ಸರಕಾರಿ ಪದವಿ ಪೂರ್ವ ಕಾಲೇಜು ಸಾಣೂರು
ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಪ್ರೇರಣಾ ಶಿಬಿರ, ಕಂಪ್ಯೂಟರ್ ಹಸ್ತಾಂತರ ಹಾಗೂ ಸನ್ಮಾನ ಸಮಾರಂಭ
ಕಾರ್ಕಳ : 2023 -24 ನೇ ಸಾಲಿನ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಪರೀಕ್ಷೆಯನ್ನು ಎದುರಿಸುವ ಬಗ್ಗೆ ಪ್ರೇರಣಾ ಕಾರ್ಯಕ್ರಮ, ಕಂಪ್ಯೂಟರ್ ಹಸ್ತಾಂತರ ಹಾಗೂ ವಿವಿಧ ಸಾಧನೆಯನ್ನು ಮಾಡಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣಾ ಕಾರ್ಯಕ್ರಮ ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಅಶೋಕ್ ಶೆಟ್ಟಿ ಅಧ್ಯಕ್ಷತೆಯಲ್ಲಿ ಜರುಗಿತು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕಮಲಾಕ್ಷ ಕಾಮತ್ ರವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಾ ವಿದ್ಯಾರ್ಥಿ ಜೀವನ ಬಹಳ ಮುಖ್ಯವಾದದ್ದು , ಭವಿಷ್ಯದ ಸಿರಿ ವಿದ್ಯಾರ್ಥಿ ಜೀವನದಲ್ಲಿ ಮೊಳಕೆಯೊಡೆಯಬೇಕು. ವಿದ್ಯಾರ್ಥಿಗಳ ನಡೆಯ ಮುಂದೆ ಗುರಿಯಿದ್ದು,ಹಿಂದಿರುವ ಗುರು ಹಿರಿಯರ ಮಾರ್ಗದರ್ಶನದಲ್ಲಿ ಶ್ರಮಪಟ್ಟು, ಗುರಿಯನ್ನು ಈಡೇರಿಸುವಲ್ಲಿ ಪ್ರಯತ್ನಿಸಬೇಕು. ಜೀವನದ ಗುರಿಯನ್ನು ತಲುಪಿ ಸಂಪತ್ತು,ಸಿರಿ ಬಂದಾಗ ಮಾನವೀಯತೆಯನ್ನು ಮೈಗೂಡಿಸಿಕೊಂಡು, ಸಮಾಜದ ಬಡವರ ಕಣ್ಣೀರನ್ನು ಒರೆಸುವಂತಹ ಕೆಲಸವನ್ನು ಮಾಡಬೇಕು ಎಂದು ಹೇಳಿದರು.
ದಿಕ್ಸೂಚಿ ಭಾಷಣವನ್ನು ಮಾಡಿದ ಎಸ್ ವಿ ಟಿ ವನಿತಾ ಪದವಿ ಪೂರ್ವ ಕಾಲೇಜಿನ ವಿಶ್ರಾಂತ ಪ್ರಾಂಶುಪಾಲೆ ಶ್ಯಾಮಲ ಗೋಪಿನಾಥ್ ಮಾತನಾಡಿ, ವಿದ್ಯಾರ್ಥಿಗಳು ಪರೀಕ್ಷೆಯ ಭಯ ನಿವಾರಿಸಿಕೊಳ್ಳಬೇಕು. ಪರೀಕ್ಷೆಯನ್ನು ಎದುರಿಸುವ ರೀತಿ ಹೇಗೆಂದು ತಿಳಿದುಕೊಳ್ಳಬೇಕು. ವಿದ್ಯೆಯ ಜೊತೆಗೆ ವಿನಯವನ್ನು ಮೈಗೂಡಿಸಿಕೊಳ್ಳಬೇಕು ವಿದ್ಯಾರ್ಥಿಗೆ ವಿನಯವೇ ಭೂಷಣ. ವಿದ್ಯೆಯೊಂದಿಗೆ ವಿನಯವಿಲ್ಲದಿರೆ ವಿದ್ಯೆ ಮೌಲ್ಯವನ್ನು ಕಳೆದುಕೊಳ್ಳುವುದು. ವಿದ್ಯಾರ್ಥಿಗಳು ಜೀವನದಲ್ಲಿ ಮಾನವೀಯ ಮೌಲ್ಯಗಳನ್ನು ಬೆಳೆಸಬೇಕೆಂದರು.
