ಸಮಾಜದ ಶ್ರೇಯೋಭಿವೃದ್ಧಿಗಾಗಿ ಸಂಘಟನೆ
ಕಾರ್ಕಳ : ಜಿಲ್ಲಾ ಮಲೆಕುಡಿಯ ಸಂಘ (ರಿ.), ಉಡುಪಿ ಇದರ 12ನೇ ವರ್ಷದ ವಾರ್ಷಿಕ ಸಮ್ಮೇಳನವು ಸಪ್ಟಂಬರ್ 15ರಂದು ಮಾಳ ಪೇರಡ್ಕದಲ್ಲಿರುವ ಮಲೆಕುಡಿಯ ಸಮುದಾಯ ಭವನದಲ್ಲಿ ಜರಗಿತು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧ್ಯಕ್ಷ ಗಂಗಾಧರ ಗೌಡ ಇವರು ಮಾತನಾಡಿ, ಸಮುದಾಯದ ಆಶೋತ್ತರಗಳನ್ನು ಈಡೇರಿಸುವಂತೆ ತಾಲೂಕು ಆಡಳಿತ, ಜಿಲ್ಲಾಡಳಿತ, ಸರ್ಕಾರಕ್ಕೆ ನಿರಂತರ ಹಕ್ಕೋತ್ತಾಯಗಳನ್ನು ಮಂಡಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಸಂಘಟನೆಗೆ ಸಮುದಾಯದ ಬೆಂಬಲ ಕೋರಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ರಾಜ್ಯಾಧ್ಯಕ್ಷ ಶ್ರೀಧರ ಗೌಡ ಈದು ಇವರು ಮಾತನಾಡಿ, ಸಂಘ ಪ್ರಾರಂಭದಿಂದ ಈವರೆಗೂ ಸಮುದಾಯದ ಮಧ್ಯೆ ಇರುವ ಅಸಹಾಯಕರು, ಅನಾರೋಗ್ಯ ಪೀಡಿತರು ಹಾಗೂ ದುರ್ಬಲರ ಪರವಾಗಿ ಕೆಲಸ ಮಾಡುತ್ತಾ ಬಂದಿದ್ದು , ಸಮುದಾಯದಲ್ಲಿ ವಿದ್ಯಾವಂತರ ಸಂಖ್ಯೆ ಹೆಚ್ಚಳ ಆಗಬೇಕು ಅನ್ನುವ ದೃಷ್ಟಿಯಿಂದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪ್ರತಿಷ್ಠಿತ ವಿದ್ಯಾಸಂಸ್ಥೆಗಳಲ್ಲಿ ವಿದ್ಯಾಭ್ಯಾಸವನ್ನು ಮಾಡಲು ಸಹಕಾರ ನೀಡುವುದು, ವಿದ್ಯಾರ್ಥಿ ವೇತನ, ಪುಸ್ತಕ ವಿತರಣಾ ಕಾರ್ಯಕ್ರಮ, ಸನ್ಮಾನ ಕಾರ್ಯಕ್ರಮಗಳನ್ನು ಮಾಡಿಕೊಂಡು ಬರುವುದರ ಜೊತೆಗೆ ಪ್ರೋತ್ಸಾಹ ನೀಡಲಾಗಿದೆ, ಆರೋಗ್ಯದ ವಿಚಾರಕ್ಕೆ ಸಂಬಂಧಪಟ್ಟಂತೆ ಅನೇಕ ಆರೋಗ್ಯ ತಪಾಸಣಾ ಶಿಬಿರಗಳನ್ನು ಮಾಡಲಾಗಿದೆ, ಸರ್ವರ ಪ್ರಯತ್ನದಿಂದ ಭವ್ಯವಾದ ಸಮುದಾಯ ಭವನ ನಿರ್ಮಾಣವಾಗಿದ್ದು ಇದು ಇನ್ನಷ್ಟು ಸಮುದಾಯದ ಚಟುವಟಿಕೆಗಳನ್ನು ಮಾಡಲು ಅನುಕೂಲವಾಗಿದ್ದು ಈ ನಿಟ್ಟಿನಲ್ಲಿ ಎಲ್ಲರೂ ಸಹಕಾರವನ್ನು ನೀಡಬೇಕೆಂದರು.
ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ , 2023-24ನೇ ಸಾಲಿನ ವಾರ್ಷಿಕ ಮಹಾಸಭೆ, ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿತು.
