಯಿತು. ಮೃತದೇಹ ಸಿಕ್ಕಿದ ಮಾಹಿತಿ ತಿಳಿದು ಪುತ್ತೂರು ಡಿವೈಎಸ್ಪಿ ಭಾಸ್ಕರ್ ಬಂದು ಪರಿಶೀಲನೆ ನಡೆಸಿದರು. ರಾತ್ರಿಯಾಗಿದ್ದರಿಂದ ಆ ಸ್ಥಳದಿಂದ ಮೃತದೇಹವನ್ನು ಸ್ಥಳಾಂತರಿಸುವುದು ಸಾಧ್ಯವಿರಲಿಲ್ಲ. ಮೃತದೇಹವು ನೀರಿನ ಸೆಳೆತದಿಂದ ದಕ್ಷಿಣಾಭಿಮುಖವಾಗಿ ಹೋಗುವ ಸಾಧ್ಯತೆಯಿದ್ದುದರಿಂದ ಮೃತದೇಹದ ಕಾಲಿಗೆ ಹಗ್ಗವನ್ನು ಕಟ್ಟಲಾಯಿತು. ಪೊಲೀಸರಿಬ್ಬರು ಪೆಟ್ರೊಮ್ಯಾಕ್ಸ್ ಬೆಳಕಿನಲ್ಲಿ ಮೃತದೇಹದ ಕಾವಲಿಗೆ ನಿಂತರು.
ಮರುದಿನ ಅಂದರೆ ಸೆ. 9ರಂದು ಬೆಳ್ಳಂಬೆಳಗ್ಗೆ ಪುತ್ತೂರು ಡಿವೈಎಸ್ಪಿ ಭಾಸ್ಕರ್ ಮತ್ತು ಬಂಟ್ವಾಳ ಸಬ್ ಇನ್ಸ್ಪೆಕ್ಟರ್ ಮತ್ತವರ ಸಿಬ್ಬಂದಿಗಳು ಮೃತದೇಹ ಸಿಕ್ಕಿದ ಸ್ಥಳಕ್ಕೆ ಬಂದಿದ್ದರು. ಸ್ಥಳೀಯ ಕೆಲವರು ಕುತೂಹಲದಿಂದ ಅಲ್ಲಿ ಸೇರಿದ್ದರು. ಕವುಚಿ ಬಿದ್ದ ಸ್ಥಿತಿಯಲ್ಲಿದ್ದ ಮೃತದೇಹವನ್ನು ಅಂಗಾತ ಮಾಡಲಾಯಿತು. ಆಗ ಅಚ್ಚರಿ ಕಾದಿತ್ತು.
ಮೃತದೇಹ ಕೊಳೆತು ಊದಿದ ಸ್ಥಿತಿಯಲ್ಲಿತ್ತು. ಮೈಮೇಲೆ ಬಟ್ಟೆಬರೆಗಳಿರಲಿಲ್ಲ. ನಗ್ನವಾಗಿತ್ತು. ಕುತ್ತಿಗೆಯಲ್ಲಿ ನೈಲಾನ್ ಮತ್ತು ಹುರಿ ಹಗ್ಗದಿಂದ ಬಿಗಿದು ಕೊಲೆಗೈಯ್ಯಲಾಗಿದೆ ಎಂಬ ಶಂಕೆಗೆ ಪುಷ್ಠಿ ನೀಡುವಂತಿತ್ತು. ಮೇಲ್ನೋಟಕ್ಕೆ ಮೃತದೇಹವು ಇಸ್ಮಾಯಿಲ್ರದ್ದೇ ಎಂದು ಗುರುತಿಸಬಹುದಾಗಿತ್ತು.
ಇಸ್ಮಾಯಿಲ್ ಅವರಿಗೆ ಮೀಸೆ ಇತ್ತಾದರೂ ಮೃತದೇಹದಲ್ಲಿ ಮೀಸೆ ಇರಲಿಲ್ಲ. ಹುಬ್ಬಿನ ಮೇಲಿನ ಕೂದಲನ್ನು ತೆಗೆಯಲಾಗಿತ್ತು. ಇದರಿಂದ ಇಸ್ಮಾಯಿಲ್ ಅವರನ್ನು ಕೊಲೆಗೈದ ನಂತರ ಮೃತದೇಹದ ಗುರುತನ್ನು ಮರೆಮಾಚುವ ಉದ್ದೇಶದಿಂದ ಮೀಸೆ ಮತ್ತು ಹುಬ್ಬಿನ ಮೇಲಿನ ಕೂದಲನ್ನು ಬೋಳಿಸಲಾಗಿತ್ತು ಎಂದು ನಂಬಲಾಯಿತು.