ಆಭರಣ ಜ್ಯುವೆಲ್ಲರ್ಸ್ ಇದರ ಶಾಖಾ ವ್ಯವಸ್ಥಾಪಕ ಶ್ರೀಪತಿ ಬಾಯರಿ ಇವರು ಉಪಸ್ಥಿತರಿದ್ದು, ಕಾಲೇಜಿಗೆ ಆಭರಣ ಜ್ಯುವೆಲ್ಲರ್ಸ್ ವತಿಯಿಂದ ಕೊಡಲ್ಪಟ್ಟ 6 ಕಂಪ್ಯೂಟರ್ ಗಳನ್ನು ಪ್ರಾಂಶುಪಾಲರಿಗೆ ಹಸ್ತಾಂತರಿಸಿದರು.
ನಂತರದಲ್ಲಿ ಮಾತನಾಡುತ್ತಾ ಅವರು, ದಾನಿಗಳು ನೀಡುವ ಪರಿಕರಗಳನ್ನು ಸದ್ಭಾಳಕೆ ಮಾಡಿಕೊಂಡು ಸ್ವಾವಲಂಬನೆ ಬದುಕು ಕಟ್ಟಿಕೊಂಡು ಸಮಾಜದಲ್ಲಿ ಇತರರಿಗೆ ಸಹಾಯ ಮಾಡಬೇಕೆಂದು ಹೇಳಿದರು.
ಕಾರ್ಯಕ್ರಮದಲ್ಲಿ ರಾಜ್ಯಮಟ್ಟದಲ್ಲಿ 100 ಮೀಟರ್ ಓಟ, ಉದ್ದ ಜಿಗಿತ, ತ್ರಿವಿಧ ಜಿಗಿತಗಳಲ್ಲಿ ಮೂರು ಚಿನ್ನದ ಪದಕ ಗಳಿಸಿದ ಜೀವಶಾಸ್ತ್ರ ಉಪನ್ಯಾಸಕಿ ಸ್ಮಿತಾ ಜೋಷ್ಮಾ ಪೆರ್ನಾಂಡಿಸ್ ಇವರನ್ನು ಸನ್ಮಾನಿಸಲಾಯಿತು.
ಭಾರತ ಸಂಸ್ಕೃತಿ ಪ್ರತಿಷ್ಠಾನದಿಂದ ನಡೆಸಲಾದ ರಾಮಾಯಣ ಮಹಾಭಾರತ ಪರೀಕ್ಷೆಯಲ್ಲಿ ಸಾಧನೆಗೈದ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು.
ಜೂನಿಯರ್ ರೆಡ್ಕ್ರಾಸ್ ಪರೀಕ್ಷೆಯಲ್ಲಿ ಉತ್ತೀರ್ಣ ರಾದ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಲಾಯಿತು.ದ್ವಿತೀಯ ಪಿ ಯು ಸಿ ಪೂರ್ವಭಾವಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು.
ಸಂಪ್ರೀತ ಹಾಗೂ ಸೌಮ್ಯಳ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮಕ್ಕೆ ಆಂಗ್ಲ ಭಾಷಾ ಉಪನ್ಯಾಸಕಿ ಡಾಕ್ಟರ್ ಸುಮತಿ ಪಿ ಸ್ವಾಗತಿಸಿದರು .
ಪ್ರಾಂಶುಪಾಲೆ ಸುಚೇತ ಕಾಮತ್ ಶುಭ ಹಾರೈಸಿದರು.
ರಸಾಯನಶಾಸ್ತ್ರ ಉಪನ್ಯಾಸಕ ನರೇಶ್ ಆಚಾರಿ ಧನ್ಯವಾದವಿತ್ತರು.
ರಾಜ್ಯಶಾಸ್ತ್ರ ಉಪನ್ಯಾಸಕ ಜಗದೀಶ್ ನಾಯಕ್ ನಿರೂಪಿಸಿದರು.
ಗಣಿತ ಉಪನ್ಯಾಸಕಿ ಟೆಲ್ಮಾ ರೀಟಾ ರಸ್ಕಿನ್ಹಾ, ಕನ್ನಡ ಭಾಷಾ ಉಪನ್ಯಾಸಕಿ ಪ್ರೇಮಮ್ಮ ಸಹಕರಿಸಿದರು.




































