[t4b-ticker]

ಸರಕಾರಿ ಮತ್ತು ಅನುದಾನಿತ ಶಾಲೆಗಳ ನಡುವೆ ತಾರತಮ್ಯ ಧೋರಣೆ ಸಲ್ಲದು ಶಿಕ್ಷಕರ ಸಮಸ್ಯೆಗಳಿಗೆ ಧ್ವನಿಯಾಗಿ ನಿಲ್ಲುವೆ :ಎಸ್. ಎಲ್. ಭೋಜೇಗೌಡ

Picture of RB NEWS

RB NEWS

Bureau Report


ಕಾರ್ಕಳ :ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ಶಿಕ್ಷಕರು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಆದರೂ ಉಡುಪಿ ಜಿಲ್ಲೆಯ ಶಿಕ್ಷಕರು ಮಕ್ಕಳ ಭವಿಷ್ಯವನ್ನು ರೂಪಿಸುವಲ್ಲಿ ಸದಾ ತಲ್ಲೀನರಾಗಿದ್ದು ತಮ್ಮ ಪ್ರಾಮಾಣಿಕ ವೃತ್ತಿಬದ್ಧತೆಯಿಂದ ರಾಜ್ಯದಲ್ಲಿಯೇ ಗುಣಮಟ್ಟದ ಫಲಿತಾಂಶವನ್ನು ಪಡೆಯುವಲ್ಲಿ ಆಹರ್ನಿಶಿ ದುಡಿಯುತ್ತಿರುವುದು ಅತ್ಯಂತ ಹೆಮ್ಮೆಯ ವಿಚಾರ. ಉಡುಪಿ ಜಿಲ್ಲೆಯ ಶಿಕ್ಷಕರ ಜಿಲ್ಲಾ ಸಂಘಟನೆ ಪ್ರಬಲವಾದ ಸಂಘಟನಾ ಶಕ್ತಿಯಿಂದ ಶಿಕ್ಷಕರ ಬೇಡಿಕೆಗಳಿಗೆ ಮತ್ತು ಸಮಸ್ಯೆಗಳಿಗೆ ಧ್ವನಿಯಾಗಿ ನಿಂತು ಉತ್ತಮ ಶೈಕ್ಷಣಿಕ ವಾತಾವರಣವನ್ನು ಮೂಡಿಸುತ್ತಿದೆ ಎಂದು ವಿಧಾನಪರಿಷತ್ ಶಿಕ್ಷಕರ ಕ್ಷೇತ್ರದ ಶಾಸಕರಾದ ಎಸ್. ಎಲ್. ಭೋಜೇಗೌಡ ಹೇಳಿದರು.

ಅವರು ಮಾರ್ಚ್ 9 ರಂದು ಕಾರ್ಕಳ ಪ್ರಕಾಶ್ ಹೋಟೆಲ್ ನ ಉತ್ಸವ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹಶಿಕ್ಷಕರ ಸಂಘ (ರಿ.)ಉಡುಪಿ ಜಿಲ್ಲಾ ಘಟಕದ ವತಿಯಿಂದ ನಡೆದ ಜಿಲ್ಲಾ, ತಾಲೂಕು ಮಟ್ಟದ ಪದಾಧಿಕಾರಿಗಳ ಮತ್ತು ಸರ್ವಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಪಾಲ್ಗೊಂಡು ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ಶಿಕ್ಷಣ ಇಲಾಖೆಯ ಆದೇಶಗಳನ್ನು ಪಾಲಿಸುವಲ್ಲಿ ಶಿಕ್ಷಕರು ವಿಪರೀತ ಒತ್ತಡಕ್ಕೆ ಸಿಲುಕುತ್ತಿದ್ದಾರೆ. ಸರಕಾರಿ ಮತ್ತು ಅನುದಾನಿತ ಶಾಲೆಗಳ ನಡುವೆ ತಾರತಮ್ಯ ಧೋರಣೆ ಅನುಸರಿಸುತ್ತಿರುವುದು ಶಿಕ್ಷಕರು ನೆಮ್ಮದಿಯಿಂದ ಬದುಕಲು ಅಸಾಧ್ಯವಾಗುತ್ತಿದೆ. ಸರಕಾರಿ ಶಾಲೆಯ ಶಿಕ್ಷಕರು ಮತ್ತು ಮಕ್ಕಳು ಪಡೆಯುವ ಎಲ್ಲ ಸೌಲಭ್ಯಗಳನ್ನು ಅನುದಾನಿತ ಶಿಕ್ಷಕರು ಮತ್ತು ಮಕ್ಕಳಿಗೆ ನೀಡುವುದು ಸರಕಾರದ ಕರ್ತವ್ಯ.2006 ನಂತರ ಸೇವೆಗೆ ಸೇರಿದ ಅನುದಾನಿತ ನೌಕರರಿಗೆ ಪಿಂಚಣಿ ಸೌಲಭ್ಯವೂ ಇಲ್ಲದೇ ಇರುವುದು ಅವರ ನಿವೃತ್ತಿ ಜೀವನಕ್ಕೆ ಭದ್ರತೆಯೇ ಇಲ್ಲವಾಗಿದೆ. ಈ ನಿಟ್ಟಿನಲ್ಲಿ ಸರಕಾರದ ಗಮನ ಸೆಳೆದು ಶಿಕ್ಷಕರ ಸಮಸ್ಯೆಗಳಿಗೆ ಹಂತ ಹಂತವಾಗಿ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಶಾಸಕ ಎಸ್. ಎಲ್. ಭೋಜೇಗೌಡ ಹೇಳಿದರು.