ಮೃತದೇಹದ ಮಹಜರು ಪ್ರಕ್ರಿಯೆಗಳನ್ನು ಅಲ್ಲಿಯೇ ನಡೆಸಲಾಯಿತು. ಮೃತದೇಹವನ್ನು ಮುಂದಿನ ಮರಣೋತ್ತರ ಶಸ್ತ್ರಚಿಕಿತ್ಸೆಗೆ ಬಂಟ್ವಾಳದ ಸರಕಾರಿ ಆಸ್ಪತ್ರೆಗೆ ಕೊಂಡೊಯ್ಯಬೇಕಾಗಿದ್ದರೂ ಅದಕ್ಕೆ ಪೂರಕ ವಾತಾವರಣ ಇಲ್ಲದೇ ಇದ್ದುದರಿಂದ ಸ್ಥಳದಲ್ಲಿಯೇ ಮರಣೋತ್ತರ ಶಸ್ತ್ರಚಿಕಿತ್ಸೆ ನಡೆಸಲು ತೀರ್ಮಾನಿಸಿ ಬಂಟ್ವಾಳ ಸರಕಾರಿ ಆಸ್ಪತ್ರೆಯ ವೈದ್ಯಾಧಿಕಾರಿಗೆ ಇಂಟಿಮೇಶನ್ ಕಳುಹಿಸಲಾಯಿತು.
ಇದರನ್ವಯ ವೈದ್ಯಾಧಿಕಾರಿಯವರು ಸ್ಥಳಕ್ಕೆ ಬಂದು ಪೋಸ್ಟ್ಮಾರ್ಟಮ್ ನಡೆಸಿ ಬೆಳಿಗ್ಗೆ ಸುಮಾರು 11.30ರ ವೇಳೆಗೆ ಮೃತದೇಹವನ್ನು ಸಂಬoಧಿಕರಿಗೆ ಬಿಟ್ಟುಕೊಡಲಾಯಿತು.
ತದನಂತರ ಮೃತದೇಹವನ್ನು ದೋಣಿಯ ಮೂಲಕ ಪಾಣೆಮಂಗಳೂರು ಸೇತುವೆಯ ಬಳಿಗೆ ತರಲಾಯಿತು. ಆ ವೇಳೆಗಾಗಲೇ ಇಸ್ಮಾಯಿಲ್ ಅವರ ಮೃತದೇಹ ಪತ್ತೆಯಾಗಿದೆ ಎಂಬ ಮಾಹಿತಿ ಹರಡಿ ಸುಮಾರು 3೦ ಸಾವಿರದಷ್ಟು ಮಂದಿ ಪಾಣೆಮಂಗಳೂರು ಸೇತುವೆಯ ಬಳಿ ಸೇರಿದ್ದರು.
ಅವರಲ್ಲಿ ಪ್ರಮುಖರಾದವರೆಂದರೆ ಬಿ.ಸಿ.ರೋಡಿನ ಶ್ರೀನಿವಾಸ್ ನಾಯಕ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಿವರಾಮ ಶೆಟ್ಟಿ, ಮಾಜಿ ತಾಲೂಕ್ ಬೋರ್ಡ್ ಅಧ್ಯಕ್ಷ ಶ್ರೀಧರ ಭಂಡಾರಿ ಮತ್ತಿತರರು.