2023ನೇ ಶೈಕ್ಷಣಿಕ ವರ್ಷದಲ್ಲಿ ಎಸ್.ಎಸ್.ಎಲ್.ಸಿ ಹಾಗೂ ಪಿ.ಯು.ಸಿ ಟಾಪರ್ ಗಳಾದ ಸುಜಯ್ ಪೇರಡ್ಕ ಹಾಗೂ ಪೂಜಾ ರೆಂಜಾಳ, 2024ನೇ ಶೈಕ್ಷಣಿಕ ವರ್ಷದಲ್ಲಿ ಎಸ್.ಎಸ್.ಎಲ್.ಸಿ ಹಾಗೂ ಪಿ.ಯು.ಸಿ ಟಾಪರ್ ಗಳಾದ ಸುಚಿತ್ರಾ ಹೆರ್ಮುಂಡೆ ಹಾಗೂ ಪ್ರಸಾದ್ ಮುದ್ರಾಡಿ ಇವರನ್ನು ಅಭಿನಂದಿಸಲಾಯಿತು.
ಶ್ರೀ ವಿದ್ಯಾ ಮಹಾಗಣಪತಿ ಮಹಿಳಾ ಭಜನಾ ಮಂಡಳಿ ಪೇರಡ್ಕ ಇವರು ಕುಣಿತ ಭಜನೆಯನ್ನು ನೆರವೇರಿಸಿದರು.
ಸಭೆಯಲ್ಲಿ ದರ್ಖಾಸು ಭೂಮಿ, ಮಹಿಳಾ ನಾಯಕತ್ವ ಕಾರ್ಯಾಗಾರ, ಕ್ರೀಡಾಕೂಟ, ಅಜೀವ ಸದಸ್ಯತ್ವ ಅಭಿಯಾನ, ಕಲಾ ತಂಡ ರಚನೆ ಸೇರಿದಂತೆ ಹಲವಾರು ವಿಚಾರಗಳ ಕುರಿತು ಸಂವಾದ ನಡೆಸಿ ಸರ್ವ ಸದಸ್ಯರ ಒಮ್ಮತ ಅಭಿಪ್ರಾಯಗಳನ್ನು ಕ್ರೋಢೀಕರಿಸಿ ನಿರ್ಣಯಿಸಲಾಯಿತು.
ಈ ಸಂದರ್ಭದಲ್ಲಿ ರಾಜ್ಯ ಸಂಘಟನಾ ಕಾರ್ಯದರ್ಶಿ ನೋಣಯ್ಯ ಗೌಡ ರೆಂಜಾಳ, ಪೂರ್ವ ಜಿಲ್ಲಾಧ್ಯಕ್ಷ ಸುಧಾಕರ ಗೌಡ ನಾಡ್ಪಾಲು, ಜಿಲ್ಲಾ ಸಂಘದ ವಕ್ತಾರ ದಿನೇಶ್ ಗೌಡ ನೂರಾಳ್ ಬೆಟ್ಟು , ವಕ್ತಾರೆ ಸುಜಾತ ಕಬ್ಬಿನಾಲೆ, ಅಹ್ವಾನಿತ ಸದಸ್ಯರು, ಅಜೀವ ಸದಸ್ಯರು, ನಾನಾ ಗ್ರಾಮ ಸಮಿತಿ ಪದಾಧಿಕಾರಿಗಳು ಹಾಗೂ ಸಮಾಜ ಬಾಂಧವರು ಉಪಸ್ಥಿತಿದ್ದರು.
ಶ್ರಾವ್ಯ ಪ್ರಾರ್ಥಿಸಿ, ಕೋಶಾಧಿಕಾರಿ ಸುಂದರಿ ಪೇರಡ್ಕ ಸ್ವಾಗತಿಸಿ, ವಾರ್ಷಿಕ ಲೆಕ್ಕಪತ್ರ ಮಂಡಿಸಿದರು. ಪ್ರಧಾನ ಕಾರ್ಯದರ್ಶಿ ಅಶೋಕ ಕೆರ್ವಾಶೆ ವಾರ್ಷಿಕ ಆಡಳಿತ ವರದಿ ಮಂಡಿಸಿ, ಕಾರ್ಯಕ್ರಮ ನಿರೂಪಿಸಿದರು. ಸೌಮ್ಯ ಅಭಿನಂದನಾ ಪತ್ರ ವಾಚಿಸಿ, ಉಪಾಧ್ಯಕ್ಷೆ ಶೋಭ ವಂದಿಸಿದರು.