. ಕಾರ್ಕಳ ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಬಿ. ಎ, ಜಿಲ್ಲಾ ಸಂಘದ ನಿಕಟಪೂರ್ವ ಅಧ್ಯಕ್ಷ ಕಿರಣ್ ಹೆಗ್ಡೆ, ಕಾರ್ಕಳ ತಾಲೂಕು ಸರಕಾರಿ ನೌಕರರ ಸಂಘದ ಅಧ್ಯಕ್ಷ ಬಾಲಕೃಷ್ಣ ಎನ್., ಕಾರ್ಕಳ ತಾಲೂಕು ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷರ ಸಂಜೀವ ಪೂಜಾರಿ ಎಂ., ಸಹಶಿಕ್ಷಕರ ಸಂಘದ ಜಿಲ್ಲಾ ಉಪಾಧ್ಯಕ್ಷ ಆನಂದ ಶೆಟ್ಟಿ, ಕಾರ್ಕಳ ತಾಲೂಕು ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮಹೇಶ್ ನಾಯ್ಕ್, ಕನ್ನಡ ಭಾಷಾ ಸಂಪನ್ಮೂಲ ಶಿಕ್ಷಕ ರಾಜೀವ ಪೂಜಾರಿ, ಕುಂದಾಪುರ ವಲಯ ಅಧ್ಯಕ್ಷ ಉದಯಕುಮಾರ್ ಶೆಟ್ಟಿ, ಉಡುಪಿ ವಲಯ ಅಧ್ಯಕ್ಷ ಸಂಜೀವ ಎಚ್. ನಾಯಕ, ಬ್ರಹ್ಮಾವರ ವಲಯ ಅಧ್ಯಕ್ಷ ಮನೋಹರ್ ಹೆಗ್ಡೆ, ಬೈಂದೂರು ವಲಯ ಅಧ್ಯಕ್ಷ ಕೆ. ಸದಾನಂದ ಶೆಟ್ಟಿ ,ಜಿಲ್ಲೆ, ತಾಲೂಕು ಪದಾಧಿಕಾರಿಗಳು ಸರ್ವಸದಸ್ಯರು ಉಪಸ್ಥಿತರಿದ್ದರು.

ಉಡುಪಿ ಜಿಲ್ಲಾ ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಪ್ರಭಾಕರ ಶೆಟ್ಟಿ ಕೊಂಡಳ್ಳಿ ಅಧ್ಯಕ್ಷತೆ ವಹಿಸಿ,ಪ್ರಾಸ್ತಾವಿಕವಾಗಿ ಮಾತುಗಳನ್ನಾಡಿ ಸ್ವಾಗತಿಸಿದರು.

ಇದೇ ಸಂದರ್ಭದಲ್ಲಿ ಕಾರ್ಕಳ ಭುವನೇಂದ್ರ ಪ್ರೌಢಶಾಲೆಯ ಮುಖ್ಯ ಶಿಕ್ಷಕರಾಗಿ ಪದೋನ್ನ ತಿ ಹೊಂದಿದ ನಾರಾಯಣ ಶೆಣೈ, ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಚಿನ್ನದ ಪದಕ ವಿಜೇತರಾಗಿ ಬೆಂಗಳೂರಿನಲ್ಲಿ ನಡೆಯಲಿರುವ ರಾಜ್ಯಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾದ ಸರಕಾರಿ ಪ್ರೌಢಶಾಲೆ ವಡ್ಡರ್ಸೆ ಯ ಗೀತಾ ಆನಂದ ಶೆಟ್ಟಿ, ರಾಜ್ಯ ವಿಭೂಷಣ ಪ್ರಶಸ್ತಿ ಪಡೆದ ಮುದ್ರಾಡಿ ಪ್ರೌಢಶಾಲೆಯ ಶಿಕ್ಷಕ ಬಲ್ಲಾಡಿ ಚಂದ್ರಶೇಖರ ಭಟ್,2023 ರ ಎಸ್. ಎಸ್. ಎಲ್. ಸಿ. ಪರೀಕ್ಷೆಯಲ್ಲಿ ಉತ್ತಮ ಸಾಧನೆಗೈದ ಶ್ರೀ ಮಂಜುನಾಥ ಪೈ ಸ್ಮಾರಕ ಸರಕಾರಿ ಪ್ರೌಢಶಾಲೆ ದುರ್ಗಾ ತೆಳ್ಳಾರಿನ ಶ್ರೀಯಾ ಮತ್ತು ಕೂಡಬೆಟ್ಟು ಮಾಳ ಸರಕಾರಿ ಪ್ರೌಢಶಾಲೆಯ ರಶ್ಮಿ ಅವರನ್ನು ಗೌರವಿಸಲಾಯಿತು.

ಜಿಲ್ಲಾ ಸಂಘದ ಕಾರ್ಯದರ್ಶಿ ನಾಗರಾಜ ತೆಕ್ಕಟ್ಟೆ ವಾರ್ಷಿಕ ವರದಿ ವಾಚಿಸಿದರು. ಜಿಲ್ಲಾ ಸಂಘದ ಕೋಶಾಧಿಕಾರಿ ಸಂಪತ್ ಕುಮಾರ್ ವಾರ್ಷಿಕ ಲೆಕ್ಕಪತ್ರ ಮಂಡಿಸಿದರು. ಜಿಲ್ಲಾ ಸಂಘಟನಾ ಕಾರ್ಯದರ್ಶಿ ಪ್ರೇಮಾನಂದ ಕೋಟ ವಂದಿಸಿದರು. ಗಣೇಶ್ ಜಾಲ್ಸೂರು ನಿರೂಪಿಸಿದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top