ಶ್ರೀನಿವಾಸ್ ನಾಯಕ್ ಅವರು ರಾಷ್ಟ್ರಧ್ವಜವನ್ನು ಮೃತದೇಹದ ಮೇಲೆ ಇರಿಸಿ ಗೌರವ ಸಲ್ಲಿಸಿದರು. ಈ ವೇಳೆಗೆ ಜಿಲ್ಲೆಯ ಕಾಂಗ್ರೆಸ್ ಮುಖಂಡರಾದ ಮಹಮ್ಮದ್ ಕಮಾಲ್, ಶಾಸಕಿ ವಿನ್ನಿಫ್ರೆಡ್ ಫೆರ್ನಾಂಡಿಸ್, ಬಂಟ್ವಾಳ ಶಾಸಕ ಬಿ.ವಿ. ಕಕ್ಕಿಲ್ಲಾಯ ಅವರು ಸ್ಥಳಕ್ಕೆ ಬಂದು ಇಸ್ಮಾಯಿಲ್ ಅವರಿಗೆ ಶ್ರದ್ದಾಂಜಲಿ ಅರ್ಪಿಸಿದರು. ತದನಂತರ ಮೃತದೇಹವನ್ನು ಮೆರವಣಿಗೆಯ ಮೂಲಕ ಕಲ್ಲಡ್ಕಕ್ಕೆ ಕೊಂಡೊಯ್ಯಲಾಯಿತು.
ಮನೆಗೆ ಕೊಂಡೊಯ್ದು ಪತ್ನಿ ಫಾತಿಮಾ, ಮಕ್ಕಳಿಗೆ ತೋರಿಸಲಾಯಿತು. ಇಸ್ಮಾಯಿಲ್ ಅವರ ಸಹೋದರರು, ತಂದೆ ಈ ಸಂದರ್ಭದಲ್ಲಿ ದು:ಖ ತಡೆಯಲಾರದೆ ಬಿಕ್ಕಳಿಸುತ್ತಿದ್ದರು. ತದನಂತರ ಕಲ್ಲಡ್ಕದ ಜುಮ್ಮಾ ಮಸೀದಿಗೆ ಮೃತದೇಹವನ್ನು ಕೊಂಡೊಯ್ದು ಮಯ್ಯತ್ತ್ ನಮಾಜ್ ನಿರ್ವಹಿಸಲಾಯಿತು.
ಬಳಿಕ ದಫನ ಕಾರ್ಯ ನೆರವೇರಿಸಲಾಯಿತು. ತದನಂತರ ನಡೆದ ಸಾರ್ವಜನಿಕ ಶ್ರದ್ಧಾಂಜಲಿ ಸಭೆಯಲ್ಲಿ ಕಾಂಗ್ರೆಸ್ ಮುಖಂಡರಾದ ಮಹಮ್ಮದ್ ಕಮಾಲ್, ಶಾಸಕ ಬಿ.ವಿ. ಕಕ್ಕಿಲ್ಲಾಯ, ಕೆ.ಎನ್. ಮಹಾಬಲ ಶೆಟ್ಟಿ, ಶಾಸಕಿ ವಿನ್ನಿಫ್ರೆಡ್ ಫೆರ್ನಾಂಡಿಸ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಿವರಾಮ ಶೆಟ್ಟಿ, ಅಬ್ದುಲ್ ಹಮೀದ್ ಕಂದಕ್, ವಿಶ್ವನಾಥ್ ನಾಯಕ್, ಸದಾಶಿವ ಭಂಡಾರಿ, ಶ್ರೀನಿವಾಸ್ ನಾಯಕ್ ಮತ್ತಿತರರು ಇಸ್ಮಾಯಿಲ್ ಅವರ ಗುಣಗಾನ ಮಾಡಿ ಶ್ರದ್ಧಾಂಜಲಿ ಅರ್ಪಿಸಿದರಲ್ಲದೆ ಇಸ್ಮಾಯಿಲ್ ಅವರನ್ನು ಮೋಸದಿಂದ ಕರೆದೊಯ್ದು ಕೊಲೆ ನಡೆಸಿದ ಆರೋಪಿಗಳನ್ನು ಶೀಘ್ರವಾಗಿ ಪತ್ತೆ ಹಚ್ಚಿ ಬಂಧಿಸಬೇಕು ಮತ್ತು ಅವರಿಗೆ ಸೂಕ್ತ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕು ಎಂದು ಪೊಲೀಸರನ್ನು ಮತ್ತು ಸರಕಾರವನ್ನು ಒತ್ತಾಯಿಸಿದರು.
ಮುಂದುವರಿಯುವುದು…





































